ಹಿರಿಯೂರಿನ ಸರ್ಕಾರಿ ಆಸ್ಪತ್ರೆಯಲ್ಲಿ ರಾತ್ರಿ ಪಾಳಿ ವೈದ್ಯರ ಬದಲಿಗೆ ವೈದ್ಯ ವಿದ್ಯಾರ್ಥಿನಿಯಿಂದ ಚಿಕಿತ್ಸೆ
ಚಿತ್ರದುರ್ಗ, ನವೆಂಬರ್ 11: ಚಿತ್ರದುರ್ಗ ಜಿಲ್ಲೆ ಹಿರಿಯೂರು ನಗರದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ರಾತ್ರಿ ಕರ್ತವ್ಯ ಮಾಡಬೇಕಿದ್ದ ವೈದ್ಯರ ಬದಲಿಗೆ ವೈದ್ಯ ವಿದ್ಯಾರ್ಥಿನಿಯೊಬ್ಬರು (ಆಯುರ್ವೇದಿಕ್ ಮೆಡಿಸಿನ್) ರೋಗಿಗಳಿಗೆ ಚಿಕಿತ್ಸೆ ನೀಡುತ್ತಿರುವುದು ವೈರಲ್ ಆಗಿದ್ದು, ಸಾರ್ವಜನಿಕರಿಂದ ತೀವ್ರ ಟೀಕೆಗೆ ಒಳಗಾಗಿದೆ.
ಹಿರಿಯೂರು ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ರಾತ್ರಿ ಪಾಳಿಯ ವೈದ್ಯರ ಬದಲಿಗೆ ಬಿಎಎಂಎಸ್ ಮಾಡಿಕೊಂಡಿರುವ ತರಬೇತಿ ವೈದ್ಯ ವಿದ್ಯಾರ್ಥಿನಿ ಮೇಲಧಿಕಾರಿಗಳ ಅನುಮತಿ ಪಡೆಯದೆ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿರುವ ಬಗ್ಗೆ ರಾತ್ರಿ 11 ಗಂಟೆಯ ಸಮಯದಲ್ಲಿ ಮಾಹಿತಿ ಪಡೆದ ಮಾಧ್ಯಮದವರು ಆಸ್ಪತ್ರೆಗೆ ಭೇಟಿ ನೀಡುತ್ತಿದ್ದಂತೆ ತರಬೇತಿ ವೈದ್ಯೆ ಆಸ್ಪತ್ರೆಯಿಂದ ಕಾಲ್ಕಿತ್ತಿದ್ದಾರೆ.
"ಬುಧವಾರ ಸಂಜೆ 8 ಗಂಟೆ ಸಮಯದಲ್ಲಿ ನನ್ನ ಮಗಳಿಗೆ ಎದೆ ನೋವು ಕಾಣಿಸಿಕೊಂಡಿತು. ಸಂಬಂಧಿಕರ ನೆರವಿನಿಂದ ಆಸ್ಪತ್ರೆಗೆ ಕರೆತಂದೆ. ಕರ್ತವ್ಯದಲ್ಲಿದ್ದ ಮಹಿಳಾ ವೈದ್ಯರು, ನಾನೇ ವೈದ್ಯೆ, ರೋಗಿಯನ್ನು ನೋಡುತ್ತೇನೆ, ನೀವು ಹೊರಗೆ ಇರಿ ಎಂದು ಚಿಕಿತ್ಸೆ ನೀಡಲು ಮುಂದಾದರು. ಅವರ ವರ್ತನೆ ಬಗ್ಗೆ ನಮಗೆ ಸಂಶಯ ಬಂದಿತು. ಬೇರೆ ಕಡೆ ಕರೆದುಕೊಂಡು ಹೋಗಲು ಪರಿಚಯದವರ ಬಳಿ ಚರ್ಚೆ ನಡೆಸಿದ್ದೆವು. ಅಷ್ಟರಲ್ಲಿ ಕರ್ತವ್ಯದಲ್ಲಿದ್ದ ವೈದ್ಯರು ಬಂದರು,'' ಎಂದು ಆಲೂರಿನ ರಂಗಸ್ವಾಮಿ ಎಂಬುವವರು ಸುದ್ದಿಗಾರರಿಗೆ ತಿಳಿಸಿದರು.
