ಹಿರಿಯೂರಿನ ಈ ದೇವಸ್ಥಾನ ಸರ್ವಧರ್ಮದವರಿಗೂ ಎರಡನೇ ಆಸ್ಪತ್ರೆ- ನೀವು ತಿಳಿಯಲೇಬೇಕು ಪವರ್‌ಫುಲ್ ದೇವಿಯ ಬಗ್ಗೆ
ಚಿತ್ರದುರ್ಗ, ಡಿಸೆಂಬರ್, 14: ಇತ್ತಿನ ದಿನಗಳಲ್ಲಿ ರಾಜಕೀಯ, ಶಿಕ್ಷಣ, ಆರೋಗ್ಯ ಎಲ್ಲಾ ಕಡೆಗೂ ಜಾತಿ, ಧರ್ಮ ವರ್ಕ್ ಔಟ್ ಆಗ್ತಾ ಇದೆ. ಇಂತಹ ಸಂದರ್ಭದಲ್ಲಿಯೂ ಇಲ್ಲೊಂದು ದೇಗುಲದಲ್ಲಿ ಸರ್ವ ಜನಾಂಗದ ಶಾಂತಿಯ ತೋಟ ಎಂಬ ಸಂದೇಶ ಕಾಣಬಹುದು. ಸರ್ವಧರ್ಮದವರು ಇಲ್ಲಿಗೆ ಬಂದು ತಮ್ಮ ಕಷ್ಟಕರ್ಪಣ್ಯವನ್ನು ಈಡೇರಿಸುವಂತೆ ಪಾರ್ಥನೆ ಮಾಡಿಕೊಳ್ಳುತ್ತಾರೆ. ಹಾಗದರೆ ಆ ದೇವಾಲಯ ಯಾವುದು, ಎಲ್ಲಿದೆ ಎಂದು ಇಲ್ಲಿ ತಿಳಿಯಿರಿ.
ಕೋಟೆ ನಾಡು ಚಿತ್ರದುರ್ಗ ಜಿಲ್ಲೆಯ ಹಿರಿಯೂರು ನಗರದ ವೇದಾವತಿ ನದಿ ದಡದಲ್ಲಿರುವ ದೇವಾಲಯವೇ ಐತಿಹಾಸಿಕ ಶ್ರೀ ರಾಜ ದುರ್ಗಾಪರಮೇಶ್ವರಿ ಅಮ್ಮನವರ ದೇವಸ್ಥಾನ. ಈ ದೇವಾಲಯಕ್ಕೆ ಹಿಂದೂ ಮುಸ್ಲಿಂ, ಕ್ರೈಸ್ತ ಭಕ್ತರು ಆಗಮಿಸುತ್ತಾರೆ. ಹೀಗೆ ಸರ್ವಧರ್ಮದ ಭಕ್ತರ ಬಳಗವನ್ನು ಈ ದೇವಾಲಯ ಹೊಂದಿದೆ. ಇಲ್ಲಿನ ತಾಯತವನ್ನು ಕಟ್ಟಿಸಿಕೊಳ್ಳುಲು ಹೊರ ರಾಜ್ಯಗಳಿಂದಲೂ ಭಕ್ತರು ಆಗಮಿಸುತ್ತಾರಂತೆ.

ವರ್ಷದ 365 ದಿನ ಪ್ರತಿನಿತ್ಯವೂ ದೇವಾಲಯದಲ್ಲಿ ಪೂಜೆ, ಪುನಸ್ಕಾರಗಳು ನಡೆಯುತ್ತವೆ. ಈ ಪೂಜೆಗೆ ಸರ್ವಧರ್ಮಗಳ ಭಕ್ತರು ಆಗಮಿಸಿ ದೇವಿಯ ಆರಾಧನೆಯಲ್ಲಿ ಪಾಲ್ಗೊಳ್ಳುತ್ತಾರೆ. ಮಂಗಳವಾರ ಹಾಗೂ ಶುಕ್ರವಾರ ಅಮ್ಮನವರಿಗೆ ವಿಶೇಷ ಪೂಜೆ ನಡೆಯುತ್ತದೆ. ಅದರಲ್ಲೂ ಅಮಾವಾಸ್ಯೆ ಹಾಗೂ ಹುಣ್ಣಿಮೆ ದಿನ ಅಲಂಕಾರ, ನೈವೇದ್ಯದ ವಿವಿಧ ಧಾರ್ಮಿಕ ಪೂಜಾ ಕಾರ್ಯಕ್ರಮಗಳನ್ನು ಸಲ್ಲಿಸಲಾಗುತ್ತದೆ. ತಮ್ಮ ಮಕ್ಕಳಿಗೆ ಸರ್ವ ಸಂಕಷ್ಟಗಳು ದೂರಾಗಲಿ ಅಂತಾ ತಾಯತ ಕಟ್ಟಿಸಿ ಜಗನ್ಮಾತೆಗೆ ಬೇಡಿಕೊಳ್ಳುವ ವಾಡಿಕೆ ಅನಾಧಿ ಕಾಲದಿಂದ ನಡೆದುಕೊಂಡು ಬಂದಿದೆ.
