Vani Vilasa Sagara Dam: ವಾಣಿ ವಿಲಾಸ ಸಾಗರ ಡ್ಯಾಂನಿಂದ ಈ 18 ಕೆರೆಗಳಿಗೆ ನೀರು ಹರಿಸಲೇಬೇಕು: ರೈತರ ಒತ್ತಾಯ
Vani Vilasa Sagara: ಹಿರಿಯೂರು ತಾಲೂಕಿನ ಜವನಗೊಂಡನಹಳ್ಳಿ ಹೋಬಳಿಯ 18 ಕೆರೆಗಳಿಗೆ ವಾಣಿ ವಿಲಾಸ ಸಾಗರದಿಂದ ನೀರು ಹರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಕಳೆದ 42 ದಿನಗಳಿಂದ ಪ್ರತಿಭಟನೆ ನಡೆಸಲಾಗುತ್ತಿದೆ.
ಇನ್ನು ರೈತರ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಮುಂದುವರೆದ ಭಾಗವಾಗಿ ಬುಧವಾರ (ಜುಲೈ 31) ಜೆಜೆ ಹಳ್ಳಿ ಹೋಬಳಿಯಿಂದ ತಾಲೂಕ ಕಚೇರಿವರೆಗೆ ಸಾವಿರಾರು ರೈತರು ನೂರಾರು ಟ್ಯಾಕ್ಟರ್, ಆಟೋ, ಕಾರು, ಬೈಕ್‌ಗಳೊಂದಿಗೆ ಪಾದಯಾತ್ರೆ ಮೂಲಕ ಬಂದು ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಪ್ರತಿಭಟನಾ ನಿರತ ಪಾದಯಾತ್ರೆಯ ರೈತರನ್ನು ಉದ್ದೇಶಿಸಿ ಮಾತನಾಡಿದ ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಬಸವರಾಜಪ್ಪ ಅವರು, ನಾವು ಮಧ್ಯ ಸರಬರಾಜು ಮಾಡಿ ಎಂದು ಕೇಳುತ್ತಿಲ್ಲ. ಕುಡಿಯುವ ನೀರು ಪೂರೈಕೆ ಮಾಡಿ ಎಂದು ಬೇಡಿಕೆ ಇಟ್ಟಿದ್ದೇವೆ. ಈಗಾಗಲೇ ಜೆಜೆ ಹಳ್ಳಿ ಹೋಬಳಿಯ ಭಾಗದಲ್ಲಿ ಬೋರ್ ವೆಲ್‌ಗಳು ಸಂಪೂರ್ಣವಾಗಿ ಬತ್ತಿ ಹೋಗಿ, ಅಂತರ್ಜಲ ಮಟ್ಟ ಪಾತಾಳಕ್ಕೆ ಕುಸಿದಿದೆ. ಎತ್ತಿನಹೊಳೆ ಯೋಜನೆ ಮೂಲಕ ಗಾಯಿತ್ರಿ ಡ್ಯಾಂ ಸೇರಿದಂತೆ ಹೋಬಳಿಯ 18 ಕೆರೆಗಳಿಗೆ ನೀರು ತುಂಬಿಸಿದಲ್ಲಿ ರೈತರ ನೆಮ್ಮದಿಯಿಂದ ಬದುಕಲು ಅನುಕೂಲವಾಗುತ್ತದೆ ಎಂದರು.
ಈಗಾಗಲೇ ರೈತರ ಬದುಕು ಮೂರಾಬಟ್ಟೆ ಆಗಿದ್ದು, ಬರಗಾಲ ಅತೀವೃಷ್ಟಿಯಾದಾಗ ಸರ್ಕಾರದಿಂದ ನ್ಯಾಯವಾದ ಪರಿಹಾರಗಳು ಸಿಗುತ್ತಿಲ್ಲ. ಬೆಳೆಗಳಿಗೆ ನ್ಯಾಯಯುತವಾದ ಬೆಲೆಗಳು ಸಿಗುತ್ತಿಲ್ಲ. ಬಿಜೆಪಿ ಸರ್ಕಾರ ಮೀಸಲಿಟ್ಟ ಭದ್ರಾ ಯೋಜನೆ 5,300 ಕೋಟಿ ರೂಪಾಯಿ ಹಣ ಮೀಸಲಾಗಿಯೇ ಉಳಿದಿದೆ. ಭದ್ರಾ ಕಾಮಗಾರಿ ಸಂಪೂರ್ಣವಾಗದೇ ಇರುವುದರಿಂದ 46,000 ಕ್ಯೂಸೆಕ್ ನೀರು ಹೊಳೆಗೆ ಹರಿದು ಹೋಗುತ್ತಿದೆ ಎಂದರು.
