Nayakanahatti Thipperudra Swamy Jatra: ನಾಯಕನಹಟ್ಟಿ ಶ್ರೀ ಗುರು ತಿಪ್ಪೇರುದ್ರಸ್ವಾಮಿ ಜಾತ್ರೆಗೆ ಮುಹೂರ್ತ ಫಿಕ್ಸ್
ಚಿತ್ರದುರ್ಗ, ಫೆಬ್ರವರಿ, 25: ನಾಯಕನಹಟ್ಟಿ ಕ್ಷೇತ್ರದ ಶ್ರೀ ಗುರು ತಿಪ್ಪೇರುದ್ರಸ್ವಾಮಿ ಜಾತ್ರೆಯು ಮಾರ್ಚ್ 19ರಿಂದ ಏಪ್ರಿಲ್ 01ರವರೆಗೆ ನಡೆಯಲಿದ್ದು, ಜಾತ್ರೆಯ ಅಂಗವಾಗಿ ಮಾರ್ಚ್ 26 ಮಂಗಳವಾರದಂದು ದೊಡ್ಡ ರಥೋತ್ಸವ ಜರುಗಲಿದೆ. ಹಾಗಾದರೆ ಯಾವ್ಯಾವ ದಿನ ಯಾವೆಲ್ಲ ಕಾರ್ಯಕ್ರಗಳು ನಡೆಯಲಿವೆ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ರಾಜ್ಯ ಸರ್ಕಾರ ಶಕ್ತಿ ಯೋಜನೆಯಡಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಅವಕಾಶ ಕಲ್ಪಿಸಿರುವುದರಿಂದ, ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಜಾತ್ರೆಗೆ ಆಗಮಿಸುವ ನಿರೀಕ್ಷೆ ಇದೆ. ಹೀಗಾಗಿ ಕೆಎಸ್‍ಆರ್‌ಟಿಸಿ ಅಧಿಕಾರಿಗಳು ನಾಯಕನಹಟ್ಟಿ ಜಾತ್ರೆಗೆ ಹೆಚ್ಚಿನ ಬಸ್‍ಗಳ ವ್ಯವಸ್ಥೆ ಕಲ್ಲಿಸಬೇಕು. ನಾಯಕನಹಟ್ಟಿಯಲ್ಲಿ ಪ್ರಸ್ತುತ ಇರುವ ಹಿನ್ನೆಲೆ ಕೊಳವೆ ಬಾವಿಗಳ ಜೊತೆಗೆ ಅಗತ್ಯಕ್ಕೆ ಅನುಗುಣವಾಗಿ ಹೊಸದಾಗಿ ಕೊಳವೆ ಬಾವಿ ಕೊರೆದು, ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು.

ನಾಯಕಹಟ್ಟಿ ಸಂಪರ್ಕಿಸುವ ಎಲ್ಲಾ ರಸ್ತೆಗಳನ್ನು ದುರಸ್ತಿಗೊಳಿಸಬೇಕು. ರಸ್ತೆಗಳಲ್ಲಿ ಗುಂಡಿಗಳು ಕಂಡುಬಂದರೆ ಸಂಬಂದಪಟ್ಟ ಅಧಿಕಾರಿಗಳ ಮೇಲೆ ಶಿಸ್ತು ಕ್ರಮ ಕೈಗೊಳ್ಳುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಹೇಳಿದರು. ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾಗಿರುವ ಚಳ್ಳಕೆರೆ ತಾಲ್ಲೂಕಿನ ನಾಯಕನಹಟ್ಟಿಯ ಶ್ರೀ ಗುರು ತಿಪ್ಪೇರುದ್ರಸ್ವಾಮಿಯ ದೊಡ್ಡ ರಥೋತ್ಸವ-2024ರ ಸಿದ್ಧತೆ ಕುರಿತು ನಾಯಕನಹಟ್ಟಿ ಒಳಮಠ ಸಮುದಾಯಭವನದ ಆವರಣದಲ್ಲಿ ಶನಿವಾರ ಏರ್ಪಡಿಸಲಾಗಿದ್ದ ಪೂರ್ವಭಾವಿ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಬರಗಾಲದ ಹಿನ್ನೆಲೆ, ಭಕ್ತಾದಿಗಳ ಮನವಿಯಂತೆ ಈ ಬಾರಿ ನಾಯಕನಹಟ್ಟಿಯ ಶ್ರೀ ಗುರು ತಿಪ್ಪೇರುದ್ರಸ್ವಾಮಿ ಜಾತ್ರಾ ಮಹೋತ್ಸವದ ಅಂಗವಾಗಿ ಹಾಕಲಾಗುವ, ಅಂಗಡಿ ಹಾಗೂ ವಾಣಿಜ್ಯ ವ್ಯಾಪಾರ ಮಳಿಗೆಗಳ ಜಕಾತಿ ವಸೂಲಿ ಮಾಡುವುದಿಲ್ಲ. ಅಧಿಕಾರಿಗಳು ಕುಡಿಯುವ ನೀರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ವ್ಯವಸ್ಥೆ ಮಾಡಿಕೊಳ್ಳಬೇಕು ಎಂದು ಸಚಿವ ಡಿ.ಸುಧಾಕರ್ ತಿಳಿಸಿದರು.