ದುರ್ಗಮ್ಮ ದೇವಾಲಯಕ್ಕೆ ಅನಾದಿ ಕಾಲದಿಂದ ಜಾತಿ, ಧರ್ಮ ಅನ್ನದೆ ಎಲ್ಲಾ ಜಾತಿ, ಧರ್ಮಗಳ ಭಕ್ತರು ದೇವಿಯನ್ನು ಆರಾಧಿಸುತ್ತಾ ಬಂದಿದ್ದಾರೆ. ಇಲ್ಲಿಗೆ ಬರುವ ಎಲ್ಲಾ ಧರ್ಮೀಯ ಭಕ್ತರು ತಮ್ಮ ಮಕ್ಕಳಿಗೆ ಒಳ್ಳೆಯದಾಗಲಿ, ಯಾವುದೇ ರೋಗ ರುಜಿನ ಬಾರದಿರಲಿ, ಯಾವುದೇ ಪೀಡೆ ಕಾಟ ಬಾಧಿಸದಿರಲಿ ಅಂತಾ ದೇವಿಯ ತಾಯತ ಕಟ್ಟಿಸುವ ವಾಡಿಕೆ ಇದೆ.
ಇಲ್ಲಿ ತಾಯತ ಕಟ್ಟಿಸಿಕೊಂಡ ಮಕ್ಕಳಿಗೆ ಜ್ವರ, ಕೆಮ್ಮು, ಚಿಕ್ಕ ಮಕ್ಕಳು ಹಠ ಮಾಡುವುದು ಸೇರಿದಂತೆ ವಿವಿಧ ರೋಗರುಜಿನಗಳು ವಾಸಿಯಾಗುತ್ತದೆ ಎನ್ನುವುದು ಭಕ್ತರ ಬಲವಾದ ನಂಬಿಕೆಯಾಗಿದೆ. ಹಾಗಾಗಿ ಅಮಾವಾಸ್ಯೆ ಹಾಗೂ ಹುಣ್ಣಿಮೆ ದಿನ ದೇವಾಲಯಕ್ಕೆ ಆಗಮಿಸುವ ಭಕ್ತರು ವಿಶೇಷ ಪೂಜೆ ಸಲ್ಲಿಸಿ ತಮ್ಮ ಮಕ್ಕಳಿಗೆ ಯಾವುದೇ ರೋಗ ರುಜಿನ ಬಾಧಿಸದಿರಲಿ, ದೋಷಗಳು ದೂರವಾಗಲಿ ಅಂತಾ ಪ್ರಾರ್ಥಿಸಿ ತಾಯತ ಕಟ್ಟಿಸುತ್ತಾರೆ. ಅಲ್ಲದೆ ಜಗನ್ಮಾತೆಗೆ ನಮಿಸಿ ಅವಳ ಕೃಪೆಗೆ ಪಾತ್ರರಾಗುತ್ತಾರೆ. ಇದು ಸುಮಾರು 12 ಅಥವಾ 13ನೇ ಶತಮಾನದ ಇತಿಹಾಸ ಹೊಂದಿದೆ.
ದೇವಾಲಯ ಹಿನ್ನೆಲೆ
ಜಿಲ್ಲೆಯ ಹಿರಿಯೂರು ನಗರಕ್ಕೆ ತನ್ನದೇ ಆದ ಪುರಾತನ ಇತಿಹಾಸ ಇದೆ. ಹಿಂದೆ ಈ ನಗರವನ್ನು ಘನಪುರಿ ಎಂದು ಕರೆಯುತ್ತಿದ್ದರು. ಘನಪುರಿ ಕಾಲಘಟ್ಟದಲ್ಲಿ ದೇವಿ ನೆಲೆಸಿದ್ದಳು ಎಂಬ ಪ್ರತೀತಿ ಇದೆ. ಗ್ರಾಮ ದೇವತೆಯಾಗಿ ಮಾರ್ಪಟ್ಟ ಈ ದೇವಿ ಶತ-ಶತಮಾನಗಳಿಂದ ಭಕ್ತರನ್ನು ಹಾರಸುತ್ತಾ ಬಂದಿರುವ ದುರ್ಗಾ ದೇವಿ ಅಮ್ಮನವರ ದೇವಸ್ಥಾನ ನಾಥಪಂಥಕ್ಕೆ ಸೇರಿದ್ದಾಗಿದೆ. ನಾಥಪಂಥದ ಸಂಪ್ರದಾಯದಂತೆ ದೇವಿಗೆ ಪೂಜೆ ಪುನಸ್ಕಾರಗಳು ನಡೆಯುತ್ತವೆ.
