ಮೊಳಕಾಲ್ಮೂರು: ಶಾಲೆ ಬಿಟ್ಟ ಕುರಿಗಾಹಿ ಬಾಲಕನನ್ನು ಮತ್ತೆ ಶಾಲೆಗೆ ಸೇರಿದ ಸಿದ್ದರಾಮಯ್ಯ
ಚಿತ್ರದುರ್ಗ, ಸೆಪ್ಟೆಂಬರ್ 12: ಇಂದಿನ ತಂತ್ರಜ್ಞಾನ ಯುಗದಲ್ಲಿ ಶಿಕ್ಷಣ ತುಂಬಾ ಅಗತ್ಯವಿದೆ. ಇಂತಹ ಸಂದರ್ಭದಲ್ಲಿ ಪೋಷಕರು ಮಗನನ್ನು ಶಾಲೆ ಬಿಡಿಸಿ ಎರಡು ವರ್ಷಗಳಿಂದ ಕುರಿ ಮೇಯಿಸುವ ವೃತ್ತಿಗೆ ಸೇರಿಸಿರುವ ಅಮಾನವೀಯ ಘಟನೆಯೊಂದು ಬೆಳಕಿಗೆ ಬಂದಿದೆ.
ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲೂಕು ಬಸಾಪುರದ ಯೋಗೇಶ್ ಎಂಬ ಬಾಲಕನನ್ನು ಆತನ ತಂದೆ ತಾಯಿ ಒತ್ತಾಯಪೂರ್ವಕವಾಗಿ ಶಾಲೆ ಬಿಡಿಸಿ ಕಳೆದ 2 ವರ್ಷದಿಂದ ಕುರಿ ಮೇಯಿಸಲು ತೊಡಗಿಸಿದ್ದರು. ಈ ವಿಚಾರವು ಸ್ಥಳೀಯರೊಬ್ಬರಿಂದ ನಮ್ಮ ಗಮನಕ್ಕೆ ಬಂದ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳನ್ನು ಬಾಲಕನ ಮನೆಗೆ ಕಳುಹಿಸಿ, ಆತನ ತಂದೆ ತಾಯಿಗೆ ಶಿಕ್ಷಣದ ಮಹತ್ವದ… https://t.co/iIjnPw5QjE pic.twitter.com/JcL6NzVIfy
— CM of Karnataka (@CMofKarnataka) September 11, 2023
ಈ ವಿಷಯ ಸ್ಥಳೀಯ ಯುವಕನೊಬ್ಬ ಮುಖ್ಯಮಂತ್ರಿಗಳ ಕಛೇರಿಗೆ ಟ್ವೀಟ್ ಮಾಡಿ ಅಧಿಕಾರಿಗಳ ಗಮನಕ್ಕೆ ತಂದಿದ್ದಾನೆ. ಈ ವಿಚಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಚೇರಿಗೆ ತಿಳಿದು ಬಂದ ತಕ್ಷಣ 24 ಗಂಟೆಯೊಳೆಗೆ ಆ ಬಾಲಕನನ್ನು ಮರಳಿ ಶಾಲೆಗೆ ಸೇರಿಸಿರುವ ಕೆಲಸ ನಡೆದಿದೆ.

ಕೋಟೆ ನಾಡು ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ಬಸಾಪುರ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಬಸಾಪುರ ಗ್ರಾಮದ ಕುರಿಗಾಹಿಯೊಬ್ಬ ತನ್ನ ಮಗನನ್ನು ಶಾಲೆಗೆ ಕಳಿಸುವ ಬದಲಿಗೆ ಕಳೆದ ಎರಡು ವರ್ಷಗಳಿಂದ ಕುರಿ ಕಾಯುವ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದನು.
ಸದ್ಯ 11 ವರ್ಷದವನಾಗಿರುವ ಯೋಗೇಶ್, ಕಳೆದ ಎರಡು ವರ್ಷಗಳ ಹಿಂದೆಯೇ ಶಾಲೆಗೆ ಹೋಗುವುದನ್ನು ನಿಲ್ಲಿಸಿ ಕುರಿಗಾಹಿ ಕೆಲಸ ಮಾಡುತ್ತಿದ್ದಾನೆ. ಚಳ್ಳಕೆರೆಯ ಜಮೀನೊಂದರಲ್ಲಿ ಕುರಿ ಮೇಯಿಸುವ ವೇಳೆ ಗ್ರಾಮದ ಯುವಕ ಮಹೇಂದ್ರ ಈ ವಿಚಾರ ತಿಳಿದುಕೊಂಡಿದ್ದಾರೆ. ಈ ಕುರಿತು ಯೋಗೇಶ್ ಭಾವಚಿತ್ರದೊಂದಿಗೆ ಸಿಎಂ ಕಚೇರಿ ಅಧಿಕಾರಿಗಳಿಗೆ ಟ್ವೀಟ್ ಮಾಡಿದ್ದಾರೆ.
