ದಿಲ್, ದಲಿತರು ಕಾಂಗ್ರೆಸ್ಸಿಗೆ ಬೇಕಿಲ್ಲ, ಬೇಕಿರುವುದು ಡೀಲ್ : ದುರ್ಗದಲ್ಲಿ ಮೋದಿ
ಚಿತ್ರದುರ್ಗ, ಮೇ 06 : ಪ್ರಧಾನಿ ಮೋದಿ ಭಾನುವಾರ ಕರ್ನಾಟಕ ವಿಧಾನಸಭೆ ಚುನಾವಣೆ ಪ್ರಚಾರ ಕೈಗೊಂಡಿದ್ದಾರೆ. ಭಾನುವಾರ ಅವರು ರಾಜ್ಯದಲ್ಲಿ 4 ಸಮಾವೇಶಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
ನರೇಂದ್ರ ಮೋದಿ ಅವರು ಮೊದಲ ಸಮಾವೇಶ ಚಿತ್ರದುರ್ಗದ ಸೈನ್ಸ್ ಕಾಲೇಜು ಮೈದಾನದಲ್ಲಿ ನಡೆಯುತ್ತಿದೆ. ಇಂದು ಮೋದಿ ರಾಯಚೂರು, ಜಮಖಂಡಿ, ಹುಬ್ಬಳ್ಳಿಯಲ್ಲಿ ಪ್ರಚಾರ ನಡೆಸಲಿದ್ದು, ಸಮಾವೇಶಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

ನರೇಂದ್ರ ಮೋದಿ ಭಾಷಣದ ಮುಖ್ಯಾಂಶಗಳು
*ಕೋಟೆಯ ನಾಡು ಚಿತ್ರದುರ್ಗದ ಮಹಾ ಜನತೆಗೆ ನನ್ನ ನಮಸ್ಕಾರಗಳು. ವೀರ ಮದಕರಿ ನಾಯಕ, ವೀರ ವನಿತೆ ಓಬವ್ವಗೆ ನನ್ನ ನಮನಗಳು, ಮಾದರ ಚನ್ನಯ್ಯ, ಮರುಘಾ ಶರಣರಿಗೆ ನನ್ನ ನಮಸ್ಕಾರಗಳು ಎಂದು ನರೇಂದ್ರ ಮೋದಿ ಭಾಷಣ ಆರಂಭಿಸಿದರು.
* ಚಿತ್ರದುರ್ಗದಲ್ಲಿ ನಾನು ಜನಸಾಗರವನ್ನು ನೋಡುತ್ತಿದ್ದೇನೆ. ನಮಗೆ ಆಶೀರ್ವದಿಸಲು ಜನರು ಹರಿದುಬರುತ್ತಿದ್ದಾರೆ. ನಿಮಗೆಲ್ಲ ನಾನು ಅಭಾರಿಯಾಗಿದ್ದೇನೆ.
* ಚಿತ್ರದುರ್ಗದಲ್ಲಿ ನೂರು ವರ್ಷ ತೆಗೆದುಕೊಂಡರೆ 70 ವರ್ಷ ಬರಗಾಲವಿರುತ್ತದೆ. ಆದರೂ ಇಲ್ಲಿನ ರೈತರು ಕಷ್ಟಪಟ್ಟು ವ್ಯವಸಾಯ ಮಾಡುತ್ತಿದ್ದಾರೆ.
* ಚಿತ್ರದುರ್ಗದ ಚಳ್ಳಕೆರೆ ಮುಂದಿನ ದಿನದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನದ ಆಧುನಿಕ ಕೇಂದ್ರವಾಗಿ ರೂಪಗೊಳ್ಳಲಿದೆ.
