ಶಕ್ತಿ ಯೋಜನೆ ಎಫೆಕ್ಟ್:ಸರ್ಕಾರಿ ಬಸ್‌ಗಳು ಫುಲ್ ರಶ್, ಜೋತು ಬಿದ್ದು ಪ್ರಯಾಣ
ಚಿತ್ರದುರ್ಗ, ಜೂನ್ 13: ರಾಜ್ಯ ಸರ್ಕಾರ ಶಕ್ತಿ ಯೋಜನೆಯಡಿ ಮಹಿಳೆಯರಿಗೆ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಉಚಿತ ಪ್ರಯಾಣದ ಅವಕಾಶ ಮಾಡಿಕೊಟ್ಟಿದ್ದು, ಪುರುಷರು ಬಸ್‌ನಲ್ಲಿ ಸೀಟು ಸಿಗದೇ ಪರದಾಡುವಂತಾಗಿದೆ. ಈ ಘಟನೆ ಕಂಡು ಬಂದಿದ್ದು ಕೋಟೆ ನಾಡು ಚಿತ್ರದುರ್ಗ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ.
ರಾಜ್ಯ ಸರ್ಕಾರ ಸ್ತ್ರೀಯರಿಗೆ ಸರ್ಕಾರಿ ಬಸ್‌ಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ನೀಡಿದೆ. ಅವಕಾಶ ನೀಡಿದ ಒಂದೆರಡೇ ದಿನಕ್ಕೆ ಮಹಿಳಾ ಪ್ರಯಾಣಿಕರ ಸಂಖ್ಯೆ 15 ರಿಂದ 20% ಶೇ ಏರಿಕೆ ಕಂಡಿದೆ. ಬಸ್ ನಿಲ್ದಾಣ, ಹಾಗೂ ಎಲ್ಲಾ ಬಸ್‌ಗಳಲ್ಲಿ ಮಹಿಳಾ ಪ್ರಯಾಣಿಕರದ್ದೇ ಈಗ ಪಾರುಪತ್ಯ.

ಚಿತ್ರದುರ್ಗ ನಗರದ ಬಸ್ ನಿಲ್ದಾಣದಲ್ಲಿ ಹಾಗೂ ಸಾರಿಗೆ ಬಸ್‌ಗಳಲ್ಲಿ ಬಹುತೇಕ ಸೀಟ್‌ಗಳನ್ನು ಮಹಿಳೆಯರೇ ಆಕ್ರಮಿಸಿಕೊಳ್ಳುತ್ತಿದ್ದು, ಪುರುಷರು ಕಣ್ಣು ಮಿಟುಕಿಸುತ್ತ ನಿಲ್ಲುವಂತಾಗಿದೆ. ಇನ್ನು ಪ್ರಯಾಣ ಉಚಿತ ಆಗಿರುವುದರಿಂದ ಬಸ್‌ಗಳಲ್ಲಿ ಲಗೇಜು ಇಡಲು ಅವಕಾಶ ಆಗದಷ್ಟು ಮಹಿಳಾ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದೆ.
ಈ ಹಿನ್ನೆಲೆಯಲ್ಲಿ ಇಂದು ಚಿತ್ರದುರ್ಗ ನಗರದ ಬಸ್ ನಿಲ್ದಾಣದ ಬಸ್‌ವೊಂದರಲ್ಲಿ ಎಮರ್ಜನ್ಸಿ ಎಕ್ಸಿಟ್ ಬಾಗಿಲು ತೆಗೆದು ಲಗೇಜ್‌ಗಳನ್ನು ಇಡುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಇನ್ನು ಪುರುಷರು ಹಾಗೂ ವಿದ್ಯಾರ್ಥಿಗಳು ಬಸ್ ಬಾಗಿಲಲ್ಲಿ ನಿಂತು ಜೋತಾಡಿಕೊಂಡು ಪ್ರಯಾಣ ಮಾಡುವಂತಾಗಿತ್ತು.
