ವಿಶೇಷ ವರದಿ: ಬಡವರ ಹಸಿವು ನೀಗಿಸುತ್ತಿದ್ದ ತಾಣ ಪಾಳುಕೊಂಪೆ; ಹಳ್ಳ ಹಿಡಿಯುತ್ತಾ ಇಂದಿರಾ ಕ್ಯಾಂಟೀನ್?
ದಾವಣಗೆರೆ, ಮಾರ್ಚ್ 24: ದಾವಣಗೆರೆ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿನ ಎಂಟು ಇಂದಿರಾ ಕ್ಯಾಂಟೀನ್ ಮುಚ್ಚಲಾಗಿದೆ. ಬಡವರ ಹೊಟ್ಟೆಯ ಹಸಿವು ನೀಗಿಸುವ ತಾಣಗಳಾಗಿದ್ದ ಇಂದಿರಾ ಕ್ಯಾಂಟೀನ್‌ಗಳು ಪಾಳು ಕೊಂಪೆಯಾಗಿವೆ. ಕಡಿಮೆ ದರದಲ್ಲಿ ಆಹಾರ ಸೇವಿಸುತ್ತಿದ್ದ ಕೂಲಿ ಕಾರ್ಮಿಕರು ಸೇರಿದಂತೆ ಬಡವರು ಈಗ ಹೆಚ್ಚಿನ ಹಣ ನೀಡಿ ಆಹಾರ ಸೇವಿಸುವಂತಾಗಿದೆ.
5 ರೂಪಾಯಿ ಕೊಟ್ಟರೆ ಇಡ್ಲಿ, ವಡೆ, ದೋಸೆ ಸೇರಿದಂತೆ ಉಪಹಾರ ಸಿಗುತ್ತಿತ್ತು. ಹತ್ತು ರೂಪಾಯಿ ಕೊಟ್ಟರೆ ಹೊಟ್ಟೆ ತುಂಬುವಷ್ಟು ಊಟ ಸಿಗುತ್ತಿತ್ತು. ಕಳೆದ ಎಂಟು ದಿನಗಳಿಂದ ಇಂದಿರಾ ಕ್ಯಾಂಟೀನ್ ಬಂದ್ ಮಾಡಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಯಾವ ಉದ್ದೇಶ ಇಟ್ಟುಕೊಂಡು ಆರಂಭವಾಯಿತೋ ಈ ಯೋಜನೆ, ಈಗ ಸೂಕ್ತ ನಿರ್ವಹಣೆ ಮಾಡದ ಕಾರಣ ಹಳ್ಳ ಹಿಡಿಯುವ ಹಂತ ತಲುಪಿದೆ. ಮಾತ್ರವಲ್ಲ, ಪಾಳು ಕೊಂಪೆಗಳಾಗಿದ್ದು, ಕ್ಯಾಂಟೀನ್ ಒಳಗೆ ಕಾಲಿಟ್ಟರೆ ದುರ್ವಾಸನೆ ಬರುತ್ತಿದೆ. ಎಂಟು ದಿನಗಳ ಹಿಂದೆ ಸ್ವಚ್ಛತೆ ಮಾಡಲಾಗಿತ್ತು. ಆ ಬಳಿಕ ಯಾರೂ ಇತ್ತ ತಲೆ ಹಾಕಿಲ್ಲ. ಇಂದಿರಾ ಕ್ಯಾಂಟೀನ್‌ಗಳಿಗೆ ಬೀಗ ಜಡಿಯಲಾಗಿದೆ.
