ಫೆಬ್ರವರಿ 3ರಿಂದ ವಾಣಿ ವಿಲಾಸ ಜಲಾಶಯದಿಂದ ನಾಲೆಗಳಿಗೆ ನೀರು ಬಿಡುಗಡೆ
89 ವರ್ಷಗಳ ಬಳಿಕ ಭರ್ತಿಯಾಗಿರುವ ವಾಣಿ ವಿಲಾಸ ಜಲಾಶಯದಿಂದ ಫೆಬ್ರವರಿ 3 ರಿಂದ ಜೂನ್ 18 ರವರೆಗೆ ಎಡನಾಲ ಮತ್ತು ಬಲನಾಲೆಗಳಿಗೆ ನೀರು ಹರಿಸಲಾಗುತ್ತದೆ ಎಂದು ವಿಶ್ವೇಶ್ವರಯ್ಯ ಜಲ ನಿಗಮ ಮಂಡಳಿ ತಿಳಿಸಿದೆ.
ಚಿತ್ರದುರ್ಗ, ಜನವರಿ 31: ಬಯಲು ಸೀಮೆಯ ಏಕೈಕ ಜೀವನಾಡಿಯಾಗಿರುವ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ವಾಣಿ ವಿಲಾಸಪುರ ಗ್ರಾಮದ ಬಳಿ ಇರುವ ವಾಣಿ ವಿಲಾಸ ಜಲಾಶಯ 89 ವರ್ಷಗಳ ಬಳಿಕ ಭರ್ತಿಯಾಗಿ, ಕೋಡಿ ಬಿದ್ದಿದೆ. ಇದರಿಂದ ಪ್ರಸ್ತುತ ಜಲಾಶಯದ ನೀರಿನ ಮಟ್ಟ ಸುಮಾರು 130 ಅಡಿ ನೀರು ಇದೆ. ಹೀಗಾಗಿ 2023ರ ಪ್ರಸಕ್ತ ಸಾಲಿನಲ್ಲಿ ಫೆಬ್ರವರಿ 3 ರಿಂದ ಜೂನ್ 18 ರವರೆಗೆ ಮೂರು ಹಂತಗಳಲ್ಲಿ ಎಡನಾಲ ಮತ್ತು ಬಲನಾಲೆಗಳಿಗೆ ನೀರು ಹರಿಸಲಾಗುತ್ತದೆ ಎಂದು ವಿಶ್ವೇಶ್ವರಯ್ಯ ಜಲ ನಿಗಮ ಮಂಡಳಿ ತಿಳಿಸಿದೆ.
ಈ ಬಗ್ಗೆ ವಿಶ್ವೇಶ್ವರಯ್ಯ ಜಲ ನಿಗಮ ಮಂಡಳಿ ವಿಸ್ತ್ರತವಾಗಿ ಮಾಹಿತಿ ನೀಡಿದೆ. ಫೆಬ್ರವರಿ 03/02/2023 ರಿಂದ ಮಾರ್ಚ್ 4 ರವರೆಗೆ ಮೊದಲ ಹಂತದ ನೀರು ಹರಿಸಲಾಗುತ್ತದೆ. ಮಾರ್ಚ್ 24/03/2023 ರಿಂದ ಏಪ್ರಿಲ್ 24ರ ವರೆಗೆ ಎರಡನೇ ಹಂತ ಹಾಗೂ ಮೇ 19/05/2023ರಿಂದ ಜೂನ್ 18 ರವರೆಗೆ ಮೂರನೇ ಕಂತಿನ ನೀರು ಹರಿಸಲಾಗುತ್ತದೆ.
ಹಿರಿಯೂರು ತಾಲೂಕಿನ ಜವನಗೊಂಡನಹಳ್ಳಿ ಹೋಬಳಿಯ ಗಾಯಿತ್ರಿ ಜಲಾಶಯದಿಂದ ನೀರು ಹರಿಸುವ ಬಗ್ಗೆ ತಿರ್ಮಾನಿಸಲಾಗಿದೆ. ದಿನಾಂಕ 03/02/2023 ರಿಂದ 29/03/2023 ರವರೆಗೆ ಮೊದಲ ಹಂತ ಹಾಗೂ 28/04/2023 ರಿಂದ 17/05/2023 ರವರೆಗೆ ಎರಡನೇ ಹಂತದ ನೀರು ಹರಿಸುವ ಬಗ್ಗೆ ವಿವಿಸಾಗರ ಮತ್ತು ಗಾಯತ್ರಿ ಜಲಾಶಯದ ಅಚ್ಚುಕಟ್ಟು ಪ್ರದೇಶದಲ್ಲಿ ಬೇಸಿಗೆ ಹಂಗಾಮಿನ ಬೇಸಿಗೆ ಹಂಗಾಮಿನ ಬೆಳೆಗಳಿಗೆ ಹಾಗೂ ತೋಟಗಾರಿಕೆ ಬೆಳೆಗಳಿಗೆ ನೀರು ಹರಿಸಲು ಅಧ್ಯಕ್ಷರು ಹಾಗೂ ಜಿಲ್ಲಾಧಿಕಾರಿಗಳು, ನೀರಾವರಿ ಸಲಹಾ ಸಮಿತಿ ಇವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ.

