ದಾವಣಗೆರೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಎರಡೂವರೆ ವರ್ಷದ ಬಾಲಕನ ಜ್ಞಾಪಕ ಶಕ್ತಿ ಅಪಾರ: ಇಂಡಿಯಾ ಬುಕ್ ಆಫ್ ರೆಕಾರ್ಡ್ ಸೇರಿದ ಪೋರ

By ದಾವಣಗೆರೆ ಪ್ರತಿನಿಧಿ
|
Google Oneindia Kannada News

ದಾವಣಗೆರೆ, ಆಗಸ್ಟ್ 31: ಒಮ್ಮೆ ಹೇಳಿದರೆ ಸಾಕು, ಹಾಗೆ ನೆನಪಿನಲ್ಲಿಟ್ಟುಕೊಳ್ಳುತ್ತಾನೆ. ಯಾವ ವಿಷಯ ಹೇಳಿದರೂ ಆತನ ಸ್ಮರಣೆಗೆ ಹೋಗಿಬಿಡುತ್ತದೆ. ಮತ್ತೆ ಹೇಳು ಅಂದರೆ ಪಟಪಟ ಅಂತಾ ಹೇಳಲು ಶುರು ಮಾಡುತ್ತಾನೆ‌. ಅಂದ ಹಾಗೆ ಈ ಬಾಲಕನಿಗೆ ಈಗ ಇನ್ನೂ ಎರಡೂವರೆ ವರ್ಷ. ಇಷ್ಟು ಚಿಕ್ಕ ವಯಸ್ಸಿಗೆ ಈತ ಇಂಡಿಯಾ ಬುಕ್ ಆಫ್ ರೆಕಾರ್ಡ್‌ನಲ್ಲಿ ತನ್ನ ಹೆಸರು ಅಚ್ಚೊತ್ತಿದ್ದಾನೆ.

ಇಂತ ಸಾಧನೆ ಮಾಡಿರುವ ಬಾಲಕನ ಹೆಸರು ಸಮರ್ಥ್. ದಾವಣಗೆರೆಯ ಸ್ವಾಮಿ ವಿವೇಕಾನಂದ ಬಡಾವಣೆಯಲ್ಲಿ ವಾಸವಾಗಿರುವ ಉಮಾಶಂಕರ್ ಹಾಗೂ ನವ್ಯಾ ದಂಪತಿಯ ಪುತ್ರ.

ಕನ್ನಡ ಮತ್ತು ಇಂಗ್ಲೀಷ್ ಅಕ್ಷರಮಾಲೆ, 12 ಶಬ್ಧಗಳ ಸ್ಪೆಲ್ಲಿಂಗ್, ಮೂರು ರೈಮ್‌ಗಳು, ಏಳು ಖಂಡ, 18 ರಾಷ್ಟ್ರೀಯ ಚಿಹ್ನೆಗಳ ಗುರುತಿಸುವಿಕೆ, 1ರಿಂದ 100 ಸಂಖ್ಯೆ, ಮಗ್ಗಿಗಳು, 1ರಿಂದ 20ರ ತನಕ ಹಿಂದಿ ಅಂಕಿಗಳು, 8 ಸಸ್ಯ, 40 ಪ್ರಾಣಿಗಳು, 16 ಬಣ್ಣ, 20 ಹಣ್ಣುಗಳ ಗುರುತು ಹೇಳುವ ಜಾಣ್ಮೆ ಈ ಪೋರನಿಗಿದೆ.

 ಒಮ್ಮೆ ನೋಡಿದರೆ ಮರೆಯೋದಿಲ್ಲ!

ಒಮ್ಮೆ ನೋಡಿದರೆ ಮರೆಯೋದಿಲ್ಲ!

