ಹಿರಿಯೂರು ಪೊಲೀಸರ ಕಾರ್ಯಾಚರಣೆ: ಕಳ್ಳರ ಬಂಧನ, 12ಲಕ್ಷ ರೂ ಮೌಲ್ಯದ ಆಭರಣ ವಶ
ಚಿತ್ರದುರ್ಗ, ಜುಲೈ 27: ಹಿರಿಯೂರು ನಗರ ಹಾಗೂ ಗ್ರಾಮಾಂತರ ಭಾಗಗಳಲ್ಲಿ ಮನೆಗಳಿಗೆ ಕನ್ನ ಹಾಕುತ್ತಿದ್ದ 8 ಮಂದಿ ಕಳ್ಳರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಗಳಿಂದ ಸುಮಾರು 12 ಲಕ್ಷ 75 ಸಾವಿರ ರೂ ಮೌಲ್ಯದ ಬೆಳ್ಳಿ ಹಾಗೂ ಬಂಗಾರದ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಡಿವೈಎಸ್.ಪಿ ಚೈತ್ರಾ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಗ್ರಾಮಾಂತರ ಪೊಲೀಸ್ ಠಾಣಾ ಆವರಣದಲ್ಲಿ ಸುದ್ದಿಗೋಷ್ಠಿಯ ನಡೆಸಿ ಮಾತನಾಡಿದ ಡಿವೈಎಸ್.ಪಿ ಚೈತ್ರಾ, ತಾಲೂಕಿನ ಬಗ್ಗನಾಡು ಆದಿವಾಲ ಫಾರಂ, ಮದ್ದೇರಹಳ್ಳ, ಹಾಗೂ ನಗರದ ಹೊರವಲಯದ ಮನೆಗಳಲ್ಲಿ ಕಳ್ಳತನದ ಪ್ರಕರಣಗಳು ನಡೆದಿದ ಬಗ್ಗೆ ಪ್ರಕರಣ ದಾಖಲಾಗಿತ್ತು.

ಈ ಬಗ್ಗೆ ತನಿಖಾ ತಂಡವನ್ನು ಎಸ್.ಪಿ.ಪರಶುರಾಮ್ ಹಾಗೂ ಅಡೀಷನಲ್ ಎಸ್.ಪಿ.ಕುಮಾರಸ್ವಾಮಿ ಇವರ ಮಾರ್ಗದರ್ಶನದಲ್ಲಿ ಸಿಪಿಐ ಕಾಳಿಕೃಷ್ಣ, ಪಿ.ಎಸ್.ಐ ಸಚಿನ್ ಬಿರಾದಾರ ಹಾಗೂ ಸಿಬ್ಬಂದಿಗಳಾದ ಸಿದ್ದಪ್ಪ, ಮಹಮ್ಮದ್ ಹನೀಫ್, ಪರಮೇಶ್, ಪ್ರವೀಣ್ ಕುಮಾರ್, ಪ್ರಸನ್ನ, ಶಶಿಧರ್, ಹರ್ಷ, ದೇವೇಂದ್ರಪ್ಪ, ಸಿದ್ದಲಿಂಗೇಶ್ವರ ಒಳಗೊಂಡಂತೆ ತಂಡವನ್ನು ರಚಿಸಲಾಗಿತ್ತು.
ಈ ತಂಡವು ಅಧಿಕಾರಿಗಳ ನೇತೃತ್ವದಲ್ಲಿ ತನಿಖೆ ನಡೆಸಿ, ಆರೋಪಿಗಳಾದ ಮಹೇಶ್, ಜೋಸೆಫ್, ಬಾಲು, ರವಿಕುಮಾರ್, ಸಲೀಂ ಬೇಗ್, ಅನ್ವರ್ ಭಾಷಾ, ಸಂತೋಷ ಕುಮಾರ್, ವಿನಾಯಕಾಚಾರಿ, ಹಾಗೂ ರಾಘವೇಂದ್ರಾಚಾರಿ ಎಂಬ 8 ಮಂದಿಯನ್ನು ಬಂಧಿಸಿ, ಅವರು ಕಳ್ಳತನ ಮಾಡಿದ್ದ ಸುಮಾರು 12 ಲಕ್ಷ 75 ಸಾವಿರ ರೂ ಮೌಲ್ಯದ ಬೆಳ್ಳಿ ಹಾಗೂ ಬಂಗಾರದ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಮನೆಗಳ್ಳರನ್ನು ಬಂಧಿಸಿ, ಆರೋಪಿಗಳಿಂಧ ಸುಮಾರು 12 ಲಕ್ಷ 75 ಸಾವಿರ ರೂ ಮೌಲ್ಯದ ಬೆಳ್ಳಿ ಹಾಗೂ ಬಂಗಾರದ ಆಭರಣಗಳನ್ನು ವಶಪಡಿಸಿಕೊಂಡಿರುವ ಗ್ರಾಮಾಂತರ ಪೊಲೀಸ್ ಠಾಣೆಯ ಸಿಪಿಐ ಕಾಳಿಕೃಷ್ಣ ಹಾಗೂ ಸಿಬ್ಬಂದಿ ವರ್ಗದವರ ಕಾರ್ಯವೈಖರಿಯನ್ನು ಪೊಲೀಸ್ ಅಧೀಕ್ಷಕರು ಶ್ಲಾಘಿಸಿ. ಪ್ರಶಂಸೆ ವ್ಯಕ್ತಪಡಿಸಿದ್ದಾರೆ ಎಂದು ಡಿವೈಎಸ್.ಪಿ ಚೈತ್ರಾ ತಿಳಿಸಿದ್ದಾರೆ.

