ಚಿತ್ರದುರ್ಗ; ಮುರುಘಾ ಶರಣರ ಮೇಲೆ ಅಟ್ರಾಸಿಟಿ ಕೇಸ್ ದಾಖಲು
ಚಿತ್ರದುರ್ಗ, ಆಗಸ್ಟ್ 30 : ಮಠದ ವಸತಿ ನಿಲಯದ ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪ ಎದುರಿಸುತ್ತಿರುವ ಮುರುಘಾ ಶರಣರಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಲೈಂಗಿಕ ಕಿರುಕುಳದ ಬಗ್ಗೆ ಆರೋಪ ಮಾಡಿರುವ ವಿದ್ಯಾರ್ಥಿನಿಯರಲ್ಲಿ ಸಮುದಾಯಕ್ಕೆ ಸೇರಿದವರಾಗಿರುವ ಹಿನ್ನಲೆಯಲ್ಲಿ ಸ್ವಾಮೀಜಿ ವಿರುದ್ದ , ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (ದೌರ್ಜನ್ಯ ತಡೆ) ಕಾಯ್ದೆಯಡಿ ಪ್ರಕರಣ ದಾಖಲಾಗಿದೆ ಎನ್ನಲಾಗುತ್ತಿದೆ.
ಮುರುಘಾ ಮಠದ ಮಹಿಳಾ ವಿದ್ಯಾರ್ಥಿ ನಿಲಯದ ಇಬ್ಬರು ಅಪ್ರಾಪ್ತ ವಯಸ್ಸಿನ ವಿದ್ಯಾರ್ಥಿನಿಯರು ನೀಡಿದ ಹೇಳಿಕೆ ಆಧಾರದ ಮೇಲೆ ಮೈಸೂರು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು ಮೈಸೂರಿನ ನಜರ್ ಬಾದ್ ಪೊಲೀಸ್ ಠಾಣೆಯಲ್ಲಿ ಲಿಖಿತ ದೂರು ದಾಖಲಿಸಿದ್ದರು. ಈ ದೂರಿನ ಆಧಾರದ ಮೇಲೆ ನಜರಾಬಾದ್ ಪೊಲೀಸ್ ಠಾಣೆ ಅ. ಸಂ 155/2022 ಕಲಂ 376(2) (ಎನ್), 376 (ಎ) ರೆ/ವಿ 149 ಐಪಿಸಿ ಮತ್ತು ಕಲಂ: 5(ಎಲ್)6,17 ಪೋಕ್ಸೋ ಆಕ್ಟ್ -2012 ಅಡಿ ಪ್ರಕರಣ ದಾಖಲಾಗಿದೆ.
ಮೇಲ್ಕಂಡ ಪ್ರಕರಣವನ್ನು ಮೈಸೂರು ನಗರ ಪೊಲೀಸರು ನ್ಯಾಯಾಲಯದ ಅನುಮತಿ ಪಡೆದು ಕೃತ್ಯ ನಡೆದ ಆದ ಸ್ಥಳದ ಆಧಾರದ ಮೇಲೆ ಚಿತ್ರದುರ್ಗ ಜಿಲ್ಲೆಗೆ ಪ್ರಕರಣವನ್ನು ವರ್ಗಾವಣೆ ನೀಡಿದ್ದರು. ಈ ಘಟನೆಗೆ ಸಂಬಂಧಿಸಿದಂತೆ ಚಿತ್ರದುರ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅ.ಸಂ 387/2022 ಕಲಂ 376(2), (ಎನ್) 376(3), ರೆ/ವಿ 149 ಐಪಿಸಿ ಮತ್ತು ಕಲಂ:5(ಎಲ್) 6,7 ಪೋಕ್ಸೋ ಆಕ್ಟ್-2012 ರ ಅಡಿಯಲೂ ದಾಖಲು ಮಾಡಲಾಗಿತ್ತು.

