ಹಿರಿಯೂರಿನಲ್ಲಿ ಪ್ರಿಯಾಂಕಾ ಗಾಂಧಿಗೆ ಕಾಡುಗೊಲ್ಲರ ಸಮುದಾಯ ಮಾಡಿದ ಮನವಿ ಏನು?
ಚಿತ್ರದುರ್ಗ, ಏಪ್ರಿಲ್, 26: ಮಧ್ಯ ಕರ್ನಾಟಕದಲ್ಲಿ ಅತಿ ಹೆಚ್ಚಾಗಿ ಕಂಡುಬರುವ ಬುಡಕಟ್ಟು ಕಾಡುಗೊಲ್ಲ ಸಮುದಾಯವೂ ಒಂದಾಗಿದೆ. ಈ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಲು ಹಲವಾರು ದಶಕಗಳಿಂದ ಹೋರಾಟ ನಡೆಸುತ್ತಾ ಬಂದಿದ್ದಾರೆ. ಈಗಾಗಲೇ ಮೈಸೂರು ವಿಶ್ವವಿದ್ಯಾಲಯ ಪ್ರೊ.ಎಂ. ಅನ್ನಪೂರ್ಣಮ್ಮ ಅವರ ಕುಲಶಾಸ್ತ್ರ ಅಧ್ಯಯನವಾಗಿದ್ದು, ರಾಜ್ಯ ಸರ್ಕಾರದಿಂದ ಎಸ್.ಟಿ. ಮೀಸಲಾತಿಯ ಕಡತಗಳು ಕೇಂದ್ರ ಸರ್ಕಾರದ ಹಂತದಲ್ಲಿದೆ.
ಬುಡಕಟ್ಟು ಕಾಡುಗೊಲ್ಲ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಲು ಹೋರಾಟದ ಮುಂದಾಳತ್ವ ವಹಿಸಿಕೊಳ್ಳಬೇಕು ಎಂದು ಕಾಡುಗೊಲ್ಲ ಸಮುದಾಯದ ಮುಖಂಡರು ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ ಅವರಿಗೆ ಮನವಿ ಸಲ್ಲಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಡಿ.ಸುಧಾಕರ್ ಪರವಾಗಿ ರೋಡ್ ಶೋನಲ್ಲಿ ಪಾಲ್ಗೊಳ್ಳಲು ಹಿರಿಯೂರಿಗೆ ಆಗಮಿಸಿದ್ದ ಪ್ರಿಯಾಂಕ ಗಾಂಧಿ ಮೊದಲು ಕಾರ್ಯಕ್ರಮಕ್ಕೆ ಹಾಜರಾದರು.

ರೋಡ್ ಶೋ ಆರಂಭವಾಗುವ ಮುನ್ನ ತಾಲೂಕು ಕ್ರೀಡಾಂಗಣದಲ್ಲಿ ಏರ್ಪಡಿಸಿದ್ದ ಕಾಡುಗೊಲ್ಲ ಸಮುದಾಯದ ಮುಖಂಡರ ಜೊತೆ ಸಂವಾದ ಕಾರ್ಯಕ್ರಮ ನಡೆದ ಬಳಿಕ ಮನವಿ ಸಲ್ಲಿಸಲಾಯಿತು. ಈ ಸಂವಾದ ಕಾರ್ಯಕ್ರಮದಲ್ಲಿ ಮುಖಂಡರು ಸಮುದಾಯದ ಮೀಸಲಾತಿ ಹೋರಾಟದ ಮುಂದಾಳತ್ವ ವಹಿಸಿಕೊಳ್ಳುವಂತೆ ಮನವಿ ಸಲ್ಲಿಸಿದ್ದಾರೆ.
ಕಾಡುಗೊಲ್ಲ (ಅಡವಿಗೊಲ್ಲ) ಮತ್ತು ಹಟ್ಟಿಗೊಲ್ಲ ಕರ್ನಾಟಕ ರಾಜ್ಯದಲ್ಲಿ ಅಪರೂಪದ ಮತ್ತು ವಿಶಿಷ್ಟ ಬುಡಕಟ್ಟು ಸಮುದಾಯದಲ್ಲಿ ಒಂದಾಗಿದೆ. ಕರ್ನಾಟಕ ರಾಜ್ಯದ 1,224 ಹಟ್ಟಿಗಳಲ್ಲಿ ಸಮುದಾಯದ ಜನಸಂಖ್ಯೆಯು ಸುಮಾರು 6.75 ಲಕ್ಷ ಇದೆ. ಅದರಲ್ಲೂ ವಿಶೇಷವಾಗಿ ಚಿತ್ರದುರ್ಗ ಮತ್ತು ತುಮಕೂರು ಜಿಲ್ಲೆಗಳಲ್ಲಿ ಹೆಚ್ಚಾಗಿ ನಮ್ಮ ಸಮುದಾಯದವರು ನೆಲೆಸಿದ್ದಾರೆ. ಕಾಡುಗೊಲ್ಲರು ರಾಜ್ಯದಲ್ಲಿ ಮುಖ್ಯವಾಹಿನಿಯ ನಾಗರೀಕತೆಯನ್ನು ಹೊಂದಿರುವುದಿಲ್ಲ.