ಹಿರಿಯೂರಿನ ಅಬ್ದುಲ್ ಕುದ್ದೂಸ್ (ಬಾಬು) ಎಂಬುವವರು ಮಾತನಾಡಿ, "ನಮ್ಮ ಮನೆಯವರಿಗೆ (ಹೆಂಡತಿ) ತುಂಬ ಸುಸ್ತು ಕಾಣಿಸಿಕೊಂಡಿದ್ದರಿಂದ ಆಸ್ಪತ್ರೆಗೆ ಕರೆತಂದೆ. ಡಾಕ್ಟರ್ ಇರಲಿಲ್ಲ. ಕೋಣೆಯಲ್ಲಿದ್ದ ಮಹಿಳೆಯೊಬ್ಬರು ಚಿಕಿತ್ಸೆ ನೀಡಿದರು. 'ನೀವು ಡಾಕ್ಟರಾ ಎಂದು ಕೇಳಿದ್ದಕ್ಕೆ, ಅಲ್ಲ ಎಂದರು'. ಇದೇನಪ್ಪ ಯಾರ್ಯಾರೋ ರೋಗಿಗಳನ್ನು ನೋಡುತ್ತಾರಲ್ಲ ಎಂದು ಗಾಬರಿಯಾಯ್ತು,'' ಎಂದು ಹೇಳಿದರು.
ಇನ್ನು ಯಲ್ಲದಕೆರೆ ಗ್ರಾಮದಿಂದ ಉಬ್ಬಸ ಇರುವ ತನ್ನ ತಂದೆಯನ್ನು ಆಸ್ಪತ್ರೆಗೆ ಕರೆತಂದಿದ್ದ ಮಂಜುನಾಥ್ ಎಂಬುವವರು, "ರೋಗಿಯನ್ನು ಕರೆತಂದು ಸುಮಾರು ಅರ್ಧಗಂಟೆಯಾದರೂ ವೈದ್ಯರು ಪರೀಕ್ಷಿಸಲಿಲ್ಲ. ಉಸಿರಾಟದ ತೊಂದರೆ ಇದೆ, ಬೇಗ ನೋಡಿ ಎಂದು ಮನವಿ ಮಾಡಿಕೊಂಡೆ. ಆಕ್ಸಿಜನ್ ಕೊರತೆ ಇದೆ ಎಂದು ಬೇರೊಬ್ಬರಿಗೆ ಹಾಕಿದ್ದನ್ನು ಕಿತ್ತು ನಮ್ಮ ತಂದೆಗೆ ಹಾಕಿದರು,'' ಎಂದು ತಿಳಿಸಿದರು.

"ಮತ್ತೊಂದು ಕಡೆ ಹಿರಿಯೂರು ತಾಲ್ಲೂಕಿನ ಐಮಂಗಲದಿಂದ ಜಾಂಡೀಸ್ ಇರುವ ಯುವಕನಿಗೆ ಚಿಕಿತ್ಸೆ ಕೊಡಿಸಲು ಆಸ್ಪತ್ರೆಗೆ ಕರೆತಂದಿದ್ದು, ಗ್ಲುಕೋಸ್ ಹಾಕಿದ್ದಾರೆ. ನಂತರ ಆತನಿಗೆ ಲೀವರ್ ಡ್ಯಾಮೇಜ್ ಆಗಿದೆ ಬೇರೆ ಕಡೆ ಕರೆದುಕೊಂಡು ಹೋಗಿ ಅಂತಾ ಹೇಳಿದರು," ಎಂದು ರೋಗಿಯ ಸಂಬಂಧಿಕರು ಹೇಳಿದ್ದಾರೆ.
