ಸದ್ಯದಲ್ಲೇ ವಾಣಿವಿಲಾಸ ಸಾಗರಕ್ಕೆ ಹರಿಯಲಿದೆ ಭದ್ರೆಯ ನೀರು!
ಚಿತ್ರದುರ್ಗ, ಏಪ್ರಿಲ್ 02: ಚಿತ್ರದುರ್ಗ ಜನತೆ ಸತತ ಬರದಿಂದ ಬೇಸತ್ತಿದ್ದು, ಈ ಬಾರಿ ರೈತರಿಗೆ ಅನುಕೂಲವಾಗಲೆಂದು ಭದ್ರಾ ಮೇಲ್ದಂಡೆ ಯೋಜನೆಯಿಂದ ವಾಣಿವಿಲಾಸ ಸಾಗರಕ್ಕೆ ನೀರು ಬಿಡಲು ನಿರ್ಧರಿಸಲಾಗಿದೆ. ಇದರಿಂದ ರೈತರ ಮೊಗದಲ್ಲಿ ಸಂತಸ ಕಾಣುತ್ತಿದೆ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಭದ್ರಾ ಮೇಲ್ದಂಡೆ ಯೋಜನೆಯ ನೀರು ವಾಣಿವಿಲಾಸ ಸಾಗರಕ್ಕೆ ಹರಿದು ಬರುವ ಕಾಲ ಹತ್ತಿರವಾಗಿದ್ದು, ಈಗಾಗಲೇ ಶಾಂತಿಪುರದ ಬಳಿ ಇರುವ ಮೊದಲ ಹಂತದ ಲಿಫ್ಟ್ ನಲ್ಲಿ ಮೋಟರ್ ಪಂಪ್ ಸ್ಥಿತಿ ಹಾಗೂ ಸಾಮರ್ಥ್ಯದ ವಿಚಾರವಾಗಿ ಅಧಿಕಾರಿಗಳು ನಡೆಸಿದ ಪ್ರಾಯೋಗಿಕ ಪರೀಕ್ಷೆ ಕೊನೆಗೂ ಯಶಸ್ವಿಯಾಗಿದೆ.
ಶಾಂತಿಪುರದ ಬಳಿ ಇರುವ ಐದು ಪಂಪ್ಗಳ ಪೈಕಿ ಮೊದಲ ಪಂಪ್ನಲ್ಲಿ ಈಗಾಗಲೇ ನೀರನ್ನು ಎತ್ತಲಾಗಿದೆ. ಉಳಿದ ನಾಲ್ಕು ಪಂಪ್ ಗಳಲ್ಲಿ ಮುಂದಿನ ದಿನಗಳಲ್ಲಿ ಚಾಲನೆಗೆ ಒಳಪಡಿಸಲಾಗುವುದು. ಇದರಿಂದ ಕೋಟೆ ನಾಡು ಭಾಗದ ಅನ್ನದಾತನ ದಶಕಗಳ ಆಸೆ ಈಡೇರುತ್ತಿದ್ದು, ಮುಖದಲ್ಲಿ ಮಂದಹಾಸ ಮೂಡಿದೆ.

ಆದರೆ ಸಾರ್ವಜನಿಕರು ಇದೆಲ್ಲಾ ಚುನಾವಣೆಯ ಗಿಮಿಕ್ ಎನ್ನುತ್ತಿದ್ದಾರೆ. ರಾಜ್ಯ ಸರ್ಕಾರ ಬರ ಅಧ್ಯಯನ ತಂಡ ಹಿರಿಯೂರಿಗೆ ಭೇಟಿ ನೀಡಿದ ಸಂದರ್ಭ ದಲ್ಲಿ ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವ ವೆಂಕಟರಮಣಪ್ಪ ಫೆಬ್ರುವರಿ ಅಂತ್ಯದಲ್ಲಿ ನೂರಕ್ಕೆ ನೂರರಷ್ಟು ನೀರು ಬರುತ್ತದೆ ಅಂತ ಹೇಳಿ ಹೋಗಿದ್ದರು. ಆದರೆ ಮಾರ್ಚ್ ಅಂತ್ಯವಾದರು ನೀರು ಬಂದಿಲ್ಲ ಎಂಬ ಮಾತುಗಳು ಇದೀಗ ಕೇಳಿ ಬರುತ್ತಿವೆ. ಆದರೆ ಇದು ಚುನಾವಣೆ ಗಿಮಿಕ್ಕೋ, ಇಲ್ಲವೋ ಎಂಬುದು ವಾಣಿವಿಲಾಸ ಸಾಗರಕ್ಕೆ ನೀರು ಬಂದ ಮೇಲಷ್ಟೇ ತಿಳಿಯುತ್ತದೆ.












Click it and Unblock the Notifications