Nayakanahatti Jatre: ಮಾರ್ಚ್ 9ರಿಂದ ನಾಯಕನಹಟ್ಟಿ ತಿಪ್ಪೆರುದ್ರಸ್ವಾಮಿ ಜಾತ್ರೆ
ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನಲ್ಲಿರುವ ಐತಿಹಾಸಿಕ ನಾಯಕನಹಟ್ಟಿ ತಿಪ್ಪೆರುದ್ರಸ್ವಾಮಿ ಜಾತ್ರಾ ಮಹೋತ್ಸವಕ್ಕೆ ದಿನಾಂಕ ನಿಗದಿಯಾಗಿದೆ. ಮಾರ್ಚ್ 09 ರಿಂದ ಜಾತ್ರೆ ಆರಂಭವಾಗಲಿದ್ದು ಮಾರ್ಚ್ 24ರವರೆಗೂ ನಡೆಯಲಿದೆ. ಎರಡು ವಾರ ಅದ್ದೂರಿ ಜಾತ್ರಾ ಮಹೋತ್ಸವ ನಡೆಯಲಿದ್ದು 5 ರಿಂದ 6 ಲಕ್ಷ ಭಕ್ತರು ಜಾತ್ರೆಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ.
ಜಾತ್ರಾ ಮಹೋತ್ಸವದ ಸಿದ್ಧತೆ ಬಗ್ಗೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಭೆ ನಡೆಸಲಾಗಿದ್ದು, ಚಿತ್ರದುರ್ಗ ಜಿಲ್ಲಾಧಿಕಾರಿ ಟಿ. ವೆಂಕಟೇಶ್ ಸಭೆ ಕರೆದು ಅಧಿಕಾರಿಗಳಿಗೆ ಸೂಚನೆಗಳನ್ನು ಕೊಟ್ಟಿದ್ದಾರೆ. ಬಿಸಿಲು ಹೆಚ್ಚಿರುವ ಕಾರಣ ಸೂಕ್ತ ಕುಡಿಯುವ ನೀರಿನ ವ್ಯವಸ್ಥೆ, ಜಾತ್ರೆಯಲ್ಲಿ ನೈರ್ಮಲ್ಯ ಕಾಪಾಡುವುದು ಸೇರಿದಂತೆ ಹಲವು ವಿಚಾರಗಳ ಬಗ್ಗೆ ಚರ್ಚೆ ನಡೆಸಲಾಗಿದೆ.

ಬರುವ ಭಕ್ತಾದಿಗಳಿಗೆ ಕುಡಿಯುವ ನೀರಿಗೆ ಸರಿಯಾದ ವ್ಯವಸ್ಥೆ ಮಾಡಲು ಸೂಚನೆ ಕೊಡಲಾಗಿದೆ. ತುರ್ತು ಪರಿಸ್ಥಿತಿಯಲ್ಲಿ ಪ್ರಾಥಮಿಕ ಆರೋಗ್ಯ ತಪಾಸಣೆ ಕೇಂದ್ರ ಸ್ಥಾಪನೆ ಮಾಡಲುಸೂಚಿಸಲಾಗಿದ್ದು, ಅಗತ್ಯವಿರುವ ಕಡೆಗಳಲ್ಲಿ ಸಿಸಿ ಟಿವಿ ಕ್ಯಾಮೆರಾಗಳಲ್ಲಿ ಅಳವಡಿಸಲು ಸೂಚನೆ ಕೊಡಲಾಗಿದೆ.
ನಾಯಕನಹಟ್ಟಿಯ ಎರಡೂ ಕೆರೆಗಳು ಭರ್ತಿಯಾಗಿದ್ದು ಭಕ್ತರು ಕೆರೆಗಳಿಗೆ ಇಳಿಯದಂತೆ ನಿರ್ಬಂಧ ವಿಧಿಸಲು ಸೂಚಿಸಲಾಗಿದೆ. ಕುಡಿಯುವ ನೀರಿನ ಶುದ್ಧತೆಯನ್ನು ಪರಿಶೀಲನೆ ಮಾಡಲು ಅಧಿಕಾರಿಗಳಿಗೆ ತಿಳಿಸಲಾಗಿದೆ. ರಥೋತ್ಸವ ಸಂದರ್ಭದಲ್ಲಿ ತೇರು ಸಾಗಲು ಯಾವುದೇ ಅಡಚಣೆಯಾಗದಂತೆ ರಸ್ತೆಯನ್ನು ತೆರವುಗೊಳಿಸಲು ಹೇಳಲಾಗಿದೆ. ಪ್ರಾಣಿಬಲಿಯನ್ನು ನಿಷೇಧಿಸಲಾಗಿದ್ದು ಅಗತ್ಯವಿರುವ ಕಡೆಗಳಲ್ಲಿ ಪ್ರಾಣಿ ಬಲಿ ನಿಷೇಧಿಸುವ ಬಗ್ಗೆ ಜಾಗೃತಿ ಮೂಡಿಸಲು ಸೂಚನೆ ಕೊಡಲಾಗಿದೆ.

