Rain: ವರುಣನ ಆರ್ಭಟಕ್ಕೆ ನಲುಗಿದ ಕೋಟೆನಾಡು ಚಿತ್ರದುರ್ಗ
ಚಿತ್ರದುರ್ಗ, ಅಕ್ಟೋಬರ್ 22: ರಾಜ್ಯದಲ್ಲಿ ಕೊಂಚ ದಿನ ಬಿಡುವು ಕೊಟ್ಟಿದ್ದ ಮಳೆರಾಯ ಮತ್ತೆ ಅಬ್ಬರಿಸುತ್ತಿದ್ದು, ಬೆಂಗಳೂರು ಸೇರಿದಂತೆ ಬಹುತೇಕ ಜಿಲ್ಲೆಗಳಲ್ಲಿ ಜನ ಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಚಿತ್ರದುರ್ಗ ಜಿಲ್ಲೆಯಲ್ಲೂ ಕಳೆದೊಂದು ವಾರದಿಂದ ಮಳೆರಾಯ ಅಬ್ಬರಕ್ಕೆ ಜನರು ತತ್ತರಿಸಿದ್ದಾರೆ.
ತಡರಾತ್ರಿ ಅಬ್ಬರಿಸಿದ ಮಳೆಯಿಂದಾಗಿ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ್ದು ವಾಹನ ಸವಾರರು, ಜನರು ಪರದಾಡುವಂತಾಯಿತು. ಇತ್ತ ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿ ಪೊಲೀಸ್ ಠಾಣೆಗೆ ನೀರು ನುಗ್ಗಿದ್ದು, ಠಾಣೆ ಕೆರೆಯಾಂತಾಗಿದೆ. ಅಪಾರ ಪ್ರಮಾಣದ ನೀರು ಠಾಣೆಯೊಳಗೆ ನುಗ್ಗಿದ್ದು, ಸಂಪೂರ್ಣ ಪೊಲೀಸ್ ಠಾಣೆ ಕಟ್ಟಡ ನೀರಿನಿಂದ ತುಂಬಿಕೊಂಡಿದೆ.

ನೀರು ನುಗ್ಗಿದ ಪರಿಣಾಮ ಠಾಣೆಯಲ್ಲಿದ್ದ ಹಲವು ವಸ್ತುಗಳು ನೀರು ಪಾಲಾಗಿವೆ. ಇನ್ನು ಠಾಣೆ ಒಳಗಿನ ಲಾಕಪ್, ಪಿಎಸ್ಐ ರೂಂ, ಕಂಪ್ಯೂಟರ್ ರೂಂ ಗೂ ಸಹ ನೀರು ನುಗ್ಗಿದೆ. ನಿನ್ನೆ ರಾತ್ರಿಯಿಡೀ ಸಿಬ್ಬಂದಿ ದಾಖಲೆಗಳನ್ನು ರಕ್ಷಣೆ ಮಾಡಲು ಪರದಾಡಿದ್ದಾರೆ. ಅಲ್ಲದೇ ಬೆಳಿಗ್ಗೆಯಿಂದಲೂ ಮಳೆ ನೀರು ಹೊರ ಹಾಕಲು ಪೊಲೀಸರು ಹೈರಾಣಾಗಿದ್ದು, ಮಳೆಯ ಅವಾಂತರದಿಂದ ಠಾಣೆಯ ಸ್ಥಿತಿ ಹೇಳ ತೀರದಾಗಿದೆ.
ಕೆಲ್ಲೋಡ್ ಚೆಕ್ ಡ್ಯಾಂ ಭರ್ತಿ
ಹೊಸದುರ್ಗ ತಾಲೂಕಿನ ಕೆಲ್ಲೋಡ್ ಚೆಕ್ ಡ್ಯಾಂ ಮೈದುಂಬಿ ಹರಿಯುತ್ತಿದೆ. ತಡರಾತ್ರಿ ಚಿಕ್ಕಮಗಳೂರು ಭಾಗದಲ್ಲಿ ಅತಿ ಹೆಚ್ಚು ಮಳೆಯಾಗಿದ್ದರಿಂದ ಆ ಭಾಗದಲ್ಲಿನ ಮಳೆಯ ನೀರು ಕೆಲ್ಲೋಡ್ ಚೆಕ್ ಡ್ಯಾಂ ಮೂಲಕ ವಾಣಿ ವಿಲಾಸ ಜಲಾಶಯ ಸೇರುತ್ತದೆ. ಈಗಾಗಲೇ ವಿವಿ ಸಾಗರ ಡ್ಯಾಂ ಭರ್ತಿಗೆ ಕ್ಷಣಗಣನೆ ಆರಂಭವಾಗಿದೆ. ಕೇವಲ 5 ಅಡಿ ನೀರು ಬಂದರೆ ಪ್ರಸಕ್ತ ಸಾಲಿನಲ್ಲಿ ವಾಣಿ ವಿಲಾಸ ಜಲಾಶಯ ಕೋಡಿ ಬೀಳಲಿದೆ.

ಚಿತ್ರದುರ್ಗದಲ್ಲಿ ತಡರಾತ್ರಿ ಮಳೆರಾಯ ಅಬ್ಬರಿಸಿ ಬೊಬ್ಬಿರಿತಿದ್ದಾನೆ. ಮಳೆರಾಯನ ಆರ್ಭಟಕ್ಕೆ ಜಿಲ್ಲೆಯ ವಿವಿಧ ಭಾಗಗಳಲ್ಲಿ ಕೆರೆ ಕಟ್ಟೆಗಳು, ಚೆಕ್ ಡ್ಯಾಂಗಳು ಭರ್ತಿಯಾಗಿ ಹಳ್ಳ ಕೊಳ್ಳಗಳು ಮೈದುಂಬಿ ಹರಿಯುತ್ತಿವೆ. ಅಂದಹಾಗೆ ಜಿಲ್ಲೆಯ ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿ ಹೋಬಳಿಯ ತಳುಕು ಸಮೀಪದ ಗಜ್ಜುಗಾನಹಳ್ಳಿ ಹಳ್ಳ ಮೈದುಂಬಿ ಹರಿಯುತ್ತಿದೆ. ಸರ್ವಕಾಲಿಕ ದಾಖಲೆ ಮೀರಿ ತುಂಬಿ ಹರಿಯುತ್ತಿದೆ ಹಳ್ಳ ಎಂದು ಹೇಳಲಾಗುತ್ತಿದೆ. ಈ ಹಳ್ಳದ ರಭಸಕ್ಕೆ ಸೈಜುಕಲ್ಲು ತುಂಬಿದ ಟ್ರ್ಯಾಕ್ಟರ್ ಸಹ ಕೊಚ್ಚಿ ಹೋಗಿದೆ. ಒಟ್ಟಾರೆ ಕೋಟೆ ನಾಡಿನಲ್ಲಿ ಮಳೆ ಅವಾಂತರ ಜೋರಾಗಿದೆ.












Click it and Unblock the Notifications