Chitradurga: ಶೀಘ್ರವೇ ಬೆಳೆ ಸಮೀಕ್ಷೆ ನಡೆಸಿ: ಕಂದಾಯ ಗ್ರಾಮವೆಂದು ಘೋಷಿಸದ ಅಧಿಕಾರಿಗಳಿಗೆ ಸಚಿವರ ತರಾಟೆ
ಚಿತ್ರದುರ್ಗ, ಅಕ್ಟೋಬರ್ 11: ಚಿತ್ರದುರ್ಗ ವ್ಯಾಪ್ತಿಗೆ ಬರುವ 06 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದೆ. ಹೀಗಾಗಿ ಅಧಿಕಾರಿಗಳು ಮುಂದಿನ ಒಂದು ವಾರದಲ್ಲಿ ಬೆಳೆ ಸಮೀಕ್ಷೆ ನಡೆಸಿ ಸಂಪೂರ್ಣ ಮಾಹಿತಿ 'ಫ್ರೂಟ್ಸ್ ತಂತ್ರಾಂಶ' ದಲ್ಲಿ ಅಪ್ಲೋಡ್ ಮಾಡಿದರೆ ಮಾತ್ರವೇ ರೈತರಿಗೆ ಬೆಳೆ ನಷ್ಟ ಒದಗಿಸಲು ಸಾಧ್ಯವಾಗುತ್ತದೆ. ಈ ಸಂಬಂಧ ಅಧಿಕಾರಿಗಳು ಕಾರ್ಯಪ್ರವೃತ್ತರಾಗುವಂತೆ ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.
ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಮಂಗಳವಾರ ನಡೆದ ಕಂದಾಯ ಇಲಾಖೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯದ 195 ತಾಲೂಕುಗಳನ್ನು ಬರಪೀಡಿತ ಎಂದು ಸರ್ಕಾರ ಘೋಷಣೆ ಮಾಡಿದೆ. ಪರಿಹಾರಕ್ಕಾಗಿ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದೇವೆ. ಕೇಂದ್ರದ ತಂಡ ಪರಿಶೀಲಿಸಿದೆ.

ಸದ್ಯ ಆಯಾ ಜಿಲ್ಲೆಗಳ ವ್ಯಾಪ್ತಿಯಲ್ಲಿ ತಹಶೀಲ್ದಾರ್, ಗ್ರಾಮ ಲೆಕ್ಕಿಗರು ಹಾಗೂ ಕೃಷಿ ಇಲಾಖೆ ಅಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿ ಪ್ರತಿ ರೈತನ ಬೆಳೆ ಸಮೀಕ್ಷೆ ನಡೆಸಿ ಫ್ರೂಟ್ಸ್ ತಂತ್ರಾಂಶದಲ್ಲಿ ದಾಖಲಿಸಬೇಕು. ಇದರಿಂದ ಪರಿಹಾರ ನೀಡಲು ಅನುವಾಗಲಿದೆ. ಆದ್ದರಿಂದ ಅಧಿಕಾರಿಗಳು ತ್ವರಿತ ಗತಿಯಲ್ಲಿ ಬೆಳೆ ಸಮೀಕ್ಷೆ ನಡೆಸಿ ಎಂದು ಅವರು ಸೂಚಿಸಿದರು.
