"ನಳಿನ್ ಕುಮಾರ್ ಕಟೀಲ್ ಇನ್ನೂ ಅಪ್ರಬುದ್ಧ ರಾಜಕಾರಣಿ"
ಚಿತ್ರದುರ್ಗ, ನವೆಂಬರ್ 12: "ನಮ್ಮ ಸರ್ಕಾರ ಇದ್ದಾಗ ಉಪ ಚುನಾವಣೆಯಲ್ಲಿ ಗೆದ್ದಿದ್ವಿ, ಆಗ ಇವನು ಏನ್ ಆಗಿದ್ನಂತೆ" ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.
ಜಿಲ್ಲೆಯ ಹಿರಿಯೂರು ನಗರದಲ್ಲಿ ಖಾಸಗಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಆಗಮಿಸಿದ್ದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ನಮ್ಮ ಅಧಿಕಾರ ಇದ್ದಾಗ ಎಲ್ಲಾ ಉಪಚುನಾವಣೆಗಳಲ್ಲಿ ಗೆದ್ದಿದ್ದೆವು. ಆಗ ಇವನೇನು ಆಗಿದ್ದನಂತೆ (ಕಟೀಲ್), ಇಲಿ ಬಿಲ ಸೇರಿಕೊಂಡಿದ್ದನಾ" ಎಂದು ಏಕವಚನದಲ್ಲೇ ವಾಗ್ದಾಳಿ ನಡೆಸಿದರು.

"ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲಲು ಡಿ.ಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯರೇ ಕಾರಣರಾಗಿದ್ದಾರೆ. ಆರ್.ಆರ್ ನಗರವನ್ನು ಮಾಜಿ ಸಿಎಂ ಸಿದ್ದರಾಮಯ್ಯ ಸೋಲಿಸಿದ್ದರೆ, ಶಿರಾ ಕ್ಷೇತ್ರವನ್ನು ಡಿ.ಕೆ ಶಿವಕುಮಾರ್ ಸೋಲಿಸಿದ್ದಾರೆ" ಎಂದು ಉಡುಪಿಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಕಾಂಗ್ರೆಸ್ ನಾಯಕರ ಕಾಲೆಳೆದಿದ್ದರು. ಇದಕ್ಕೆ ಸಿದ್ದರಾಮಯ್ಯ, "ನಳಿನ್ ಕುಮಾರ್ ಕಟೀಲ್ ಇನ್ನೂ ಅಪ್ರಬುದ್ಧ ರಾಜಕಾರಣಿ" ಎಂದು ತಿರುಗುತ್ತರ ಕೊಟ್ಟರು. ಇನ್ನು ಸಿದ್ದರಾಮಯ್ಯ ಅಯೋಗ್ಯ ಎಂದ ಸಚಿವ ಕೆ.ಎಸ್. ಈಶ್ವರಪ್ಪ ಅವರಿಗೂ ತಿರುಗೇಟು ಕೊಟ್ಟಿದ್ದು, "ಮಂತ್ರಿಯಾಗಲು ಈಶ್ವರಪ್ಪ ಅಯೋಗ್ಯ, ನಾಲಾಯಕ್" ಎಂದು ವ್ಯಂಗ್ಯವಾಡಿದರು.












Click it and Unblock the Notifications