ಶಕ್ತಿ ಯೋಜನೆ: ಚಿತ್ರದುರ್ಗದಲ್ಲಿ 4.36 ಕೋಟಿ ನಾರಿಯರ ಉಚಿತ ಪ್ರಯಾಣ
ಚಿತ್ರದುರ್ಗ, ಮೇ 19: ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕರ್ನಾಟಕದ ಕಾಂಗ್ರೆಸ್ ಸರ್ಕಾರ ಎರಡು ವರ್ಷಗಳನ್ನು ಪೂರೈಸುತ್ತಿದೆ. ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ 'ಶಕ್ತಿ' ಯೋಜನೆ ಜಾರಿಗೆ ಬಂದು ಜೂನ್ 11ಕ್ಕೆ ಎರಡು ವರ್ಷ ಪೂರ್ಣಗೊಳ್ಳಲಿದೆ. ಈ ಯೋಜನೆ ಯಶಸ್ವಿಯಾಗಿದ್ದು, ಯೋಜನೆಯಡಿ ಚಿತ್ರದುರ್ಗ ಜಿಲ್ಲೆಯಲ್ಲಿ ಸರ್ಕಾರಿ ಬಸ್‍ಗಳಲ್ಲಿ 4.36 ಕೋಟಿ ನಾರಿಯರು ಉಚಿತವಾಗಿ ಪ್ರಯಾಣ ಬೆಳೆಸಿದ್ದಾರೆ.
'ಶಕ್ತಿ' ಯೋಜನೆಯಡಿ ರಾಜ್ಯದೊಳಗೆ ಸರ್ಕಾರಿ ಬಸ್‌ಗಳಲ್ಲಿ ಮಹಿಳೆಯರು ಉಚಿತ ಪ್ರಯಾಣ ಮಾಡಬಹುದು. ಕರ್ನಾಟಕದ ಕಾಂಗ್ರೆಸ್ ಸರ್ಕಾರ ಮಹಿಳಾ ಸಬಲೀಕರಣದ ಉದ್ದೇಶದಿಂದ ಜಾರಿಗೊಳಿಸಿದ ಯೋಜನೆ ಇದಾಗಿದೆ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್ಆರ್‌ಟಿಸಿ) ಚಿತ್ರದುರ್ಗ ವಿಭಾಗದಲ್ಲಿ ಈ ಯೋಜನೆಗೆ ಉತ್ತಮ ಸ್ಪಂದನೆ ಸಿಕ್ಕಿದೆ.

ದುಡಿಯುವ ಬಡವರ್ಗದ ಮಹಿಳೆಯರಿಗೆ ಆತ್ಮಸ್ಥೆರ್ಯ ತುಂಬುವ ಯೋಜನೆ ಇದಾಗಿದೆ. ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಲ್ಲೊಂದಾದ ಶಕ್ತಿ ಯೋಜನೆಯು ದುಡಿಯುವ ಮಹಿಳೆಯರಿಗೆ ಇನ್ನಷ್ಟು ಶಕ್ತಿ ತುಂಬುತ್ತಿದೆ. ಗ್ರಾಮೀಣ ಭಾಗದ ಹೆಣ್ಣು ಮಕ್ಕಳು ಕುಟುಂಬದ ಪೋಷಣೆಗಾಗಿ ಸಣ್ಣ ವ್ಯಾಪಾರ-ವಹಿವಾಟುಗಳಿಗೆ ನಗರಕ್ಕೆ ಬರುವಾಗ ಅವರ ಪ್ರಯಾಣದ ಖರ್ಚನ್ನು ಯೋಜನೆ ಕಡಿಮೆ ಮಾಡುತ್ತದೆ.
ಪ್ರತಿ ನಿತ್ಯ ರೂ. 25.55 ಲಕ್ಷ ಆದಾಯ: ಪ್ರತಿ ನಿತ್ಯ ಸರಾಸರಿ 62,837 ಮಹಿಳಾ ಪ್ರಯಾಣಿಕರು ಶಕ್ತಿ ಯೋಜನೆಯ ಸದುಪಯೋಗ ಪಡೆದುಕೊಳ್ಳುತ್ತಿದ್ದು, ಪ್ರತಿ ನಿತ್ಯ ಸರಾಸರಿ ಶಕ್ತಿ ಯೋಜನೆಯಿಂದ ಚಿತ್ರದುರ್ಗ ವಿಭಾಗಕ್ಕೆ ರೂ. 25,55,287 ಆದಾಯ ಬರುತ್ತಿದೆ.
ಚಿತ್ರದುರ್ಗ ವಿಭಾಗದ ವತಿಯಿಂದ 'ಶಕ್ತಿ' ಯೋಜನೆ ಆರಂಭವಾದ 2023ರ ಜೂನ್‌ನಿಂದ 2025ರ ಮೇ 4ರ ಮೇ ತನಕ ನಗರ, ಸಾಮಾನ್ಯ ಹಾಗೂ ವೇಗದೂತ ಸಾರಿಗೆಗಳಲ್ಲಿ ಒಟ್ಟು 4,36,09138 ಮಹಿಳಾ ಪ್ರಯಾಣಿಕರು ಉಚಿತವಾಗಿ ಪ್ರಯಾಣಿಸಿದ್ದಾರೆ. ಸಾರಿಗೆ ಸಂಸ್ಥೆಯ ಚಿತ್ರದುರ್ಗ ವಿಭಾಗಕ್ಕೆ ಇಲ್ಲಿಯವರೆಗೆ ಒಟ್ಟು ರೂ.177,33,69463 ಕೋಟಿ ಆದಾಯ ಬಂದಿದೆ.