ಇದಲ್ಲದೆ ಇಂದು ಎಲ್ಲರೂ ತಮ್ಮ ಮಕ್ಕಳು ಉತ್ತಮ ನಾಗರಿಕರಾಗಲಿ ಅಂತಾ ಶಿಕ್ಷಣ ಕೊಡಿಸುತ್ತಿದ್ದಾರೆ, ಇಲ್ಲಿ ತಂದೆಯೇ ಮಗನನ್ನು ಈ ರೀತಿ ಅನಾಗರಿಕ ಪ್ರಪಂಚಕ್ಕೆ ದೂಡುವುದು ಎಷ್ಟು ಸರಿ ಎಂದು ಟ್ವೀಟ್‌ನಲ್ಲಿ ಉಲ್ಲೇಖಿಸಿದ್ದರು. ಮಹೇಂದ್ರ ಅವರ ಟ್ವೀಟ್‌ಗೆ ಸಿಎಂ ಕಚೇರಿಯಿಂದ ಸ್ಪಂದನೆ ದೊರೆತಿದೆ.
ಇನ್ನು ಈ ಘಟನೆ ಬಗ್ಗೆ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಸಿದ್ದು 'ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ಬಸಾಪುರದ ಯೋಗೇಶ್ ಎಂಬ ಬಾಲಕನನ್ನು ಆತನ ತಂದೆ ತಾಯಿ ಒತ್ತಾಯಪೂರ್ವಕವಾಗಿ ಶಾಲೆ ಬಿಡಿಸಿ ಕಳೆದ ಎರಡು ವರ್ಷಗಳಿಂದ ಕುರಿ ಮೇಯಿಸಲು ತೊಡಗಿಸಿದ್ದರು. ಈ ವಿಚಾರವು ಸ್ಥಳೀಯರೊಬ್ಬರಿಂದ ನಮ್ಮ ಗಮನಕ್ಕೆ ಬಂದ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳನ್ನು ಬಾಲಕನ ಮನೆಗೆ ಕಳಿಸಿ ಆತನ ತಂದೆ ತಾಯಿಗೆ ಶಿಕ್ಷಣದ ಮಹತ್ವ ಬಗ್ಗೆ ಅರಿವು ಮೂಡಿಸಿ ಕೇವಲ 24 ಗಂಟೆಗಳ ಒಳಗೆ ಬಾಲಕನನ್ನು ಶಾಲೆಗೆ ಸೇರ್ಪಡೆ ಮಾಡಿಸಲಾಗಿದೆ'.
ಬಡತನ ಕಾರಣಕ್ಕೆ ಶಿಕ್ಷಣದಿಂದ ವಂಚಿತನಾಗಿದ್ದ ಯೋಗೇಶ್ ಈಗ ಇತರ ಮಕ್ಕಳಂತೆ ಶಾಲೆಯಲ್ಲಿ ಕಲಿಯುತ್ತಾ ಉಜ್ವಲ ಭವಿಷ್ಯದೊಳಗೆ ಹೆಜ್ಜೆ ಹಾಕುತ್ತಿದ್ದಾನೆ. ಬಾಲ್ಯದಲ್ಲಿ ನಾನು ಕೂಡ ಯೋಗೇಶ್‌ನಂತೆ ಶಾಲೆಯಿಂದ ವಂಚಿತನಾಗಿದ್ದೆ ರಾಜಪ್ಪ ಮೇಷ್ಟ್ರು ನನ್ನನ್ನು ನೇರವಾಗಿ ಐದನೇ ತರಗತಿಗೆ ದಾಖಲಾತಿ ಮಾಡಿ ಶಿಕ್ಷಣ ಸಿಗುವಂತೆ ಮಾಡಿದ್ದರಿಂದ ಇಂದು ನಾನು ಮುಖ್ಯಮಂತ್ರಿ ಆಗಲು ಸಾಧ್ಯವಾಗಿದೆ ಮರಳಿ ಶಿಕ್ಷಣದತ್ತ ಮುಖ ಮಾಡಿರುವ ಈ ಬಾಲಕನ ಭವಿಷ್ಯ ಉಜ್ವಲವಾಗಲಿ ಎಂದು ಹಾರೈಸಿದ್ದಾರೆ.












Click it and Unblock the Notifications