ಹಿರಿಯೂರಿನಲ್ಲಿ 6ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಿದ್ಧತೆ ಹೇಗಿದೆ?, ಮಾಹಿತಿ ಇಲ್ಲಿದೆ
ಫೆಬ್ರವರಿ 25ರಂದು ಹಿರಿಯೂರಿನಲ್ಲಿ 6ನೇ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದೆ. ಹಾಗಾದರೆ ಕಾರ್ಯಕ್ರಮದ ಸಿದ್ಧತೆ ಹೇಗೆ ನಡೆಯುತ್ತಿದೆ ಎನ್ನುವ ವಿವರವನ್ನು ಇಲ್ಲಿ ಗಮನಿಸಿ.
ಚಿತ್ರದುರ್ಗ, ಫೆಬ್ರವರಿ, 24: ಹಿರಿಯೂರಿನಲ್ಲಿ ಫೆಬ್ರವರಿ 25 ರಂದು 6ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದೆ. ನಗರದ ನೆಹರೂ ಮೈದಾನದಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದು ತಾಲೂಕು ಕಸಾಪ ಅಧ್ಯಕ್ಷ ಡಾ. ವಿಎಂ ನಾಗೇಶ್ ಮಾಹಿತಿ ನೀಡಿದರು. ಹಾಗಾದರೆ ಕಾರ್ಯಕ್ರಮಕ್ಕೆ ಸಿದ್ಧತೆ ಹೇಗಿದೆ ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ.
ಸಮ್ಮೇಳನದ ಅಧ್ಯಕ್ಷರಾಗಿ ಹಿರಿಯೂರು ತಾಲೂಕಿನ ಸಿಎನ್ ಮಾಳಿಗೆ ಗ್ರಾಮದ ಡಾ. ಕರಿಯಪ್ಪ ಮಾಳಿಗೆ ಅವರನ್ನು ಆಯ್ಕೆ ಮಾಡಲಾಗಿದೆ. ಸದ್ಯ ಕರಿಯಪ್ಪ ಅವರು ಚಿತ್ರದುರ್ಗ ಸರ್ಕಾರಿ ಕಲಾ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸಮ್ಮೇಳನದ ರಾಷ್ಟ್ರ ಧ್ವಜಾರೋಹಣ ಕಾರ್ಯಕ್ರಮವನ್ನು ಶಾಸಕಿ ಕೆ. ಪೂರ್ಣಿಮಾ ಶ್ರೀನಿವಾಸ್ ಅವರು ನೆರವೇರಿಸಲಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಸಾಹಿತ್ಯ ಸಮ್ಮೇಳನ ಕಾರ್ಯಕ್ರಮದ ವಿವರ
ಸಮ್ಮೇಳನಾಧ್ಯಕ್ಷರ ಮೆರವಣಿಗೆಗೆ ತಹಶೀಲ್ದಾರ್ ಪ್ರಶಾಂತ್ ಕೆ. ಪಾಟೀಲ್ ಮತ್ತು ನಗರ ಠಾಣೆ ಸಿಪಿಐ ಅಭಯ್ ಕುಮಾರ್ ಅವರು ಚಾಲನೆ ನೀಡಲಿದ್ದಾರೆ. ನಂತರ ವೇದಿಕೆಯ ಸಮ್ಮೇಳನದ ಉದ್ಘಾಟನೆಯನ್ನು ಸಾಹಿತಿ ಹಾಗೂ ಹೋರಾಟಗಾರ ಬಂಜಗೆರೆ ಜಯಪ್ರಕಾಶ್ ನೆರವೇರಿಸಲಿದ್ದಾರೆ. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಸಕಿ ಕೆ. ಪೂರ್ಣಿಮಾ ಶ್ರೀನಿವಾಸ್ ಅವರು ವಹಿಸಲಿದ್ದಾರೆ ಎಂದು ತಿಳಿದುಬಂದಿದೆ.