ಅಂದ ಹಾಗೆ ಸಮರ್ಥ್ ಒಮ್ಮೆ ನೋಡಿದರೆ ಮರೆಯೋದೇ ಇಲ್ಲ, ಅಷ್ಟು ಜ್ಞಾಪಕ ಶಕ್ತಿ ಈತನಿಗಿದೆ. ಮೊಬೈಲ್‌ನಲ್ಲಿ ಒಮ್ಮೆ ತೋರಿಸಿದರೆ ಸಾಕು ಅದನ್ನು ನೆನಪಿನಲ್ಲಿಟ್ಟುಕೊಳ್ಳುತ್ತಾನೆ. ಬಳಿಕ ಕೇಳಿದರೆ ಹರಳು ಉರಿದಂತೆ ಉತ್ತರಿಸುತ್ತಾನೆ. ಈತನ ನೆನಪಿನ ಶಕ್ತಿಗೆ ಎಲ್ಲರೂ ತಲೆದೂಗುವುದು ಖಚಿತ.

ಅಲ್ಲದೇ ತಂದೆ ತಾಯಿ ಯಾವುದೇ ವಿಷಯ ಹೇಳಿಕೊಟ್ಟರೂ ಮರೆಯುವುದೇ ಇಲ್ಲ. ರಾಷ್ಟ್ರೀಯ ಪಕ್ಷಿಗಳು, ಪ್ರಾಣಿಗಳು, ರಾಷ್ಟ್ರೀಯ ಮರ, ರಾಜ್ಯಗಳ ಹೆಸರು, 40 ಪ್ರಾಣಿಗಳ ಹೆಸರು, 14 ದೇಶಗಳ ಕರೆನ್ಸಿ, ಹಲವು ಬಣ್ಣಗಳು ಗುರುತಿಸುವ ಈ ಪುಟಾಣಿ ಈಗ ಎಲ್ಲರ ಕೇಂದ್ರ ಬಿಂದು.
 ಇಂಡಿಯಾ ಬುಕ್ ಆಫ್ ರೆಕಾರ್ಡ್ ಆಗಿದ್ದು ಹೇಗೆ?

ಇಂಡಿಯಾ ಬುಕ್ ಆಫ್ ರೆಕಾರ್ಡ್ ಆಗಿದ್ದು ಹೇಗೆ?

ಕಳೆದ ಒಂದು ವರ್ಷದ ಹಿಂದೆ ಸಮರ್ಥ್‌ನ ನೆನಪಿನ ಶಕ್ತಿ ಬಗ್ಗೆ ಆತನ ತಾಯಿ ನವ್ಯಾ ಗಮನಿಸಿದ್ದಾರೆ. ಒಮ್ಮೆ ಹೇಳಿಕೊಟ್ಟು ಮತ್ತೆ ಕೇಳಿದಾಗ ತಪ್ಪಿಲ್ಲದೇ ಉತ್ತರಿಸಿದ್ದಾನೆ. ಆಗಿನಿಂದಲೇ ಈತನಲ್ಲಿನ ವಿಶೇಷ ನೈಪುಣ್ಯತೆ ಗುರುತಿಸಿದ್ದಾರೆ. ಮೊಬೈಲ್‌ನಲ್ಲಿ ತೋರಿಸಿ ಹೇಳಿಕೊಟ್ಟು ಆತನನ್ನು ತಯಾರು ಮಾಡಿದ್ದಾರೆ. ಈ ವೇಳೆ ಸಂಬಂಧಿಕರು ಯಾಕೆ ಬುಕ್ ಆಫ್ ರೆಕಾರ್ಡ್‌ಗೆ ಕಳುಹಿಸಬಾರದು ಎಂಬ ಸಲಹೆ ನೀಡಿದ್ದಾರೆ. ಕೊರೊನಾ ಹಿನ್ನೆಲೆಯಲ್ಲಿ ನೇರವಾಗಿ ರೆಕಾರ್ಡ್ ಮಾಡಲು ಸಾಧ್ಯವಾಗಿಲ್ಲ. ಬಳಿಕ ನವ್ಯಾ ಅವರು ಸಮರ್ಥ್‌ನಲ್ಲಿನ ಜ್ಞಾಪಕ ಶಕ್ತಿಗೆ ಸಂಬಂಧಿಸಿದಂತೆ 20 ವಿಡಿಯೋಗಳನ್ನು ಮಾಡಿ ಇಂಡಿಯಾ ಬುಕ್ ಆಫ್ ರೆಕಾರ್ಡ್‌ಗೆ ಕಳಿಸಿದ್ದಾರೆ.

