ಮುರುಘಾ ಶ್ರೀ ವಿರುದ್ಧ ದೌರ್ಜನ್ಯ ಪ್ರಕರಣ: ನಾವು ತೀರ್ಪು ನೀಡುವಷ್ಟು ದೊಡ್ಡವರಲ್ಲ ಎಂದ ಮಾದಾರ ಚೆನ್ನಯ್ಯ ಶ್ರೀ
ಚಿತ್ರದುರ್ಗ, ಆಗಸ್ಟ್, 30: ಮುರುಘಾ ಶ್ರೀ ವಿರುದ್ದ ಫೋಕ್ಸೊ ಕೇಸ್ ಪ್ರಕರಣ ದಾಖಲಾಗಿದೆ. ಮುರುಘಾ ಮಠಕ್ಕೆ ಮಾದಾರ ಚೆನ್ನಯ್ಯ ಶ್ರೀಗಳು ಭೇಟಿ ನೀಡಿದ್ದರು. ನಂತರ ಮಾತನಾಡಿದ ಅವರು "ಪ್ರತಿನಿತ್ಯದಂತೆ ಸ್ವಾಮೀಜಿ ಅವರನ್ನು ಮಾತನಾಡಿಸಲು ಬಂದಿದ್ದೆ" ಎಂದರು.
"ಈ ಮುರುಘಾ ಮಠ ದೊಡ್ಡ ಪರಂಪರೆಯ ಮಠವಾಗಿದೆ. ಶೂನ್ಯ ಪೀಠಕ್ಕೆ ಒಂದು ಪ್ರಸಿದ್ದ ಪರಂಪರೆ ಇದೆ. ಮುರುಘಾ ಮಠದ ಜೊತೆಗೆ ನಾವು ಬದ್ದವಾಗಿ ಇರುತ್ತೇವೆ. ಮಠಕ್ಕೆ ಒಂದು ಬಹುದೊಡ್ಡ ಭಕ್ತ ಸಮೂಹ, ಆಡಳಿತ ಮಂಡಳಿ ಇದೆ. ಹಾಗಾಗಿ ಸ್ವಾಮೀಜಿ ಅವರ ಪೀಠ ತ್ಯಾಗದ ವಿಚಾರ ಅವರಿಗೆ ಬಿಟ್ಟಿದ್ದು" ಎಂದು ಸ್ಪಷ್ಟಪಡಿಸಿದರು.
"ಸದ್ಯ ಈಗ ಪ್ರಕರಣ ತನಿಖೆ ಹಂತದಲ್ಲಿದೆ. ಹಾಗಾಗಿ ಅದರ ಬಗ್ಗೆ ಹೆಚ್ಚಾಗಿ ಯಾರೂ ಮಾತನಾಡಬಾರದು. ಸತ್ಯಾಸತ್ಯತೆ ತಿಳಿಯಲು ಕಾನೂನು ಪ್ರಕ್ರಿಯೆ ಮುಗಿಯಬೇಕು. ಬೇರೆ ತೀರ್ಮಾನಗಳ ಬಗ್ಗೆ ಲಿಂಗಾಯತ ಸಮಾಜದ ಅನೇಕ ಧುರೀಣರು ತೀರ್ಮಾನ ಕೈಗೊಳ್ಳುತ್ತಾರೆ" ಎಂದು ಹೇಳಿದರು.

"ನಾವು ಮುರುಘಾ ಶ್ರೀಗಳ ಶಿಷ್ಯರು ಆಗಿರುವುದರಿಂದ ಬಹುದೊಡ್ಡ ತೀರ್ಮಾನದ ಬಗ್ಗೆ ಮಾತನಾಡಲು ಆಗುವುದಿಲ್ಲ. ಇದೊಂದು ಬಹುದೊಡ್ಡ ಇತಿಹಾಸ ಇರುವ ಪರಂಪರೆಯ ಮಠ. ರಾಜಕಾರಣಿಗಳು ಮಾತನಾಡಿದಂತೆ ನಾವು ಮಾತನಾಡುವುದು ಕಷ್ಟವಾಗುತ್ತದೆ. ಶ್ರಿಮಠ ಹಾಗೂ ಪರಂಪರೆ ಉಳಿಸಿಕೊಂಡು ಹೋಗುವುದು ನಮ್ಮ ಕರ್ತವ್ಯವಾಗಿದೆ. ನಾವು ಕೂಡ ಮಠದಲ್ಲಿಯೇ ಬೆಳದಿರುವ ಕಾರಣದಿಂದ ಮಠದ ಜೊತೆಗೆ ಇದ್ದೇವೆ" ಎಂದರು.

ಶ್ರೀಗಳು ಸೋಮವಾರ ಅಜ್ಞಾತ ಸ್ಥಳಕ್ಕೆ ತೆರಳಿದ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಅವರು, "ಅದರ ಬಗ್ಗೆ ಮಾಹಿತಿ ಇಲ್ಲ. ನಾವು ಇನ್ನು ಚಿಕ್ಕವರು. ಮುರುಘಾ ಮಠಕ್ಕೆ ಕಳೆದ 15ವರ್ಷಗಳಿಂದ ಷಡ್ಯಂತ್ರ ಇರಬಹುದು. ಅದರ ಬಗ್ಗೆ ಶ್ರೀಗಳು ನಮ್ಮ ಬಳಿ ಯಾವತ್ತೂ ಬಹಿರಂಗವಾಗಿ ಹೇಳಿಕೊಂಡಿಲ್ಲ. ಕಾನೂನು ಪ್ರಕ್ರಿಯೆ ಇದೆ, ಇದರ ಬಗ್ಗೆ ನಾವು ತೀರ್ಪು ಕೊಡುವುದು ಸರಿಯಲ್ಲ" ಎಂದು ಮಾದಾರ ಚೆನ್ನಯ್ಯ ಶ್ರೀಗಳು ತಿಳಿಸಿದರು.












Click it and Unblock the Notifications