ಹಿರಿಯೂರಿನ ಈ ಪ್ರದೇಶಗಳು ಸಂಪೂರ್ಣ ಧೂಳುಮಯ: ಇಲ್ಲಿ ಹೇಳೋರು ಇಲ್ಲ..ಕೇಳೋರು ಇಲ್ಲ..!
ಚಿತ್ರದುರ್ಗ, ನವೆಂಬರ್ 19: ಹಿರಿಯೂರು ನಗರದಿಂದ ಆದಿವಾಲ ಗೊಲ್ಲರಹಟ್ಟಿ, ತಿರುಮಲನಗರ, ಗೌಡನಹಳ್ಳಿ, ಕೆರೆಕೋಡಿಹಟ್ಟಿ, ರಂಗಾಪುರ, ಮಾಳಗೊಂಡನಹಳ್ಳಿ, ಮುಸ್ಲಿಂ ಕಾಲೋನಿ, ಮುದಿಯಜ್ಜನಹಟ್ಟಿ, ಮಾದೇನಹಳ್ಳಿ, ದಿಂಡಾವರ ಹಾಗೂ ದಿಂಡಾವರ ಭೋವಿ ಕಾಲೋನಿ ಸೇರಿದಂತೆ ಮುಂದೆ ಚಿಕ್ಕನಾಯಕನಹಳ್ಳಿಗೆ ಸಂಪರ್ಕ ಕಲ್ಪಿಸುವ ರಸ್ತೆಯ ಡಾಂಬರ್ ಬೃಹತ್ ಗಾತ್ರದ ಟಿಪ್ಪರ್ ಲಾರಿಗಳ ಸಂಚಾರದ ಹೊಡೆತಕ್ಕೆ ಸಂಪೂರ್ಣ ನಲುಗಿ ಹೋಗಿದೆ. ಸುಮಾರು 15 ಕ್ಕೂ ಹೆಚ್ಚು ಕಿಮೀ ದೂರದವರೆಗೂ ರಸ್ತೆ ತುಂಬೆಲ್ಲ ಗುಂಡಿ ಬಿದ್ದು ವಾಹನ ಸವಾರರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
ಬೀದರ್‌ನಿಂದ ಶ್ರೀರಂಗಪಟ್ಟಣ ರಾಷ್ಟ್ರೀಯ ಹೆದ್ದಾರಿ ರಸ್ತೆ ಕಾಮಗಾರಿ ನಡೆಯುತ್ತಿದ್ದು ರಸ್ತೆ ಕಾಮಗಾರಿಗೆ ಮಣ್ಣು ಬೇಕೆಂದು ಪಿಎನ್‌ಸಿ ಕಂಪನಿಯವರು ನಿಯಮ ಮೀರಿ ಟಿಪ್ಪರ್‌ಗಳಲ್ಲಿ ಅತೀ ಹೆಚ್ಚಿನ ಮಣ್ಣು ತುಂಬಿಕೊಂಡು ಸಂಚರಿಸುತ್ತಿರುವುದರಿಂದ ರಸ್ತೆ ಪೂರ್ಣ ಪ್ರಮಾಣದಲ್ಲಿ ಹಾಳಾಗಿ ಹೋಗಿದೆ ಎನ್ನುವ ಆರೋಪ ಸ್ಥಳೀಯರದ್ದಾಗಿದೆ. ಹಿರಿಯೂರಿನಿಂದ ದಿಂಡಾವರ ಗ್ರಾಮಕ್ಕೆ ಹೋಗುವ ರಸ್ತೆ ಇದಾಗಿದ್ದು ರಸ್ತೆ ತುಂಬೆಲ್ಲ ಮೊಣಕಾಲುದ್ದ ಗುಂಡಿಗಳು ಬಿದ್ದಿದ್ದು ಆ ಭಾಗದ ಜನರ ಸಂಚಾರಕ್ಕೆ ತೀವ್ರತರದ ಸಮಸ್ಯೆ ಉಂಟಾಗಿದೆ.

ಶಾಲಾ ಮಕ್ಕಳು, ವಯೋವೃದ್ಧರು, ಅನಾರೋಗ್ಯ ಪೀಡಿತರು ರಸ್ತೆಯಲ್ಲಿ ಓಡಾಡಲು ಹರಸಾಹಸ ಪಡುತ್ತಿದ್ದು ಆ ಭಾಗದಿಂದ ದಿನನಿತ್ಯ 500 ಕ್ಕೂ ಹೆಚ್ಚು ಶಾಲಾ ಕಾಲೇಜು ವಿದ್ಯಾರ್ಥಿಗಳು ನಗರಕ್ಕೆ ಬರುತ್ತಿದ್ದು ಸರಿಯಾದ ಸಮಯಕ್ಕೆ ಬರಲಾಗದೆ ಪರಿತಪಿಸುತ್ತಿದ್ದಾರೆ. ಮತ್ತೊಂದು ಕಡೆ ಹದಗೆಟ್ಟ ರಸ್ತೆ ನೋಡಿ ಶಾಲಾ ವಾಹನಗಳು ಗ್ರಾಮಕ್ಕೆ ಬರುತ್ತಿಲ್ಲ. ವಿದ್ಯಾರ್ಥಿಗಳ ಭವಿಷ್ಯಕ್ಕೆ ತೊಂದರೆಯಾಗುತ್ತಿದೆ. ಅದಲ್ಲದೆ ಗ್ರಾಮಗಳಲ್ಲಿ ಬೃಹತ್ ಗಾತ್ರದ ಟಿಪ್ಪರ್ ಲಾರಿಗಳ ಸಂಚಾರದಿಂದ ವಾಯು ಮಾಲಿನ್ಯ, ಶಬ್ದಮಾಲಿನ್ಯ ಉಂಟಾಗಿ ಆರೋಗ್ಯ ಹದಗೆಟ್ಟು ಹೋಗಿದೆ.
ರಾತ್ರಿ ಪೂರ್ತಿ ಲಾರಿಗಳ ಸಂಚಾರದಿಂದ ನಿದ್ದೆ ಬರುತ್ತಿಲ್ಲ. ಕಿರಿಕಿರಿ ಉಂಟಾಗಿದೆ. ಆ ಭಾಗದಲ್ಲಿ ರೈತರು ಮೆಣಸಿನಕಾಯಿ, ಸೊಪ್ಪು, ಟೊಮೋಟೊ, ಈರುಳ್ಳಿ ಸೇರಿದಂತೆ ಮತ್ತಿತರರ ಬೆಳೆಗಳು ಹಾಗೂ ಹೂ ಬೆಳೆಯುತ್ತಿದ್ದು ಲಾರಿಗಳ ಸಂಚಾರದ ಧೂಳಿನಿಂದ ಬೆಳೆಗಳು ಸಂಪೂರ್ಣವಾಗಿ ಹಾಳಾಗಿ ಹೋಗುತ್ತಿವೆ. ಉಳಿದಿರುವ ಬೆಳೆಯನ್ನು ಮಾರುಕಟ್ಟೆಗೆ ಸಾಗಿಸಲು ಹರಸಾಹಸ ಪಡಬೇಕಾಗುತ್ತದೆ. ಯಾಕೆಂದರೆ ರಸ್ತೆಯಲ್ಲಿನ ಗುಂಡಿಗಳ ಕಾಟಕ್ಕೆ ಬಾಡಿಗೆ ವಾಹನಗಳು ರೈತರ ಜಮೀನುಗಳಿಗೆ ಬರುತ್ತಿಲ್ಲ. ತಡವಾಗಿ ಮಾರುಕಟ್ಟೆಗೆ ಹೋದರೆ ಕೊಂಡೊಯ್ದ ಖರ್ಚು ಕೂಡ ಸಿಗುತ್ತಿಲ್ಲ ಎಂಬ ಮಾತುಗಳು ಕೇಳಿ ಬರುತ್ತಿವೆ.

ಪಿಎನ್‌ಸಿ ಕಂಪನಿಯವರು ಪರ್ಮಿಶನ್ ಇದೆ ಎಂದು ರೈತರ ಸಾಗುವಳಿ ಹಾಗೂ ಇನ್ನಿತರ ಜಮೀನುಗಳಲ್ಲಿ ಎಕರೆಗೆ 80 ಸಾವಿರದಂತೆ ಮಣ್ಣು ಖರೀದಿ ಮಾಡಿದ್ದಾರಂತೆ. ಖರೀದಿಸಿದ ಮಣ್ಣನ್ನು ನಿಯಮ ಮೀರಿ ತೆಗೆಯುತ್ತಿದ್ದಾರೆ. ಟಿಪ್ಪರ್‌ನಲ್ಲಿ ಟನ್ ಗಟ್ಟಲೆ ಮಣ್ಣು ತುಂಬಿಕೊಂಡು ಹೋಗುವ ಲಾರಿಗಳನ್ನು ತಡೆದು ಪ್ರಶ್ನೆ ಮಾಡಿದಾಗ ಪರ್ಮಿಶನ್ ಇದೆ ಎಂದು ಹೇಳುತ್ತಾರೆ. ಜೊತೆಗೆ ಪೊಲೀಸರನ್ನು ಸ್ಥಳಕ್ಕೆ ಕರೆಸಿಕೊಂಡು ಕೇಸ್ ದಾಖಲು ಮಾಡುತ್ತೇವೆ ಎಂದು ಹೆದರಿಸುತ್ತಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಈ ಬಗ್ಗೆ ದೂರವಾಣಿ ಮೂಲಕ ದಿಂಡಾವರ ಭೋವಿ ಕಾಲೋನಿ ನಿವಾಸಿ ಮಾತನಾಡಿ, ಬೃಹತ್ ಗಾತ್ರದ ಟಿಪ್ಪರ್ ಲಾರಿಗಳು ಮಣ್ಣು ತುಂಬುತ್ತಿದ್ದು 10 ಮತ್ತು 12 ಚಕ್ರದ ಗಾಡಿಗಳಲ್ಲಿ 30 ರಿಂದ 40 ಟನ್ ಗಟ್ಟಲೆ ಮಣ್ಣು ತುಂಬಿಕೊಂಡು ಹೋಗುತ್ತಾರೆ. ನಾವು ದಾರಿ ಬಿಡಲ್ಲ,ರಸ್ತೆ ಹಾಳಾಗಿ ಹೋಗುತ್ತದೆ,ನೀವು ಬೇರೆ ಕಡೆ ಹೋಗಿ ಎಂದು ತಡೆ ಹಿಡಿದಿದ್ದೆವು. ನಾವ್ಯಾರೂ ಲಾರಿಗಳಿಗೆ ಹಾನಿ ಮಾಡಿಲ್ಲ. ಚಾಲಕರಿಗೆ ಹೊಡೆದಿಲ್ಲ. ಪೊಲೀಸರು ನಮ್ಮ ಮೇಲೆ ಕೇಸ್ ಮಾಡ್ತಾರೆ ಅಂತ ನಾವು ಹಳ್ಳಿ ಜನ ಹೆದರಿ ಕೈ ಬಿಟ್ಟೆವು.

ನಂತರ ನಿರಂತರವಾಗಿ ಗಾಡಿಗಳು ಓಡಾಟ ಶುರು ಮಾಡಿ ರಸ್ತೆಯಲ್ಲಿ ಗುಂಡಿ ಬಿದ್ದವು. ಮತ್ತೆ ಲಾರಿ ತಡೆಯಲು ಮುಂದಾದೆವು. ಪೊಲೀಸರು ಮತ್ತೆ ಕೇಸು ದಾಖಲಿಸುವ ಬೆದರಿಕೆ ಹಾಕಿದರು.ಇಲ್ಲಿ ಓಡಾಡುವುದು ನಾವೇ ಹೊರತು ಪೋಲಿಸರಲ್ಲ. ಮೊಂಡು ಧೈರ್ಯ ಮಾಡಿ ಸೋಮವಾರ ಲಾರಿಗಳನ್ನು ತಡೆದು ನಿಲ್ಲಿಸಲಾಗಿದೆ. ಅಧಿಕಾರಿಗಳು ಸ್ಥಳ ಪರಿಶೀಲನೆ ಮಾಡಿ ನಮ್ಮ ರಸ್ತೆ ನೋಡಿ ಮುಂದಿನ ತೀರ್ಮಾನ ತೆಗೆದುಕೊಳ್ಳಲಿ ಎಂದರು.
ಮತ್ತೊಬ್ಬ ಯುವಕ ಮಾತನಾಡಿ, ತಾಲೂಕಿನ ದಿಂಡಾವರ ಸುತ್ತ ಮುತ್ತಲಿನ ಹಳ್ಳಿಗಳ ರೈತರ ಜಮೀನುಗಳಲ್ಲಿ ಕಡಿಮೆ ಬೆಲೆಗೆ, ಪಿಎನ್‌ಸಿ ಕಂಪನಿಯವರು ಮಣ್ಣು ಖರೀದಿಸಿ ನಿಯಮ ಮೀರಿ ಮಣ್ಣು ತುಂಬಿಕೊಂಡು ಹಳ್ಳಿಗಳ ರಸ್ತೆಗಳನ್ನು ಸಂಪೂರ್ಣವಾಗಿ ಹಾಳು ಮಾಡಿದ್ದಾರೆ. ಸಾರ್ವಜನಿಕರು ಟಿಪ್ಪರ್ ಲಾರಿ ತಡೆದು ನಿಲ್ಲಿಸಿದರೆ ಪೊಲೀಸ್ ಇಲಾಖೆ ಮತ್ತು ರೆವಿನ್ಯೂ ಇಲಾಖೆ ಅಧಿಕಾರಿಗಳು ಸಾರ್ವಜನಿಕರಿಗೆ ಧಮ್ಕಿ ಹಾಕುತ್ತಾರೆ. ಈ ಧಮ್ಕಿ ಹಾಕುವುದನ್ನು ನೋಡಿದರೆ ಅಧಿಕಾರಿಗಳು ಶಾಮೀಲಾಗಿರುವ ಶಂಕೆ ವ್ಯಕ್ತವಾಗಿದೆ ಎಂದರು.












Click it and Unblock the Notifications