ಹೊಸದುರ್ಗ ಸೋಲಾರ್‌ ಪಾರ್ಕ್‌ಗೆ ಇಂಧನ ಸಚಿವರ ಭೇಟಿ, ಪಾರ್ಕ್ ವಿಶೇಷತೆಗಳು

ಚಿತ್ರದುರ್ಗ, ಡಿಸೆಂಬರ್ 31: ಕರ್ನಾಟಕ ಸರ್ಕಾರ ಸೌರ ವಿದ್ಯುತ್ ಉತ್ಪಾದನೆಗೆ ಹೆಚ್ಚಿನ ಗಮನ ನೀಡುತ್ತಿದೆ. ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕಿನ ನೀರಗುಂದ ಗೇಟ್ ಬಳಿ ಹತ್ತಿರ ಕುಸುಮ್-ಸಿ ಯೋಜನೆಯಡಿ ಸೋಲಾರ್ ಪಾರ್ಕ್‌ ಸ್ಥಾಪನೆ ಮಾಡಲಾಗಿದೆ. ಈ ಪಾರ್ಕ್‌ಗೆ ಇಂಧನ ಸಚಿವ ಕೆ. ಜೆ. ಜಾರ್ಜ್ ಭೇಟಿ ನೀಡಿ, ಪರಿಶೀಲನೆ ನಡೆಸಿದರು. ರೈತರ ಜೊತೆ ಅವರು ಮಾತುಕತೆ ನಡೆಸಿದರು.

ಸಚಿವ ಕೆ. ಜೆ. ಜಾರ್ಜ್ ಮಾತನಾಡಿ, "ರೈತರ ಕೃಷಿ ಮತ್ತು ನೀರಾವರಿ ಪಂಪ್‍ಸೆಟ್‍ಗಳಿಗೆ ವಿದ್ಯುತ್ ಕೊರತೆ ನೀಗಿಸುವ ನಿಟ್ಟಿನಲ್ಲಿ ಕುಸುಮ್ ಯೋಜನೆ ವರದಾನವಾಗಲಿದೆ. ಇದು ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದು. ಕುಸುಮ್-ಬಿ ಮತ್ತು ಸಿ ಯೋಜನೆಗೆ ರಾಜ್ಯದಲ್ಲಿ ಈಗಾಗಲೇ ಚಾಲನೆ ನೀಡಲಾಗಿದ್ದು, ಈ ಯೋಜನೆಯಿಂದಾಗಿ ರೈತರಿಗೆ ತಮ್ಮ ಕೃಷಿ ಮತ್ತು ನೀರಾವರಿ ಪಂಪ್‍ಸೆಟ್‍ಗಳಿಗೆ ಹಗಲಿನಲ್ಲಿ 7 ಗಂಟೆಗಳ ಕಾಲ ನಿರಂತರ ವಿದ್ಯುತ್ ದೊರೆಯಲಿದೆ" ಎಂದು ಹೇಳಿದರು.

KJ George Visits Nerguda Solar Park Hosadurga Chitradurga

ಸೋಲಾರ್ ಪ್ಲಾಂಟ್ ಪರಿಚಯಿಸುವ ಮೂಲಕ ಸುಮಾರು 3 ಸಾವಿರ ಮೆಗಾವ್ಯಾಟ್ ವಿದ್ಯುತ್ ಉತ್ಪಾದನಗೆ ಅನುಮೋದನೆ ನೀಡಲಾಗಿದೆ. ಈಗಾಗಲೇ ಹಲವೆಡೆ ವಿದ್ಯುತ್ ಉತ್ಪಾದನೆಯಾಗುತ್ತಿದೆ. ರೈತರ ಬೇಡಿಕೆಗೆ ಅನುಗುಣವಾಗಿ ಹಗಲಿನಲ್ಲಿ ನಿರಂತರ 7 ಗಂಟೆಗಳ ಕಾಲ ವಿದ್ಯುತ್ ದೊರೆಯಲಿದೆ. ನೀರಗುಂದ ಸೋಲಾರ್ ಪ್ಲಾಂಟ್‍ನಿಂದ ಈಗಾಗಲೇ ಕಳೆದ ಮೂರು ದಿನಗಳಿಂದ ವಿದ್ಯುತ್ ಸರಬರಾಜು ಆಗುತ್ತಿದೆ ಎಂದು ಸ್ಥಳೀಯರು ಹೇಳಿದರು.

