ಚಿತ್ರದುರ್ಗ : ರಸ್ತೆ ಅಪಘಾತ, 6 ಅಯ್ಯಪ್ಪ ಭಕ್ತರ ಸಾವು
ಚಿತ್ರದುರ್ಗ, ಜ. 13 : ಶಬರಿಮಲೆ ಭಕ್ತರು ಪ್ರಯಾಣಿಸುತ್ತಿದ್ದ ಕಾರಿಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ 6 ಜನರು ಸಾವನ್ನಪ್ಪಿದ ಘಟನೆ ಚಿತ್ರದುರ್ಗದಲ್ಲಿ ನಡೆದಿದೆ. ಅಪಘಾತದಲ್ಲಿ ಮೂವರು ಗಂಭೀರವಾಗಿ ಗಾಯಗೊಂಡಿದ್ದು ಮೊಳಕಾಳ್ಮೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಶಬರಿಮಲೆಯಲ್ಲಿ ದೇವರ ದರ್ಶನ ಪಡೆದು ಮರಳುತ್ತಿದ್ದ 9 ಜನರಿದ್ದ ಕಾರಿಗೆ ಮಂಗಳವಾರ ಮುಂಜಾನೆ ಮೊಳಕಾಳ್ಮೂರು ಸಮೀಪದ ಬಿಜಿ ಕೆರೆ ಬಳಿ ಲಾರಿ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ 6 ಜನರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. [ಚಿತ್ರಗಳಲ್ಲಿː ಶಬರಿಮಲೆಗೆ ಭಕ್ತರ ತಂಡ]

ಅಪಘಾತದಲ್ಲಿ ಮೂವರು ಗಂಭೀರವಾಗಿ ಗಾಯಗೊಂಡಿದ್ದು ಮೊಳಕಾಳ್ಮೂರು ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮೃತರೆಲ್ಲರೂ ಬಳ್ಳಾರಿ ಮೂಲದವರು ಎಂದು ತಿಳಿದುಬಂದಿದೆ. ಮೊಳಕಾಳ್ಮೂರು ಪೊಲೀಸರು ಸ್ಥಳಕ್ಕೆ ಆಗಮಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಲಾರಿ ಚಾಲಕ ಪರಾರಿಯಾಗಿದ್ದು, ಹುಡುಕಾಡ ಮುಂದುವರೆದಿದೆ.

ಓವರ್ ಟೆಕ್ ಮಾಡಲು ಹೋದ : ಭೀಕರ ಅಪಘಾತಕ್ಕೆ ಲಾರಿ ಚಾಲಕನೇ ಕಾರಣ ಎಂದು ತಿಳಿದುಬಂದಿದೆ. ಮುಂದೆ ಹೋಗುತ್ತಿದ್ದ ಲಾರಿಯನ್ನು ಓವರ್ ಟೆಕ್ ಮಾಡುವ ಭರದಲ್ಲಿ ಲಾರಿ ಚಾಲಕ ಕಾರಿಗೆ ಡಿಕ್ಕಿ ಹೊಡೆದಿದ್ದಾನೆ. ಡಿಕ್ಕಿ ಹೊಡೆದ ರಭಸಕ್ಕೆ ಕಾರು ಸಂಪೂರ್ಣವಾಗಿ ಜಖಂಗೊಂಡಿದೆ.

ಮೃತರನ್ನು ಲಂಕಾರೆಡ್ಡಿ, ತಿರುಮಲ, ಶಿವಾ, ಸಣ್ಣಪ್ಪ, ಹೊನ್ನೂರು ಸ್ವಾಮಿ ಎಂದು ಗುರುತಿಸಲಾಗಿದೆ. ಮೃತರಲ್ಲಿ ಒಬ್ಬರ ಗುರುತು ಇನ್ನೂ ಪತ್ತೆಯಾಗಬೇಕಿದೆ. ಮೊಳಕಾಲ್ಮೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.













Click it and Unblock the Notifications