Vani Vilas Sagara: ಜಲಾಶಯಕ್ಕೆ ಬಾಗಿನ ಅರ್ಪಿಸಿದ ಮೈಸೂರಿನ ಮಹಾರಾಜ ಯದುವೀರ್ ದತ್ತ ಒಡೆಯರ್
ಚಿತ್ರದುರ್ಗ, ಜನವರಿ, 05: ಬಯಲು ಸೀಮೆಯ ಅಚ್ಚುಕಟ್ಟು ಪ್ರದೇಶದ ರೈತರಿಗೆ ಅನುಕೂಲವಾಗಲಿ ಎಂಬ ದೃಷ್ಟಿಯಿಂದ ನಮ್ಮ ಸಂಸ್ಥಾನದವರು ವೇದಾವತಿ ನದಿಗೆ ವಾಣಿ ವಿಲಾಸ ಜಲಾಶಯವನ್ನು ನಿರ್ಮಾಣ ಮಾಡಿದ್ದಾರೆ. ನಮ್ಮ ಸಂಸ್ಥಾನದವವರು ರೈತರ ಬಗ್ಗೆ ಅಪಾರವಾದ ಕಾಳಜಿ ಹೊಂದಿದ್ದರು ಎಂದು ಮೈಸೂರು ಸಂಸ್ಥಾನದ ಯದುವೀರ್ ದತ್ತ ಒಡೆಯರ್ ಹೇಳಿದರು.
ತಾಲೂಕು ರೈತ ಸಂಘ ಹಾಗೂ ಹಸಿರು ಸೇನೆ ಹಾಗೂ ವಿವಿಧ ಪಕ್ಷಗಳ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ವಾಣಿವಿಲಾಸ ಜಲಾಶಯಕ್ಕೆ ಬಾಗಿನ ಅರ್ಪಿಸಿದ್ದು, ನಂತರ ರೈತ ಸಂಘ ಸನ್ಮಾನ ಸ್ವೀಕರಿಸಿದರು. ಹಾಗೆಯೇ ಇದಕ್ಕೂ ಮೊದಲು ನಗರದ ಐತಿಹಾಸಿಕ ದಕ್ಷಿಣ ಕಾಶಿ ಶ್ರೀ ತೇರು ಮಲ್ಲೇಶ್ವರ ದೇವಾಲಯಕ್ಕೆ ಭೇಟಿ ನೀಡಿ ದೇವರ ಆಶೀರ್ವಾದ ಪಡೆದರು. ವಾಣಿ ವಿಲಾಸ ಜಲಾಶಯದ ಮುಂಭಾಗದಲ್ಲಿ ಮೈಸೂರು ನಾಲ್ವಡಿ ಕೃಷ್ಣರಾಜ ಒಡೆಯರ್ ಹಾಗೂ ಕೆಂಪ ನಂಜಮ್ಮಣ್ಣಿ ಅವರ ಪ್ರತಿಮೆ ನಿರ್ಮಾಣದ ಅನಾವರಣಕ್ಕೆ ದಿನಾಂಕ ನಿಗದಿ ಪಡಿಸುವಂತೆ ಶಾಸಕಿ ಕೆ. ಪೂರ್ಣಿಮಾ ಶ್ರೀನಿವಾಸ್ ಅವರು ಶ್ರೀ ತೇರು ಮಲ್ಲೇಶ್ವರ ದೇವಾಲಯದಲ್ಲಿ ಯದುವೀರ್ ದತ್ತ ಒಡೆಯರ್ ಅವರನ್ನು ಭೇಟಿ ಮಾಡಿ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಶಾಸಕಿ ಕೆ. ಪೂರ್ಣಿಮಾ ಶ್ರೀನಿವಾಸ್, ಮಾಜಿ ಸಚಿವ ಡಿ. ಸುಧಾಕರ್, ರಾಜ್ಯ ಪ್ರವರ್ಗ-1 ರ ಒಕ್ಕೂಟದ ರಾಜ್ಯಾಧ್ಯಕ್ಷರಾದ ಡಿ.ಟಿ. ಶ್ರೀನಿವಾಸ್, ರೈತ ಸಂಘದ ಅಧ್ಯಕ್ಷ ಕೆ.ಟಿ. ತಿಪ್ಪೇಸ್ವಾಮಿ, ಕೆಸಿ ಹೊರಕೇರಪ್ಪ, ನಗರಸಭೆ ಸದಸ್ಯ ಈ. ಮಂಜುನಾಥ್, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಆರ್. ನಾಗೇಂದ್ರ ನಾಯ್ಕ , ಶಿವರಂಜನಿ ಯಾದವ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ವಿವಿ ಸಾಗರ ಜಲಾಶಯಕ್ಕೆ ಬಾಗಿನ ಅರ್ಪಿಸಿದ್ದ ಸಿಎಂ