ಈ ಭಾಗದ ರೈತರು ಈ ಯೋಜನೆಯಿಂದ ಸಂತಸಗೊಂಡಿದ್ದಾರೆ. ಹೊಸದುರ್ಗದ ಉಳಿದ ವಿದ್ಯುತ್ ಉಪಕೇಂದ್ರಗಳ ಬಳಿಯೂ ಸೋಲಾರ್ ಪ್ಲಾಂಟ್ ಸ್ಥಾಪಿಸಲು ಇಂಧನ ಸಚಿವರು ಒಪ್ಪಿಗೆ ನೀಡಿದ್ದಾರೆ. ಹೊಸದುರ್ಗ ತಾಲೂಕು ಪದೇ ಪದೇ ಬರಗಾಲಕ್ಕೆ ತುತ್ತಾಗುವ ಪ್ರದೇಶ. ಈ ಭಾಗದಲ್ಲಿ ಯಾವುದೇ ನದಿ ನೀರಿನ ಮೂಲ ಲಭ್ಯವಿಲ್ಲ. ರೈತರು ಅಂತರ್ಜಲವನ್ನೇ ನೆಚ್ಚಿಕೊಂಡಿದ್ದಾರೆ. ಸುಮಾರು 70 ಸಾವಿರ ಪಂಪ್‍ಸೆಟ್‍ಗಳನ್ನು ಅಕ್ರಮ-ಸಕ್ರಮದಡಿ ಸಂಪರ್ಕ ಕಲ್ಪಿಸಿ, ಗುಣಮಟ್ಟದ ವಿದ್ಯುತ್ ನೀಡಬೇಕಿದೆ ಎಂದು ರೈತರು ಸಚಿವರಿಗೆ ಬೇಡಿಕೆ ಸಲ್ಲಿಸಿದರು.

3 ಸಾವಿರ ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ: ಸೌರ ವಿದ್ಯುತ್ ಉತ್ಪಾದನೆ ಬಗ್ಗೆ ಮಾತನಾಡಿದ ಸಚಿವರು, "ಈಗಾಗಲೇ ರಾಜ್ಯಾದ್ಯಂತ 3 ಸಾವಿರ ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಗೆ ಸ್ಥಳ ಗುರುತಿಸಲಾಗಿದ್ದು, ಮುಖ್ಯಮಂತ್ರಿಗಳ ಸೂಚನೆಯಂತೆ ಒಂದು ತಿಂಗಳಲ್ಲಿ 500 ರಿಂದ 600 ಮೆಗಾವ್ಯಾಟ್ ಉತ್ಪಾದನೆ ಮಾಡುವ ನಿಟ್ಟಿನಲ್ಲಿ ಅಗತ್ಯ ತಯಾರಿಗಳು ನಡೆದಿವೆ" ಎಂದು ತಿಳಿಸಿದರು.

"ವಿದ್ಯುತ್ ಉಪಕೇಂದ್ರಗಳು ಇರುವ ಸ್ಥಳಗಳ ಹತ್ತಿರ ಒಂದು ಮೆಗಾವ್ಯಾಟ್ ಉತ್ಪಾದನೆಗೆ ಕನಿಷ್ಠ ಸುಮಾರು 4 ಎಕರೆ ಜಮೀನು ಅಗತ್ಯವಾಗಿ ಬೇಕಾಗುತ್ತದೆ. ವಿದ್ಯುತ್ ಉಪಕೇಂದ್ರದ ಸಾಮರ್ಥ್ಯಕ್ಕೆ ಅನುಗುಣವಾಗಿ ಸೋಲಾರ್ ಪಾರ್ಕ್‍ಗಳಲ್ಲಿ ವಿದ್ಯುತ್ ಉತ್ಪಾದನೆ ಮಾಡಿ ಅಲ್ಲಿಯೇ ಪೂರೈಕೆ ಮಾಡಿ ಕೊಡಲಾಗುವುದು" ಎಂದರು.

"ರೈತರ ಬೇಡಿಕೆಗೆ ಅನುಗುಣವಾಗಿ ವಿದ್ಯುತ್ ಪೂರೈಕೆ ಮಾಡಲಾಗುತ್ತಿದ್ದು, ಈ ಯೋಜನೆಯಡಿ ಖಾಸಗಿಯವರು ಬಂಡವಾಳ ಹೂಡಿಕೆ ಮಾಡುತ್ತಾರೆ. ಸರ್ಕಾರದಿಂದ ಲಭ್ಯವಿರುವೆಡೆ ಸರ್ಕಾರಿ ಭೂಮಿ ನೀಡಲಾಗುವುದು, ಅಲ್ಲದೆ ಸೋಲಾರ್ ಘಟಕಗಳಲ್ಲಿ ಉತ್ಪಾದಿಸುವ ವಿದ್ಯುತ್ ಅನ್ನು ಸರ್ಕಾರವೇ ಗರಿಷ್ಟ ರೂ. 3.17 ನಂತೆ ಖರೀದಿ ಮಾಡಲಿದೆ" ಎಂದು ಸಚಿವರು ವಿವರ ನೀಡಿದರು.

"ಸರ್ಕಾರಿ ಜಮೀನಿನಲ್ಲಿ ಸೋಲಾರ್ ಪಾರ್ಕ್ ನಿರ್ಮಾಣಕ್ಕೆ ಪ್ರತಿ ಎಕರೆಗೆ ರೂ. 25 ಸಾವಿರ ಹಣವನ್ನು ಖಾಸಗಿ ಏಜೆನ್ಸಿಯವರು ಪ್ರತಿ ವರ್ಷ ಪಾವತಿಸಬೇಕು, ಈ ಹಣವನ್ನು ಜಿಲ್ಲಾಧಿಕಾರಿಗಳ ಬಳಿ ಡಿಪಾಸಿಟ್ ಮಾಡಲಾಗುವುದು. ಆಯಾ ಕ್ಷೇತ್ರದ ಸ್ಥಳೀಯ ಶಾಸಕರು, ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜಿಲ್ಲಾಧಿಕಾರಿಗಳ ನಿರ್ದೇಶನದಂತೆ ಆಯಾ ಪಂಚಾಯಿತಿ ವ್ಯಾಪ್ತಿಯ ಸರ್ಕಾರಿ ಶಾಲೆ, ಅಂಗನವಾಡಿ, ಆಸ್ಪತ್ರೆ ಅಭಿವೃದ್ಧಿಗೆ ಅನುದಾನ ಬಳಕೆ ಮಾಡಬಹುದಾಗಿದೆ" ಎಂದು ತಿಳಿಸಿದರು.

