740 ಕೋಟಿ ರೂ ವೆಚ್ಚದಲ್ಲಿ ವಿ.ವಿ.ಸಾಗರ ನೀರಾವರಿ ಯೋಜನೆ ಆಧುನೀಕರಣ-ಸಚಿವ ಡಿ.ಸುಧಾಕರ್
ಚಿತ್ರದುರ್ಗ, ಆಗಸ್ಟ್ 16: ಏಷಿಯನ್ ಅಭಿವೃದ್ಧಿ ಬ್ಯಾಂಕ್ ಮೂಲಕ 740 ಕೋಟಿ ರೂ ವೆಚ್ಚದಲ್ಲಿ ವಾಣಿ ವಿಲಾಸ ಸಾಗರ ಜಲಾಶಯ, ನಾಲೆಗಳ ಆಧುನೀಕರಣ, ಹನಿ ನೀರಾವರಿ ಹಾಗೂ ಅಂತರ್ಜಲ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗುವುದು ಎಂದು ಯೋಜನೆ ಮತ್ತು ಸಾಂಖ್ಯಿಕ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಹೇಳಿದರು.
ಬುಧವಾರ ನಗರದ ಭದ್ರಾ ಮೇಲ್ದಂಡೆ ಯೋಜನೆ ಕಚೇರಿ ಸಭಾಂಗಣದಲ್ಲಿ ಎಷಿಯನ್ ಅಭಿವೃದ್ಧಿ ಬ್ಯಾಂಕ್ ನೆರವಿನಿಂದ ವಾಣಿ ವಿಲಾಸ ಸಾಗರ ನೀರಾವರಿ ಯೋಜನೆ ಆಧುನಿಕರಣ ಹಾಗೂ ನಿರ್ವಹಣೆ ಕುರಿತು ಜರುಗಿದ ಸಭೆಯ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಇದರಿಂದ ಪ್ರಸ್ತುತ 29 ಸಾವಿರ ಎಕರೆ ಪ್ರದೇಶಕ್ಕೆ ದೊರಕುತ್ತಿರುವ ನೀರಾವರಿ ಸೌಲಭ್ಯ 45 ಸಾವಿರ ಎಕರೆ ಪ್ರದೇಶಕ್ಕೆ ಏರಿಕೆಯಾಗಲಿದೆ ಎಂದರು.

ರಾಜ್ಯದ ಅತ್ಯಂತ ಹಳೆಯದಾದ, ವೇದಾವತಿ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿರುವ ಜಿಲ್ಲೆಯ ವಾಣಿವಿಲಾಸ ಸಾಗರ ಜಲಾಶಯವನ್ನು ಕೇಂದ್ರ ಪುರಸ್ಕತ ಸಪೋರ್ಟ್ ಫಾರ್ ಇರಿಗೇಷನ್ ಮಾಡ್ರನೈಜೇಷನ್ ಪ್ರೋಗ್ರಾಮ್ (ಎಸ್‍ಐಎಮ್‍ಪಿ) ಅಡಿ ಕೈಗೊಳ್ಳಲು ರಾಜ್ಯ ಸರ್ಕಾರ ಗುರುತಿಸಿದ್ದು, ಕೇಂದ್ರ ಜಲ ಆಯೋಗವು ಈ ಯೋಜನೆಯನ್ನು ಏಷಿಯನ್ ಡೆವಲಪ್‍ಮೆಂಟ್ ಬ್ಯಾಂಕ್ ಅನುದಾನದಡಿ ನಿರ್ವಹಿಸಲಿದೆ. ಇದರಡಿ 115 ವರ್ಷಗಳಷ್ಟು ಹಳೆಯದಾದ ವಾಣಿವಿಲಾಸ ಸಾಗರ ಅಣೆಕಟ್ಟಿನ ದುರಸ್ಥಿ ಹಾಗೂ ನಾಲಾಗಳ ಆಧುನೀಕರಣ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಕಾಲುವೆ ನೀರಾವರಿ ಬದಲಿಗೆ ಹನಿ ನೀರಾವರಿ ಪದ್ದತಿ ಅಳವಡಿಸಿಕೊಳ್ಳಲಾಗುವುದು. ಯೋಜನೆಗೆ ಏಷಿಯನ್ ಅಭಿವೃದ್ಧಿ ಬ್ಯಾಂಕ್ ಸಕಾರಾತ್ಮವಾಗಿ ಸ್ಪಂದಿಸಿದೆ. 129 ಕಿ.ಮೀ. ಉದ್ದದ ಕಾಲುವೆಗಳ ಆಧುನೀಕರಣಗೊಳಿಸುವುದರ ಜೊತೆಗೆ, ಜಲಾನಯನ ಅಚ್ಚುಕಟ್ಟು ಪ್ರದೇಶದಲ್ಲಿ 600ಕ್ಕೂ ಹೆಚ್ಚು ಅಂರ್ತಜಲ ಮರುಪೂರಣ ಬಾವಿಗಳು ಹಾಗೂ 7 ಬ್ಯಾರೇಜ್‍ಗಳನ್ನು ಅಭಿವೃದ್ಧಿಗೊಳಿಸಲಾಗುವುದು ಎಂದರು.
