ಹೋರಿ ಕದ್ದವನಿಗೆ ಊರೆಲ್ಲಾ ‘ಕತ್ತೆ ಮೇಲೆ ಬೆತ್ತಲೆ ಮೆರವಣಿಗೆ’
ಚಿತ್ರದುರ್ಗ, ಆಗಸ್ಟ್ 21: ಹಳ್ಳಿಯಲ್ಲಿ ಹೋರಿ ಕದ್ದಿದ್ದಕ್ಕೆ ವ್ಯಕ್ತಿಯನ್ನು ಬೆತ್ತಲೆಗೊಳಿಸಿ ಕತ್ತೆ ಮೇಲೆ ಕುರಿಸಿ ಮೆರವಣಿಗೆ ಮಾಡಿರುವ ಘಟನೆ ಚಿತ್ರದುರ್ಗ ಜಿಲ್ಲೆಯಲ್ಲಿ ನಡೆದಿದೆ.
Recommended Video
ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಸೂರಪ್ಪನಹಟ್ಟಿ ಪಕ್ಕದ ಸರಸ್ವತಿ ಹಟ್ಟಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಸಿಕ್ಕಿಬಿದ್ದ ಹೋರಿ ಕಳ್ಳ ಬಡಗೊಲ್ಲರಹಟ್ಟಿಯ ಈಶ್ವರ್ ಎಂದು ತಿಳಿದುಬಂದಿದೆ.
ಈತನನ್ನು ಸರಸ್ವತಿ ಹಟ್ಟಿ ಗ್ರಾಮಸ್ಥರು ಕೈಕಾಲು ಕಟ್ಟಿ ಥಳಿಸಿದ್ದಾರೆ. ಇದು ಸಾಲದೇ ಕಳ್ಳನನ್ನು ಬಟ್ಟೆ ಬಿಚ್ಚಿ ಅರೆಬೆತ್ತಲೆ ಮಾಡಿ ಕತ್ತೆ ಮೇಲೆ ಕೂರಿಸಿ, ಆತನಿಗೆ ಕೆಂಪು ಬಣ್ಣದ ಕುಂಕುಮ ಹಚ್ಚಿ ಊರಲ್ಲಿ ಮೆರವಣಿಗೆ ಮಾಡಿದ್ದಾರೆ.

ಗ್ರಾಮದ ಸೀಗಜ್ಜಿ ಮತ್ತು ಬಾಲಣ್ಣ ಎಂಬುವವರ ಹೋರಿಗಳನ್ನು ಕದ್ದು ಬೇರೆ ಕಡೆಗೆ ಸಾಗಿಸುವ ವೇಳೆ ಆರೋಪಿ ಈಶ್ವರ್ ಸಿಕ್ಕಿ ಬಿದ್ದಿದ್ದಾನೆ. ಆತನಿಗೆ ಅರೆಬೆತ್ತಲೆಗೊಳಿಸಿ ಕತ್ತೆ ಮೆರವಣಿಗೆ ಮಾಡಿ ತಕ್ಕ ಪಾಠ ಕಲಿಸಿದ್ದೇವೆ ಎನ್ನುತ್ತಾರೆ ಗ್ರಾಮಸ್ಥರು.

ಇನ್ನು ಈ ಘಟನೆಯು ಹಿರಿಯೂರು ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ವಿಷಯ ತಿಳಿದ ತಕ್ಷಣ ತಾಲೂಕು ಆಡಳಿತ ಅಧಿಕಾರಿಗಳು, ಪೊಲೀಸರು ಭೇಟಿ ನೀಡಿದ್ದಾರೆ ಎಂದು ತಿಳಿದು ಬಂದಿದೆ.












Click it and Unblock the Notifications