ವಿಜಯನಗರ ಅರಸರು, ಚಿತ್ರದುರ್ಗ ಮದಕರಿನಾಯಕರು ಹಾಗೂ ಹಿರಿಯೂರು ಆಳಿದ ರಾಜ ವೀರ ಕೆಂಚಪ್ಪನಾಯಕರಿಂದಲೂ ಪೂಜಿಸಲ್ಪಟ್ಟ ನಗರ ದೇವತೆಯಾಗಿದ್ದಾಳೆ. ಅಲ್ಲದೆ ಪ್ರಾರಂಭದಲ್ಲಿ ಹಿರಿಯೂರು ಆಡಳಿತ ರಾಜಾ ಚಿತ್ರಶೇಖರನಾಯಕ ಹಾಗೂ ಸೋಮಶೇಖರ ನಾಯಕ ಇವರ ಮನೆಯ ಅಧಿದೇವತೆಯಂತೆ.
ಈ ದೇವಾಲಯಕ್ಕೆ ಸುಮಾರು 150 ವರ್ಷಗಳ ಇತಿಹಾಸವಿದೆ. ಹಿಂದೆ ಚಿಕ್ಕಗುಡಿಯಾಗಿತ್ತು. ಇಲ್ಲಿನ ಅರ್ಚಕರು ದೇವಾಲಯವನ್ನು ಮರು ನಿರ್ಮಾಣ ಮಾಡಿದ್ದಾರೆ. ಅದರಲ್ಲೂ ಮರಿಯಪ್ಪ, ಸಿದ್ದಪ್ಪ ಹಾಗೂ ದುರ್ಗಪ್ಪ ಸಹೋದರರಲ್ಲಿ ಕಿರಿಯರಾದ ದುರ್ಗಪ್ಪ ದೇವಿಯನ್ನು ಆರಾಧಿಸಿಕೊಂಡು ಬರುತ್ತಿದ್ದರು. ಪ್ರಸ್ತುತ ದೇವಾಲಯದ ಪೂಜೆಯನ್ನು 6ನೇ ತಲೆಮಾರಿನ ಅರ್ಚಕರು ಪೂಜಾ ವಿಧಿ-ವಿಧಾನಗಳನ್ನು ಮುನ್ನಡೆಸುತ್ತಿದ್ದಾರೆ.
ದಿನ ಕಳೆದಂತೆ ದೇವಸ್ಥಾನ ಶಿಥಿಲ ವ್ಯವಸ್ಥೆ ತಲುಪುತ್ತಾ ಬಂದಾಗ 1992ರಲ್ಲಿ ಮತ್ತೊಮ್ಮೆ ದೇವಗುಲ ನೂತನ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಲಾಯಿತು 2015ನೇ ಜನವರಿ 25ರಿಂದ 28ರಂದು. ನಂತರ ದೇವಾಲಯ ಉದ್ಘಾಟನೆಗೊಂಡಿತು.
1948ರಲ್ಲಿ ದೊಡ್ಡ ಜಾತ್ರೆ
ಸ್ವಾತಂತ್ರ್ಯ ಬಂದ ಮರು ವರ್ಷವೇ ಈ ದೇವಿಯ ಜಾತ್ರೆಯನ್ನು ಬಹಳ ವಿಜೃಂಭಣೆಯಿಂದ ನೆರವೇರಿಸಿದ್ದರು. ಇದೇ ಕೊನೆಯ ಜಾತ್ರೆ. ಇಂತಹ ಜಾತ್ರೆ ಇಂದಿಗೂ ನಡೆದಿಲ್ಲ. ಆದಿಶಕ್ತಿ ಎಂದು ಕರೆಯಲ್ಪಡುವ ಶಕ್ತಿ ದೇವತೆಗಳಲ್ಲಿ ದುರ್ಗೆಯು ಪ್ರಮುಖ ಸ್ಥಾನ ಹೊಂದಿದ್ದಾಳೆ. ದೇವಿಯ ಉತ್ಸವ ಮೂರ್ತಿಯ ಹಿಂಭಾಗದಲ್ಲಿ ಸಿಂಹವಿದ್ದು, ಕೋಣನ ತಲೆಯ ಮೇಲೆ ಪದ್ಮಾಸನದಲ್ಲಿ ಕುಳಿತಿರುವ ಭಂಗಿಯಲ್ಲಿ ದೇವಿಯ ವಿಗ್ರಹ ಇರುವುದನ್ನು ಕಾಣಬಹುದು. ಈಕೆಯ ಬಲಗೈಯಲ್ಲಿ ಕತ್ತಿಯನ್ನು ಎಡಗೈಯಲ್ಲಿ ಕುಂಕುಮದ ಬಟ್ಟಲನ್ನು ಕಾಣಬಹುದಾಗಿದೆ.