ಇನ್ನು ಜಲಾಶಯದಲ್ಲಿ ಶೇಖರಣೆಯಾಗಿರುವ ನೀರನ್ನು ಕುಡಿಯುವ ನೀರಿನ ಮಿತವ್ಯಯವಾಗಿ ಉಪಯೋಗಿಸಿ ನೀರು ಫೋಲ್ ಮಾಡದೆ ಪ್ರತಿಯೊಂದು ನೀರಿನ ಹಂಚಿಕೆಯಲ್ಲಿ ಸಹಕರಿಸಬೇಕು. ಜೊತೆಗೆ ರೈತ ಪ್ರತಿನಿಧಿಗಳು ಮತ್ತು ಅಚ್ಚುಕಟ್ಟು ರೈತರು ಪೂರ್ಣ ಸಹಕಾರ ಕೊಡಬೇಕು ಕಾಲುವೆಗಳಲ್ಲಿ ನೀರು ಹರಿಸುವುದರಿಂದ ಅಚ್ಚುಕಟ್ಟು ಪ್ರದೇಶದ ಜನಜಾನುವಾರುಗಳ ಸಂರಕ್ಷಣೆಗೆ ಎಚ್ಚರಿಕೆ ವಹಿಸುವಂತೆ ಹಾಗೂ ಮುಂಜಾಗ್ರತ ಕ್ರಮ ತೆಗೆದುಕೊಳ್ಳುವಂತೆ ಸಾರ್ವಜನಿಕರಲ್ಲಿ ಅಧಿಕಾರಿಗಳು ಮನವಿ ಮಾಡಿದ್ದಾರೆ.
ಪ್ರಸ್ತುತ ಜಲಾಶಯದಲ್ಲಿ 129.95 ಅಡಿ ನೀರು ಇದ್ದು ಫೆಬ್ರವರಿ 3 ರಿಂದ ಸುಮಾರು ಒಂದು ತಿಂಗಳ ಕಾಲ ನೀರು ಹರಿಯಲಿದೆ. ಇದರಿಂದ ಒಟ್ಟು 12. 155 ಹೆಕ್ಟೇರ್ ಪ್ರದೇಶಕ್ಕೆ ನೀರು ಹಾಯಿಸಬಹುದಾಗಿದೆ. ಇನ್ನು 5557 ಹೆಕ್ಟೇರ್ ಅಡಿಕೆ ತೆಂಗು ಹಾಗೂ ಬಾಳೆ ಸೇರಿದಂತೆ ತೋಟಗಾರಿಕೆ ಬೆಳೆಗಳು ಮತ್ತು ಕೃಷಿಗಳಿಗೆ ನೀರು ಹಾಯಿಸಬಹುದಾಗಿದೆ.
ಇನ್ನು ಜಲಾಶಯದಿಂದ ನೀರು ಕಾತ್ರೀಕೇನಹಳ್ಳಿ ಅಣೆಕಟ್ಟಿನ ಮೂಲಕ ಬಲನಾಲೆ ಸುಮಾರು 60 ಕಿಲೋಮೀಟರ್ ದೂರ ಹೊಂದಿದೆ. ಎಡನಾಲೆ 48 ಕಿಲೋಮೀಟರ್ ದೂರ ಹೊಂದಿದವರೆಗೂ ನೀರು ಹರಿಯಲಿದೆ. ಜಲಾಶಯದಿಂದ ಪ್ರತಿನಿತ್ಯ ಸುಮಾರು 400 ಕ್ಯೂಸೆಕ್ ನೀರು ಡ್ಯಾಂ ನಿಂದ ಹೊರಹೋಗಲಿದೆ. ಈ ನೀರು ಹರಿಯುವುದರಿಂದ ಅನೇಕ ಪ್ರದೇಶದಲ್ಲಿ ಬೆಳೆಗಳಿಗೆ ಹಾಗೂ ತೋಟಗಳಿಗೆ ಜೀವ ಕಳೆ ಬರಲಿದೆ.












Click it and Unblock the Notifications