ಡಿ. 19ರೊಳಗೆ 2ಎ ಮೀಸಲಾತಿ ಘೋಷಿಸದಿದ್ರೆ ಪರಿಣಾಮ ಎದುರಿಸಬೇಕಾಗುತ್ತದೆ: ಬಸವ ಜಯಮೃತ್ಯುಂಜಯ ಸ್ವಾಮೀಜಿ
ದಾವಣಗೆರೆ, ಡಿಸೆಂಬರ್, 12: ಪಂಚಮಸಾಲಿ ಲಿಂಗಾಯತ ಸಮಾಜಕ್ಕೆ ಡಿಸೆಂಬರ್ 19ರೊಳಗೆ 2 ಎ ಮೀಸಲಾತಿ ನೀಡುವುದಾಗಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಗಡುವು ತೆಗೆದುಕೊಂಡಿದ್ದಾರೆ. ಒಂದು ವೇಳೆ ಬೇಡಿಕೆ ಈಡೇರದಿದ್ದರೆ ಡಿಸೆಂಬರ್ 22ರಂದು ಬೆಳಗಾವಿಯ ವಿಕಾಸಸೌಧದ ಮುಂದೆ 25 ಲಕ್ಷ ಪಂಚಮಸಾಲಿಗಳನ್ನು ಸೇರಿಸಲಾಗುವುದು. ವಿರಾಟ್ ಪಂಚಶಕ್ತಿ ಸಮಾವೇಶ ಹಾಗೂ ವಿಕಾಸಸೌಧಕ್ಕೆ ಮುತ್ತಿಗೆ ನಡೆಸಲಾಗುವುದು. ಒಂದು ವೇಳೆ ಮೀಸಲಾತಿ ಘೋಷಣೆ ಮಾಡಿದರೆ ಸಿಎಂಗೆ ಸನ್ಮಾನ ಕಾರ್ಯಕ್ರಮ ಏರ್ಪಡಿಸಲಾಗುವುದು ಎಂದು ಕೂಡಲಸಂಗಮದ ಪಂಚಮಸಾಲಿ ಪೀಠಾಧಿಪತಿ ಬಸವ ಜಯಮೃತ್ಯುಂಜಯ ಸ್ವಾಮೀಜಿ ದಾವಣಗೆರೆಯಲ್ಲಿ ತಿಳಿಸಿದರು.
ನಗರದ ಮಾಜಿ ಶಾಸಕ ಶಿವಶಂಕರ್ ನಿವಾಸದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗ ಡಿಸೆಂಬರ್ 19ರತ್ತ ನಮ್ಮೆಲ್ಲರ ಚಿತ್ತ ನೆಟ್ಟಿದೆ. ಹಾಗಾಗಿ ಮುಂದಿನ ರೂಪುರೇಷೆಗಳನ್ನು ಸಿದ್ಧಪಡಿಸುವ ಸಲುವಾಗಿ ಬೆಳಗಾವಿಯ ಗಾಂಧಿಭವನದಲ್ಲಿ ಡಿಸೆಂಬರ್ 12ರಂದು ಮಧ್ಯಾಹ್ನ 12 ಗಂಟೆಗೆ 2ಎ ಮೀಸಲಾತಿ ಹೋರಾಟ ಸಮಿತಿಯ ಕಾರ್ಯಕಾರಿಣಿ ಸಭೆ ನಡೆಯಲಿದೆ. ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ವಿಜಯಾನಂದ ಕಾಶಪ್ಪನವರ್, ಲಕ್ಷ್ಮೀ ಹೆಬ್ಬಾಳ್ಕರ್, ಎಚ್.ಎಸ್. ಶಿವಶಂಕರ್, ಮಾಜಿ ಸಚಿವ ಎ.ಬಿ. ಪಾಟೀಲ್ ಸೇರಿದಂತೆ ಸಮಾಜದ ಮುಖಂಡರು, ಶಾಸಕರು, ಮಾಜಿ ಶಾಸಕರು, ಸಚಿವರು ಪಾಲ್ಗೊಳ್ಳಲಿದ್ದಾರೆ ಎಂದು ಮಾಹಿತಿ ನೀಡಿದರು.