* ಇಸ್ರೋ, ಡಿಆರ್‌ಡಿಓ, ಬಾರ್ಕ್ ಮುಂತಾದ ಸಂಸ್ಥೆಗಳ ಇಲ್ಲಿನ ಹೆಸರನ್ನು ಉಜ್ವಲಗೊಳಿಸಲಿವೆ. ಡಿಆರ್‌ಡಿಓ ವೈಮಾನಿಕ ಕ್ಷೇತ್ರದಲ್ಲಿ ಹಲವಾರು ಪ್ರಯೋಗಳನ್ನು ಇಲ್ಲಿ ಮಾಡುತ್ತಿದೆ. ಇಸ್ರೋ ಚಂದ್ರಯಾನ ಭಾಗ -2ರ ಯೋಜನೆಯನ್ನು ಇಲ್ಲಿಂದ ಮಾಡುತ್ತಿದೆ.
* ತನ್ನ ಕೈಯಲ್ಲಿದ್ದ ಒನಕೆಯಿಂದ ಶತ್ರುಗಳನ್ನು ಸೆದೆ ಬಡಿತ ದಲಿತ ಮಹಿಳೆ ಒಕನೆ ಓಬವ್ವಗೆ ನಾನು ನಮನ ಸಲ್ಲಿಸುತ್ತೇನೆ. ಧೈರ್ಯವಿದ್ದರೆ ಶತ್ರುಗಳನ್ನು ಹೇಗೆ ಸೆದೆ ಬಡಿಯಬಹುದು ಎಂಬದನ್ನು ಅವರಿಂದ ಕಲಿಯಬಹುದು.
* ಆದರೆ ಕಾಂಗ್ರೆಸ್ ಪಕ್ಷ ಮತಕ್ಕಾಗಿ ಧರ್ಮ, ಜಾತಿಗಳನ್ನು ವಿಭಜಿಸಿ, ಇತಿಹಾಸವನ್ನು ತಿರುಚುತ್ತಿದೆ. ಯಾರ ಜಯಂತಿ ಮಾಡಬೇಕು ಅದನ್ನು ಮಾಡುವುದಿಲ್ಲ. ಮತಕ್ಕಾಗಿ ಸುಲ್ತಾನರ ಜಯಂತಿಯನ್ನು ಮಾಡುತ್ತಿದ್ದಾರೆ. ಮದಕರಿ ನಾಯಕನನ್ನು ಮರೆತಿದ್ದಾರೆ.
* ಚಿತ್ರದುರ್ಗದ ಜನರಿಗೆ ಕಾಂಗ್ರೆಸ್ ಸರ್ಕಾರ ಅವಮಾನ ಮಾಡಿದೆ. ಮದಕರಿ ನಾಯಕ, ಓಬವ್ವಳ ಸಾಧನೆಯನ್ನು ಮರೆತು ಜನರಿಗೆ ಅವಮಾನ ಮಾಡಿದೆ.
* ಚಿತ್ರದುರ್ಗದವರಾದ ಕಾಂಗ್ರೆಸ್‌ನ ಅಧ್ಯಕ್ಷರಾಗಿದ್ದ ಎಸ್.ನಿಜಲಿಂಗಪ್ಪ ಅವರನ್ನು ಪಕ್ಷ ಹೇಗೆ ನಡೆಸಿಕೊಂಡಿತು ಎಂಬುದನ್ನು ಇಂದಿನ ಜನರು ತಿಳಿದುಕೊಳ್ಳಬೇಕು. ದೆಹಲಿಯಲ್ಲಿ ಕುಳಿತ ನಾಯಕರು ನಿಜಲಿಂಗಪ್ಪ ಅವರನ್ನು ಬೆಳೆಯದಂತೆ ನಡೆದರು.
* ನಿಜಲಿಂಗಪ್ಪ ಅವರ ತಪ್ಪು ಏನು ಗೊತ್ತೆ?. ಅವರು ನೆಹರೂ ಸರ್ಕಾರದ ನೀತಿಯನ್ನು ಟೀಕಿಸಿದರು. ಆರ್ಥಿಕ ನೀತಿ ವಿರೋಧಿಸಿದರು. ಅದಕ್ಕಾಗಿ ಅವರನ್ನು ಕಾಂಗ್ರೆಸ್ ಬೆಳೆಯಲು ಬಿಡಲಿಲ್ಲ.