ಹಿರಿಯೂರು ಪಟ್ಟಣದಲ್ಲಿ ಹಾದು ಹೋಗಿರುವ 3.ಕಿ.ಮೀ ತೆರದ ನಾಲಾವ್ಯವಸ್ಥೆಯನ್ನು, ಮುಚ್ಚಿದ ನಾಲಾ ವ್ಯವಸ್ಥೆಯಾಗಿ ಬದಲಾಯಿಸಲಾಗುವುದು. ಇದರೊಂದಿಗೆ ಹೆಚ್ಚಿನ ಜನವಸತಿ ಇರುವ ಗ್ರಾಮಾಂತರ ಪ್ರದೇಶಗಳಲ್ಲಿ ಮುಚ್ಚಿದ ನಾಲಾ ವ್ಯವಸ್ಥೆ ನಿರ್ಮಿಸಲಾಗುವುದು. ಜಲಾಶಯದಿಂದ ಹೊರಹೋಗುವ ನದಿ ಪಾತ್ರದಲ್ಲಿ ಅತಿವೃಷ್ಟಿಯಿಂದ ನೀರು ನಗರಕ್ಕೆ ನುಗ್ಗಿ ಅವಾಂತರ ಉಂಟಾಗಿತ್ತು. ಇದರೊಂದಿಗೆ ನದಿಯಲ್ಲಿ ನೀರು ಪೋಲಾಗದಂತೆ ತಡೆಯಲು ತಡೆಗೋಡೆ ನಿರ್ಮಿಸಲಾಗುವುದು ಎಂದು ಹೇಳಿದರು.
ವಾಣಿ ವಿಲಾಸ ಸಾಗರ ಅಣೆಕಟ್ಟಿನ ಮುಂಭಾಗದಲ್ಲಿನ 9 ಎಕರೆ ಜಾಗದಲ್ಲಿ ಕೆ.ಆರ್.ಎಸ್ ಮಾದರಿಯಲ್ಲಿ ಉದ್ಯಾನವನ ನಿರ್ಮಿಸಿ, ಸೌಂದರ್ಯಕರಣ ಮಾಡಲಾಗುವುದು. ಮಹಾರಾಣಿ ಕೆಂಪ ನಂಜಮ್ಮಣ್ಣಿ ವಾಣಿವಿಲಾಸ ಸನ್ನಿಧಾನ ಹಾಗೂ ಜಯಚಾಮರಾಜೇಂದ್ರ ಒಡೆಯರ್ ಅವರ ಪ್ರತಿಮೆಗಳನ್ನು ನಿರ್ಮಿಸಲಾಗುವುದು. ಜಲಾಶಯದ ಹಿನ್ನೀರಿನಲ್ಲಿ ಜಲಕ್ರೀಡೆ ಅಭಿವೃದ್ಧಿಗೊಳಿಸಲು ಕೂಡ ಚಿಂತಿಸಲಾಗಿದೆ ಎಂದರು.












Click it and Unblock the Notifications