ಚಿತ್ರದುರ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಚಿತ್ರದುದುರ್ಗದ ಮುರುಘಾ ಮಠದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ 6 ಜೋಡಿಗಳು

By ಚಿತ್ರದುರ್ಗ ಪ್ರತಿನಿಧಿ
|
Google Oneindia Kannada News

ಚಿತ್ರದುರ್ಗ, ಸೆಪ್ಟೆಂಬರ್‌, 05: ಚಿತ್ರದುರ್ಗದ ಮುರುಘಾರಾಜೇಂದ್ರ ಬೃಹನ್ಮಠದಲ್ಲಿ ಪ್ರತಿ ತಿಂಗಳು 5ನೇ ತಾರೀಖಿನಂದು ಸಾಮೂಹಿಕ ವಿವಾಹ ನಡೆಯುತ್ತದೆ. ಅದೇ ರೀತಿಯಾಗಿ ಇಂದು ಮುರುಘಾ ಮಠದಲ್ಲಿ ಸಾಮೂಹಿಕ ವಿವಾಹ ನಡೆದಿದ್ದು, 6 ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಇದೇ ಮೊದಲ ಬಾರಿಗೆ ಮುರುಘ ಶರಣರು ಇಲ್ಲದೇ ಕಾರ್ಯಕ್ರಮ ನಡೆಯುತ್ತಿದ್ದು, ಅನುಭವ ಮಂಟಪದಲ್ಲಿ ಸಂಭ್ರಮ ಮರೆಯಾಗಿದೆ.

ಮಠದ ಪ್ರೌಢಶಾಲೆಯ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಆರೋಪದ ಪ್ರಕರಣಕ್ಕೆ ಸಂಬಂಧಿಸಿದಂತೆ ಮುರುಘಾ ಶ್ರೀಗಳು ಜೈಲು ಪಾಲಾಗಿದ್ದಾರೆ. ಮುರುಘಾ ಶರಣರು ಇಲ್ಲದೆ ಇರುವುದರಿಂದ ಸಾಮೂಹಿಕ ವಿವಾಹ ಭಕ್ತರ ಮನಸಿನಲ್ಲಿ ಬೇಸರವನ್ನುಂಟು ಮಾಡಿದೆ. ಮುರುಘಾ ಶರಣರು ಬಂಧನಕ್ಕೊಳಗಾಗಿರುವ ಹಿನ್ನೆಲೆಯಲ್ಲಿ ಶ್ರೀಮಠದ ಪ್ರಭಾರ ಪೀಠಾಧಿಪತಿ ಮಹಾಂತ ರುದ್ರೇಶ್ವರ ಸ್ವಾಮೀಜಿ ನೇತೃತದಲ್ಲಿ ಸಾಮೂಹಿಕ ವಿವಾಹ ನಡೆದಿದೆ.

ಲೈಂಗಿಕ ದೌರ್ಜನ್ಯ ಆರೋಪ: ಮತ್ತೆ ಜೈಲು ಸೇರಿದ ಮುರುಘಾ ಶರಣರುಲೈಂಗಿಕ ದೌರ್ಜನ್ಯ ಆರೋಪ: ಮತ್ತೆ ಜೈಲು ಸೇರಿದ ಮುರುಘಾ ಶರಣರು

ಕಲ್ಯಾಣ ಮಹೋತ್ಸವದಲ್ಲಿ 6 ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. 11 ಜೋಡಿಗಳು ನೋಂದಣಿ ಮಾಡಿಕೊಂಡಿದ್ದು, ಕೊನೆಗೆ 7 ಜೋಡಿಗಳು ಅಂತಿಮ ಆಗಿದ್ದವು. ಕೊನೆ ಗಳಿಗೆಯಲ್ಲಿ 6 ಜೋಡಿಗಳು ಮಾತ್ರ ವೇದಿಕೆ ಮೇಲೆ ಅಸೀನರಾಗಿದ್ದವು. ವಧು-ವರರ ಜೊತೆ ಕುಟುಂಬಸ್ಥರು ಸಹ ಸಭಾಂಗಣದಲ್ಲಿ ಭಾಗವಹಿಸಿದ್ದರು.

 ಮುರುಘಾ ಮಠದಲ್ಲಿ ಸಾಮೂಹಿಕ ವಿವಾಹ

ಮುರುಘಾ ಮಠದಲ್ಲಿ ಸಾಮೂಹಿಕ ವಿವಾಹ

ಗುರುಮಠಕಲ್‌ ಶಾಖಾ ಮಠದ ಶಾಂತವೀರ ಗುರು ಮುರುಘರಾಜೇಂದ್ರ ಸ್ವಾಮೀಜಿ ಕಲ್ಯಾಣ ಮಹೋತ್ಸವದಲ್ಲಿ ಉಪಸ್ಥಿತರಿದ್ದರು. ಮಠದಲ್ಲಿ 32 ವರ್ಷಗಳಿಂದ ಪ್ರತಿ ತಿಂಗಳು 5ನೇ ದಿನಾಂಕದಂದು ಬಸವ ಕೇಂದ್ರ ಮುರುಘರಾಜೇಂದ್ರ ಬೃಹನ್ಮಠ, ಎಸ್‌ಜೆಎಂ ಶಾಂತಿ ಮತ್ತು ಪ್ರಗತಿ ಫೌಂಡೇಶನ್‌ನಿಂದ ಸಾಮೂಹಿಕ ವಿವಾಹ ನಡೆಸುತ್ತಿದ್ದರು.

ಮುರುಘಾ ಶ್ರೀ ಪ್ರಕರಣ ಬಯಲು ಮಾಡಿದ ಮೈಸೂರಿನ 'ಒಡನಾಡಿ' ಬಗ್ಗೆ ನಿಮಗೆಷ್ಟು ಗೊತ್ತು?ಮುರುಘಾ ಶ್ರೀ ಪ್ರಕರಣ ಬಯಲು ಮಾಡಿದ ಮೈಸೂರಿನ 'ಒಡನಾಡಿ' ಬಗ್ಗೆ ನಿಮಗೆಷ್ಟು ಗೊತ್ತು?

 ಮಹಾಂತ ರುದ್ರೇಶ್ವರ ಸ್ವಾಮಿಗಳ ಅಭಿಪ್ರಾಯ

ಮಹಾಂತ ರುದ್ರೇಶ್ವರ ಸ್ವಾಮಿಗಳ ಅಭಿಪ್ರಾಯ

ಮಾನವ ಬದುಕು ಹಸನಾಗಬೇಕೆಂದರೆ ಶಿಕ್ಷಣ ಬಹಳ ಮುಖ್ಯ. ದೇಶವನ್ನು ಕಟ್ಟಲು ಶಿಕ್ಷಣ ಮೊದಲ ಸ್ಥಾನ ವಹಿಸುತ್ತದೆ ಎಂದು ಹೆಬ್ಬಾಳು ವಿರಕ್ತಮಠದ ಶ್ರೀ ಮಹಾಂತ ರುದ್ರೇಶ್ವರ ಸ್ವಾಮಿಗಳು ಹೇಳಿದರು. ನಗರದ ಬಸವಕೇಂದ್ರ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದಲ್ಲಿ ಎಸ್‌ಜೆಎಂ ಶಾಂತಿ ಮತ್ತು ಪ್ರಗತಿ ಫೌಂಡೇಶನ್‌ ಚಿತ್ರದುರ್ಗ ಇವರ ಸಹಯೋಗದಲ್ಲಿ 32ನೇ ವರ್ಷದ ವಿವಾಹ ಕಲ್ಯಾಣೋತ್ಸವ ನಡೆಯಿತು.

9ನೇ ತಿಂಗಳ ಸಾಮೂಹಿಕ ಕಲ್ಯಾಣ ಮಹೋತ್ಸವ ಹಾಗೂ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದ ನೇತೃತ್ವ ವಹಿಸಿ ಮಾತನಾಡಿದ ಶ್ರೀಗಳು, ಸರ್ವಪಲ್ಲಿ ರಾಧಾಕೃಷ್ಣನ್ ಅವರು ಸಾಮಾನ್ಯ ಶಿಕ್ಷಕರಾಗಿ, ನಂತರ ರಾಷ್ಟ್ರದ ಅತ್ಯುನ್ನತ ರಾಷ್ಟ್ರಪತಿ ಹುದ್ದೆಯನ್ನು ಅಲಂಕರಿಸಿದರು. ಅವರ ಸಾಧನೆ ನಮಗೆಲ್ಲ ಆದರ್ಶವಾಗಿದೆ. ದೀನ ದಲಿತರ ಏಳಿಗಾಗಿ ನಾಡಿನ ಅನೇಕ ಮಠ ಮಾನ್ಯಗಳು ಶ್ರಮಿಸುತ್ತಿವೆ. ಶ್ರೀಮಠದಲ್ಲಿ ಕರ್ತೃಗದ್ದುಗೆ ಪೂಜಾ ಕೈಂಕರ್ಯಗಳು, ನಿತ್ಯ ದಾಸೋಹ, ಮುರುಘಾವನ ವೀಕ್ಷಣೆ ಎಂದಿನಂತೆ ಇರುತ್ತದೆ. ಶ್ರೀಮಠದ ಭಕ್ತರು ಎಂದಿನಂತೆ ಸಹಕರಿಸಬೇಕು ಎಂದರು.

