ಕಾವೇರಿ ಕಾವು: ಚಿತ್ರದುರ್ಗದಲ್ಲಿ ಸ್ಟಾಲಿನ್ ಫೋಟೋಗೆ ಅಣುಕು ತಿಥಿ, ಜಿಲ್ಲೆಯಲ್ಲಿ ನಿಷೇಧಾಜ್ಞೆ ಜಾರಿ
ಚಿತ್ರದುರ್ಗ, ಸೆಪ್ಟೆಂಬರ್ 29: ತಮಿಳುನಾಡಿಗೆ ಕಾವೇರಿ ನೀರು ಹರಿಸುವುದನ್ನು ಖಂಡಿಸಿ ಇಂದು ಅಖಂಡ ಕರ್ನಾಟಕ ಬಂದ್‌ಗೆ ಕನ್ನಡಪರ ಹಾಗೂ ರೈತಪರ ಸಂಘಟನೆಗಳು ಕರೆ ನೀಡಿದ ಹಿನ್ನೆಲೆಯಲ್ಲಿ ಇತ್ತ ಕೋಟೆನಾಡು ಚಿತ್ರದುರ್ಗದಲ್ಲಿ ರೈತರು ವಿನೂತನವಾಗಿ ಪ್ರತಿಭಟನೆ ನಡೆಸಿದ್ದಾರೆ.
ಚಿತ್ರದುರ್ಗ ನಗರದ ಮುಖ್ಯ ಸರ್ಕಲ್‌ನಲ್ಲಿ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ಫೋಟೋ ಇಟ್ಟು ಅಣುಕು ತಿಥಿ ಆಚರಿಸುವ ಮೂಲಕ ಆಕ್ರೋಶ ಹೊರ ಹಾಕಿದ್ದಾರೆ. ಎಂ.ಕೆ ಸ್ಟಾಲಿನ್ ಫೋಟೋ ಮುಂದೆ ಶಾಸ್ತ್ರೋಕ್ತವಾಗಿ ಪೂಜೆ ಸಲ್ಲಿಸಿ, ಮದ್ಯಪಾನ, ಚಿಕನ್, ಮಟನ್, ಸಿಗರೇಟ್ ಇಟ್ಟು ಅಣುಕು ಪುಣ್ಯತಿಥಿ ಆಚರಣೆ ಮಾಡಿದ್ದಾರೆ.

ರೈತ ಸಂಘದ ಮುಖಂಡ ಹುಚ್ಚವ್ವನಹಳ್ಳಿ ಮಂಜುನಾಥ್ ಬಣದಿಂದ ವಿನೂತನವಾದ ಪ್ರತಿಭಟನೆ ನಡೆಸಿದರು. ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ರಾಜ್ಯದಲ್ಲಿ ಮಳೆ ಇಲ್ಲದೆ ಜಲಾಶಯದಲ್ಲಿ ನೀರು ಖಾಲಿ ಆಗಿದೆ. ಇಂತಹ ಸಂದರ್ಭದಲ್ಲಿ ತಮಿಳುನಾಡಿಗೆ ನೀರು ಬಿಡುತ್ತಿರುವುದು ಸರಿಯಲ್ಲ. ಕೂಡಲೇ ನೀರು ನಿಲ್ಲಿಸಬೇಕು ಎಂದು ಒತ್ತಾಯಿಸಿದರು.
ಚಿತ್ರದುರ್ಗ ಜಿಲ್ಲೆಯಲ್ಲಿ ನಿಷೇಧಾಜ್ಞೆ ಜಾರಿ
ಚಿತ್ರದುರ್ಗ ಬಂದ್ ವಿಷಯಕ್ಕೆ ಸಂಬಂಧಿಸಿದಂತೆ ಚಿತ್ರದುರ್ಗ ಜಿಲ್ಲಾ ಮತ್ತು ತಾಲೂಕು ಕೇಂದ್ರಗಳಲ್ಲಿ ಪ್ರಮುಖ ಬೀದಿಗಳಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿ ಅಂಚೆ ಕಚೇರಿಗೆ, ಬಿಎಸ್ಎನ್ಎಲ್, ರೈಲ್ವೆ ಸ್ಟೇಷನ್, ಬ್ಯಾಂಕ್, ಆದಾಯ ತೆರಿಗೆ ಕಚೇರಿ ಮತ್ತು ಇತರೆ ಕೇಂದ್ರ ಸರ್ಕಾರದ ಕಚೇರಿಗಳಲ್ಲಿ ಕೆಎಸ್ಆರ್‌ಟಿಸಿ ಇನ್ನಿತರ ಕಚೇರಿಗಳ ಬಳಿ ಪ್ರತಿಭಟನೆ ಮಾಡುವುದಾಗಿ ಹಾಗೂ ರಾಷ್ಟ್ರೀಯ ಹೆದ್ದಾರಿ ಟೋಲ್ ಗಳಲ್ಲಿ ರಸ್ತೆ ತಡೆಯುವ ಸಾಧ್ಯತೆಗಳಿರುವುದಾಗಿ ತಿಳಿದು ಬಂದಿದ್ದು ,ಕಾನೂನು ಸುವ್ಯವಸ್ಥೆ ಮತ್ತು ಕಾನೂನು ವ್ಯವಸ್ಥೆ ಕಾಪಾಡುವ ಸಲುವಾಗಿ ಸಾರ್ವಜನಿಕ ಪ್ರಾಣ ಹಾಗೂ ಆಸ್ತಿಪಾಸ್ತಿ ಹಾನಿಯಾಗದಂತೆ ತಡೆಯುವ ಹಿನ್ನೆಲೆಯಲ್ಲಿ ಇಂದು ಬೆಳಿಗ್ಗೆ 6 ಗಂಟೆಯಿಂದ ಸಂಜೆ 6.00 ವರೆಗೆ ಸಿಆರ್‌ಪಿಸಿ ಕಾಲಂ 144ರಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಜಿಲ್ಲೆಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ತಿಳಿಸಿದ್ದಾರೆ.












Click it and Unblock the Notifications