ಮೀಸಲಿಟ್ಟ ಹಣ ಬಂದು ಕಾಮಗಾರಿ ಪೂರ್ಣವಾಗಿದ್ದರೇ ಆ ನೀರು ವಾಣಿ ವಿಲಾಸ ಸಾಗರ ಡ್ಯಾಂನ ಒಡಲನ್ನಾದರೂ ಸೇರುತ್ತಿತ್ತು. ಜಿಲ್ಲಾ ಉಸ್ತುವಾರಿ ಸಚಿವರು ಈ ಕೂಡಲೇ ಅಧಿಕಾರಿಗಳ ಸಭೆ ಕರೆದು ಜೆಜೆ ಹಳ್ಳಿ ಹೋಬಳಿಯ ನೀರಿನ ಸಮಸ್ಯೆ ಪರಿಹಾರ ಕಂಡು ಹಿಡಿಯಬೇಕು. ಇಲ್ಲವಾದಲ್ಲಿ ಈಗಾಗಲೇ ಎರಡು ಹಂತದ ಹೋರಾಟ ಮುಗಿದಿದ್ದು, ಮೂರನೇ ಹಂತದ ಚಳುವಳಿಗೆ ಸನ್ನದ್ಧರಾಗಿ ಬೇಕಾಗುತ್ತದೆ ಎಂದು ಎಚ್ಚರಿಸಿದರು.
ರೈತ ಸಂಘದ ತಾಲೂಕು ಅಧ್ಯಕ್ಷ ಕೆ.ಟಿ.ತಿಪ್ಪೇಸ್ವಾಮಿ ಮಾತನಾಡಿ, ಕಲ್ಲುವಳ್ಳಿ ಭಾಗದ ಜನರು ಗಟ್ಟಿ ಜನವಾಗಿದ್ದರಿಂದ ನೀರು ಇಲ್ಲದೆ ಸೋರಗಿ ಸಾಲಗಾರರದರೂ ಸಹ ನೀರಿಗಾಗಿ ಇನ್ನು ಹೋರಾಟ ನಡೆಸುತ್ತಿದ್ದಾರೆ. ಆ ಭಾಗದಲ್ಲಿ ಅಂತರ್ಜಲ ಮಟ್ಟ ಕುಸಿದು, ಕುಡಿಯುವ ನೀರು, ಬೆಳೆಗಳಿಗೆ ನೀರು ಇಲ್ಲದೆ ಟ್ಯಾಂಕರ್‌ಗಳ ಮೂಲಕ ನೀರು ಹರಿಸಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಈಗಲಾದರೂ ಸಂಬಂಧಪಟ್ಟ ಅಧಿಕಾರಿಗಳು ಡಿಪಿಆರ್ ತಯಾರಿಸಿ ಸರ್ಕಾರಕ್ಕೆ ಮನವಿ ಸಲ್ಲಿಸಬೇಕು ಹಾಗೂ ವಿವಿ ಸಾಗರಕ್ಕೆ 10 ಟಿಎಂಸಿ ನೀರು ಮೀಸಲಿಡಬೇಕು ಎಂದು ಆಗ್ರಹಿಸಿದರು.
