Chitradurga Rain: ವರುಣನ ಕೃಪೆಯಿಂದ ಬರದ ದವಡೆಗೆ ಸಿಕ್ಕಿದ್ದ ಜನತೆಯ ಮುಖದಲ್ಲಿ ಮಂದಹಾಸ
ಚಿತ್ರದುರ್ಗ, ನವೆಂಬರ್ 08: ಬಿಸಿಲಿನ ಝಳದಿಂದ ತತ್ತರಿಸುತ್ತಿದ್ದ ಕೋಟೆ ನಾಡಿಗ ತಂಪಿನತ್ತ ಸಾಗುತ್ತಿದೆ. ಚಿತ್ರದುರ್ಗ ಜಿಲ್ಲೆಯಾದ್ಯಂತ ಮಳೆರಾಯನ ಆರ್ಭಟ ಮುಂದುವರೆದಿದ್ದು, ಬುಧವಾರ ಸಂಜೆ ಭರ್ಜರಿ ಮಳೆ ಸುರಿದಿದೆ. ವರುಣನ ಕೃಪೆಯಿಂದ ಬರದ ದವಡೆಗೆ ಸಿಕ್ಕಿದ್ದ ಜನತೆಯ ಮುಖದಲ್ಲಿ ಮಂದಹಾಸ ಮೂಡಿಸಿದೆ.
ಹಿರಿಯೂರು ತಾಲೂಕಿನ ಬಾಲೆನಹಳ್ಳಿ, ಹರ್ತಿಕೋಟೆ, ಗನ್ನಾಯಕನಹಳ್ಳಿ, ಯರಬಳ್ಳಿ, ಕರಿಯೋಬನಹಳ್ಳಿ ಸೇರಿದಂತೆ ವಿವಿಧ ಭಾಗಗಳಲ್ಲಿ ಬುಧವಾರ ಸಂಜೆ ಧಾರಾಕಾರ ಮಳೆಯಾಗಿದೆ. ಸಂಜೆ 5ಗಂಟೆಯ ಸುಮಾರಿಗೆ ಜಿನಿ ಜಿನಿ ಹನಿಯಿಂದ ಸುರಿಯುತ್ತಿದ್ದ ಮಳೆ ಸ್ವಲ್ಪ ಹೊತ್ತಿನಲ್ಲಿ ಬಿರುಸು ಪಡೆದಿದ್ದು, ರಸ್ತೆಗಳಲ್ಲಿ ನೀರು ತುಂಬಿಕೊಂಡಿದೆ.

ಇನ್ನು ನಿನ್ನೆ ಮಂಗಳವಾರ ಸುರಿದ ಮಳೆ ವಿವರದನ್ವಯ ಜಿಲ್ಲೆಯ ಹೊಸದುರ್ಗದಲ್ಲಿ 26.4 ಮಿ.ಮೀ ಮಳೆಯಾಗಿದ್ದು, ಇದು ಜಿಲ್ಲೆಯ ಅತ್ಯಧಿಕ ಮಳೆಯಾಗಿದೆ. ಹೊಸದುರ್ಗ ತಾಲೂಕಿನ ಬಾಗೂರಿನಲ್ಲಿ 4.3 ಮಿ.ಮೀ, ಮತ್ತೋಡು 6.3 ಮಿ.ಮೀ ಮಳೆಯಾಗಿದೆ. ಹೊಳಲ್ಕೆರೆ ತಾಲೂಕಿನ ಹೊಳಲ್ಕೆರೆಯಲ್ಲಿ 2.4 ಮಿ.ಮೀ, ರಾಮಗಿರಿ 24.4 ಮಿ.ಮೀ ಮಳೆಯಾಗಿದೆ.
ಮಂಗಳವಾರ ಸುರಿದ ಮಳೆಗೆ ಜಿಲ್ಲೆಯಾದ್ಯಂತ ಒಟ್ಟು 24 ಮನೆಗಳು ಭಾಗಶಃ ಹಾನಿಯಾಗಿದ್ದು, 1 ಜಾನುವಾರುಗೆ ಕೂಡ ಹಾನಿಯಾಗಿದೆ. ಏಕಾಏಕಿ ಸುರಿದ ಮಳೆಯಿಂದ ಹೊಸದುರ್ಗ ತಾಲೂಕಿನಲ್ಲಿ 17 ಮನೆಗಳು ಭಾಗಶಃ ಹಾನಿಯಾಗಿದ್ದರೆ, ಹೊಳಲ್ಕೆರೆ ತಾಲೂಕಿನಲ್ಲಿ 5 ಮನೆಗಳು ಭಾಗಶಃ ಹಾನಿಯಾಗಿದೆ. ಮೊಳಕಾಲ್ಮುರು ತಾಲೂಕಿನಲ್ಲಿ 2 ಮನೆ ಭಾಗಶಃ ಹಾನಿಯಾಗಿದೆ ಎಂದು ತಿಳಿದು ಬಂದಿದೆ.
ಇನ್ನು ರಾಜ್ಯದ ಆರು ಜಿಲ್ಲೆಗಳಲ್ಲಿ ಮಂಗಳವಾರ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಅಲ್ಲದೆ ಚಿಕ್ಕಮಗಳೂರು, ಉಡುಪಿ, ದಕ್ಷಿಣ ಕನ್ನಡ, ಚಿತ್ರದುರ್ಗ, ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಗಳಿಗೆ ಯೆಲ್ಲೊ ಅಲರ್ಟ್ ಕೂಡ ಘೋಷಿಸಲಾಗಿದೆ.
ಅಲ್ಲದೇ ಬರ ಮತ್ತು ಬಿರು ಬೇಸಿಗೆಯಿಂದ ಕಂಗೆಟ್ಟಿದ್ದ ಬೆಳಗಾವಿ ಜಿಲ್ಲೆಗೆ ಕೂಡ ವರುಣ ತಂಪೆರೆದಿದ್ದಾನೆ. ಬೆಳಗಾವಿ ನಗರ ಸೇರಿದಂತೆ ಜಿಲ್ಲೆಯ ಹಲೆವೆಡೆ ಇಂದು(ನವೆಂಬರ್ 08) ಮಳೆಯಾಗಿದೆ. ಒಟ್ಟಾರೆ ಬರ ಹಾಗೂ ಬಿಸಿಲಿನಿಂದ ನಲುಗುತ್ತಿದ್ದ ಕರ್ನಾಟಕದ ಅನೇಕ ಭಾಗಗಳಲ್ಲಿ ಮಳೆಯಾಗುತ್ತಿದೆ. ಇದೇ ಮಳೆ ಇನ್ನೂ ನಾಲ್ಕು-ಐದು ದಿನಗಳ ಕಾಲ ಮುಂದುವರಿದರೆ ಅಂತರ್ಜಲ ಮಟ್ಟ ಕೂಡ ಏರಿಕೆ ಜೊತೆಗೆ ಒಣಗಿದ್ದ ಕೆರೆ ಕಾಲುವೆಗಳು ತುಂಬುವ ಸಾಧ್ಯತೆ ಇದೆ.












Click it and Unblock the Notifications