Murugha Shree : ಚಿತ್ರದುರ್ಗ ಮುರುಘಾ ಶರಣರಿಗೆ 14 ದಿನ ನ್ಯಾಯಾಂಗ ಬಂಧನ
ಚಿತ್ರದುರ್ಗ, ಸೆಪ್ಟೆಂಬರ್ 2: ಪೋಕ್ಸೋ ಪ್ರಕರಣದಲ್ಲಿ ಬಂಧಿಸಲ್ಪಟ್ಟಿದ್ದ ಚಿತ್ರದುರ್ಗದ ಮುರುಘಾ ಮಠದ ಶಿವಮೂರ್ತಿ ಶ್ರೀಗಳನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ.
ಗುರುವಾರ ಬಂಧಿಸಲ್ಪಟ್ಟ ಮುರುಘಾ ಶರಣರನ್ನು ಮಧ್ಯರಾತ್ರಿಯೇ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಯಿತು. ಚಿತ್ರದುರ್ಗದ 1ನೇ ಹೆಚ್ಚುವರಿ ಸೆಷನ್ಸ್ ಕೋರ್ಟ್ ನ್ಯಾಯಧೀಶರಾದ ಕೋಮಲಾ ಶ್ರೀಗಳನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೊಪ್ಪಿಸುವಂತೆ ಆದೇಶ ನೀಡಿದರು. ತದನಂತರ ಮುರುಘಾ ಶರಣರನ್ನು ಚಿತ್ರದುರ್ಗ ಜಿಲ್ಲಾ ಕಾರಾಗೃಹಕ್ಕೆ ಕಳುಹಿಸಲಾಗಿದೆ.
ಚಿತ್ರದುರ್ಗದಲ್ಲಿ ರಾತ್ರೋರಾತ್ರಿ ನಡೆದ ಬೆಳವಣಿಗೆಳು ಹಲವು ಕೌತಕಗಳಿಗೆ ಕಾರಣವಾಗಿತ್ತು. ರಾತ್ರಿ 10.22 ನಿಮಿಷಕ್ಕೆ ದಿಢೀರ್ ಮುರುಘಾ ಮಠದ ಶಿವಮೂರ್ತಿ ಶರಣರನ್ನು ಪೊಲೀಸರು ಬಂಧಿಸಿದರು.

ಚಳ್ಳಕೆರೆಯ ಅಜ್ಞಾತ ಸ್ಥಳದಲ್ಲಿ ಶ್ರೀಗಳ ವಿಚಾರಣೆ
ಗುರುವಾರ ರಾತ್ರಿ ಮುರುಘು ಮಠದ ಶಿವಮೂರ್ತಿ ಶರಣರನ್ನು ಬಂಧಿಸಿದ ಚಿತ್ರದುರ್ಗ ಪೊಲೀಸರು ಅಜ್ಞಾತ ಸ್ಥಳಕ್ಕೆ ಅವರನ್ನು ಕರೆದುಕೊಂಡು ಹೋದರು. ನೇರವಾಗಿ ಮಠದಿಂದ ಚಳ್ಳಕೆರೆಯ ಅಜ್ಞಾತ ಸ್ಥಳದಲ್ಲಿ ಶ್ರೀಗಳನ್ನು ವಿಚಾರಣೆಗೆ ಒಳಪಡಿಸಲಾಯಿತು. ತದನಂತರ ಚಳ್ಳಕೆರೆಯ ಡಿವೈಎಸ್‌ಪಿ ಕಚೇರಿಗೆ ಕರೆತಂದು ಅಲ್ಲಿ ಚಿತ್ರದುರ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪರಶುರಾಮ್, ಡಿವೈಎಸ್‌ಪಿ ರಮೇಶ್‌ಕುಮಾರ್ ನೇತೃತ್ವದಲ್ಲಿಯೇ ವಿಚಾರಣೆ ನಡೆಸಲಾಯಿತು.

ಮುರುಘ ಮಠದ ಶ್ರೀಗಳಿಗೆ ಜಿಲ್ಲಾಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆ
ಚಳ್ಳಕೆರೆಯಲ್ಲಿ ಮುರುಘಾ ಶರಣರ ವಿಚಾರಣೆ ಮುಗಿಯುತ್ತಿದ್ದಂತೆ ಅವರನ್ನು ಚಿತ್ರದುರ್ಗಕ್ಕೆ ವಾಪಸ್ ಕರೆದುಕೊಂಡು ಬರಲಾಯಿತು. ಮಧ್ಯರಾತ್ರಿ 1 ಗಂಟೆ ಸುಮಾರಿಗೆ ಚಿತ್ರದುರ್ಗದ ಜಿಲ್ಲಾಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆಗೆ ಶ್ರೀಗಳನ್ನು ಒಳಪಡಿಸಲಾಯಿತು. ಸಾಮಾನ್ಯ ವೈದ್ಯಕೀಯ ಪರೀಕ್ಷೆಯ ನಂತರವೇ ಪೊಲೀಸರು ಅವರನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಿದರು.

