IT Raid On JDS Candidate: ಹಿರಿಯೂರು ಜೆಡಿಎಸ್ ಅಭ್ಯರ್ಥಿ ಎಂ.ರವೀಂದ್ರಪ್ಪನ ಮನೆ ಮೇಲೆ ಐಟಿ ದಾಳಿ
ಚಿತ್ರದುರ್ಗ, ಏಪ್ರಿಲ್, 21: ಹಿರಿಯೂರು ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಎಂ.ರವೀಂದ್ರಪ್ಪ ಅವರ ನಿವಾಸದ ಮೇಲೆ ಐಟಿ ಮತ್ತು ಚುನಾವಣಾ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಚೀಫ್ ಇಂಜಿನಿಯರ್ ಆಗಿದ್ದ ಎಂ.ರವೀಂದ್ರಪ್ಪ ಅವರು ಹಿರಿಯೂರು ವಿಧಾನಸಭಾ ಕ್ಷೇತ್ರದ ಜೆಡಿಎಸ್ ಟಿಕೆಟ್ ಪಡೆದು, ನಾಮಪತ್ರ ಸಲ್ಲಿಸಿ, ಚುನಾವಣಾ ಮತಪ್ರಚಾರದಲ್ಲಿ ತೊಡಗಿದ್ದಾರೆ. ಇಂದು ಹಿರಿಯೂರು ತಾಲೂಕಿನ ಧರ್ಮಪುರ ಹೋಬಳಿಯ ಮುಂಗಸವಳ್ಳಿ ಗ್ರಾಮದ ತೋಟದಲ್ಲಿರುವ ನಿವಾಸಕ್ಕೆ ಭೇಟಿ ನೀಡಿರುವ ಚುನಾವಣಾ ಅಧಿಕಾರಿಗಳು ರವೀಂದ್ರಪ್ಪನಿಗಾಗಿ ಕಾದು ಕುಳಿತಿದ್ದಾರೆ. ಇನ್ನು ಹೆಚ್ಚಿನ ಮಾಹಿತಿ ತಿಳಿದುಬರಬೇಕಿದೆ.

ಇನ್ನು ಜೆಡಿಎಸ್ ಅಭ್ಯರ್ಥಿ ಎಂ.ರವೀಂದ್ರಪ್ಪ ಅವರು ಶ್ರೀ ಕ್ಷೇತ್ರ ಪಟ್ಟನಾಯಕನಹಳ್ಳಿ ಸ್ಪಟಿಕ ಪುರಿ ಶ್ರೀ ನಂಜಾವಧೂತ ಶ್ರೀಗಳ ಹುಟ್ಟು ಹಬ್ಬ ಇರುವುದರಿಂದ, ಶ್ರೀಗಳ ಹುಟ್ಟು ಹಬ್ಬಕ್ಕೆ ಶುಭಾಶಯ ಕೋರಿ, ಆಶಿರ್ವಾದ ಪಡೆಯಲು ಮಠಕ್ಕೆ ತೆರಳಿದ್ದಾರೆ ಎನ್ನಲಾಗಿದೆ. ಆದ್ದರಿಂದ ರವೀಂದ್ರಪ್ಪನಿಗಾಗಿ ಐಟಿ ಅಧಿಕಾರಿಗಳು ಕಾದು ಕುಳಿತಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಕೆಜಿಎಫ್ ಬಾಬುಗೆ ಮತ್ತೊಂದು ಸಂಕಷ್ಟ
ಐಟಿ ದಾಳಿಯ ಬೆನ್ನಲ್ಲೇ ಸಾವಿರಾರು ಕೋಟಿಯ ಒಡೆಯ ಕಾಂಗ್ರೆಸ್‌ನ ಯೂಸುಫ್ ಷರೀಫ್ ಅಲಿಯಾಸ್ ಕೆಜಿಎಫ್ ಬಾಬುಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ದಾಳಿ ವೇಳೆ ಮನೆಯಲ್ಲಿ ಸಾವಿರಕ್ಕೂ ಹೆಚ್ಚು ವೋಟರ್ ಐಡಿಗಳು ಪತ್ತೆಯಾದ ಹಿನ್ನಲೆಯಲ್ಲಿ ಅವರ ವಿರುದ್ಧ ಬೆಂಗಳೂರು ನಗರದ ಹೈಗ್ರೌಂಡ್ಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.