ಅಲ್ಲದೆ, "ಬೆಳೆ ನಷ್ಟಕ್ಕೆ ರೈತರಿಗೆ 5 ಎಕರೆ ವರೆಗೆ ಪರಿಹಾರ ಸಿಗಲಿದೆ. ಒಮ್ಮೆ ಬೆಳೆ ಸಮೀಕ್ಷೆ ಮುಗಿಸಿದ ನಂತರ ಬಿಟ್ಟುಹೋದ ರೈತರ ಹೆಸರನ್ನು ಮತ್ತೆ ಪರಿಹಾರದ ಪಟ್ಟಿಗೆ ಸೇರಿಸುವುದು ಅಸಾಧ್ಯ. ಅಲ್ಲದೆ, ನಗದಿನ ಮೂಲಕವೂ ಪರಿಹಾರ ನೀಡಿಕೆಗೆ ಅವಕಾಶ ಇಲ್ಲ. ಪರಿಹಾರದ ಹಣ ಬ್ಯಾಂಕ್ ಖಾತೆಗೆ ಸಂದಾಯವಾಗಲಿ. ಹೀಗಾಗಿ ಅಧಿಕಾರಿಗಳು ಈಗಲೇ ಬೆಳೆ ಸಮೀಕ್ಷೆಯನ್ನು ಶೇ.100 ರಷ್ಟು ದಕ್ಷತೆಯಿಂದ ಮುಗಿಸಬೇಕು. ಬೆಳೆ ಸಮೀಕ್ಷೆಯಿಂದ ಮಾತ್ರ ರೈತರಿಗೆ ಪರಿಹಾರ ನೀಡಲು ಸಾಧ್ಯ" ಎಂದು ಸಚಿವ ಕೃಷ್ಣ ಬೈರೇಗೌಡ ಅವರು ತಾಕೀಕು ಮಾಡಿದರು.
ಕಂದಾಯ ಗ್ರಾಮವೆಂದು ಘೋಷಿಸಲು ತಾಕೀತು
ಕಂದಾಯ ಇಲಾಖೆಗೆ ಸೇರದ ಕಾರಣ ಕಂದಾಯೇತರ ಜನವಸತಿ ನಿವಾಸಿಗಳು ಅಭಿವೃದ್ಧಿ ಯೋಜನೆಗಳಿಂದ ವಂಚಿತರಾಗುತ್ತಿದ್ದಾರೆ. ಹೀಗಾಗಿ ಕರ್ನಾಟಕ ಭೂ ಕಂದಾಯ ಕಾಯಿದೆಗೆ ತಿದ್ದುಪಡಿ ತಂದು ತಾಂಡ-ಗೊಲ್ಲರಹಟ್ಟಿ ಸೇರಿದಂತೆ ಪ್ರದೇಶಗಳನ್ನು ಕಂದಾಯ ಗ್ರಾಮ ಎಂದು ಘೋಷಿಸಲು ಅನುವುಮಾಡಿಕೊಡಲಾಗಿತ್ತು.
ಹೀಗಿದ್ದರೂ ಸಹ ಚಿತ್ರದುರ್ಗದಲ್ಲಿ 263 ಕಂದಾಯೇತರ ಜನವಸತಿ ಪ್ರದೇಶಗಳ ಪೈಕಿ 151 ಪ್ರದೇಶಗಳನ್ನು ಕಂದಾಯ ಗ್ರಾಮಗಳು ಎಂದು ಪ್ರಾಥಮಿಕ ಅಧಿಸೂಚನೆ ಹೊರಡಿಸಲಾಗಿದೆ. ಆದರೆ ಉಳಿದ ಗ್ರಾಮಗಳಿಗೆ ಏಕೆ ಅಧಿಸೂಚನೆ ಹೊರಡಿಸಿಲ್ಲ?. ಹಲವು ಕಡೆಗಳಲ್ಲಿ ಕಂದಾಯ ಗ್ರಾಮವೇ ಘೋಷಿಸದೆ ಹೇಗೆ ಹಕ್ಕು ಪತ್ರ ನೀಡಿದಿರಿ? ಎಂದು ಸಚಿವರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಶೀಘ್ರದಲ್ಲೇ ಅರ್ಹ ಕಂದಾಯೇತರ ಜನವಸತಿ ಪ್ರದೇಶಗಳನ್ನು ಗುರುತಿಸಿ ಕಂದಾಯ ಗ್ರಾಮ ಎಂದು ಘೋಷಿಸಿ, ಅಧಿಸೂಚನೆ ಹೊರಡಿಸಿ. ಬಡವರಿಗೆ ನ್ಯಾಯ ಕೊಡಿ ಎಂದರು.