* ನಿಜಲಿಂಗಪ್ಪ ಮತ್ತು ಅಂಬೇಡ್ಕರ್ ಅವರು ದಲಿತರ, ಬಡವರ ಪರವಾಗಿ ಕೆಲಸ ಮಾಡುತ್ತಿದ್ದರು, ಅವರ ಏಳಿಗೆಗಾಗಿ ಕೆಲಸ ಮಾಡುತ್ತಿದ್ದರು. ಆದರೆ, ಕಾಂಗ್ರೆಸ್ ಪಕ್ಷ ಅವರಿಗೆ ಗೌರವ ಕೊಡಲಿಲ್ಲ.
* ಕಾಂಗ್ರೆಸ್ ಪಕ್ಷದ ವಂಶಪಾರಂಪರ್ಯ ಆಡಳಿತ ನಡೆಸಿದೆ. ದೆಹಲಿಯಲ್ಲಿ ಎಲ್ಲಿ ಹೋದರೂ ಒಂದೇ ಕುಟುಂಬದವರ ಪ್ರತಿಮೆ ಕಾಣುತ್ತದೆ.
* ಅಟಲ್ ಬಿಹಾರಿ ವಾಜಪೇಯಿ ಅವರ ಸರ್ಕಾರ ಅಧಿಕಾರಕ್ಕೆ ಬಂದಾಗ ನಾವು ಜಾತಿ, ಧರ್ಮ ನೋಡಲಿಲ್ಲ. ನಾವು ಅಬ್ದುಲ್ ಕಲಾಂ ಅವರನ್ನು ರಾಷ್ಟ್ರಪತಿ ಮಾಡಿದೆವು. ಮೋದಿ ಪ್ರಧಾನಿಯಾದಾಗ ಮತ್ತೊಮ್ಮೆ ರಾಷ್ಟ್ರಪತಿ ಅವರನ್ನು ಆಯ್ಕೆ ಮಾಡುವ ಅವಕಾಶ ಸಿಕ್ಕಿತು. ಆಗ ಬಡತನದಲ್ಲಿ ಹುಟ್ಟುಬೆಳೆದ, ದಲಿತರಾದ ರಾಮನಾಥ ಕೋವಿಂದ್ ಅವರನ್ನು ರಾಷ್ಟ್ರಪತಿ ಮಾಡಿದೆವು.
* ಕಾಂಗ್ರೆಸ್ ಪಕ್ಷಕ್ಕೆ ಈಗ ದಿಗಿಲು ಉಂಟಾಗಿದೆ. ಅವರ ವೋಟ್ ಬ್ಯಾಂಕ್ ಈಗ ಇಲ್ಲ. ದಲಿತರು, ಹಿಂದುಳಿದವರಿಗೆ ಅವರು ಈಗ ಸುಳ್ಳು ಹೇಳಿ ಮತ ಪಡೆಯುವಂತಿಲ್ಲ.
* ದಲಿತರ, ಬಡವರ ಕಷ್ಟಗಳು ನನಗೆ ಗೊತ್ತು. ನಾನು ನಿಮ್ಮ ನಡುವಿನಿಂದಲೇ ಬೆಳೆದು ಬಂದವನು. ಆದ್ದರಿಂದ, ನಿಮ್ಮ ಅಭಿವೃದ್ಧಿ ನನ್ನ ಬದ್ಧತೆಯಾಗಿದೆ.
* ವಿಕಲಚೇತನರು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಕಾಂಗ್ರೆಸ್ ಅವರ ಪರವಾಗಿ ಯಾವುದೇ ಯೋಜನೆ ತಂದಿರಲಿಲ್ಲ. ಈಗ ಅವರಿಗೆ ಸಹಾಯಕವಾಗಲು ಕೇಂದ್ರ ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ.
* ಕೆಲಸ ಮಾಡುವ ಸರ್ಕಾರ ನಮ್ಮದು. ಕೇವಲ ಘೋಷಣೆ ಮಾಡುವ ಸರ್ಕಾರ ಕಾಂಗ್ರೆಸ್‌ನದ್ದು. ವಿಕಲಚೇತನರಿಗೆ ಉದ್ಯೋಗ ಒದಗಿಸಿದೆ.