 ಇದುವರೆಗೂ 17 ಸಾವಿರ ಜೋಡಿಗಳು ವಿವಾಹ

ಇದುವರೆಗೂ 17 ಸಾವಿರ ಜೋಡಿಗಳು ವಿವಾಹ

ಕಾರ್ಯಕ್ರಮದ ಗೌರವ ಉಪಸ್ಥಿತಿ ವಹಿಸಿದ್ದ ಗುರುಮಠಕಲ್‍ನ ಶ್ರೀ ಶಾಂತವೀರ ಗುರುಮುರುಘರಾಜೇಂದ್ರ ಸ್ವಾಮಿಗಳು ಮಾತನಾಡಿ, ಸಾರ್ವಜನಿಕರಿಗೆ ಆರ್ಥಿಕ ಹೊರೆ ಆಗದಂತೆ ಸಾಮೂಹಿಕ ಕಲ್ಯಾಣ ಮಹೋತ್ಸವ ಆರಂಭಿಸಲಾಯಿತು. ಇದುವರೆಗೂ 17 ಸಾವಿರ ಜೋಡಿಗಳು ವಿವಾಹವಾಗಿರುವುದು ದಾಖಲೆ ಆಗಿದೆ. ಇದೊಂದು ಆದರ್ಶ ಕಾರ್ಯಕ್ರಮ ಆಗಿದೆ ಎಂದರು.

ಸತಿ ಪತಿಗಳೊಂದಾದ ಭಕ್ತಿ ಶಿವಂಗೆ ಹಿತವಪ್ಪುದು. ಸಾಂಸಾರಿಕ ಬದುಕಿನಲ್ಲಿ ಸಾಮರಸ್ಯ ಮುಖ್ಯ. ಬದುಕು ನಿಂತ ನೀರಾಗದೆ ನಿರಂತರ ಹರಿಯುವ ನದಿ ಆಗಬೇಕು. ಅದೆಷ್ಟೋ ಬಡಜನತೆ ಇಲ್ಲಿ ವಿವಾಹವಾಗಿ ಸುಂದರವಾದ ಬದುಕನ್ನು ಕಟ್ಟಿಕೊಂಡಿದ್ದಾರೆ. ಅವರ ಬದುಕು ಹಸನಾಗಿದೆ. ಬಸವಾದಿ ಶರಣರ ಆಶಯದಂತೆ ನಡೆಯುವ ಈ ವಿವಾಹ ಕಾರ್ಯಕ್ರಮ ಇಂದಿನ ದಿನಗಳಲ್ಲಿ ಪ್ರಸ್ತುತವೆನಿಸಿದೆ. ಮದುವೆ ಎಂಬುದು ಆಡಂಬರವಲ್ಲ, ಅದೊಂದು ಆದರ್ಶ ಎಂದರು.

 ವೇದಿಯಲ್ಲಿ ಉಪಸ್ಥಿತರಿದ್ದ ಗಣ್ಯರು

ವೇದಿಯಲ್ಲಿ ಉಪಸ್ಥಿತರಿದ್ದ ಗಣ್ಯರು

ಸರ್ವಪಲ್ಲಿ ರಾಧಾಕೃಷ್ಣನ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಶಿಕ್ಷಕರ ದಿನಾಚರಣೆ ಆಚರಿಸಲಾಯಿತು. ಇದೇ ಸಂದರ್ಭದಲ್ಲಿ 6 ಜೋಡಿಗಳ ವಿವಾಹ ನೆರವೇರಿತು.

ವೇದಿಕೆಯಲ್ಲಿ ಎಸ್‌ಜೆಎಂ ವಿದ್ಯಾಪೀಠದ ಕಾರ್ಯಕಾರಿ ಮಂಡಳಿಯ ಎಂ.ಟಿ. ಮಲ್ಲಿಕಾರ್ಜುನ ಸ್ವಾಮಿ, ಎಸ್.ಷಣ್ಮುಖಪ್ಪ, ಸಿದ್ದಾಪುರ ಎಸ್.ವಿ. ನಾಗರಾಜಪ್ಪ, ಹೆಚ್. ಆನಂದಪ್ಪ, ಮಹಡಿ ಶಿವಮೂರ್ತಿ, ಅಥಣಿಯ ಶ್ರೀ ಶಿವಬಸವ ಗುರು ಮುರುಘರಾಜೇಂದ್ರ ಸ್ವಾಮಿಗಳು, ದಾವಣಗೆರೆಯ ಶ್ರೀ ಬಸವಪ್ರಭು ಸ್ವಾಮಿಗಳು, ಹಾವೇರಿಯ ಶ್ರೀ ಬಸವಶಾಂತಲಿಂಗ ಸ್ವಾಮಿಗಳು, ಶರಣೆ ಮುಕ್ತಾಯಕ್ಕ, ಶ್ರೀ ಗುಂಡಯ್ಯ ಸ್ವಾಮಿಗಳು, ಹುಲಸೂರಿನ ಶ್ರೀ ಶಿವಾನಂದ ಸ್ವಾಮಿಗಳು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

English summary
Mass Marriage organised today(Sept 5) at Chitradurga Murugha Mutt, 6 couples got married. know more
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X