ಒಂದೇ ಗ್ರಾಮ ಪಂಚಾಯತಿಗೆ ಇಬ್ಬರು ಪಿಡಿಒ; ಗೋಡೆ ಮೇಲೇ ಅಟೆಂಡೆನ್ಸ್
ದಾವಣಗೆರೆ, ಡಿಸೆಂಬರ್ 7: ಹೊಸದಾಗಿ ನಿಯೋಜನೆಗೊಂಡ ಗ್ರಾಮ ಪಂಚಾಯಿತಿ ಪಿಡಿಒಗೆ ಅಧ್ಯಕ್ಷರು ಹಾಗೂ ಸಿಬ್ಬಂದಿ ಹಾಜರಾತಿ ಪುಸ್ತಕ ನೀಡದ ಹಿನ್ನೆಲೆ ಪಿಡಿಒ ಗೋಡೆಯ ಮೇಲೆಯೇ ಹಾಜರಾತಿ ಬರೆದು ವಾಟ್ಸ್ ಆಪ್ ಮಾಡಿದ್ದಾರೆ. ಅಷ್ಟಕ್ಕೂ ಹೀಗೆ ಮಾಡಲು ಒಂದು ಕಾರಣವಿದೆ.
ದಾವಣಗೆರೆಯ ಜಗಳೂರು ತಾಲ್ಲೂಕಿನ ದೇವಿಕೆರೆ ಗ್ರಾಮ ಪಂಚಾಯತಿಗೆ ಗೋವರ್ಧನ್ ಎನ್ನುವ ಹಾಲಿ ಪಿಡಿಒ ಇದ್ದು, ಈಗ ಹೆಚ್ಚುವರಿ ಪಿಡಿಒ ಆಗಿ ಗಾಯತ್ರಿ ಎನ್ನುವರನ್ನು ನೇಮಕ ಮಾಡಿದ್ದಾರೆ. ಇದರಿಂದ ಹೆಚ್ಚುವರಿಯಾಗಿ ನೇಮಕವಾದ ಪಿಡಿಒರನ್ನು ವಿರೋಧಿಸಿ ದೇವಿಕೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷರು ಹಾಗೂ ಸದಸ್ಯರು ಪ್ರತಿಭಟನೆ ನಡೆಸಿದರು. ಗಾಯತ್ರಿ ಅವರನ್ನು ನೇಮಕ ಮಾಡಿರುವ ಇಒ ಆದೇಶ ಸರಿಯಲ್ಲ. ಕೆಲವೆಡೆ ಅಧಿಕಾರಿಗಳಿಲ್ಲದೆ ಸಾರ್ವಜನಿಕರು ಪರದಾಡುತ್ತಿದ್ದಾರೆ. ಅಂತಹ ಸ್ಥಳದ ಬದಲು ಪಿಡಿಒ ಇರುವಲ್ಲಿ ಮತ್ತೊಬ್ಬರನ್ನು ನಿಯೋಜಿಸಿರುವ ಹಿಂದೆ ರಾಜಕೀಯ ದುರುದ್ದೇಶವಿದೆ ಎಂದು ಸದಸ್ಯರು ಆರೋಪಿಸಿದರು.
ಅಲ್ಲದೆ ಮೂರ್ನಾಲ್ಕು ವರ್ಷಗಳ ಹಿಂದೆ ಗಾಯತ್ರಿ ಅವರು ದೇವಿಕೆರೆ ಪಂಚಾಯಿತಿಯಲ್ಲಿ ಕಾರ್ಯದರ್ಶಿಯಾಗಿ ಕೆಲಸ ಮಾಡಿದ್ದರು. ಸರಿಯಾಗಿ ಕಚೇರಿಗೆ ಬಾರದೆ ಜನರ ಕೈಗೂ ಸಿಗದ ಕಾರಣ ಇಲ್ಲಿಂದ ವರ್ಗಾವಣೆ ಮಾಡಲಾಗಿತ್ತು. ಈಗ ಮತ್ತೆ ಪಿಡಿಒ ಆಗಿ ಬಂದಿರುವುದಕ್ಕೆ ನಮ್ಮ ವಿರೋಧವಿದೆ ಎಂದು ಆರೋಪಿಸಿದ್ದಾರೆ.

ಗೋಡೆಯ ಮೇಲೆ ಹಾಜರಾತಿ: ಹೊಸದಾಗಿ ನೇಮಕವಾದ ಪಿಡಿಒ ಗಾಯತ್ರಿಯವರು ಗ್ರಾಮ ಪಂಚಾಯತಿಗೆ ಬಂದು ಗೋಡೆ ಮೇಲೆ ತಮ್ಮ ಹಾಜರಾತಿ ಬರೆದು ವಾಟ್ಸಾಪ್ ನಲ್ಲಿ ಇಒ ಅವರಿಗೆ ಕಳುಹಿಸಿದ್ದಾರೆ. ಹಾಜರಾತಿ ಪುಸ್ತಕವನ್ನು ಇಲ್ಲಿನ ಸಿಬ್ಬಂದಿ ಹಾಗೂ ಅಧ್ಯಕ್ಷರು ನೀಡದ ಹಿನ್ನೆಲೆ ಅನಿವಾರ್ಯವಾಗಿ ಗೋಡೆ ಮೇಲೆ ಬರೆದು ಅದನ್ನು ಫೋಟೋ ತೆಗೆದು ಅಧಿಕಾರಿಗಳ ವಾಟ್ಸಾಪ್ ಗೆ ಕಳುಹಿಸಲಾಗಿದೆ ಎನ್ನುತ್ತಾರೆ ಹೊಸದಾಗಿ ನೇಮಕವಾದ ಪಿಡಿಒ ಗಾಯತ್ರಿ.












Click it and Unblock the Notifications