ಮಾಧ್ಯಮದವರು ಆಸ್ಪತ್ರೆಗೆ ಬಂದಿರುವ ವಿಷಯ ತಿಳಿಯುತ್ತಿದ್ದಂತೆಯೆ ಕರ್ತವ್ಯದಲ್ಲಿರಬೇಕಿದ್ದ ವೈದ್ಯರು ಬಂದು ತರಾತುರಿಯಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡಿದ್ದಾರೆ. ಕೆಲವು ತಿಂಗಳ ಹಿಂದೆ ಹಿರಿಯೂರು ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಮಧ್ಯರಾತ್ರಿಯಲ್ಲಿ ಆಸ್ಪತ್ರೆಗೆ ಆಕಸ್ಮಿಕ ಭೇಟಿ ನೀಡಿದ್ದ ಸಂದರ್ಭದಲ್ಲಿ ರಾತ್ರಿ ಪಾಳಿಯ ವೈದ್ಯರು ಕರ್ತವ್ಯದಲ್ಲಿ ಇಲ್ಲದ್ದನ್ನು ಕಂಡು ಕಾನೂನು ಕ್ರಮದ ಎಚ್ಚರಿಕೆ ನೀಡಿದ್ದರು. ಆದರೂ ವೈದ್ಯರು ನಿರ್ಲಕ್ಷ್ಯ ತೋರಿದ್ದಾರೆ.
ಪರಿಶೀಲಿಸುವ ಭರವಸೆ
"ಬುಧವಾರ ರಾತ್ರಿ ಘಟನೆ ಬಗ್ಗೆ ಪೂರ್ಣ ಮಾಹಿತಿ ಪಡೆಯುತ್ತೇನೆ. ಚಿಕಿತ್ಸೆ ನೀಡುತ್ತಿದ್ದ ವೈದ್ಯೆ ಕಲಿಯಲು ಬಂದಿದ್ದರು. ತಾನು ಆಸ್ಪತ್ರೆಯಲ್ಲಿಯೇ ಇದ್ದೆ, ಎಂದು ಕರ್ತವ್ಯದಲ್ಲಿದ್ದ ಡಾ. ಶ್ರೀಧರ್ ತಿಳಿಸಿದ್ದಾರೆ. ಕಲಿಯಲು ಬರುವುದಕ್ಕೆ ಅನುಮತಿ ಬೇಕಲ್ಲವೇ? ಯಾರು ಬೇಕಾದರೂ ಬಂದು ಚಿಕಿತ್ಸೆ ನೀಡಬಹುದೇ? ಎಂದು ಪ್ರಶ್ನೆ ಮಾಡಿದ್ದೇನೆ. ವೈದ್ಯರು ತಪ್ಪು ಮಾಡಿದ್ದು ಖಚಿತವಾದರೆ ಕಾನೂನು ಕ್ರಮ ಜರುಗಿಸಲಾಗುವುದು,'' ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ರಂಗನಾಥ್ ತಿಳಿಸಿದರು.
ಇನ್ನು ಸರ್ಕಾರಿ ಆಸ್ಪತ್ರೆಗಳಿಗೆ ಬರುವವರು ಬಹುತೇಕ ಬಡವರು. ತಮ್ಮ ಕಲಿಕೆಗೆ ಬಡವರನ್ನು ಬಲಿಕೊಡಬೇಕೆ? ಚಿಕಿತ್ಸೆಯಲ್ಲಿ ವ್ಯತ್ಯಾಸವಾಗಿ ಪ್ರಾಣ ಹೋಗುವಂತಹ ಸನ್ನಿವೇಶ ನಿರ್ಮಾಣವಾದಲ್ಲಿ ಯಾರು ಹೊಣೆ? ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ.