ಸಂಪರ್ಕ್ ಫಾರ್ ಸಮರ್ಥನ್ : ಮುರುಘಾ ಶ್ರೀ ಭೇಟಿಯಾದ ಶ್ರೀನಿವಾಸ ಪೂಜಾರಿ
ಚಿತ್ರದುರ್ಗ, ಜುಲೈ 30 : 2019ರ ಲೋಕಸಭೆ ಚುನಾವಣೆಗೆ ಬಿಜೆಪಿ ಸಂಪರ್ಕ್ ಫಾರ್ ಸಮರ್ಥನ್ ಎಂಬ ಅಭಿಯಾನವನ್ನು ಆರಂಭಿಸಿದೆ. ಕರ್ನಾಟಕದ ಹಲವು ಗಣ್ಯರನ್ನು ಬಿಜೆಪಿ ನಾಯಕರು ಭೇಟಿ ಮಾಡಿ ಅಭಿಯಾನದ ಬುಕ್ ಲೆಟ್ ನೀಡುತ್ತಿದ್ದಾರೆ.
ಕರ್ನಾಟಕ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಕೋಟಾ ಶ್ರೀನಿವಾಸ ಪೂಜಾರಿ ಅವರು ಸೋಮವಾರ ಚಿತ್ರದುರ್ಗದ ಮುರುಘಾ ಮಠದ ಡಾ.ಶಿವಮೂರ್ತಿ ಮುರುಘಾ ಶರಣರನ್ನು ಭೇಟಿ ಮಾಡಿದರು.

ಡಾ.ಶಿವಮೂರ್ತಿ ಮುರುಘಾ ಶರಣರಿಗೆ ಸಂಪರ್ಕ್ ಫಾರ್ ಸಮರ್ಥನ್ ಅಭಿಯಾನದ ಬುಕ್ ಲೆಟ್ ನೀಡಿ, ಅಭಿಯಾನದ ಬಗ್ಗೆ ವಿವರಣೆಯನ್ನು ನೀಡಿದರು. ಹಲವು ನಾಯಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಚಂಪಾ ಭೇಟಿ : ಮತ್ತೊಂದು ಕಡೆ ಬಿಜೆಪಿ ನಾಯಕರು ಹಿರಿಯ ಸಾಹಿತಿ ಪ್ರೊ. ಚಂದ್ರಶೇಖರ ಪಾಟೀಲ (ಚಂಪಾ) ಅವರನ್ನು ಭೇಟಿ ಮಾಡಿ ಅಭಿಯಾನದ ಬುಕ್ ಲೆಟ್ ನೀಡಿದ್ದಾರೆ.

ಬಿಜೆಪಿ 2019ರ ಲೋಕಸಭೆ ಚುನಾವಣೆಗೆ ಸಿದ್ಧತೆ ಆರಂಭಿಸಿದೆ. ಸಂಪರ್ಕ್ ಫಾರ್ ಸಮರ್ಥನ್ ಎಂಬ ಅಭಿಯಾನವನ್ನು ಪಕ್ಷ ಹಮ್ಮಿಕೊಂಡಿದೆ. 4000 ಬಿಜೆಪಿ ನಾಯಕರು ಸುಮಾರು 1 ಲಕ್ಷ ಗಣ್ಯರನ್ನು ಭೇಟಿ ಮಾಡಿ, ಕೇಂದ್ರ ಸರ್ಕಾರದ ಯೋಜನೆಗಳ ಬಗ್ಗೆ ಮಾಹಿತಿ ನೀಡಲಿದ್ದಾರೆ.
ಕರ್ನಾಟಕದಲ್ಲಿಯೂ ವಿವಿಧ ಗಣ್ಯರನ್ನು ಪಕ್ಷದ ನಾಯಕರು ಭೇಟಿಯಾಗುತ್ತಿದ್ದಾರೆ. ಡಾ.ಸುಧಾಮೂರ್ತಿ, ಡಾ.ಶಿವರಾಜ್ ಕುಮಾರ್, ಪುನೀತ್ ರಾಜ್‌ಕುಮಾರ್, ನಟ, ನಿರ್ದೇಶಕ ಸುದೀಪ್, ನಟ, ನಿರ್ದೇಶಕ ರಕ್ಷಿತ್ ಶೆಟ್ಟಿ, ಕಿರಣ್ ಮಜುಂದಾರ್ ಷಾ, ಪ್ರಮೋದಾ ದೇವಿ ಒಡೆಯರ್ ಮುಂತಾದ ಗಣ್ಯರನ್ನು ಭೇಟಿಯಾಗಿ ಅಭಿಯಾನದ ಬಗ್ಗೆ ವಿವರಣೆ ನೀಡಲಾಗಿದೆ.












Click it and Unblock the Notifications