 ಸಮ್ಮತಿ ವ್ಯಕ್ತಪಡಿಸಿರುವ ಮೆಚ್ಚುಗೆ ಪತ್ರ

ಸಮ್ಮತಿ ವ್ಯಕ್ತಪಡಿಸಿರುವ ಮೆಚ್ಚುಗೆ ಪತ್ರ

ಇದನ್ನು ವೀಕ್ಷಿಸಿದ ಬುಕ್ ಆಫ್ ರೆಕಾರ್ಡ್‌ನವರು ಅದಕ್ಕೆ ಸಮ್ಮತಿ ವ್ಯಕ್ತಪಡಿಸಿರುವ ಮೆಚ್ಚುಗೆ ಪತ್ರ ಕಳುಹಿಸಿದ್ದು, ಅದು ಈಗ ಪೋಷಕರ ಕೈ ಸೇರಿದೆ. ಸಮರ್ಥ್ ಇನ್ನೂ ಹೆಚ್ಚಿನ ಸಾಧನೆ ಮಾಡಬೇಕು. ಆತನ ಸ್ಮರಣಾ ಶಕ್ತಿಗೆ ಎಲ್ಲರಿಗೂ ಮೆಚ್ಚುಗೆ ವ್ಯಕ್ತಪಡಿಸಿದ್ದು, ಸಮರ್ಥ್ ಸಾಧನೆ ಮಾಡುವ ಜೊತೆಗೆ ದಾವಣಗೆರೆಗೆ ಕೀರ್ತಿ ತಂದಿದ್ದಾನೆ. ಇಂಡಿಯನ್ ಬುಕ್ ಆಫ್ ರೆಕಾರ್ಡ್‌ಗೆ ತಮ್ಮ ಪುತ್ರ ಸೇರಿದ್ದು ಪೋಷಕರಿಗೆ ಖುಷಿ ತಂದಿದೆ.

 ಏಷ್ಯಾ ಬುಕ್ ಆಫ್ ರೆಕಾರ್ಡ್‌ಗೆ ಆಯ್ಕೆ

ಏಷ್ಯಾ ಬುಕ್ ಆಫ್ ರೆಕಾರ್ಡ್‌ಗೆ ಆಯ್ಕೆ

"ಮೂರು ವರ್ಷದ ಒಳಗಿನವರ ವಿಭಾಗದಲ್ಲಿ ಈ ಪ್ರಶಸ್ತಿ ಸಿಕ್ಕಿದೆ. ಕಳೆದ ಜೂನ್ ಹಾಗೂ ಜುಲೈ ತಿಂಗಳಿನಲ್ಲಿ ತರಬೇತಿ ನೀಡಿ ಅಪಾರ ಜ್ಞಾನದ ವಿಡಿಯೋಗಳನ್ನು ಕಳುಹಿಸಿದ್ದೆ. ಇಂಡಿಯಾ ಬುಕ್ ಆಫ್ ರೆಕಾರ್ಡ್‌ನವರು ಈ ವಿಡಿಯೋಗಳನ್ನು ನೋಡಿ ಪ್ರಶಂಸೆಯ ಪತ್ರ ಕಳುಹಿಸಿದ್ದು ತುಂಬಾನೇ ಖುಷಿ ಕೊಟ್ಟಿದೆ. ಏಷ್ಯಾ ಬುಕ್ ಆಫ್ ರೆಕಾರ್ಡ್‌ಗೆ ಆಯ್ಕೆಯಾಗಿದ್ದಾನೆ. ಮುಂದಿನ ದಿನಗಳಲ್ಲಿ ಮಗನ ಜ್ಞಾಪಕ ಶಕ್ತಿ ನೋಡಿಕೊಂಡು ಮುಂದೆ ಏನು ಮಾಡಬೇಕೆಂದು ನಿರ್ಧರಿಸುತ್ತೇವೆ," ಅಂತಾರೆ ತಾಯಿ ನವ್ಯಾ.

Recommended Video

ಜೋ ರೂಟ್ ಪ್ರೆಸ್ಸ್ ಮೀಟ್ ನಲ್ಲಿ ಹೇಳಿದ್ದೇನು ಗೊತ್ತಾ? | Oneindia Kannada

English summary
Two and half-year-old boy of Davanagere is entered in the India Book of Records for his memory power.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X