ಮುರುಘಾ ಶರಣರ ಬಂಧನ ವಿಳಂಬಕ್ಕೆ ಆಕ್ರೋಶ
ಚಿತ್ರದುರ್ಗ ಮುರುಘಾ ಮಠದ ಶಿವಮೂರ್ತಿ ಶರಣರ ವಿರುದ್ಧ ಪೋಕ್ಸೋ ಪ್ರಕರಣದ ಜೊತೆಗೆ ಅಟ್ರಾಸಿಟಿ ಮತ್ತು ಸುಮಟೋ ಕೇಸ್ ಕೂಡ ದಾಖಲಾಗಿದೆ. ಅದಾಗ್ಯೂ, ಆರು ದಿನಗಳವರೆಗೂ ಅವರನ್ನು ಬಂಧಿಸದ ಹಿನ್ನೆಲೆ ಪೊಲೀಸರ ನಡೆಯ ವಿರುದ್ಧ ಹಲವು ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿದ್ದವು. ಇದರ ಮಧ್ಯೆ ಶ್ರೀಗಳನ್ನು ಬಂಧಿಸಬೇಕು ಅಂತ ಹಲವು ಸಂಘಟನೆಗಳು ಆಗ್ರಹಿಸಿದ್ದವು, ಈ ಎಲ್ಲ ಬೆಳವಣಿಗೆಗಳ ಮಧ್ಯೆ ಗುರುವಾರ ಶ್ರೀಗಳನ್ನು ಬಂಧಿಸಿದ ಪೊಲೀಸರು 14 ದಿನಗಳ ಕಾಲ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಮುರುಘಾ ಮಠದ ಬಳಿ ಹೆಚ್ಚುವರಿ ಭದ್ರತೆ
ಶಿವಮೂರ್ತಿ ಶರಣರನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸುತ್ತಿದ್ದಂತೆ ಚಿತ್ರದುರ್ಗ ಪೊಲೀಸರು ಹಲವು ರೀತಿ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡಿದ್ದಾರೆ. ಪ್ರಾಥಮಿಕವಾಗಿ ಮುರುಘಾ ಮಠದ ಬಳಿ ಹೆಚ್ಚುವರಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ. ಆ ಮೂಲಕ ಮಠದ ಸುತ್ತಮುತ್ತ ಯಾವುದೇ ರೀತಿ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ.

ಮುರುಘಾ ಶರಣರ ವಿರುದ್ಧ ಏನಿದು ಪೋಕ್ಸೋ ಕೇಸ್?
ಅಕ್ಕಮಹಾದೇವಿ ವಸತಿ ನಿಲಯದ ಅಪ್ರಾಪ್ತ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪದ ಮೇಲೆ ಮುರುಘಾ ಮಠದ ಶರಣರ ವಿರುದ್ಧ ಮೈಸೂರಿನ ನಜರಾಬಾದ್ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ಕೋರಿ ಶ್ರೀಗಳು ಸಲ್ಲಿಸಿರುವ ಅರ್ಜಿ ವಿಚಾರಣೆ ಶುಕ್ರವಾರದಂದು ನಡೆಯಲಿದೆ. ಲೈಂಗಿಕ ಕಿರುಕುಳದ ಆರೋಪ ಹೊತ್ತಿರುವ ಚಿತ್ರದುರ್ಗದ ಮುರುಘಾ ಮಠದ ಪೀಠಾಧಿಪತಿ ಶಿವಮೂರ್ತಿ ಮುರುಘಾ ಶರಣರ ವಿರುದ್ಧ ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ (ಎನ್‌ಸಿಪಿಸಿಆರ್) ಸ್ವಯಂ ಪ್ರೇರಿತವಾಗಿ ದೂರು ದಾಖಲಿಸಿಕೊಳ್ಳಲಾಗಿದೆ.
ಇದಲ್ಲದೇ ಸುಮೋಟೋ ಕೇಸ್ ದಾಖಲಿಸಿರುವ ಸಂಬಂಧ ರಾಷ್ಟ್ರೀಯ ಮಕ್ಕಳ ಹಕ್ಕು ರಕ್ಷಣಾ ಆಯೋಗ ಚಿತ್ರದುರ್ಗದ ಪೊಲೀಸ್ ವರಿಷ್ಠಾಧಿಕಾರಿ (ಎಸ್.ಪಿ)ಗೆ ನೋಟಿಸ್ ನೀಡಿದೆ. ಪ್ರಕರಣದ ಬಗ್ಗೆ ಏಳು ದಿನಗಳಲ್ಲಿ ವರದಿ ನೀಡುವಂತೆ ಪೊಲೀಸರಿಗೆ ಸೂಚನೆ ನೀಡಲಾಗಿದೆ. ಅದಲ್ಲದೇ ಪ್ರಕರಣ ಸಂಬಂಧ ಪೋಲೀಸರು ಕೈಗೊಂಡ ಕ್ರಮದ ಬಗ್ಗೆ ಮಕ್ಕಳ ಹಕ್ಕು ರಕ್ಷಣಾ ಆಯೋಗ ಮಾಹಿತಿ ಕೇಳಿದೆ.












Click it and Unblock the Notifications