ನೊಂದ ಬಾಲಕಿಯರ ಹೇಳಿಕೆ ಪಡೆಯುವ ಕಾಲಕ್ಕೆ ಒಬ್ಬ ಬಾಲಕಿಯು ಪರಿಶಿಷ್ಟ ಜಾತಿಗೆ ಸೇರಿರುವುದಾಗಿ ತಿಳಿದುಬಂದ ಮೇರೆಗೆ ಈ ಪ್ರಕರಣದಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಮೇಲಿನ ದೌರ್ಜನ್ಯ ಪ್ರತಿಬಂಧಕ ಅಧಿನಿಯಮದ ಕಲಂ 3 ಕ್ಲಾಸ್ (1), ಸಬ್ ಕ್ಲಾಸ್ w(1),(2), 3 ಕ್ಲಾಸ್ (2), (v) ಗಳನ್ನು ಹೆಚ್ಚುವರಿಯಾಗಿ ಅಳವಡಿಸಿಕೊಂಡು ತನಿಖೆ ನಡೆಸಲು ಘನ ನ್ಯಾಯಾಲಯಕ್ಕೆ ಆಗಸ್ಟ್ 28 ರಂದು ಮನವಿ ಸಲ್ಲಿಸಿ, ಅನುಮತಿ ಪಡೆದು ತನಿಖೆ ನಡೆಸಲಾಗುತ್ತಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪರಶುರಾಮ್ ಮಾಹಿತಿ ನೀಡಿದ್ದಾರೆ.
ದಲಿತ ಸಂಘಟನೆಗಳ ಪ್ರತಿಭಟನೆ; ದಲಿತ ಸಮುದಾಯದ ವಿದ್ಯಾರ್ಥಿನಿಯ ಮೇಲೆ ಲೈಂಗಿಕ ದೌರ್ಜನ್ಯ ಖಂಡಿಸಿ ನಗರದ ಬಾಲಕಿಯರ ಸರಕಾರಿ ಬಾಲಮಂದಿರದ ಮುಂಭಾಗ ದಲಿತ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ.
ತಮಗಾಗಿರುವ ಅನ್ಯಾಯವನ್ನು ಚಿತ್ರದುರ್ಗದಲ್ಲಿ ನ್ಯಾಯ ಸಿಗುವುದಿಲ್ಲ ಎಂದು ಅರಿತ ಬಾಲಕಿಯರು ಮೈಸೂರಿನ ಒಡನಾಡಿ ಸೇವಾ ಸಂಸ್ಥೆಯ ಮೊರೆ ಹೋಗಿದ್ದಾರೆ. ಇದರಿಂದ ಇಲ್ಲಿನ ಆಡಳಿತ ವ್ಯವಸ್ಥೆ ಎಷ್ಟರ ಮಟ್ಟಿಗೆ ಕೆಟ್ಟಿದೆ ಎಂಬುದು ತಿಳಿಯುತ್ತಿದೆ. ಚಿತ್ರದುರ್ಗದ ಮಾನವನ್ನು ಹರಾಜು ಹಾಕಿರುವ ಶರಣರನ್ನು ಇನ್ನೂ ಬಂಧಿಸಿಲ್ಲ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಅಲ್ಲದೆ ಸ್ವಾಮೀಜಿ ವಿರುದ್ಧ ಮೈಸೂರಿನಲ್ಲಿ ಪ್ರಕರಣ ದಾಖಲಾಗಿ ನಾಲ್ಕು ದಿನ ಕಳೆದಿದೆ. ಆದರೂ ಇನ್ನೂ ನ್ಯಾಯಾಧೀಶರ ಮುಂದೆ ಏಕೆ ಹಾಜರುಪಡಿಸಿಲ್ಲ. ಪೊಲೀಸ್ ಇಲಾಖೆ, ಜಿಲ್ಲಾಡಳಿತ ಸ್ವಾಮೀಜಿಗಳ ಪರವಾಗಿ ಕೆಲಸ ಮಾಡುತ್ತಿದೆ. ಈ ಮೂಲಕ ಪೋಕ್ಸೊ ಕಾಯ್ದೆಯನ್ನು ಉಲ್ಲಂಘಿಸುವ ಕೆಲಸ ನಡೆಯುತ್ತಿದೆ ಎಂದು ದಲಿತ ಸಂಘಟನೆ ದೂರಿದೆ.












Click it and Unblock the Notifications