ನೆಲ್ಯಾಡಿ-ಚಿತ್ರದುರ್ಗ ನಡುವಿನ 4 ಪಥದ ರಸ್ತೆ ಯೋಜನೆ ಕೈಬಿಟ್ಟ ಎನ್‌ಹೆಚ್‌ಎಐ
ಚಿತ್ರದುರ್ಗ, ಜುಲೈ 24: ಸುಮಾರು 6 ಸಾವಿರ ಕೋಟಿ ರೂ. ಮೊತ್ತದ ನೆಲ್ಯಾಡಿ-ಚಿತ್ರದುರ್ಗ ಚತುಷ್ಪಥ ಹೆದ್ದಾರಿ ನಿರ್ಮಾಣ ಯೋಜನೆಯನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಹೆಚ್‌ಎಐ) ಕೈ ಬಿಟ್ಟಿದೆ. ರಸ್ತೆ ಯೋಜನೆಯನ್ನು 4 ಪ್ಯಾಕೇಜ್‌ಗಳಾಗಿ ವಿಂಗಡನೆ ಮಾಡಲಾಗಿತ್ತು.
ವಿಧಾನಸಭೆ ಕಲಾಪದಲ್ಲಿ ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ಚಿಕ್ಕಮಗಳೂರು ಶಾಸಕ ಎಚ್. ಡಿ. ತಮ್ಮಯ್ಯ ಪ್ರಶ್ನೆಗೆ ಉತ್ತರವನ್ನು ನೀಡಿದ್ದಾರೆ. ವಿವಿಧ ಸಂಸ್ಥೆಗಳ ಮೂಲಕ ಎನ್‌ಹೆಚ್‌ಎಐ ವರದಿ ತರಿಸಿಕೊಂಡಿದ್ದು, ಕಾರ್ಯಸಾಧ್ಯತಾ ವರದಿ ಪರಿಶೀಲಿಸಿ ವಿವಿಧ ಕಾರಣಕ್ಕೆ ಯೋಜನೆ ಸಂಪೂರ್ಣ ಕೈ ಬಿಡಲಾಗಿದೆ ಎಂದು ರಾಜ್ಯ ಸರ್ಕಾರಕ್ಕೆ ಪ್ರಾಧಿಕಾರ ವರದಿ ನೀಡಿದೆ.

ಮಂಗಳೂರು ಉಜಿರೆ-ಚಾರ್ಮಾಡಿ,-ಮೂಡಿಗೆರೆ-ಚಿಕ್ಕಮಗಳೂರು-ಕಡೂರು-ಹೊಳಲ್ಕೆರೆ ಮೂಲಕ ಚಿತ್ರದುರ್ಗಕ್ಕೆ ಸದ್ಯ 303 ಕಿ. ಮೀ. ಹೆದ್ದಾರಿ ಇದೆ. ಆದರೆ ಚಾರ್ಮಾಡಿ ರಸ್ತೆಯನ್ನು ವಿಸ್ತರಣೆ ಮಾಡಲು ಸಾಧ್ಯವಿಲ್ಲ ಎಂಬ ಕಾರಣಕ್ಕೆ ಹೊಸದಾಗಿ ನೆಲ್ಯಾಡಿ-ಚಿತ್ರದುರ್ಗ ಚತುಷ್ಪಥ ಯೋಜನೆ ತಯಾರು ಮಾಡಲಾಗಿತ್ತು.
4 ಪ್ಯಾಕೇಜ್, 6 ಸಾವಿರ ಕೋಟಿ ರೂ. ಯೋಜನೆ: ಮಂಗಳೂರು ಬಂದರಿನಿಂದ ಸಂಪರ್ಕ ಕಲ್ಪಿಸಲು ಕೇಂದ್ರ ಸರ್ಕಾರದ ಭಾರತ್ ಮಾಲಾ ಕಾರ್ಯಕ್ರಮದಡಿ ನೆಲ್ಯಾಡಿ-ಚಿತ್ರದುರ್ಗ 4 ಪಥದ ಹೆದ್ದಾರಿ ಯೋಜನೆಯನ್ನು ರೂಪಿಸಲಾಗಿತ್ತು. ಯೋಜನಾ ವೆಚ್ಚ ಸುಮಾರು 6 ಸಾವಿರ ಕೋಟಿ, ಯೋಜನೆಯನ್ನು 4 ಪ್ಯಾಕೇಜ್ ಆಗಿ ವಿಭಾಗಿಸಲಾಗಿತ್ತು.