ಇಂದಿರಾ ಕ್ಯಾಂಟೀನ್ಗೆ ಭೇಟಿ ನೀಡುವ ಜನರ ಸಂಖ್ಯೆ ಕುಸಿತ

ಕ್ಯಾಂಟೀನ್ ಮುಚ್ಚಿ 8 ದಿನಗಳಾಗಿವೆ
ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಬಡವರ ಹೊಟ್ಟೆ ತುಂಬಿಸಲು ಆರಂಭಿಸಿದ ಮಹತ್ವಾಕಾಂಕ್ಷೆಯ ಯೋಜನೆ ಇಂದಿರಾ ಕ್ಯಾಂಟೀನ್. ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬರುವ 8 ಇಂದಿರಾ ಕ್ಯಾಂಟೀನ್‌ಗಳು ಚೆನ್ನಾಗಿಯೇ ನಡೆಯುತ್ತಿದ್ದವು. ನಿತ್ಯವೂ ಜನರ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದರು. ಈಗ ದಿಢೀರ್ ಆಗಿ ಮುಚ್ಚಿರುವುದಕ್ಕೆ ಜನರು ಸರ್ಕಾರಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ.
ಕಳೆದ 16ನೇ ತಾರೀಖಿನಿಂದಲೇ ಇಂದಿರಾ ಕ್ಯಾಂಟೀನ್ ಬಂದ್ ಮಾಡಲಾಗಿದೆ. ಬಡವರು, ಕೂಲಿ ಕಾರ್ಮಿಕರು, ನಿರ್ಗತಿಕರು, ಆಟೋ ರಿಕ್ಷಾ ಚಾಲಕರು ಸೇರಿದಂತೆ ಸಾವಿರಾರು ಮಂದಿ ಕಡಿಮೆ ಹಣದಲ್ಲಿ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದರು. ಆದರೆ ಈಗ ಬಿಜೆಪಿ ಸರ್ಕಾರ ಬಡವರ ಹೊಟ್ಟೆ ಮೇಲೂ ಹೊಡೆದಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಾಂಗ್ರೆಸ್ ನಾಯಕರ ಆಕ್ರೋಶ
ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿನ ಇಂದಿರಾ ಕ್ಯಾಂಟೀನ್‌ಗಳನ್ನು ಮುಚ್ಚಿರುವುದು ಕಾಂಗ್ರೆಸ್ ನಾಯಕರ ಕಣ್ಣು ಕೆಂಪಾಗಿಸಿದೆ. ನಗರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಹಿಂಭಾಗದ ನಿಟುವಳ್ಳಿ ಕಡೆಗೆ ಹೋಗುವ ರಸ್ತೆಯಲ್ಲಿರುವ ಇಂದಿರಾ ಕ್ಯಾಂಟೀನ್‌ನಿಂದ ಬೇರೆ ಕಡೆಗಳಿಗೂ ಆಹಾರ ಸರಬರಾಜು ಮಾಡಲಾಗುತ್ತಿತ್ತು. ಇಲ್ಲಿನ ಇಂದಿರಾ ಕ್ಯಾಂಟೀನ್ ತೆರೆದಿಲ್ಲ. ಈ ಹಿನ್ನೆಲೆಯಲ್ಲಿ ದಾವಣಗೆರೆ ಮಹಾನಗರ ಪಾಲಿಕೆಯ ವಿರೋಧ ಪಕ್ಷದ ನಾಯಕ ಜಿ.ಎಸ್. ಗಡಿಗುಡಾಳ್ ಮಂಜುನಾಥ್ ನೇತೃತ್ವದಲ್ಲಿ ಸ್ಥಳಕ್ಕೆ ಭೇಟಿ ಕೊಟ್ಟಾಗ ಅವ್ಯವಸ್ಥೆಯ ಆಗರ ಕಂಡು ಬಂದಿದೆ.
ಇಂದಿರಾ ಕ್ಯಾಂಟೀನ್ ಮುಚ್ಚಿರುವುದರಿಂದಾಗಿ ಅಲ್ಲಿನ ಪಾತ್ರೆಗಳು, ನೀರು ಸಂಗ್ರಹ ಮಾಡುವ ತೊಟ್ಟಿಗಳು, ಆಹಾರ ಹಾಗೇ ಬಿಟ್ಟಿರುವುದರಿಂದ ಪಾತ್ರೆಗಳಲ್ಲಿ ಹುಳುಗಳು ತುಂಬಿಕೊಂಡಿವೆ. ಈ ಬಗ್ಗೆ ವಿಚಾರಿಸಿದರೆ ಸರಿಯಾದ ಮಾಹಿತಿಯೂ ಲಭ್ಯವಾಗಿಲ್ಲ. ಮಹಾನಗರ ಪಾಲಿಕೆಯ ಅಧಿಕಾರಿಗಳನ್ನು ಕೇಳಿದರೆ ಟೆಂಡರ್ ಅವಧಿ ಮುಗಿದಿದೆ. ಮತ್ತೆ ಹೊಸದಾಗಿ ಟೆಂಡರ್ ಕರೆಯಬೇಕು. ಆಮೇಲೆ ಇಂದಿರಾ ಕ್ಯಾಂಟೀನ್ ಆರಂಭಿಸಲಾಗುವುದು ಎಂಬ ಉತ್ತರ ಬರುತ್ತಿದೆ. ಇಂಥಾ ಜನೋಪಯೋಗಿ ಕಾರ್ಯಕ್ರಮ ಹಳ್ಳ ಹಿಡಿಸಲು ಬಿಜೆಪಿ ಸರ್ಕಾರ ಹೊರಟಿದೆ ಎಂಬುದು ಕಾಂಗ್ರೆಸ್ ನಾಯಕರ ಆರೋಪ.

5 ರೂಪಾಯಿಗೆ ತಿಂಡಿ, ಹತ್ತು ರೂಪಾಯಿಗೆ ಊಟ
ಬಡವರ ಪಾಲಿಗೆ ಹೊಟ್ಟೆ ತುಂಬಿಸುವ ತಾಣವಾಗಿದ್ದ ಇಂದಿರಾ ಕ್ಯಾಂಟೀನ್ ಮುಚ್ಚಿರುವುದು ನಿಜಕ್ಕೂ ನಾಚಿಕೆಗೇಡಿತನ. ಬಿಜೆಪಿ ಸರ್ಕಾರ ಬಡವರಿಗೆ ಅನ್ನ ನೀಡುವ ಯೋಜನೆಯಲ್ಲಿಯೂ ರಾಜಕಾರಣ ಮಾಡಲು ಹೊರಟಿದೆ. ಇದು ಸರಿಯಲ್ಲ. ಆದಷ್ಟು ಬೇಗ ಇಂದಿರಾ ಕ್ಯಾಂಟೀನ್ ಆರಂಭಿಸುವ ಮೂಲಕ ಬಡವರ ಅನ್ನ ದಾಹ ನೀಗಿಸಬೇಕು. ಇಲ್ಲದಿದ್ದರೆ ಕಾಂಗ್ರೆಸ್ ಕಾರ್ಪೊರೇಟರ್‌ಗಳೆಲ್ಲರೂ ಸೇರಿ ಹೋರಾಟ ನಡೆಸಬೇಕಾಗುತ್ತದೆ ಎಂದು ಪಾಲಿಕೆಯ ವಿಪಕ್ಷ ನಾಯಕ ಗಡಿಗುಡಾಳ್ ಮಂಜುನಾಥ್ ಎಚ್ಚರಿಕೆ ನೀಡಿದ್ದಾರೆ.