ಮಹಿಳೆಯರಿಗೆ ಸರ್ಕಾರಿ ಬಸ್‍ಗಳಲ್ಲಿ ಉಚಿತವಾಗಿ ಪ್ರಯಾಣಿಸುವಂತಾಗಲು 'ಶಕ್ತಿ' ಯೋಜನೆ ಜಾರಿಯಾದ ನಂತರ ಹಣ ಪಾವತಿಸುವ ಪ್ರಯಾಣಿಕರು ಸೇರಿದಂತೆ ಪ್ರಯಾಣಿಕರ ಸಂಖ್ಯೆ ಹೆಚ್ಚಿರುವುದರಿಂದ ರಾಜ್ಯ ಸಾರಿಗೆ ನಿಗಮಗಳು ಸ್ವಾವಲಂಬಿಯಾಗುತ್ತಿವೆ.
ಮುಖ್ಯವಾಗಿ ಗ್ರಾಮೀಣ ಭಾಗದಿಂದ ನಗರ ಪಟ್ಟಣಗಳಿಗೆ ತೆರಳಿ ದುಡಿಯುವ ಮಹಿಳೆಯರಿಗೆ ಯೋಜನೆ ವರದಾನವಾಗಿದೆ. ಖಾಸಗಿ ಹಾಗೂ ಅಸಂಘಟಿತ ವಲಯಗಳಲ್ಲಿ ಕೆಲಸ ನಿರ್ವಹಿಸುವ ಮಹಿಳೆಯರು ಸಂಚಾರಿ ವೆಚ್ಚದಿಂದ ಮುಕ್ತರಾಗಿದ್ದಾರೆ. ಮಹಿಳೆಯರು ಸಾಮಾನ್ಯವಾಗಿ ದುಡಿಯಲೆಂದು ತಮ್ಮ ತಿಂಗಳ ಆದಾಯದ ಶೇ.10ರಷ್ಟು ಹಣವವನ್ನು ಸಂಚಾರಕ್ಕಾಗಿ ವ್ಯಯಿಸಬೇಕಿತ್ತು.
ಶಾಲಾ/ ಕಾಲೇಜು ವಿದ್ಯಾರ್ಥಿನಿಯರು ವಾರ್ಷಿಕ ಪಾಸ್ ಪಡೆಯಲು ನೀಡಬೇಕಿದ್ದ ಹಣದಲ್ಲಿಯೂ ಉಳಿತಾಯವಾಗಿದೆ. ಉದ್ಯೋಗ, ಶಿಕ್ಷಣ ಹಾಗೂ ಪ್ರವಾಸ ಸೇರಿದಂತೆ ಹಲವು ಚಟುವಟಿಕೆಗಳಿಗೆ ಶಕ್ತಿ ಯೋಜನೆಯಿಂದ ಶಕ್ತಿ ಲಭಿಸಿದೆ. ಧಾರ್ಮಿಕ ಕೇಂದ್ರ ಹಾಗೂ ಪ್ರವಾಸಿ ತಾಣಗಳಿಗೂ ಭೇಟಿ ನೀಡುವವರ ಸಂಖ್ಯೆಯೂ ಹೆಚ್ಚಳವಾಗಿದೆ.
ಕರ್ನಾಟಕ ಸರ್ಕಾರ ರಾಜ್ಯದ ಮಹಿಳೆಯರು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ, ಬೆಂಗಳೂರು ಮಹಾ ನಗರ ಸಾರಿಗೆ ಸಂಸ್ಥೆ, ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ, ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ವಾಹನಗಳಲ್ಲಿ ಉಚಿತವಾಗಿ ಪ್ರಯಾಣಿಸುವ ಸೌಲಭ್ಯವನ್ನು ನೀಡಲು 'ಶಕ್ತಿ' ಯೋಜನೆಯನ್ನು 2023ರ ಜೂನ್ 11 ರಿಂದ ಜಾರಿಗೊಳಿಸಿದೆ.
"ಶಕ್ತಿ ಯೋಜನೆಯಿಂದ ಗ್ರಾಮೀಣ ಪ್ರದೇಶದ ಮಹಿಳೆಯರು ಸಾಕಷ್ಟು ಪ್ರಯೋಜನ ಪಡೆಯುತ್ತಿದ್ದೇವೆ. ಇಲ್ಲಿಯವರೆಗೂ ನಾವು ಕೆಲವು ಪುಣ್ಯ ಕ್ಷೇತ್ರಗಳ ದರ್ಶನವನ್ನೇ ಮಾಡಿರಲಿಲ್ಲ. ಆಸೆ ಇದ್ದರೂ ದೂರದೂರದ ಊರುಗಳಿಗೆ ಬಸ್‍ನಲ್ಲಿ ಹೋಗಲು ಹೆಚ್ಚು ಹಣ ಖರ್ಚಾಗುತ್ತದೆ ಎಂದು ಹೋಗಲು ಆಗಿರಲಿಲ್ಲ. ಸರ್ಕಾರದ ಗ್ಯಾರಂಟಿ ಯೋಜನೆಯಾಗಿರುವ ಶಕ್ತಿ ಯೋಜನೆಯಿಂದ ಮಕ್ಕಳು ಹಾಗೂ ನಮ್ಮ ಕುಟುಂಬದ ಎಲ್ಲರೂ ಹಲವಾರು ತೀರ್ಥಕ್ಷೇತ್ರಗಳ ದರ್ಶನದ ಭಾಗ್ಯವನ್ನು ಪಡೆದಿದ್ದೆವೆ" ಎಂದು ಯೋಜನೆಯ ಫಲಾನುಭವಿ ದೇವೀರಮ್ಮ ಹೇಳಿದ್ದಾರೆ.












Click it and Unblock the Notifications