ಈ ಕುರಿತು ಮಾತನಾಡಿರುವ ಬಸ್ ನಿರ್ವಾಹಕ ಸಂಗಮೇಶ ಅಂಗಡಿ, 'ಒಂದೆರಡು ದಿನಕ್ಕೆ ಮಹಿಳಾ ಪ್ರಯಾಣಿಕರ ಸಂಖ್ಯೆ 15 ರಿಂದ 20% ಏರಿಕೆಯಾಗಿದೆ. ಇನ್ನು ಒಂದು ವಾರ ಕಳೆಯುವಷ್ಟರಲ್ಲಿ ಎಷ್ಟು ಹೆಚ್ಚಾಗುತ್ತದೆ ಎಂದು ತಿಳಿಯಲಿದೆ. ಆದಾಯ ಎಷ್ಟೇ ಆದರೂ ಇಲಾಖೆ ಅಷ್ಟರಲ್ಲಿಯೇ ತೃಪ್ತಿ ಪಡಲಿದೆ. ಕಲೆಕ್ಷನ್ ಬಗ್ಗೆ ತಲೆ ಕೆಡಿಸಿಕೊಳ್ಳಲ್ಲ' ಎಂದಿದ್ದಾರೆ
ಫ್ರೀ ಬಸ್‌ನಲ್ಲಿ ಮಹಿಳೆಯರದ್ದೇ ಕಾರುಬಾರು: ಮೆಟ್ಟಿಲುಗಳಲ್ಲಿ ಜೋತು ಬಿದ್ದ ವಿದ್ಯಾರ್ಥಿನಿಯರು
ಧಾರವಾಡ: ರಾಜ್ಯ ಸರ್ಕಾರ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಘೋಷಣೆ ಮಾಡಿದ್ದೇ ಮಾಡಿದ್ದು, ಬಸ್‌ನಲ್ಲಿ ಓಡಾಡುವ ಮಹಿಳೆಯರ ಸಂಖ್ಯೆ ಹೆಚ್ಚಾಗಿದೆ. ಹೀಗಾಗಿ ಬಸ್‌ನಲ್ಲಿ ವಿದ್ಯಾರ್ಥಿನಿಯರಿಗೆ ಹಾಗೂ ಪುರುಷರಿಗೆ ಸೀಟು ಸಿಗದಂತಾಗಿದೆ.
ಧಾರವಾಡದ ವಿವಿಧೆಡೆಯಿಂದ ಸಿಬಿಟಿಗೆ ಬರುವ ಬಸ್‌ಗಳು ಮಹಿಳೆಯರಿಂದಲೇ ತುಂಬಿಕೊಂಡು ಬರುತ್ತಿರುವುದರಿಂದ ವಿದ್ಯಾರ್ಥಿನಿಯರು ಬಸ್ಸಿನ ಮೆಟ್ಟಿಲುಗಳಿಗೆ ಜೋತು ಬಿದ್ದು ಪ್ರಯಾಣಿಸುತ್ತಿದ್ದಾರೆ. ಮಂಗಳವಾರ ಧಾರವಾಡದ ಕೆಲಗೇರಿಯಿಂದ ಸಿಬಿಟಿಗೆ ಹೋಗುವ ಬಸ್ಸು ಸಂಪೂರ್ಣ ತುಂಬಿ ತುಳುಕುತ್ತಿತ್ತು.
ಸೀಟು ಸಿಗದ ವಿದ್ಯಾರ್ಥಿನಿಯರು ಬಸ್ಸಿನ ಮೆಟ್ಟಿಲುಗಳಿಗೆ ಜೋತು ಬಿದ್ದು ಪ್ರಯಾಣಿಸುತ್ತಿದ್ದ ದೃಶ್ಯ ಕಂಡು ಬಂತು. ಇದೇ ರೀತಿ ನಿನ್ನೆಯಷ್ಟೇ ಹಾನಗಲ್ ತಾಲೂಕಿನಲ್ಲಿ ಓರ್ವ ವಿದ್ಯಾರ್ಥಿನಿ ಮೆಟ್ಟಿಲುಗಳ ಮೇಲೆ ನಿಂತು ಪ್ರಯಾಣಿಸುತ್ತಿದ್ದಾಗ ಬಿದ್ದು ಮೃತಪಟ್ಟ ಘಟನೆ ಕೂಡ ನಡೆದಿತ್ತು.












Click it and Unblock the Notifications