ಕರ್ನಾಟಕದಲ್ಲಿ ಚುನಾವಣೆ ಸಮೀಪವಾಗುತ್ತಿರುವ ಹಿನ್ನಲೆಯಲ್ಲಿ ಐಟಿ ಅಧಿಕಾರಿಗಳು ದಾಳಿಗೆ ಇಳಿದಿದ್ದಾರೆ. ಹಲವು ದಿನಗಳಿಂದ ಮೈಸೂರು, ಮಂಗಳೂರು ಸೇರಿದಂತೆ ರಾಜ್ಯದ ಹಲವು ಭಾಗಗಳಲ್ಲಿ ಕೆಲವು ರಾಜಕೀಯ ಮುಂಖಡರ ಮನೆ, ಕಚೇರಿಗಳ ಮೇಲೆ ದಾಳಿ ನಡೆಯುತ್ತಿದೆ. ಬುಧವಾರ ಬೆಂಗಳೂರಿನಲ್ಲಿರುವ ಕೆಜಿಎಫ್ ಬಾಬು ನಿವಾಸದ ಮೇಲೆ ಕೂಡ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದರು.
ಐಟಿ ದಾಳಿ ಸಂದರ್ಭದಲ್ಲಿ ಕೆಜಿಎಫ್ ಬಾಬು ಮನೆಯ ಮೊದಲ ಮಹಡಿಯ ಕೊಠಡಿಯಲ್ಲಿ 1925 ವೋಟರ್ ಐಡಿಗಳು ಪತ್ತೆಯಾಗಿದ್ದವು ಎಂದು ಹೇಳಲಾಗಿದೆ. ಎಲ್ಲಾ ವೋಟರ್ ಐಡಿಗಳಿಗೆ ಹೆಚ್‌ಡಿಎಫ್‌ಸಿ ಬ್ಯಾಂಕ್‌ನ 5000 ರುಪಾಯಿ ಮೌಲ್ಯದ ಚೆಕ್‌ಗಳನ್ನು ಲಗತ್ತಿಸಲಾಗಿತ್ತು. ನೆಲ ಮಹಡಿಯಲ್ಲಿ 26 ಬ್ಯಾಗ್‌ಗಳಲ್ಲಿ ಸೀರೆಗಳನ್ನು ಸಂಗ್ರಹಿಸಿ ಇಡಲಾಗಿತ್ತು, ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಪಟ್ಟಂತೆ ಮುದ್ರಣ ಪ್ರತಿಗಳು ಮತ್ತು 481 ದುಬಾರಿ ಬೆಲೆಯ ಸೂಟ್‌ಗಳು ಕೂಡ ಪತ್ತೆಯಾಗಿದ್ದವು.
ದಾಳಿ ವೇಳೆ ಮನೆಯಲ್ಲಿ ಇಷ್ಟೆಲ್ಲಾ ಪತ್ತೆಯಾಗಿರುವುದು ಚುನಾವಣೆ ನೀತಿ ಸಂಹಿತೆಯ ಉಲ್ಲಂಘನೆಯಾಗಿದೆ. ಶಿವಾಜಿನಗರದ ಚುನಾವಣಾ ಉಸ್ತುವಾರಿ ಅಧಿಕಾರಿ ಹೈ ಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಕೆಜಿಎಫ್ ಬಾಬು ವಿರುದ್ಧ ದೂರು ನೀಡಿದ್ದಾರೆ. ಕೆಜಿಎಫ್ ಬಾಬು ವಿರುದ್ಧ ಜನ ಪ್ರತಿನಿಧಿ 1951 1989 ಕಾಯ್ದೆ ಅಡಿ ಕೇಸ್ ದಾಖಲಾಗಿದೆ.
ಕೆಜಿಎಫ್ ಬಾಬು ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧೆ ಮಾಡುವ ಉತ್ಸಾಹದಲ್ಲಿದ್ದರು. ಟಿಕೆಟ್ ಘೋಷಣೆಯಾಗುವ ಮುನ್ನವೇ ತಾನೇ ಕಾಂಗ್ರೆಸ್ ಅಭ್ಯರ್ಥಿ ಎನ್ನುವಂತೆ ಬಿಂಬಿಸಿಕೊಂಡಿದ್ದ ಅವರು ಕ್ಷೇತ್ರದಲ್ಲಿ ಪ್ರಚಾರ ಕೂಡ ಮಾಡುತ್ತಿದ್ದರು. ಆದರೆ, ಕಾಂಗ್ರೆಸ್ ಹೈ ಕಮಾಂಡ್ ಕೆಜಿಎಫ್ ಬಾಬು ಅವರಿಗೆ ಟಿಕೆಟ್ ನಿರಾಕರಿಸಿದ್ದರಿಂದ ಸಿಟ್ಟಿಗೆದ್ದ ಕೆಜಿಎಫ್ ಬಾಬು ಪತ್ನಿಯನ್ನು ಈ ಬಾರಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕೆ ಇಳಿಸಿದ್ದಾರೆ.












Click it and Unblock the Notifications