ಮುಕ್ತಿ ಬಾವುಟ ಹರಾಜಿಗೆ ಮಾರ್ಗಸೂಚಿ: ರಥೋತ್ಸವದ ತರುವಾಯ ನಡೆಯುವ ಮುಕ್ತಿ ಬಾವುಟ ಹರಾಜಿನ ಹಣ ಪಾವತಿಗೆ ಸಂಬಂಧಿಸಿದಂತೆ ಯಾವುದೇ ನಿಯಮಗಳು ಇಲ್ಲದಿರುವುದರಿಂದ, ಹರಾಜಿನಲ್ಲಿ ಯಶಸ್ವಿಯಾಗುವವರು ಸಮರ್ಪಕವಾಗಿ ಹಣ ಪಾವತಿ ಮಾಡುತ್ತಿಲ್ಲ. ಹೀಗಾಗಿ ಇದಕ್ಕೆ ಸೂಕ್ತ ನಿಯಮ ರೂಪಿಸಲು ಸಾರ್ವಜನಿಕರು ಸಭೆಯಲ್ಲಿ ಪ್ರಸ್ತಾಪಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ಮುಕ್ತಿ ಬಾವುಟ ಹರಾಜಿನ ಮೊತ್ತ ಪಾವತಿ ಸಂಬಂಧ ಸೂಕ್ತ ಮಾರ್ಗಸೂಚಿ ರೂಪಿಸಲಾಗುವುದು. ಹರಾಜಿನಲ್ಲಿ ಭಾಗವಹಿಸುವವರು ಮೊದಲೇ ನೊಂದಣಿ ಮಾಡಿಕೊಳ್ಳಬೇಕು. ಕೂಗಿದ ಹರಾಜು ಮೊತ್ತವನ್ನು ನಿಗದಿತ ಸಮಯದಲ್ಲಿ ದೇವಸ್ಥಾನ ಮಂಡಳಿಗೆ ಕಟ್ಟುವಂತೆ ವ್ಯವಸ್ಥೆ ರೂಪಿಸುವುದಾಗಿ ಸಚಿವ ಡಿ.ಸುಧಾಕರ್ ಭರವಸೆ ನೀಡಿದರು.
ಮೊಳಕಾಲ್ಮೂರು ಶಾಸಕ ಎನ್.ವೈ.ಗೋಪಾಲಕೃಷ್ಣ ಮಾತನಾಡಿ, ಜಾತ್ರೆಗೆ ಆಗಮಿಸುವ ಭಕ್ತಾಧಿಗಳಿಗೆ ಕುಡಿಯುವ ನೀರು, ರಸ್ತೆ ಸೇರಿದಂತೆ ಅಗತ್ಯ ಮೂಲಭೂತ ಸೌಕರ್ಯಗಳ ವ್ಯವಸ್ಥೆ ಉತ್ತಮವಾಗಿರಬೇಕು. ಬೇಸಿಗೆ ಸಂದರ್ಭವಾದ ಕಾರಣ ಆರೋಗ್ಯಕ್ಕೆ ಬಹಳ ವಿಶೇಷ ಕಾಳಜಿ ವಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಒಳಮಠದ ಎದುರಿನ ನಾಯಕನಹಟ್ಟಿ ಸಂಪರ್ಕಿಸುವ ಸೇತುವೆ ಹಾಗೂ ರಸ್ತೆ ಕಾಮಗಾರಿಗೆ 50,00000 ರೂಪಾಯಿ ಅನುದಾನ ನೀಡಲಾಗಿದೆ. ತಿಪ್ಪೇರುದ್ರಸ್ವಾಮಿ ದೇವಸ್ಥಾನಕ್ಕೆ ಸಂಬಂಧಿಸಿದ ಹಣವನ್ನು ಕೇವಲ ಬಡ್ಡಿಗಾಗಿ ಬ್ಯಾಂಕಿನಲ್ಲಿ ಠೇವಣಿ ಇರಿಸುವುದಲ್ಲ. ದೇವಸ್ಥಾನದ ಹಣವನ್ನು ಕ್ಷೇತ್ರದ ಅಭಿವೃದ್ಧಿಗೆ ಹಾಗೂ ಜಾತ್ರಾ ಮಹೋತ್ಸವದಲ್ಲಿ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು ಬಳಸಬೇಕು. ಜಿಲ್ಲಾಧಿಕಾರಿಗಳು ದೇವಸ್ಥಾನಕ್ಕೆ ಸಂಬಂಧಿಸಿದ ಹಣದಲ್ಲಿ ಕನಿಷ್ಟ 10 ಲಕ್ಷ ರೂಪಾಯಿ ಹಣವನ್ನು ಜಾತ್ರೆಯ ಅಥವಾ ಕ್ಷೇತ್ರದ ಅಭಿವೃದ್ಧಿಯ ಕೆಲಸ ಕಾರ್ಯಗಳ ನಿರ್ವಹಣೆ ಹಾಗೂ ಮೂಲಭೂತ ಸೌಕರ್ಯಗಳ ವ್ಯವಸ್ಥೆಗೆ ಬಳಕೆ ಮಾಡುವಂತೆ ಸಲಹೆ ನೀಡಿದರು.
ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಮಾತನಾಡಿ, ಬರಗಾಲ ಹಾಗೂ ಸಾರ್ವತ್ರಿಕ ಲೋಕಸಭಾ ಚುನಾವಣೆ ಸಮೀಪ ಇರುವುದರಿಂದ ಬಹು ಬೇಗನೇ ಜಾತ್ರೆ ವ್ಯವಸ್ಥೆಯ ಸಿದ್ಧತೆಗಳನ್ನು ಅಧಿಕಾರಿಗಳು ಮಾಡಬೇಕು. ಕುಡಿಯುವ ನೀರಿಗೆ ಪಟ್ಟಣ ಪಂಚಾಯತಿ ಅಚ್ಚುಕಟ್ಟಾಗಿ ವ್ಯವಸ್ಥೆ ಮಾಡಬೇಕು. ಬೇರೆ ಸ್ಥಳೀಯ ಸಂಸ್ಥೆಗಳು ಹಾಗೂ ಹಾಲಿನ ಟ್ಯಾಂಕರ್‌ಗಳನ್ನು ತರಿಸಿ ನೀರು ಸರಬರಾಜು ಮಾಡಲು ತಾತ್ಕಾಲಿಕ ವ್ಯವಸ್ಥೆ ಮಾಡಿಕೊಳ್ಳುವಂತೆ ಪಟ್ಟಣ ಪಂಚಾಯಿತಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಪಟ್ಟಣದ ಬೀದಿ ದೀಪಗಳು ಸಮರ್ಪಕವಾಗಿ ಕಾರ್ಯನಿರ್ವಹಿಸಬೇಕು. ಪಟ್ಟಣದ ಖಾಲಿ ಜಾಗದಲ್ಲಿನ ಜಾಲಿ ಗಿಡಗಳನ್ನು ಕಡಿದು ಸ್ವಚ್ಛಗೊಳಿಸಬೇಕು. ಸ್ವಚ್ಛತಾ ಕಾರ್ಯಕ್ಕಾಗಿ ಬೇರೆ ನಗರ ಸ್ಥಳಿಯ ಸಂಸ್ಥೆಗಳಿಂದ ಅಗತ್ಯವಿರುವಷ್ಟು ಪೌರ ಕಾರ್ಮಿಕರನ್ನು ನೇಮಿಸಿಕೊಳ್ಳಬೇಕು. ಸಂಚಾರಿ ಶೌಚಾಲಯಗಳ ಬದಲಿಗೆ ಖಾಲಿ ಸ್ಥಳಗಳಲ್ಲಿ ಕನಿಷ್ಠ 50ರಂತೆ ತಾತ್ಕಾಲಿಕ ಶೌಚಾಲಯಗಳನ್ನು ನಿರ್ಮಿಸಬೇಕು ಎಂದರು.












Click it and Unblock the Notifications