ನಾವು ಕೊಟ್ಟಿರುವ ಗಡುವು ಮುಗಿದಿದೆ
ಮೀಸಲಾತಿ ವಿಳಂಬ ಮಾಡಿದರೆ ಯಾವುದೇ ಕಾರಣಕ್ಕೂ ಸಹನೆಯಿಂದ ಇರಲು ಸಾಧ್ಯವಿಲ್ಲ. ನಾವು ಕೊಟ್ಟಿರುವ ಗಡುವು ಮುಗಿದಿದೆ. ಈಗ ಸಿಎಂ ಅವರೇ ಗಡುವು ತೆಗೆದುಕೊಂಡಿದ್ದಾರೆ. ಮೀಸಲಾತಿ ಘೋಷಣೆ ಮಾಡುತ್ತಾರೆ ಎಂಬ ವಿಶ್ವಾಸ ಇದೆ. ಮುಖ್ಯಮಂತ್ರಿ ಬೊಮ್ಮಾಯಿ ಅವರನ್ನು ಭೇಟಿ ಮಾಡಿದಾಗ ಅವರು ಸ್ಪಷ್ಟ ಭರವಸೆ ನೀಡಿದ್ದಾರೆ. ಡಿಸೆಂಬರ್ 12ರಂದು ಇಟ್ಟುಕೊಂಡಿರುವ ವಿಧಾನಸೌಧ ಮುತ್ತಿಗೆ ಕೈ ಬಿಡಿ. ನೀವು ಹೋರಾಟ ಮಾಡಲು ನಿಗದಿಪಡಿಸಿರುವ ಒಂದು ವಾರದೊಳಗೆ ಮೀಸಲಾತಿ ಘೋಷಣೆ ಮಾಡುವುದಾಗಿ ಭರವಸೆ ನೀಡಿದ್ದಾರೆ. ಈ ಬಾರಿ ಕೈಕೊಟ್ಟರೆ ನಾವು ಸುಮ್ಮನಿರಲು ಸಾಧ್ಯವಿಲ್ಲ ಎಂದು ಎಚ್ಚರಿಕೆ ನೀಡಿದರು.

ಸಮಾಜದವರೂ ಹೋರಾಟಕ್ಕೆ ಕೈ ಜೋಡಿಸಿದ್ದಾರೆ
ಪೀಠ ಬಿಟ್ಟು ಬೀದಿಗೆ ಬಂದು ಮೀಸಲಾತಿಯನ್ನು ಕೇಳುತ್ತಿದ್ದೇವೆ. ಸಮಾಜದವರೆಲ್ಲರೂ ಇದಕ್ಕೆ ಕೈ ಜೋಡಿಸಿದ್ದಾರೆ. ಕಳೆದ ಎರಡು ತಿಂಗಳಿನಿಂದ ನಿರಂತರವಾಗಿ ಹೋರಾಟ ಮಾಡುತ್ತಿದ್ದೇವೆ. ಇದರ ಫಲ ಎಂಬಂತೆ ಈಗ ಒಂದು ಹಂತಕ್ಕೆ ಬಂದಿದೆ. ಮೀಸಲಾತಿಗಾಗಿ ಲಕ್ಷಾಂತರ ಜನರನ್ನು ಸೇರಿಸಿ ಶಿಗ್ಗಾವಿಯಲ್ಲಿ ಬಸವರಾಜ ಬೊಮ್ಮಾಯಿ ಮನೆ ಮುಂದೆ ಪ್ರತಿಭಟನೆ ಮಾಡಿದ್ದೇವೆ. ಪಾದಯಾತ್ರೆ, ಸಮಾವೇಶ, ರ್‍ಯಾಲಿ, ಮನೆ ಮನೆಗೆ ಹೋಗಿ ಮೀಸಲಾತಿ ಕೂಗು ಬಲವಾಗುವಂತೆ ಮಾಡಿದ್ದೇವೆ. ಹಾವೇರಿ, ಧಾರವಾಡ, ಬೆಳಗಾವಿ, ಹುಕ್ಕೇರಿ, ಅರಬಾವಿ ಸೇರಿದಂತೆ ಹಲವೆಡೆ ಸಮಾವೇಶ ಮಾಡಿದ್ದೇವೆ. ನಮ್ಮ ಹೋರಾಟಕ್ಕೆ ಹತ್ತು ಪಟ್ಟು ಹೆಚ್ಚು ಬಲ ಬಂದಿದೆ. ಶಾಶ್ವತ ಹಿಂದುಳಿದ ವರ್ಗಗಳ ಆಯೋಗದ ವರದಿ ಡಿಸೆಂಬರ್ 19ರೊಳಗೆ ಪಡೆದು ಅಂತಿಮ ನಿರ್ಧಾರವನ್ನು ಸರ್ಕಾರ ಪ್ರಕಟಿಸಲೇಬೇಕು ಎಂದು ಶ್ರೀಗಳು ಒತ್ತಾಯಿಸಿದರು.