ಮತ್ತೊಂದು ಅಮ್ಮನವರ ಬಲಭಾಗದಲ್ಲಿ ಯಲ್ಲಮ್ಮ, ಎಡಭಾಗದಲ್ಲಿ ಮಾರಮ್ಮ ದೇವಿಯ ವಿಗ್ರಹಗಳನ್ನು ಸಹ ಕಾಣಬಹುದು. ಪ್ರತಿ ವರ್ಷ ನವರಾತ್ರಿಯಲ್ಲಿ ಉತ್ಸವ ಮೂರ್ತಿಯನ್ನು ದೇವಾಲಯದಿಂದ ಹೊರ ತೆಗೆದು ನವರಾತ್ರಿ ಉತ್ಸವ ನೆರವೇರಿಸಲಾಗುತ್ತದೆ. ಈ ಸಂದರ್ಭದಲ್ಲಿ ಭಕ್ತರು ಹತ್ತಿರದಿಂದ ಅಮ್ಮನವರನ್ನು ನೋಡಿ ಕಣ್ತುಂಬಿಕೊಳ್ಳಬಹುದು.
ಶ್ರೀ ರಾಜ ದುರ್ಗಾಪರಮೇಶ್ವರಿ ದೇವಿಯ ಮಹಿಮೆ ಅಪಾರವಾಗಿದೆ. ಹನ್ನೆರಡನೇ ಶತಮಾನದಿಂದ ದೇವಿಯ ಪವಾಡವಾಗಿದ್ದು, ಯಾರಿಗಾದರೂ ಕಷ್ಟ ತೊಂದರೆಗಳು, ರೋಗರುಜಿನೆಗಳು, ಇನ್ನಿತರ ಆರೋಗ್ಯ ಸಮಸ್ಯೆಗಳು, ವ್ಯಾಪಾರ, ಮನೆಗಳಲ್ಲಿ ಸಮಸ್ಯೆ ಕಂಡು ಬಂದರೆ ಅಮ್ಮನ ಸನ್ನಿಧಾನಕ್ಕೆ ಬಂದು ಪೂಜೆ ಸಲ್ಲಿಸಿ ಅಂತ್ರ- ತಾಯತವನ್ನು ಕಟ್ಟಿಸಿಕೊಂಡರೆ ಎಂತಹ ಸಮಸ್ಯೆ ಇದ್ದರೂ ಬಗೆಯುತ್ತದೆ. ದೇವಿಯ ಸನ್ನಿಧಿಯಲ್ಲಿ ನೀಡುವ ತಾಯತಗಳಿಗೆ ಯಾವುದೇ ಧರ್ಮ, ಭೇದವಿಲ್ಲದೆ ಎಲ್ಲಾ ವರ್ಗದ ಜನರಿಗೆ ಹಾಕಲಾಗುತ್ತದೆ.
ಹಿರಿಯೂರು ಮಾತ್ರವಲ್ಲದೆ ಚಿತ್ರದುರ್ಗ ಜಿಲ್ಲೆ ಸೇರಿದಂತೆ ತಮಿಳುನಾಡು, ಆಂಧ್ರಪ್ರದೇಶ, ಒರಿಸ್ಸಾ, ಬಿಹಾರ ರಾಜ್ಯಗಳಿಂದಲೂ ಸಹ ಅಮ್ಮನ ತಾಯತ ಕಟ್ಟಿಸಿಕೊಳ್ಳಲು ಭಕ್ತರು ಆಗಮಿಸುವುದನ್ನು ಗಮನಿಸಬಹುದಾಗಿದೆ. ಒಟ್ಟಾರೆಯಾಗಿ ಕೋಟೆ ನಾಡು ಚಿತ್ರದುರ್ಗ ಹಿರಿಯೂರು ಗ್ರಾಮದೇವತೆ ಇಲ್ಲಿನ ಭಕ್ತರ ಪಾಲಿಗೆ ಎರಡನೇ ಆಸ್ಪತ್ರೆಯಾಗಿ ಖ್ಯಾತಿ ಪಡೆದಿದೆ. ದೇವಿಯ ತಾಯತವನ್ನು ಹಾಕಿಸಿಕೊಂಡು ಆರೋಗ್ಯವಂತರಾಗಿ ಇರುವ ಮಕ್ಕಳು, ಭಕ್ತರು ಲೆಕ್ಕವಿಲ್ಲದಷ್ಟು ಸಿಗುತ್ತಾರೆ ಎನ್ನಬಹುದು.












Click it and Unblock the Notifications