ನಮ್ಮ ಹೆಸರಿನ ಮುಂದೆ ಡಾ. ಎಂದು ಬಳಸಬೇಡಿ: ಹೊಸದುರ್ಗ ಶ್ರೀಶಾಂತವೀರ ಸ್ವಾಮೀಜಿ ಮನವಿ
ಚಿತ್ರದುರ್ಗ, ಆಗಸ್ಟ್ 28: ಚಿತ್ರದುರ್ಗ ಜಿಲ್ಲೆಯ ಹೊಸದುರ್ಗದ ಕುಂಚಿಟಿಗ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಶ್ರೀ ಶಾಂತವೀರ ಸ್ವಾಮೀಜಿ ಅವರ ತಮ್ಮ ಹೆಸರಿನ ಮುಂದೆ ಡಾ. ಎಂದು ಬಳಸದಂತೆ ಪತ್ರಕರ್ತರಿಗೆ, ಸಾರ್ವಜನಿಕರಿಗೆ, ಹಾಗೂ ಮಠದ ಭಕ್ತರಿಗೆ ಮನವಿ ಮಾಡಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಶ್ರೀಗಳು ಇತ್ತೀಚಿಗೆ ಡಾಕ್ಟರೇಟ್ ಎನ್ನುವುದು ವ್ಯಾಪಾರಿಕರಣ ಆಗಿದೆ. ಹಣವಂತರು ಮತ್ತು ಅಸಮರ್ಥರು ದುಡ್ಡು ಕೊಟ್ಟು ಡಾ. ಪದವಿಯನ್ನು ಪಡೆಯುತ್ತಿರುವುದು ಅತ್ಯಂತ ಖಂಡನೀಯ ಮತ್ತು ಅಸಹ್ಯ ತಂದಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಬೀದಿ ಬದಿಯ ತರಕಾರಿ ವ್ಯಾಪಾರದಂತೆ ಗೌರವ ಡಾಕ್ಟರೇಟ್ ಪದವಿಗಳನ್ನು 10 ಸಾವಿರ, 20 ಸಾವಿರಕ್ಕೆ ಮಾರಾಟವಾಗುತ್ತಿವೆ. ಹಣವಂತರು, ಅಸಮರ್ಥರು ಹಣವನ್ನು ಕೊಟ್ಟು ಗೌರವ ಡಾಕ್ಟರೇಟ್ ಪದವಿ ಪಡೆದು ಪ್ರತಿಷ್ಠೆ ತೋರಿಸುತ್ತಾರೆ. ಇದು ಮಠಾಧೀಶರನ್ನು ಸಹ ಬಿಟ್ಟಿಲ್ಲ ಇಂತಹ ನಕಲಿಗಳಿಂದ ಅಸಲಿ, ಸಮರ್ಥರು, ಅರ್ಹರಿಗೆ ಆಗೌರವ ತರುವಂತಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಈ ಕಾರಣದಿಂದ ನನಗೆ ನೀಡಿದ್ದ ಡಾಕ್ಟರೇಟ್ ಪದವಿಯನ್ನು ತಿರಸ್ಕರಿಸಲಾಗಿದೆ ಎಂದರು. ಇದರ ಜೊತೆಗೆ ಡಾಕ್ಟರೇಟ್ ಪದವಿ ನೀಡುವುದಾಗಿ ಎರಡು ದೇಶಗಳಿಂದ ಬಂದಿರುವ ಮನವಿಯನ್ನು ಸಹ ಸ್ವೀಕರಿಸುವುದಿಲ್ಲ ಎಂದು ಶ್ರೀಗಳು ಸ್ಪಷ್ಟಪಡಿಸಿದ್ದಾರೆ.

ಇನ್ನು ಈ ಹಿಂದೆ ಸಾಮಾಜಿಕ ಕಾರ್ಯಕರ್ತ ಕಸವನಹಳ್ಳಿ ರಮೇಶ್ ಕೂಡ ಡಾಕ್ಟರೇಟ್ ಗಳು ಮಾರಾಟಕ್ಕಿವೆ ಎಂದು ಆರೋಪ ಮಾಡಿದ್ದರು. ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದ ಅವರು, ಈ ಹಿಂದೆ ಹಾಗೂ ಈಗಲೂ ಸಹ ಕೆಲವೊಂದು ವರ್ಚುಯಲ್ ಯುನಿವರ್ಸಿಟಿಗಳು ಡಾಕ್ಟರ್‌ಗಳನ್ನು ರಿಯಲ್ ಎಸ್ಟೇಟ್ ಉದ್ಯಮಿಗಳಿಗೆ, ವ್ಯಾಪಾರಿಗಳಿಗೆ, ರಾಜಕಾರಣಿಗಳಿಗೆ, ಸ್ವಾಮೀಜಿಗಳಿಗೆ, ಪದವಿಗಳಿಗಾಗಿ ಹಂಬಲಿಸುವವರಿಗೆ ಒಂದು ಡಾಕ್ಟರೇಟ್‌ಗೆ ಇಷ್ಟು ಹಣ ಎಂದು ಫಿಕ್ಸ್ ಮಾಡಿ ಹಣ ಪಡೆದು ಕೊಡ ಮಾಡುತ್ತಿದ್ದರು ಇದನ್ನು ಕೆಲವರು ಕೊಂಡುಕೊಂಡು ಹೆಸರಿನ ಮುಂದೆ ಲಗ್ಗತ್ತಿಸಿಕೊಂಡು ಸಂಭ್ರಮ ಪಡುತ್ತಿದ್ದಾರೆ ಎಂದು ಗುಡುಗಿದ್ದರು.
ಇದು ಇತ್ತೀಚಿಗೆ ಸರ್ಕಾರಿ ವಿಶ್ವವಿದ್ಯಾನಿಲಯಗಳಲ್ಲೂ ಸಹ ಕಾಸಿಗಾಗಿಯೂ, ಪ್ರಭಾವಕ್ಕಾಗಿಯೂ, ಮುಂದೆ ಸರ್ಕಾರದ ಉನ್ನತ ಪದವಿಗಳಿಗಾಗಿಯೂ ಕೆಲವೊಂದು ವ್ಯಾಪಾರಿ ಮನೋಭಾವದ ಶಿಕ್ಷಣ ಸಂಸ್ಥೆಗಳನ್ನು ಹೊಂದಿರುವ ರಾಜಕಾರಣಿಗಳಿಗೆ, ಧಾರ್ಮಿಕ ನೇತಾರರಿಗೆ, ಸೇವೆಯ ಗಂಧ ಗಾಳಿ ಗೊತ್ತಿಲ್ಲದ ಜನರನ್ನು ಹಿಂಡಿ-ಹಿಪ್ಪೆ ಮಾಡುವ ಜನರಿಗೆ ಗೌರವ ಡಾಕ್ಟರೇಟ್‌ಗಳನ್ನು ರೆಡ್ ಕಾರ್ಪೆಟ್ ಹಾಸಿ ಕೂಡ ಮಾಡುತ್ತಿರುವುದು ನಮ್ಮ ಶಿಕ್ಷಣ ಸಂಸ್ಥೆಗಳ ಗೌರವ ಹಾದಿ - ಬೀದಿಯಲ್ಲಿ ಹೀಯಾಳಿಸುವ ಮಟ್ಟಕ್ಕೆ ಬಂದು ನಿಂತಿರುವುದು ದುರಂತವೇ ಸರಿ ಎಂದು ಆರೋಪಿಸಿದ್ದರು.












Click it and Unblock the Notifications