"ಅಕ್ರಮ-ಸಕ್ರಮ ಯೋಜನೆಯಡಿ ರಾಜ್ಯದಲ್ಲಿ ಸುಮಾರು 4.5 ಲಕ್ಷ ಕೃಷಿ ಪಂಪ್‍ಸೆಟ್‌ಗಳಿವೆ. ಈ ಪೈಕಿ ಈಗಾಗಲೇ 2.5 ಲಕ್ಷ ಪಂಪ್‍ಸೆಟ್‍ಗಳನ್ನು ಅಕ್ರಮ-ಸಕ್ರಮದಡಿ ವಿದ್ಯುತ್ ಸಂಪರ್ಕ ಕಲ್ಪಿಸಿಕೊಡಲಾಗಿದೆ. ಇನ್ನೂ 2 ಲಕ್ಷ ಪಂಪ್‍ಸೆಟ್‍ಗಳಿಗೆ ಸಂಪರ್ಕ ಒದಗಿಸಲು ಈಗಾಗಲೇ ಏಜೆನ್ಸಿ ಅವರನ್ನು ನಿಗದಿಪಡಿಸಿ ವಹಿಸಲಾಗಿದೆ. ಮುಂದಿನ ಒಂದೂವರೆ ವರ್ಷದೊಳಗೆ ಈ ಯೋಜನೆ ಸಂಪೂರ್ಣಗೊಳ್ಳುವ ವಿಶ್ವಾಸವಿದೆ" ಎಂದರು.

"ತೋಟದ ಮನೆಗಳಿಗೆ ಹಗಲು ಹೊತ್ತು 3 ಫೇಸ್ ಹಾಗೂ ರಾತ್ರಿ ವೇಳೆ ಸಿಂಗಲ್ ಫೇಸ್ ವಿದ್ಯುತ್ ಕೊಡಲು ಈಗಾಗಲೇ ನಿರ್ಣಯ ಮಾಡಲಾಗಿದೆ. ಎಲ್ಲಾ ಗ್ರಾಮಗಳಿಗೆ ನಿರಂತರ ಜ್ಯೋತಿ ಅಡಿ ವಿದ್ಯುತ್ ಪೂರೈಸಲು ಟೆಂಡರ್ ಪ್ರಕ್ರಿಯೆ ನಡೆದಿದ್ದು, ಶೀಘ್ರ ಕಾರ್ಯಾದೇಶ ನೀಡಲಾಗುವುದು" ಎಂದು ಹೇಳಿದರು.

ಹೊಸದುರ್ಗ ಶಾಸಕ ಬಿ.ಜಿ.ಗೋವಿಂದಪ್ಪ ಮಾತನಾಡಿ, "ಭದ್ರಾ ಮೇಲ್ದಂಡೆ ಯೋಜನೆಯಡಿ 1.35 ಲಕ್ಷ ಎಕರೆಗೆ ನೀರು ಒದಗಿಸಲಾಗುವುದು ಹಾಗೂ ಭದ್ರಾ ಜಲಾಶಯದಿಂದ 800 ಕೋಟಿ ರೂ. ವೆಚ್ಚದಲ್ಲಿ ಕುಡಿಯುವ ನೀರಿನ ಪೂರೈಕೆ ಯೋಜನೆ ಜಾರಿಯಾಗುತ್ತಿದ್ದು, ಇವೆಲ್ಲವಕ್ಕೂ ವಿದ್ಯುತ್ ಸಂಪರ್ಕ ವ್ಯವಸ್ಥೆಯನ್ನು ಬಲಪಡಿಸುವ ಅಗತ್ಯವಿದೆ, ಇದಕ್ಕಾಗಿ ಕ್ಷೇತ್ರ ವ್ಯಾಪ್ತಿಯಲ್ಲಿ 4 ವಿದ್ಯುತ್ ಸಬ್ ಸ್ಟೇಷನ್ ಮಂಜೂರು ಮಾಡುವಂತೆ" ಸಚಿವರಿಗೆ ಮನವಿ ಮಾಡಿದರು. ಇಂಧನ ಸಚಿವರು ಮನವಿಗೆ ಸ್ಪಂದಿಸಿ, "ಭೂಮಿಯನ್ನು ಗುರುತಿಸಿಕೊಟ್ಟರೆ, ಆದ್ಯತೆ ಮೇರೆಗೆ ವಿದ್ಯುತ್ ಸ್ಟೇಷನ್‍ಗಳನ್ನು ಮಂಜೂರು ಮಾಡಲಾಗುವುದು" ಎಂದು ಭರವಸೆ ನೀಡಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+