ಶಾಸಕರ ಬಳಿ ಯಾವ ಸಿಡಿ ಇದೆ ಗೊತ್ತಿಲ್ಲ; ಎಂಟಿಬಿ ನಾಗರಾಜ್
ಚಿತ್ರದುರ್ಗ, ಜನವರಿ 15: "ಶಾಸಕರ ಬಳಿ ಯಾವ ಸಿಡಿ ಇದೆಯೋ ಗೊತ್ತಿಲ್ಲ. ಅಂತೆ ಕಂತೆಗಳನ್ನೇ ಮಾಧ್ಯಮಗಳ ಮುಂದೆ ಹೇಳಿದ್ದಾರೆ" ಎಂದು ಬಿಜೆಪಿ ನಾಯಕ, ಸಚಿವ ಎಂಟಿಬಿ ನಾಗರಾಜ್ ಹೇಳಿದರು.
ಸಚಿವ ಸಂಪುಟ ವಿಸ್ತರಣೆ ವೇಳೆ ಅವಕಾಶ ಸಿಗದ ಶಾಸಕರು ಬಹಿರಂಗ ಹೇಳಿಕೆಗಳನ್ನು ನೀಡುತ್ತಿದ್ದಾರೆ. ವಿಜಯಪುರ ನಗರ ಕ್ಷೇತ್ರದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ನೀಡಿರುವ ಹೇಳಿಕೆ ರಾಜ್ಯ ರಾಜಕೀಯದಲ್ಲಿ ಸಂಚಲನ ಉಂಟು ಮಾಡಿದೆ.
"ಕೆಲವರು ಸಿಡಿ ತೋರಿಸಿ ಯಡಿಯೂರಪ್ಪ ಹೆದರಿಸಿ ಸಚಿವರಾಗಿದ್ದಾರೆ. ಇನ್ನು ಕೆಲವರು ಅಪಾರ ಪ್ರಮಾಣದ ಹಣ ನೀಡಿ ಸಚಿವರಾಗಿದ್ದಾರೆ" ಎಂದು ಬಸನಗೌಡ ಪಾಟೀಲ್ ಯತ್ನಾಳ್ ಗಂಭೀರ ಆರೋಪ ಮಾಡಿದ್ದಾರೆ.

ಶುಕ್ರವಾರ ಚಿತ್ರದುರ್ಗದಲ್ಲಿ ಮಾತನಾಡಿದ ಎಂಟಿಬಿ ನಾಗರಾಜ್, "ಸಿಡಿ ಇದೇ ಎಂದು ಬಿಜೆಪಿ ನಾಯಕರೋ ಅಥವಾ ಬೇರೆ ಪಕ್ಷದ ನಾಯಕರು ಹೇಳುತ್ತಾರೋ ಗೊತ್ತಿಲ್ಲ. ಸಿಡಿ ಇದ್ದರೆ ಬಿಡುಗಡೆ ಮಾಡಲಿ, ಸಿಡಿ ಹೆಸರು ಹೇಳಿಕೊಂಡು ರಾಜಕೀಯ ಮಾಡಿ ಪ್ರಯೋಜನವಿಲ್ಲ" ಎಂದರು.
"ಸಿಡಿ ಹೆಸರು ಹೇಳಿಕೊಂಡು ಮಂತ್ರಿಯಾದವರು, ಸಿಡಿ ಇಟ್ಕೊಂಡು ಹೆದರಿಕೆ ಬೆದರಿಕೆ ಹಾಕುತ್ತಿರುವ ಬಗ್ಗೆ ನನಗೆ ಮಾಹಿತಿಯಿಲ್ಲ. ಇನ್ನು ಸಚಿವ ಯೋಗೇಶ್ವರ ನನ್ನ ಬಳಿ ಆಸ್ತಿ ಅಡವಿಟ್ಟು ಸಾಲ ಪಡೆದುಕೊಂಡಿಲ್ಲ. ಮನೆನೂ ಅಡವಿಟ್ಟಿಲ್ಲ, ಮಠನೂ ಅಡವಿಟ್ಟಿಲ್ಲ. ಜಾರಕಿಹೂಳಿ ಯಾವ ಕಾರಣಕ್ಕೆ ಹೀಗೆ ಹೇಳುತ್ತಿರಿ? ಎಂದು ಕೇಳಿದ್ದೇನೆ" ಎಂದು ಎಂಟಿಬಿ ನಾಗರಾಜ್ ಸ್ಪಷ್ಟಪಡಿಸಿದರು.
"ಮೂರು ದಿನಗಳಲ್ಲಿ ಖಾತೆ ಹಂಚಿಕೆ ನಡೆಯಲಿದೆ. ಯಾವ ಖಾತೆ ಕೊಟ್ಟರು ನಾನು ನಿಭಾಯಿಸುವೆ. ಯಾರಿಗೆ ಯಾವ ಖಾತೆ ನೀಡುತ್ತಾರೋ ಗೊತ್ತಿಲ್ಲ. 17 ಶಾಸಕರು ಒಟ್ಟಾಗಿದ್ದೇವೆ. ಮುಂದಿನ ದಿನಗಳಲ್ಲಿ ಮುನಿರತ್ನ, ವಿಶ್ವನಾಥ್ ಸೇರಿ ಉಳಿದವರಿಗೂ ಸಚಿವ ಸ್ಥಾನ ಕೊಡುತ್ತಾರೆ" ಎಂದು ವಿಶ್ವಾಸ ವ್ಯಕ್ತಪಡಿಸಿದರು.
"ಸಚಿವ ಸ್ಥಾನ ಹಂಚಿಕೆ ಬಳಿಕ ಅಸಮಾಧಾನ ಆಗುವುದು ಸಹಜ. ವಿರೋಧ ಪಕ್ಷದವರು ಮಾತನಾಡುತ್ತಾರೆ. ಶಾಸಕ ಯತ್ನಾಳ್ ಬಳಿ ಸಿಡಿ ಇದ್ದರೆ ಬಿಡುಗಡೆ ಮಾಡಲಿ" ಎಂದು ಸಚಿವ ಎಂಟಿಬಿ ನಾಗರಾಜ್ ತಿಳಿಸಿದರು.












Click it and Unblock the Notifications