PTCL ಕಾಯ್ದೆ ಕುರಿತು ಅರಿವಿರಲಿ
ಬಹುನಿರೀಕ್ಷಿತ ಪಿಟಿಸಿಎಲ್ ಕಾಯ್ದೆಗೆ ಸಂಬಂಧಿಸಿದಂತೆ ಸರ್ಕಾರ ತಿದ್ದುಪಡಿ ವಿಧೇಯಕ ಮಂಡಿಸಿ ಅಂಗೀಕಾರ ಪಡೆದಿದೆ. ಹೀಗಾಗಿ ಪಿಟಿಸಿಎಲ್ ಕಾಯ್ದೆಯ ಅಡಿಯಲ್ಲಿ ಮಂಜೂರಾದ ಭೂಮಿಯನ್ನು ಸರ್ಕಾರದ ಅನುಮತಿ ಇಲ್ಲದೆ ಮಾರಾಟ ಮಾಡುವಂತಿಲ್ಲ.

ಈ ಬಗ್ಗೆ ಮಾಹಿತಿ ಇಲ್ಲದ ಕೆಲವು ಅಮಾಯಕರು ಭೂ ಮಾರಾಟಕ್ಕೆ ಮುಂದಾಗಬಹುದು. ಅಥವಾ ಪಿಟಿಸಿಎಲ್ ಭೂಮಿಯನ್ನು ಖರೀದಿ ಮಾಡುವವರೂ ಸಹ ಮೋಸಕ್ಕೊಳಗಾಗುವ ಸಾಧ್ಯತೆ ಇದೆ. ಹೀಗಾಗಿ ಇಂತಹ ಪ್ರಕರಣದ ಬಗ್ಗೆ ಅಧಿಕಾರಿಗಳು ಎಚ್ಚರಿಕೆವಹಿಸಬೇಕು ಎಂದರು.
ಕೋರ್ಟ್ ಪ್ರಕರಣಗಳ ಬಗ್ಗೆ ಅಸಡ್ಡೆ ಬೇಡ
ಕಂದಾಯ ಇಲಾಖೆಗೆ ಸಂಬಂಧಿಸಿದಂತೆ ಹೈಕೋರ್ಟ್ ನಲ್ಲಿ 20,000 ಪ್ರಕರಣಗಳು ಬಾಕಿ ಇವೆ. ಆದರೆ, ಈ ಪೈಕಿ 15,000 ಪ್ರಕರಣಗಳಲ್ಲಿ ತೆಗೆದುಕೊಂಡಿರುವ ಕ್ರಮ ಶೂನ್ಯ. ಅಲ್ಲದೆ, ನ್ಯಾಯಾಲಯದಲ್ಲಿ ವಕಾಲತ್ತನ್ನೂ ಸಹ ಸಲ್ಲಿಸುವ ಕೆಲಸವನ್ನು ಅಧಿಕಾರಿಗಳು ಮಾಡಿಲ್ಲ ಏಕೆ?. ಹೀಗಾಗಿ ನ್ಯಾಯಾಲಯ ಇಲಾಖೆಯನ್ನು ತರಾಟೆಗೆ ತೆಗೆದುಕೊಳ್ಳುತ್ತಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.