ಸಿದ್ದರಾಮಯ್ಯ ಸಿಎಂ ಆದಾಗ ಬಡವರಿಗಾಗಿ ರೂಪಿಸಿದ ಅತ್ಯುತ್ತಮ ಕಾರ್ಯಕ್ರಮ. ಕೋಟ್ಯಂತರ ಜನರು ಇದರ ಸದುಪಯೋಗ ಪಡೆದುಕೊಂಡಿದ್ದರು. 5 ರೂಪಾಯಿಗೆ ತಿಂಡಿ, ಹತ್ತು ರೂಪಾಯಿಗೆ ಊಟ ನೀಡಲಾಗುತ್ತಿತ್ತು. ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಉತ್ತಮ ಗುಣಮಟ್ಟದ, ರುಚಿಕರವಾದ ದಾಸೋಹ ನಡೆಯುತ್ತಿತ್ತು. ಜನರು ಖುಷಿಖುಷಿಯಾಗಿಯೇ ಸೇವಿಸುತ್ತಿದ್ದರು. ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಈ ಯೋಜನೆ ಹಳ್ಳ ಹಿಡಿಸಲು ಮುಂದಾಗಿರುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಟೆಂಡರ್ ನೀಡುವಾಗ ಪರ್ಸೆಂಟೇಜ್ ನಿರೀಕ್ಷೆ
ಈ ವೇಳೆ ಮಾತನಾಡಿದ ಕಾರ್ಪೊರೇಟರ್‌ಗಳಾದ ಚಮನ್ ಸಾಬ್ ಹಾಗೂ ಎ. ನಾಗರಾಜ್, "ಬಿಜೆಪಿ ಸರ್ಕಾರ ಇಂದಿರಾ ಕ್ಯಾಂಟೀನ್‌ನಲ್ಲಿ ಕಮೀಷನ್ ಪಡೆಯಲು ಹವಣಿಸುತ್ತಿದೆ. ಟೆಂಡರ್ ನೀಡುವಾಗ ಪರ್ಸೆಂಟೇಜ್ ನಿರೀಕ್ಷೆ ಮಾಡುತ್ತಿರುವುದರಿಂದಲೇ ಮುಚ್ಚಲಾಗಿದೆ. ಸಚಿವರು ಈ ಬಗ್ಗೆ ಇದುವರೆಗೂ ಯಾಕೆ ಕ್ರಮ ತೆಗೆದುಕೊಂಡಿಲ್ಲ. ಅವರೂ ಸಹ ಮುಚ್ಚಿದರೆ ಹೆಚ್ಚಿನ ಕಮೀಷನ್ ಸಿಗುತ್ತದೆ ಎಂಬ ನಿರೀಕ್ಷೆಯಲ್ಲಿದ್ದಂತೆ ಕಾಣುತ್ತಿದೆ. ಕಳೆದ ಎಂಟು ದಿನಗಳಿಂದ ಇಂದಿರಾ ಕ್ಯಾಂಟೀನ್ ನಿಲ್ಲಿಸಲಾಗಿದೆ. ಈ ಬಗ್ಗೆ ಯಾಕೆ ಕ್ರಮ ತೆಗೆದುಕೊಂಡಿಲ್ಲ,'' ಎಂದು ಪ್ರಶ್ನಿಸಿದ್ದಾರೆ.
"ನಾವು ಕಡಿಮೆ ಹಣ ನೀಡಿ ಬೆಳಿಗ್ಗೆ, ಮಧ್ಯಾಹ್ನ ಊಟ, ತಿಂಡಿ ಮಾಡುತ್ತಿದ್ದೆವು. ಹೋಟೆಲ್‌ಗಳಲ್ಲಿ ದುಬಾರಿ ಹಣ ನೀಡಿ ಊಟ, ಉಪಾಹಾರ ಮಾಡಲು ಆಗಲ್ಲ. ಇಂದಿರಾ ಕ್ಯಾಂಟೀನ್‌ನಲ್ಲಿ ಕಡಿಮೆ ಹಣಕ್ಕೆ ಸಿಗುತ್ತಿತ್ತು. ಈಗ ನಾವು ಹೆಚ್ಚು ಹಣ ನೀಡಿ ಹೋಟೆಲ್‌ಗಳಲ್ಲಿ ಸೇವಿಸುವಂತಾಗಿದೆ. ಸರ್ಕಾರಕ್ಕೆ ನಮ್ಮಂಥವರ ಮೇಲೆ ಯಾಕಿಷ್ಟು ಕೋಪ,'' ಎಂದು ಕೂಲಿ ಕಾರ್ಮಿಕರಾದ ಬಸವರಾಜಪ್ಪ ಅಸಮಾಧಾನ ವ್ಯಕ್ತಪಡಿಸಿದರು.