ಚಿತ್ರದುರ್ಗದಲ್ಲಿ ಗಂಡ ಹೆಂಡತಿ ಜಗಳ: ಗಂಡನ ಸಾವಿನಲ್ಲಿ ಅಂತ್ಯ
ಚಿತ್ರದುರ್ಗ, ಎಪ್ರಿಲ್ 02: ಗಂಡ, ಹೆಂಡತಿಯ ಜಗಳವು ಗಂಡನ ಸಾವಿನೊಂದಿಗೆ ಅಂತ್ಯಗೊಂಡಿರುವ ಘಟನೆ ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲ್ಲೂಕಿನ ಬಲ್ಲಾಳಸಮುದ್ರ ಗ್ರಾಮದಲ್ಲಿ ನಡೆದಿದೆ.
Recommended Video
ಹೊಸದುರ್ಗ ತಾಲ್ಲೂಕಿನ ಬಲ್ಲಾಳಸಮುದ್ರ ನಿವಾಸಿಗಳಾದ ಜಯಚಂದ್ರ ನಾಯ್ಡು (55) ಮತ್ತು ರುಕ್ಮಿಣಿ ನಡುವೆ ಕಳೆದ 13 ವರ್ಷಗಳಿಂದ ಬಿರುಕು ಕಾಣಿಸಿಕೊಂಡಿದ್ದು, ಗಂಡ ಹೆಂಡತಿ ಪ್ರತ್ಯೇಕವಾಗಿ ಜೀವನ ಸಾಗಿಸುತ್ತಿದ್ದರು.
ಜಮೀನಿನ ವಿಷಯದಲ್ಲಿ ಗಂಡ ಹೆಂಡತಿ ಮಧ್ಯೆ ಆಗಾಗ ಕಲಹ ನಡೆಯುತಿತ್ತು ಹಾಗೂ ತೋಟದಲ್ಲಿ ಬೋರಿನಿಂದ ನೀರು ಬಿಡುವ ವಿಚಾರದಲ್ಲಿ ಒಂದು ವರ್ಷದಿಂದ ಇವರಿಬ್ಬರ ನಡುವೆ ಸಂಘರ್ಷ ನಡೆಯುತ್ತಲೇ ಇತ್ತು.

ರುಕ್ಮಿಣಿ ಮಂಗಳವಾರ ಸಂಜೆ ಜಮೀನಿನಲ್ಲಿ ಕೆಲಸ ಮಾಡುವಾಗ ಬೆಂಕಿ ಇಟ್ಟಿದ್ದಳು ಎನ್ನಲಾಗಿದ್ದು, ಜಮೀನಿನಲ್ಲಿದ್ದ ತೆಂಗಿನ ಗರಿಗಳು ಹಾಗೂ ಬೋರಿಗೆ ಸಂಬಂಧಿಸಿದ ಮೇನ್ಸ್ ವೈರುಗಳು ಸುಟ್ಟಿದ್ದು, ವಿಷಯ ತಿಳಿದ ಪತಿ ಜಯಚಂದ್ರ ನಾಯ್ಡು ಬುಧವಾರ ತೋಟಕ್ಕೆ ಹೋದಾಗ ಬೆಳಿಗ್ಗೆ ಗಂಡ-ಹೆಂಡತಿ ನಡುವೆ ಜಗಳವಾಗಿ ಅದು ತೀವ್ರ ವಿಕೋಪ ಪಡೆದುಕೊಂಡಿದೆ.
ನಂತರ ಪತ್ನಿ ರುಕ್ಮಿಣಿ ತೆಂಗಿನ ಮರದ ಎಡೆಮಟ್ಟೆಯಿಂದ ಜಯಚಂದ್ರ ನಾಯ್ಡುಗೆ ಥಳಿಸಿದ್ದಾಳೆ. ಪತ್ನಿಯ ಹೊಡೆತಕ್ಕೆ ತಾಳಲಾರದೆ ಪತಿ ಕುಸಿದು ಬಿದ್ದಿದ್ದಾನೆ. ಚಿಕಿತ್ಸೆಗಾಗಿ ಬೆಲಗೂರು ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿರುವಾಗ ಮಾರ್ಗ ಮಧ್ಯೆ ಪತಿ ಕೊನೆಯುಸಿರೆಳೆದಿದ್ದಾನೆ.
ಈ ಸಂಬಂಧ ಶ್ರೀರಾಂಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.












Click it and Unblock the Notifications