ಚಿತ್ರದುರ್ಗದಲ್ಲೂ ಸಹ ಹೈಕೋರ್ಟ್ ನಲ್ಲಿರುವ 359 ಪ್ರಕರಣಗಳ ಪೈಕಿ ಇದ್ದು, 302 ಪ್ರಕರಣಗಳಲ್ಲಿ ತಹಶೀಲ್ದಾರರು ಹಾಗೂ ಉಪವಿಭಾಗಾಧಿಕಾರಿ ತೆಗೆದುಕೊಂಡಿರುವ ಕ್ರಮ ಶೂನ್ಯ ಎಂದು ಚಾಟಿ ಬೀಸಿದರು. ಈ ಸಮಸ್ಯೆಯನ್ನು ಶೀಘ್ರ ಪಡಿಹರಿಸಿ ಪ್ರತಿ 15 ದಿನಗಳಿಗೊಮ್ಮೆ ಜಿಲ್ಲಾಧಿಕಾರಿಗಳಿಗೆ ವರದಿ ನೀಡುವಂತೆ ಅವರು ಸೂಚಿಸಿದರು.
ತಕರಾರು ಅರ್ಜಿ ತ್ವರಿತ ವಿಲೇವಾರಿಗೆ ನಿರ್ದೇಶನ
ಚಿತ್ರದುರ್ಗ ಜಿಲ್ಲೆಯಾದ್ಯಂತ ತಹಶೀಲ್ದಾರ್ ಹಾಗೂ ಎಸಿ-ಡಿಸಿ ನ್ಯಾಯಾಲಯಗಳಲ್ಲಿ ಬಾಕಿ ಉಳಿದಿರುವ ತಕರಾರು ಪ್ರಕರಣಗಳ ಬಗ್ಗೆಯೂ ಸಭೆಯಲ್ಲಿ ಚರ್ಚಿಸಿದ ಸಚಿವ ಕೃಷ್ಣ ಬೈರೇಗೌಡ ಅವರು, ಚಿತ್ರದುರ್ಗ ಜಿಲ್ಲೆಗೆ ಸಂಬಂಧಿಸಿದಂತೆ ತಹಶೀಲ್ದಾರ್ ನ್ಯಾಯಾಲಯಗಳಲ್ಲಿ ಬಾಕಿ ಇರುವ ಅರ್ಜಿಗಳನ್ನು ಅಧಿಕಾರಿಗಳು ತ್ವರಿತವಾಗಿ ವಿಲೇವಾರಿ ಮಾಡಿರುವುದು ನಿಜ್ಕಕ್ಕೂ ಶ್ಲಾಘನೀಯ ಎಂದು ತಿಳಿಸಿದರು.
ಸರ್ಕಾರಿ ಕಚೇರಿಗಳಿಗೆ ದಿಢೀರ್ ಭೇಟಿ
ಪ್ರಗತಿ ಪರಿಶೀಲನಾ ಸಭೆಗು ಮೊದಲು ಸಚಿವರು ಕಂದಾಯ ಇಲಾಖೆ ವಿವಿಧ ಕಚೇರಿಗಳಿಗೆ ಭೇಟಿ ನೀಡಿ ಆಡಳಿತಕ್ಕೆ ಚುರುಕು ನೀಡಿದರು. ಮಾಡದಕೆರೆ ನಾಡಕಚೇರಿಗೆ ಭೇಟಿ ನೀಡಿ ಅಧಿಕಾರಿಗಳಿಂದ ಕಾರ್ಯ ನಿರ್ವಹಣೆ ಕುರಿತು ಮಾಹಿತಿ ಪಡೆದರು. ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದರು. ಹೊಸದುರ್ಗ ತಾಲೂಕು ಕಚೇರಿಗೂ ಭೇಟಿ ನೀಡಿದ 100 ವರ್ಷದ ಹಳೆಯ ಕಡತಗಳು ದೂಳು ಹಿಡಿದಿದ್ದನ್ನು ಕಂಡು ಅಧಿಕಾರಿಗಳ ಮೇಲೆ ತರಾಟೆಗೆ ತೆಗೆದುಕೊಂಡರು. ಇವೆಲ್ಲವನ್ನು ಡಿಜಿಟಲೀಕರಗೊಳಿಸುವಂತೆ ಸೂಚಿಸಿದರು.












Click it and Unblock the Notifications