* ಮದಕರಿ ನಾಯಕ ಹೌಸಿಂಗ್ ಸ್ಕೀಮ್ ಅನ್ನು ಕರ್ನಾಟಕ ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ಪ್ರಕಟಿಸಿದೆ. ಅದಕ್ಕಾಗಿ ನಾನು ರಾಜ್ಯದ ನಾಯಕರಿಗೆ ಅಭಿನಂದನೆ ಸಲ್ಲಿಸುತ್ತೇನೆ.
* ಸಮಾಜ ಕಲ್ಯಾಣ ಇಲಾಖೆಯ ಸಚಿವರು ತಮ್ಮ ಕಲ್ಯಾಣವನ್ನು ಹೇಗೆ ಮಾಡಿಕೊಂಡಿದ್ದಾರೆ? ಎಂಬುದು ಚಿತ್ರದುರ್ಗದ ಪುಟ್ಟ ಮಕ್ಕಳಿಗೂ ಗೊತ್ತಿದೆ.
* ಕಾಂಗ್ರೆಸ್ ಪಕ್ಷದವರಿಗೆ ಹಾಸಿಗೆ ಮೇಲೆ ಅಪಾರವಾದ ಪ್ರೀತಿ ಇದೆ. ನನಗೆ ಏಕೆ ಎಂದು ತಿಳಿಯಲಿಲ್ಲ. ಹಾಸಿಗೆಯಲ್ಲಿ ದುಡ್ಡು ಅಡಗಿಸಿ ಇಡುವುದರಿಂದ ಅವರಿಗೆ ಹಾಸಿಗೆ ಮೇಲೆ ಪ್ರೀತಿ ಇದೆ.
* ಕಾಂಗ್ರೆಸ್ ಪಕ್ಷದ ಹಲವು ನಾಯಕರ ಹಿಂದೆ ಮುಂದೆ ಹಲವು ಉಪ ನಾಮಗಳಿವೆ. ಚಿತ್ರದುರ್ಗದಲ್ಲಿ ನಾನು ಕೇಳಿದ ಉಪನಾಮ ಡೀಲ್ ಮಂತ್ರಿ. ಡೀಲ್ ಆಗಲಿಲ್ಲ ಎಂದರೆ ಯಾವುದೇ ಬಿಲ್ ಪಾಸ್ ಆಗುವುದಿಲ್ಲ.
* ಇಲ್ಲಿನ ಮುಖ್ಯಮಂತ್ರಿ ಸೂಟ್ ಕೇಸ್‌ನಲ್ಲಿ ಸಭ್ಯತೆಯ ಪ್ರಮಾಣ ಪತ್ರವಿಟ್ಟುಕೊಂಡು ಓಡಾಡುತ್ತಾರೆ. ಯಾವುದೇ ಸಚಿವರ ವಿರುದ್ಧ ಆರೋಪ ಕೇಳಿಬಂದರೆ ಪ್ರಮಾಣ ಪತ್ರದಲ್ಲಿ ಅವರ ಹೆಸರು ಬರೆದು, ಕ್ಲೀನ್ ಚಿಟ್ ಕೊಡುತ್ತಾರೆ.
* ಇಲ್ಲಿನ ಜನರಿಗೆ ನೀರಿನ ಅಗತ್ಯವಿದೆ. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಹಲವಾರು ಯೋಜನೆಗಳನ್ನು ಕೈಗೊಂಡಿದ್ದರು. ನಾನು ಭರವಸೆ ನೀಡುವೆ ಬಿಜೆಪಿ ಸರ್ಕಾರ ಬಂದಾಗ ಕೇಂದ್ರ ಸರ್ಕಾರವೂ ಯೋಜನೆಗಳನ್ನು ಪೂರ್ಣಗೊಳಿಸಲು ಸಹಕಾರ ನೀಡುತ್ತೇವೆ.












Click it and Unblock the Notifications