89 ವರ್ಷಗಳ ಬಳಿಕ ಹಿರಿಯೂರು ತಲೂಕಿನ ವಾಣಿ ವಿಲಾಸ ಸಾಗರದ ಕೋಡಿ ಬಿದ್ದಿದ್ದು, ವಾಣಿ ವಿಲಾಸ ಜಲಾಶಯಕ್ಕೆ ಬಾಗಿನ ಅರ್ಪಿಸುವ ಸೌಭಾಗ್ಯ ನನಗೆ ಸಿಕ್ಕಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇತ್ತೀಚೆಗಷ್ಟೇ ಹೇಳಿದರು. ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ವಾಣಿ ವಿಲಾಸ ಜಲಾಶಯಕ್ಕೆ ಬಾಗಿನ ಅರ್ಪಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ್ದ ಅವರು, 89 ವರ್ಷಗಳ ಬಳಿಕ ಬಾಗಿನ ಬಿಡುವ ಸೌಭಾಗ್ಯ ನನಗೆ ಸಿಕ್ಕಿದೆ. ಇದೊಂದು ಐತಿಹಾಸಿಕ ಕ್ಷಣ ಎಂದಿದ್ದರು.

89 ವರ್ಷಗಳ ಬಳಿಕ ಬಿದ್ದ ಜಲಾಶಯದ ಕೋಡಿ
ಇದು ಮೈಸೂರು ಮಹಾರಾಜರ ಕಾಲದಲ್ಲಿ ಕಟ್ಟಿರುವ ಜಲಾಶಯವಾಗಿದೆ. 89 ವರ್ಷಗಳ ಬಳಿಕ ಜಲಾಶಯದ ಕೋಡಿ ಬಿದ್ದಿದೆ. ಇದರಿಂದ ರೈತರ ನೀರಾವರಿಗೆ ತುಂಬಾ ಸಹಾಯ ಆಗಲಿದ್ದು, ಇದು ಮಧ್ಯ ಕರ್ನಾಟಕದ ಜಲಪಾತ್ರೆ ಅಂತಲೇ ಹೆಸರುವಾಸಿಯಾಗಿದೆ. ಜಲಾಶಯವನ್ನು ತುಂಬಿಸುವ ಮೂಲಕ ಚಿತ್ರದುರ್ಗ ಜಿಲ್ಲೆಗೆ ಕುಡಿಯುವ ನೀರು ಮತ್ತು ನೀರಾವರಿ ಸೌಲಭ್ಯವನ್ನು ನೀಡಿದ್ದೇವೆ. ಅಂದಿನ ಮೈಸೂರು ಮಹಾರಾಜರ ದೂರದೃಷ್ಟಿಯಿಂದ ಈ ಜಲಾಶಯ ನಿರ್ಮಾಣವಾಗಿದೆ. ಆರ್ಥಿಕ ಸಂಕಷ್ಟ ಇದ್ದರೂ ಕೂಡ ಮಹಾರಾಜರು ತಮ್ಮ ಮನೆತನದ ಒಡವೆಗಳನ್ನು ಮಾರಿ ಜಲಾಶಯವನ್ನು ನಿರ್ಮಾಣ ಮಾಡಿದ್ದಾರೆ. ಆದ್ದರಿಂದ ರಾಜ್ಯದ ಜನತೆಯ ಪರವಾಗಿ ಒಡೆಯರ್ ಮನೆತನಕ್ಕೆ ಧನ್ಯವಾದ ಅರ್ಪಿಸುವೆನು ಎಂದಿದ್ದರು.












Click it and Unblock the Notifications