ಮಳವಳ್ಳಿಯಲ್ಲಿ ವಾಹನ ಕಳ್ಳರ ಬಂಧನ
ಮಂಡ್ಯ: ಮಳವಳ್ಳಿಯಲ್ಲಿ ಪೊಲೀಸ್ ಪೇದೆಯೊಬ್ಬರ ಬೈಕ್ ಸೇರಿದಂತೆ ತಾಲೂಕಿನ ವಿವಿಧೆಡೆ ವಾಹನಗಳನ್ನು ಕಳುವು ಮಾಡಿ ಮಾರಾಟ ಮಾಡಿದ್ದ ಇಬ್ಬರು ಆರೋಪಿಗಳನ್ನು ಹಲಗೂರು ವೃತ್ತ ನಿರೀಕ್ಷಕ ಬಿ.ಎಸ್.ಶ್ರೀಧರ್ ನೇತೃತ್ವದ ತನಿಖಾ ತಂಡ ಬಂಧಿಸಿದ್ದಾರೆ ಎಂದು ವರದಿಯಾಗಿದೆ. ಕಿರುಗಾವಲು ಗ್ರಾಮದ ಅಬ್ದುಲ್ ಮಸೂದ್, ರಶೀದ್ ಖಾನ್ ಬಂಧಿತ ಆರೋಪಿಗಳು ಎಂದು ಗುರುತಿಸಲಾಗಿದೆ. ಆರೋಪಿಗಳು ಮಳವಳ್ಳಿ ಆಟೋ ಸೇರಿದಂತೆ ಬೈಕ್‌ಗಳನ್ನು ಕಳ್ಳತನ ಮಾಡುತ್ತಿದ್ದರು. ಈ ಬಗ್ಗೆ ಅನೇಕ ಪ್ರಕರಣಗಳು ದಾಖಲಾಗಿದ್ದು, ತನಿಖೆಗಿಳಿದ ಪೊಲೀಸರು ಆರೋಪಿಗಳನ್ನು ಬಂಧಿಸಿ, ಕಳ್ಳತನ ಮಾಡಿದ್ದ ಬೈಕ್‌ಗಳನ್ನು ವಶಕ್ಕೆ ಪಡೆದಿದ್ದಾರೆ.












Click it and Unblock the Notifications