Breaking; ಚಿತ್ರದುರ್ಗದಲ್ಲಿ ಸ್ವಾಮೀಜಿಗಳ ಜೊತೆ ರಾಹುಲ್ ಸಂವಾದ
ಚಿತ್ರದುರ್ಗ, ಆಗಸ್ಟ್ 03; ಕರ್ನಾಟಕ ಪ್ರವಾಸದಲ್ಲಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸ್ವಾಮೀಜಿಗಳ ಜೊತೆ ಬುಧವಾರ ಸಂವಾದ ನಡೆಸಲಿದ್ದಾರೆ. ಚಿತ್ರದುರ್ಗದಲ್ಲಿ ಈ ಸಂವಾದ ನಡೆಯಲಿದೆ.
ಮಂಗಳವಾರ ರಾತ್ರಿ ಹುಬ್ಬಳ್ಳಿಗೆ ರಾಹುಲ್ ಗಾಂಧಿ ಆಗಮಿಸಿದ್ದಾರೆ. ಬುಧವಾರ ಬೆಳಗ್ಗೆ ಅವರು ಚಿತ್ರದುರ್ಗಕ್ಕೆ ಆಗಮಿಸಲಿದ್ದು, ಮುರುಘಾ ಮಠಕ್ಕೆ ಭೇಟಿ ನೀಡಿ ಡಾ. ಶಿವಮೂರ್ತಿ ಮುರುಘಾ ಶರಣರ ಆಶೀರ್ವಾದ ಪಡೆಯಲಿದ್ದಾರೆ.
ಹುಬ್ಬಳ್ಳಿಯಿಂದ ಚಿತ್ರದುರ್ಗಕ್ಕೆ ಆಗಮಿಸುವ ರಾಹುಲ್ ಗಾಂಧಿ ಸುಮಾರು 30 ಮಠಾಧೀಶರ ಜೊತೆ ಸಂವಾದ ನಡೆಸಲಿದ್ದಾರೆ. 11 ಗಂಟೆಯಿಂದ 11.50ರ ತನಕ ರಾಹುಲ್ ಗಾಂಧಿ ಮುರುಘಾ ಮಠದಲ್ಲಿ ಇರಲಿದ್ದು, ಬಳಿಕ ದಾವಣಗೆರೆಗೆ ತೆರಳಲಿದ್ದಾರೆ.

12.30ಕ್ಕೆ ಆಗಮನ; ಪ್ರತಿಪಕ್ಷ ನಾಯಕ ಸಿದ್ದರಾಮಯ್ಯರ 75ನೇ ಹುಟ್ಟು ಹಬ್ಬದ ಅಂಗವಾಗಿ ದಾವಣಗೆರೆಯಲ್ಲಿ ಅಮೃತ ಮಹೋತ್ಸವ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ಈ ಕಾರ್ಯಕ್ರಮದಲ್ಲಿ ರಾಹುಲ್ ಗಾಂಧಿ ಭಾಗವಹಿಸಲಿದ್ದಾರೆ.
ಬೆಳಗ್ಗೆ 10 ಗಂಟೆಗೆ ದಾವಣಗೆರೆಯಲ್ಲಿ ಕಾರ್ಯಕ್ರಮ ಆರಂಭವಾಗಲಿದೆ. 12 ಗಂಟೆಗೆ ವೇದಿಕೆ ಕಾರ್ಯಕ್ರಮ ಆರಂಭವಾಗಲಿದ್ದು, 12.30ಕ್ಕೆ ರಾಹುಲ್ ಗಾಂಧಿ ಆಗಮಿಸಲಿದ್ದಾರೆ. ಸಿದ್ದರಾಮಯ್ಯಗೆ ಸನ್ಮಾನ, ರಾಹುಲ್ ಗಾಂಧಿ ಭಾಷಣ, ಸಿದ್ದರಾಮಯ್ಯ ಭಾಷಣದ ನಂತರ ಕಾರ್ಯಕ್ರಮ ಮುಕ್ತಾಯವಾಗಲಿದೆ.
ಕೆಲವು ದಿನಗಳ ಹಿಂದೆ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಸಹ ಮುರುಘಾ ಮಠಕ್ಕೆ ಭೇಟಿ ನೀಡಿದ್ದರು. ಸ್ವಾಮೀಜಿಗಳ ಜೊತೆ ಅವರು ಸಹ ಸಂವಾದ ನಡೆಸಿದ್ದರು. ಈಗ ರಾಹುಲ್ ಗಾಂಧಿ ಸಹ ಸ್ವಾಮೀಜಿಗಳ ಜೊತೆ ಸಂವಾದ ಹಮ್ಮಿಕೊಂಡಿದ್ದಾರೆ.
ಕರ್ನಾಟಕದಲ್ಲಿ 2023ರಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಈಗಾಗಲೇ ಕಾಂಗ್ರೆಸ್ ಪಕ್ಷ ಚುನಾವಣೆಯಲ್ಲಿ ಗೆದ್ದು ಸರ್ಕಾರ ರಚಿಸುವ ಗುರಿಯೊಂದಿಗೆ ತಂತ್ರ ರೂಪಿಸುತ್ತಿದೆ. ಈ ಹಿನ್ನೆಲೆಯಲ್ಲಿ ದಾವಣಗೆರೆಯಲ್ಲಿ ನಡೆಯುವ ಬೃಹತ್ ಸಮಾವೇಶ ಪಕ್ಷಕ್ಕೆ ಶಕ್ತಿ ತುಂಬುವ ನಿರೀಕ್ಷೆ ಇದೆ.












Click it and Unblock the Notifications