ಬಿಬಿಎಂಪಿ ಮಾಜಿ ಸದಸ್ಯ ರಾಜಣ್ಣ ಮಾತನಾಡಿ, ರೈತರ ಈ ನಿರಂತರವಾದ ಹೋರಾಟಕ್ಕೆ ನ್ಯಾಯ ಸಿಗಬೇಕು. ಜೆಜೆ ಹಳ್ಳಿ ಹೋಬಳಿಯ ಜನರ ಮತ್ತು ರೈತರ ದಶಕಗಳ ನೀರಿನ ಬವಣೆಯನ್ನು ಇನ್ನಾದರೂ ಸರ್ಕಾರ ಮನಗಾಣಬೇಕಿದೆ. ಕಳೆದ ಒಂದು ತಿಂಗಳಿಗೂ ಹೆಚ್ಚು ಕಾಲ ರೈತರು ಧರಣಿ ಕೈಗೊಂಡಿದ್ದು, ಅವರ ನ್ಯಾಯಯುತ ಬೇಡಿಕೆಯನ್ನು ಜನಪ್ರತಿನಿಧಿಗಳು ಹಾಗೂ ಸರ್ಕಾರ ನಿರ್ಲಕ್ಷ ಮಾಡದೆ ಕಾರ್ಯರೂಪಕ್ಕೆ ತರಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಅಪಾರ ಜಿಲ್ಲಾಧಿಕಾರಿ ಕುಮಾರಸ್ವಾಮಿ ಅವರು ಮನವಿ ಸ್ವೀಕರಿಸಿ, ರೈತರ ಬೇಡಿಕೆಗಳ ಬಗ್ಗೆ ಸರ್ಕಾರದ ಗಮನಕ್ಕೆ ತರಲಾಗುವುದು ಎಂದು ಭರವಸೆ ನೀಡಿದರು. ಇನ್ನು ಜೀವದಾತೆ ಫೌಂಡೇಶನ್ ಸಂಸ್ಥಾಪಕ ಕೆ.ಅಭಿನಂದನ್ ಮಾತನಾಡಿ, ಜೆಜೆ ಹಳ್ಳಿ ಹೋಬಳಿಯ ರೈತರ ನೀರಿನ ಅನಿರ್ದಿಷ್ಟಾವಧಿ ಧರಣಿ ಹೋರಾಟಕ್ಕೆ ನಮ್ಮ ಜೀವದಾತೆ ಫೌಂಡೇಶನ್ ವತಿಯಿಂದ ಸಂಪೂರ್ಣ ಸಹಕಾರವಿದೆ. ತಾಲೂಕಿನ ರೈತರ ಯಾವುದೇ ಸಮಸ್ಯೆಗಳ ಪರಿಹಾರಕ್ಕೂ ನಾವು ಬೆಂಬಲವಾಗಿ ನಿಲ್ಲುತ್ತೇವೆ. ರೈತ ಉಳಿದರೆ ಮಾತ್ರ ದೇಶ ಉಳಿಯುತ್ತದೆ ಎಂಬ ಸತ್ಯ ಆಳುವವರಿಗೆ ಅರ್ಥವಾದರೆ ಸಾಕು ಎಂದರು .
ಈ ಸಂದರ್ಭದಲ್ಲಿ ತಹಶೀಲ್ದಾರ್ ಸಿ ರಾಜೇಶ್ ಕುಮಾರ್, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಸಿಬಿ ಪಾಪಣ್ಣ, ಜೆಡಿಎಸ್ ಮಾಜಿ ಜಿಲ್ಲಾಧ್ಯಕ್ಷ ಡಿ.ಯಶೋಧರ, ರಾಜ್ಯ ರೈತ ಸಂಘದ ಕಾರ್ಯಾಧ್ಯಕ್ಷ ಸೀದ್ದವಿರಪ್ಪ, ಜಿಪಂ ಮಾಜಿ ಅಧ್ಯಕ್ಷ ಮೀಸೆ ಮಹಾಲಿಂಗಪ್ಪ, ತಾಲ್ಲೂ ಪಂಚಾಯತಿ ಮಾಜಿ ಅಧ್ಯಕ್ಷ ಮಂಜುನಾಥ್, ಜೆಜೆ ಹಳ್ಳಿ ಗ್ರಾ.ಪಂ. ಅಧ್ಯಕ್ಷ ಅಲ್ತಾಫ್, ಕೆ.ಆರ್. ಹಳ್ಳಿ ಅಧ್ಯಕ್ಷ ಸುರೇಶ್, ಎಸ್.ಟಿ. ಮಂಜುನಾಥ್, ರೈತ ಮುಖಂಡರಾದ ಶಿವಕುಮಾರ್, ಹೆಚ್.ಆರ್.ತಿಮ್ಮಯ್ಯ,
ಎ.ಎಂ.ವೀರಣ್ಣ, ಜಯರಾಮಯ್ಯ, ಶೇಷಣ್ಣ, ತಿಮ್ಮಣ್ಣ, ಈಶ್ವರಪ್ಪ ಸೇರಿದಂತೆ ಸಾವಿರಾರು ರೈತರು ಭಾಗವಹಿಸಿದ್ದರು.












Click it and Unblock the Notifications