ಪಂಚಮಸಾಲಿ ಸಮಾಜದ ಬೇಡಿಕೆ ಏನು?
ಕಳೆದ 27 ವರ್ಷಗಳಿಂದಲೂ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ನೀಡಬೇಕೆಂಬ ಆಗ್ರಹ ಇದೆ. ಕಳೆದ ಎರಡು ವರ್ಷಗಳಿಂದ ಹೋರಾಟಕ್ಕೆ ಇಳಿದ ಮೇಲೆ ಕೂಗು ಬಲವಾಗಿದೆ. ನಿರಂತರ ಹೋರಾಟ, ಉಪವಾಸ, ಸರ್ಕಾರಕ್ಕೆ ಬಿಸಿ ಮುಟ್ಟಿಸುವ ಕೆಲಸ ಮಾಡಿದ ಮೇಲೆ ಸಮಾಜದವರೂ ಸಹ ಕೈಗೂಡಿಸಿ ಹೋರಾಟ ಬಲಗೊಳ್ಳುವಂತೆ ಮಾಡಿದರು ಎಂದು ಹೇಳಿದರು.

ಒಬಿಸಿ ಪಟ್ಟಿಯಲ್ಲಿ ಮೀಸಲಾತಿ ನೀಡಬೇಕು
ಕೇಂದ್ರದ ಒಬಿಸಿ ಪಟ್ಟಿಯಲ್ಲಿ ಎಲ್ಲಾ ಲಿಂಗಾಯತರನ್ನು ಸೇರಿಸಬೇಕು ಎಂಬ ಅಖಿಲ ಭಾರತ ವೀರಶೈವ ಮಹಾಸಭಾದ ಆಗ್ರಹಕ್ಕೆ ಸಹಮತ ಇದೆ. ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ಜೊತೆಗೆ ಎಲ್ಲಾ ಲಿಂಗಾಯತರಿಗೆ ಕೇಂದ್ರದ ಒಬಿಸಿ ಪಟ್ಟಿಯಲ್ಲಿ ಮೀಸಲಾತಿ ನೀಡಬೇಕೆಂಬ ಆಗ್ರಹವನ್ನೂ ನಾನು ಮಾಡಿದೆ. ಸರ್ಕಾರ ಶಿಫಾರಸು ಮಾಡಿದರೆ ಸ್ವಾಗತಾರ್ಹ. ವೀರಶೈವ ಲಿಂಗಾಯತ ಮಹಾಸಭಾದ ಮಹಾ ಅಧಿವೇಶನಕ್ಕೆ ಇನ್ನು ಆಹ್ವಾನ ಬಂದಿಲ್ಲ. ನಮ್ಮ ಬೇಡಿಕೆ ಏನಾಗುತ್ತದೆ ಎಂಬುದನ್ನು ನೋಡಿಕೊಂಡು ಸಮಯ ಸಿಕ್ಕರೆ ಖಂಡಿತವಾಗಿಯೂ ಪಾಲ್ಗೊಳ್ಳುತ್ತೇನೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಪಂಚಮಸಾಲಿ ಸಮಾಜದ ಅಧ್ಯಕ್ಷ ಅಶೋಕ್ ಗೋಪನಾಳ್, ರಾಘವೇಂದ್ರ, ಯೋಗೇಶ್, ಕೆಂಚಿಕೆರೆ ಸಿದ್ಧಣ್ಣ, ಬಸವರಾಜ್ ಕಾರಿಗನೂರು, ಪ್ರಕಾಶ್ ಹೊನ್ನಮರಡಿ, ವಿಜಯ್ ಬೆಂಡಿಗೆರೆ, ಚನ್ನಬಸಣ್ಣಗೌಡ, ಧನಂಜಯ್ ಸೇರಿದಂತೆ ಮತ್ತಿತರರು ಹಾಜರಿದ್ದರು.












Click it and Unblock the Notifications