ಮಂಗಳೂರು-ಚಿತ್ರದುರ್ಗ ತಲುಪಬೇಕಾದ ಭಾರೀ ವಾಹನಗಳು ಹಾಸನ, ನೆಲಮಂಗಲ ಮಾರ್ಗವಾಗಿ ಸಾಗುವುದನ್ನು ತಪ್ಪಿಸಲು ಈ ಯೋಜನೆ ರೂಪಿಸಲಾಗಿತ್ತು. ಯೋಜನೆಯನ್ನು ನೆಲ್ಯಾಡಿ-ಮೂಡಿಗೆರೆ, ಮೂಡಿಗೆರೆ ಹ್ಯಾಂಡ್‌ಪೋಸ್ಟ್-ಚಿಕ್ಕಮಗಳೂರು ಬೈಪಾಸ್, ಚಿಕ್ಕಮಗಳೂರು-ತಮಟದಹಳ್ಳಿ, ತಮಟದಹಳ್ಳಿ-ಚಿತ್ರದುರ್ಗ ಹೀಗೆ 4 ಪ್ಯಾಕೇಜ್ ಆಗಿ ವಿಭಾಗ ಮಾಡಿ, ಕಾರ್ಯಸಾಧ್ಯತಾ ವರದಿ ತಯಾರು ಮಾಡಲಾಗಿತ್ತು.
ಸಚಿವ ಸತೀಶ್ ಜಾರಕಿಹೊಳಿ ತಮ್ಮ ಉತ್ತರದಲ್ಲಿ, "ನೆಲ್ಯಾಡಿ-ಮೂಡಿಗೆರೆ ಪರಿಸರ ಸೂಕ್ಷ್ಮ ಪ್ರದೇಶ, ಮೂಡಿಗೆರೆ ಹ್ಯಾಂಡ್‌ಪೋಸ್ಟ್-ಚಿಕ್ಕಮಗಳೂರು ಪ್ಯಾಕೇಜ್ ಅರಣ್ಯದಲ್ಲಿ ಹಾದು ಹೋಗುತ್ತದೆ. ಮೂರು ಮತ್ತು 4 ನೇ ಪ್ಯಾಕೇಜ್‌ನಲ್ಲಿ ವಾಹನಗಳ ದಟ್ಟಣೆ ಹೆಚ್ಚಿಲ್ಲ. ಆದ್ದರಿಂದ ಯೋಜನೆ ಕಾರ್ಯಸಾಧುವಲ್ಲ ಎಂಬ ವರದಿ ಎನ್‌ಹೆಚ್‌ಎಐ ಕೈ ಸೇರಿತ್ತು. ಈ ಕುರಿತು ಪ್ರಾಧಿಕಾರ ಸರ್ಕಾರಕ್ಕೆ ವರದಿ ಸಲ್ಲಿಕೆ ಮಾಡಿ, ಯೋಜನೆ ಕೈ ಬಿಟ್ಟಿರುವುದಾಗಿ ಹೇಳಿದೆ.
ಈ ಯೋಜನೆ ಕುರಿತು ಮೊದಲು ದೆಹಲಿ ಮೂಲದ ಎಲ್‌ಇಎ ಅಸೋಸಿಯೇಟ್ಸ್ ಸೌತ್ ಏಷ್ಯಾ ಎಂಬ ಸಂಸ್ಥೆ ವರದಿ ನೀಡಿತ್ತು. ಒಟ್ಟು 357 ಕಿ. ಮೀ. ರಸ್ತೆಯನ್ನು 6 ಸಾವಿರ ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಬಹುದು. ಆದರೆ ಈ ರಸ್ತೆ ಪರಿಸರ ಸೂಕ್ಷ್ಮ ಪ್ರದೇಶ, ಅರಣ್ಯ ಪ್ರದೇಶದಲ್ಲಿ ಹಾದು ಹೋಗುವ ಕಾರಣ ಪರಿಸರ ಪ್ರೇಮಿಗಳು ಆಕ್ಷೇಪ ವ್ಯಕ್ತಪಡಿಸಿದ್ದರು.
ವನ್ಯಜೀವಿಗಳಿಗೆ ಹಾನಿಯಾಗುವ, ಬೆಟ್ಟಗಳನ್ನು ಕಡಿದು, ನಿತ್ಯ ಹರಿದ್ವರ್ಣದ ಕಾಡುಗಳನ್ನು ನಾಶ ಮಾಡಿ ರಸ್ತೆ ನಿರ್ಮಾಣ ಮಾಡುವುದು ಬೇಡ ಈ ಯೋಜನೆಯ ಕುರಿತು ಮತ್ತೊಮ್ಮೆ ಪರಿಶೀಲಿಸಿ ಎಂದು ಒತ್ತಾಯಿಸಿದ್ದರು. ಆದ್ದರಿಂದ ಎನ್‌ಹೆಚ್‌ಎಐ ಕಾರ್ಯಸಾಧ್ಯತಾ ವರದಿಯನ್ನು ತರಿಸಿತ್ತು. ಈ ವರದಿ ಅನ್ವಯ ಯೋಜನೆ ಕೈಬಿಡಲಾಗಿದೆ.












Click it and Unblock the Notifications