ದಾವಣಗೆರೆ; ಜೈನ ಸನ್ಯಾಸ ದೀಕ್ಷೆ ಪಡೆದ ಒಂದೇ ಕುಟುಂಬದ ಐವರು
ದಾವಣಗೆರೆ, ಫೆಬ್ರವರಿ 23: ಸಾವಿರಾರು ಜನರ ಸಮ್ಮುಖದಲ್ಲಿ ದಾವಣಗೆರೆಯ ಒಂದೇ ಕುಟುಂಬದ ಐವರು ಸೇರಿದಂತೆ ಒಟ್ಟು 6 ಜನರು ಜೈನ ಸನ್ಯಾಸ ದೀಕ್ಷೆಯನ್ನು ಪಡೆದರು. ಸುಮಾರು 10 ಸಾವಿರಕ್ಕೂ ಅಧಿಕ ಜನರು ಈ ವಿಶೇಷ ಕಾರ್ಯಕ್ರಮಕ್ಕೆ ಸಾಕ್ಷಿಯಾದರು.
ಸನ್ಯಾಸ ದೀಕ್ಷೆ ಪಡೆಯುವವರು ಲೌಕಿಕ ಜೀವನಕ್ಕೆ ವಿದಾಯ ಹೇಳುವ ಸಮಾರಂಭ ಭಾನುವಾರ ರಾತ್ರಿ ನಡೆಯಿತು. ಗುಜರಾತ್, ಮಹಾರಾಷ್ಟ್ರ, ರಾಜಸ್ಥಾನದಿಂದ ಹಲವಾರು ಜೈನ ಧರ್ಮೀಯರು ಈ ಸಮಾರಂಭಕ್ಕಾಗಿ ಆಗಮಿಸಿದ್ದರು.
ದಾವಣಗೆರೆ ಬಳಿಯ ಅವರಗೆರೆ ಜೈನ ದೇವಾಲಯದಿಂದ ನಡೆದ ಪಾದಯಾತ್ರೆ ಬಳಿಕ ಒಂದೇ ಕುಟುಂಬದ ಐವರು ಮತ್ತು ಮತ್ತೊಬ್ಬರ ಜೈನ ಸನ್ಯಾಸ ದೀಕ್ಷೆ ಕಾರ್ಯಕ್ರಮ ನಡೆಯಿತು. ಎಲ್ಲರೂ ಸಹ ಸನ್ಯಾಸ ದೀಕ್ಷೆ ಉದ್ದೇಶವನ್ನು ಭಕ್ತರಿಗೆ ವಿವರಿಸಿದರು.

ಸನ್ಯಾಸ ದೀಕ್ಷೆ ಸ್ವೀಕಾರಕ್ಕೂ ಮುನ್ನ ಎಲ್ಲರೂ ಉಂಗುರ, ವಸ್ತ್ರಗಳನ್ನು ದಾನ ಮಾಡಿದರು. ಬಳಿಕ ಗುರುಗಳು ಎಲ್ಲರ ತಲೆಯ ಮೇಲೆ ಅಕ್ಕಿ ಹಾಕುವ ಮೂಲಕ ದೀಕ್ಷೆ ನೀಡಿದರು. ಬಳಿಕ ಎಲ್ಲರಿಗೂ ಹೊಸದಾಗಿ ನಾಮಕರಣ ಮಾಡಲಾಯಿತು.
ಸನ್ಯಾಸ ದೀಕ್ಷೆ ಪಡೆದ ಮೇಲೆ ಅಹಿಂಸಾ ವ್ರತ ಪಾಲನೆ ಮಾಡಬೇಕು, ಸುಳ್ಳು ಹೇಳಬಾರದು, ಕಳ್ಳತನ ಮಾಡಬಾರದು, ಯಾವುದೇ ಸ್ಥಿರ, ಚರ ಆಸ್ತಿ ಹೊಂದಬಾರದು, ಬ್ರಹ್ಮಚರ್ಯ ಪಾಲನೆ ಮಾಡಬೇಕು.
ಸನ್ಯಾಸ ದೀಕ್ಷೆ ಕಾರ್ಯಕ್ರಮದಲ್ಲಿ ಆಚಾರ್ಯ ಮೇಘದರ್ಶನ ಸುರೀಜಿ ಮಹಾರಾಜ್, ಆಚಾರ್ಯ ಗಚ್ಛಾಧಿಪತಿ ಉದಯಪ್ರಭಾ ಸುರೀಜಿ ಮಹಾರಾಜ್ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.












Click it and Unblock the Notifications