ನಾಯಕನಹಟ್ಟಿ ಕ್ಷೇತ್ರದ ಬಗ್ಗೆ
ನಾಯಕನಹಟ್ಟಿ ತಿಪ್ಪೇರುದ್ರಸ್ವಾಮಿ ಚಿತ್ರದುರ್ಗ ಮಾತ್ರವಲ್ಲದೆ ಸುತ್ತಮುತ್ತಲಿನ ಜಿಲ್ಲೆಗಳಲ್ಲೂ ಕೂಡ ಪ್ರಸಿದ್ಧಿ ಪಡೆದಿರುವ ದೇವಸ್ಥಾನ. 15ನೇ ಶತಮಾನದಲ್ಲಿ ಇಲ್ಲಿ ದೇವಸ್ಥಾನವನ್ನು ನಿರ್ಮಾಣ ಮಾಡಲಾಗಿದೆ. ಇಲ್ಲಿ ಒಳಮಠ, ಹೊರ ಮಠ ಮತ್ತು ಏಕಾಂತೇಶ್ವರ ಸನ್ನಿಧಿ ಇದ್ದು, ನಾಯಕನಹಟ್ಟಿ ಕ್ಷೇತ್ರದ ಹೃದಯಭಾಗದಲ್ಲಿದೆ. ಆಧ್ಯಾತ್ಮಿಕ ಗುರು ಪಂಚ ಗಣಾಧೀಶ್ವರರಲ್ಲಿ ಒಬ್ಬರಾದ ಗುರುತಿಪ್ಪೇರುದ್ರಸ್ವಾಮಿಗಳ ಕಾಯಕ ಸ್ಥಳ ಇದಾಗಿದೆ.
ಗುರುತಿಪ್ಪೇರುದ್ರಸ್ವಾಮಿ ಆಧ್ಯಾತ್ಮಿಕ ಮತ್ತು ಸಮಾಜ ಸುಧಾರಕರು. ಮಾಡಿದಷ್ಟು ನೀಡು ಭಿಕ್ಷೆ ಎನ್ನುವ ಧ್ಯೇಯವಾಕ್ಯದಿಂದ ಕಾಯಕದ ಮಹತ್ವ ತಿಳಿಸಿದವರು. ತಮ್ಮ ಕಾಲಾವಧಿಯಲ್ಲಿ ನಾಯಕನಹಟ್ಟಿ ಸುತ್ತಮುತ್ತ 5 ಕೆರೆಗಳನ್ನು ಮತ್ತು 5 ಪುರಗಳನ್ನು ನಿರ್ಮಾಣ ಮಾಡಿದ್ದಾರೆ.
ಚಿತ್ರದುರ್ಗ ಜಿಲ್ಲಾಕೇಂದ್ರದಿಂದ ನಾಯಕನಹಟ್ಟಿ ಸುಮಾರು 35 ಕಿ.ಮೀ ದೂರದಲ್ಲಿದೆ. ನಾಯಕನಹಟ್ಟಿ ಜಾತ್ರಾ ಮಹೋತ್ಸವಕ್ಕೆ ಭೇಟಿ ನೀಡುವ ಭಕ್ತರು, ಚಿತ್ರದುರ್ಗ ಕೋಟೆ, ವಾಣಿ ವಿಲಾಸ ಸಾಗರ್ ಅಣೆಕಟ್ಟು, ಹಿಡಿಂಬೇಶ್ವರ ದೇವಸ್ಥಾನ, ಚಂದ್ರವಳ್ಳಿ ಗುಹೆಗಳು ಮತ್ತು ಇನ್ನೂ ಅನೇಕ ಪ್ರವಾಸಿ ತಾಣಗಳಿಗೆ ಭೇಟಿ ನೀಡಬಹುದಾಗಿದೆ.












Click it and Unblock the Notifications