ಕಂದಾಯ ಗ್ರಾಮಗಳು ಮತ್ತು ನಗರ ವಸಾಹತುಗಳಿಂದ ಅವರನ್ನು ಸಾಮಾಜಿಕವಾಗಿ ದೂರ ಮಾಡಿದಂತಾಗಿದೆ. ರಾಜ್ಯದ ಇತರೇ ಸಮುದಾಯಗಳಿಗೆ ಹೋಲಿಸಿದರೆ ಆರ್ಥಿಕವಾಗಿ, ರಾಜಕೀಯವಾಗಿ ಮತ್ತು ಶೈಕ್ಷಣಿಕವಾಗಿ ಈ ಸಮುದಾಯ ಹಿಂದುಳಿದಿದ್ದು, ನಮ್ಮ ಸ್ಥಿತಿ ಕರುಣಾಜನಕವಾಗಿದೆ. ಅಲ್ಲದೆ ಸಮುದಾಯದ ಬಡತನ ರೇಖೆಗಿಂತ ಕೆಳಗೆ ಇಲ್ಲಿನ ಜನರು ವಾಸಿಸುತ್ತಿದ್ದಾರೆ.
ಪ್ರೊ.ಎಂ.ಅನ್ನಪೂರ್ಣ ಅವರ ನೇತೃತ್ವದಲ್ಲಿ ಕಾಡುಗೊಲ್ಲ ಅಥವಾ ಹಟ್ಟಿಗೊಲ್ಲರ ಸಮುದಾಯದ ಕುಲಶಾಸ್ತ್ರ ಅಧ್ಯಯನ ವರದಿ ಹಾಗೂ ಮೈಸೂರು ವಿಶ್ವವಿದ್ಯಾನಿಲಯದ ಮಾನವಶಾಸ್ತ್ರದ ಅಧ್ಯಯನ ವಿಭಾಗವು ಸಾಮಾಜಿಕ ಪ್ರತ್ಯೇಕತೆ, ಆಂತರಿಕ ಆಡಳಿತ, ಸಾಂಸ್ಕೃತಿಕ ಏಕರೂಪತೆ, ಭೌಗೋಳಿಕ ಪ್ರತ್ಯೇಕತೆ ಮತ್ತು ಮೆಗಾಲಿಥಿಕ್ ಅಸ್ತಿತ್ವ ಸಂಸ್ಕೃತಿ ಮತ್ತು ಗುಣಲಕ್ಷಣಗಳು, ಬುಡಕಟ್ಟು ಗುಣಲಕ್ಷಣಗಳನ್ನು ಪ್ರತಿಬಿಂಬಿಸುತ್ತದೆ.
ಜನಾಂಗೀಯ ಅಧ್ಯಯನ ವರದಿಯನ್ನು ರಾಜ್ಯ ಸರ್ಕಾರದ ಸಚಿವ ಸಂಪುಟದಲ್ಲಿ ಇರಿಸಲಾಗಿತ್ತು. ದಿನಾಂಕ 6/12/ 2014ರಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದಲ್ಲಿ ಸಚಿವ ಸಂಪುಟವು ಪ್ರಸ್ತಾವನೆಗೆ ಅನುಮೋದನೆ ನೀಡಿ, ಕಾಡುಗೊಲ್ಲ (ಅಡವಿಗೊಲ್ಲ) ಅಥವಾ ಸೇರ್ಪಡೆಗಾಗಿ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಲಾಗಿದೆ. ಇದೀಗ ಈ ಕಡತ ಪರಿಶಿಷ್ಟ ಪಂಗಡಗಳ ಕೇಂದ್ರ ಪಟ್ಟಿಯಲ್ಲಿ ಹಟ್ಟಿಗೊಲ್ಲ ಸಂಬಂಧಿಸಿದಂತೆ ಸೇರ್ಪಡೆ GOIನಲ್ಲಿ ಬಾಕಿಯಿದೆ ಎಂದು ಮನವಿ ಪತ್ರದಲ್ಲಿ ತಿಳಿಸಿದ್ದಾರೆ.












Click it and Unblock the Notifications