ಗಮನ ಸೆಳೆಯಲಿರುವ ಕಲಾತಂಡಗಳು
ವಿವಿಧ ಕಲಾತಂಡಗಳೊಂದಿಗೆ ಸಮ್ಮೇಳನ ಅಧ್ಯಕ್ಷರ ಮೆರವಣಿಗೆ ಆರಂಭವಾಗಲಿದೆ. ಮೆರವಣಿಗೆಯು ಶ್ರೀ ತೇರು ಮಲ್ಲೇಶ್ವರ ದೇವಸ್ಥಾನದಿಂದ ಹೊರಟು ನಗರದ ಪ್ರಮುಖ ಬೀದಿಗಳಲ್ಲಿ ಸಾಗಿ ವೇದಿಕೆ ತಲುಪಲಿದೆ. ನಂತರ ಸಾಹಿತ್ಯ, ಸಂಸ್ಕೃತಿ, ಶಿಕ್ಷಣ ಮಹಿಳಾ ಚಿಂತನೆ ಕುರಿತು ಗೋಷ್ಠಿ ನಡೆಯಲಿದೆ. ಈ ಗೋಷ್ಠಿಯ ಅಧ್ಯಕ್ಷತೆಯನ್ನು ನಗರದ ವಾಣಿ ಸಕ್ಕರೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಮಹೇಶ್ ವಹಿಸಲಿದ್ದಾರೆ.
ಗೋಷ್ಠಿಯಲ್ಲಿ ಯಾರೆಲ್ಲ ಭಾಗಿಯಾಗಲಿದ್ದಾರೆ?
ಈ ಗೋಷ್ಠಿಯಲ್ಲಿ ಕವಹಿತ್ರಿ ತಾರಿಣಿ ಶುಭದಾಯಿನಿ, ನಾಗಭೂಷಣ್, ನಟರಾಜ್ ಹಾಗೂ ಚಿತ್ತಯ್ಯ ಭಾಗವಹಿಸಲಿದ್ದಾರೆ. ಮಧ್ಯಾಹ್ನ 3 ಗಂಟೆಗೆ ಕವಿಗೋಷ್ಠಿ ನಡೆಯಲಿದೆ. ಕವಿಗಳು, ಸಾಹಿತಿಗಳು ವಿವಿಧ ಕವಿತೆಗಳನ್ನು ವಾಚನ ಮಾಡಲಿದ್ದಾರೆ. ಹಾಗೆಯೇ ಈ ಗೋಷ್ಠಿಯ ಅಧ್ಯಕ್ಷತೆಯನ್ನು ಹಿರಿಯ ಸಾಹಿತಿ ಕೆ.ಎಸ್. ನಿಸಾರ್ ಅಹಮದ್ ವಹಿಸಲಿದ್ದಾರೆ.

ಈ ಸಾಹಿತ್ಯ ಸಮ್ಮೇಳನ ಒಂದು ದಿನ ಕಾರ್ಯಕ್ರಮವಾಗಿರುವುದರಿಂದ ಸಂಜೆ 5:00 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದೆ. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಾಜಿ ಸಚಿವ ಡಿ. ಸುಧಾಕರ್ ಅವರು ವಹಿಸಲಿದ್ದಾರೆ. ಸಮಾರೋಪ ಸಮಾರಂಭದ ಕಾರ್ಯಕ್ರಮ ಕುರಿತು ಲೋಕೇಶ್ ಆಗಸನಕಟ್ಟೆ ಮಾತನಾಡಲಿದ್ದಾರೆ.
ಬಳಿಕ ರಾತ್ರಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ. ಈ ಕಾರ್ಯಕ್ರಮಕ್ಕೆ ತಾಲೂಕಿನ ಎಲ್ಲಾ ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಸಾಹಿತ್ಯ ಸಮ್ಮೇಳನವನ್ನು ಯಶಸ್ವಿಗೊಳಿಸಬೇಕು ಎಂದು ಕಸಾಪ ಮಾನವಿ ಮಾಡಿದೆ.












Click it and Unblock the Notifications