ಹಿರಿಯೂರು ಜೆಡಿಎಸ್ ಅಭ್ಯರ್ಥಿ ಅಂತಿಮ: ಎಚ್.ಡಿ ರೇವಣ್ಣ ಆಪ್ತನಿಗೆ ಟಿಕೆಟ್
ನಿವೃತ್ತ ಮುಖ್ಯ ಇಂಜಿನಿಯರ್ ರವೀಂದ್ರಪ್ಪ ಅವರಿಗೆ ಹಿರಿಯೂರು ಕ್ಷೇತ್ರದ JDS ಟಿಕೆಟ್ ಬಹುತೇಕ ಖಚಿತವಾಗಲಿದೆ ಎನ್ನಲಾಗುತ್ತಿದೆ. ಸರಳ ಸಜ್ಜನಿಕೆಯ ವ್ಯಕ್ತಿತ್ವ ಹೊಂದಿರುವ ನಿವೃತ್ತ ಮುಖ್ಯ ಇಂಜಿನಿಯರ್ ರವೀಂದ್ರಪ್ಪ ಅವರು ಮಾಜಿ ಸಚಿವ HD ರೇವಣ್ಣನ ಪರಮ ಆಪ್ತರಾಗಿದ್ದಾರೆ.
ಚಿತ್ರದುರ್ಗ, ಮಾರ್ಚ್ 1: ರಾಜ್ಯ ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಬೆನ್ನಲ್ಲೇ ವಿವಿಧ ರಾಜಕೀಯ ಪಕ್ಷಗಳಲ್ಲಿ ಚುನಾವಣೆಯ ಕಾವು ರಂಗೇರುತ್ತಿದೆ. ದುಡ್ಡು ಇದ್ದರೆ ಹೊರಗಿನವರು ಯಾರು ಬೇಕಾದರೂ ಬಂದು ಸ್ಪರ್ಧಿಸಿ ಹಿರಿಯೂರು ಕ್ಷೇತ್ರದಲ್ಲಿ ಗೆಲುವು ಸಾಧಿಸಬಹುದು ಎಂಬ ಹಣೆ ಪಟ್ಟಿಯನ್ನು ಹಿರಿಯೂರು ಕ್ಷೇತ್ರ ಕಟ್ಟಿಕೊಂಡಿದೆ.
ಈಗಾಗಲೇ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳು ಭರ್ಜರಿ ಪ್ರಚಾರ ಕೈಗೊಂಡಿವೆ. ಜೆಡಿಎಸ್‌ನಲ್ಲಿ ಆಕಾಂಕ್ಷಿಗಳ ಪಟ್ಟಿ ಹೆಚ್ಚು ಇದ್ದರಿಂದ ಟಿಕೆಟ್ ಘೋಷಣೆಯಾಗಿರಲಿಲ್ಲ. ಇದೀಗ ನಿವೃತ್ತ ಮುಖ್ಯ ಇಂಜಿನಿಯರ್ ರವೀಂದ್ರಪ್ಪ ಅವರಿಗೆ ಹಿರಿಯೂರು ಕ್ಷೇತ್ರದ ಜೆಡಿಎಸ್ ಟಿಕೆಟ್ ಬಹುತೇಕ ಖಚಿತವಾಗಲಿದೆ ಎನ್ನಲಾಗುತ್ತಿದೆ. ಟಿಕೆಟ್ ಖಚಿತದ ಬಗ್ಗೆ ಸ್ಥಳೀಯ ಪ್ರಮುಖ ಮುಖಂಡರಿಂದ ಮಾಹಿತಿ ಹೊರಬಿದ್ದಿದೆ.

ಈ ಹಿಂದೆ ನಿರ್ಮಿತಿ ಕೇಂದ್ರದ ಅಧಿಕಾರಿ ಮೂಡಲಗಿರಿಯಪ್ಪ, ಮಾಜಿ ಜಿಲ್ಲಾ ಪಂಚಾಯತಿ ಅಧ್ಯಕ್ಷ ಪಿಲಾಜಿನಲ್ಲಿ ಜಯಣ್ಣ, ಹಾಗೂ ತಾಲೂಕು ಜೆಡಿಎಸ್ ಘಟಕದ ಅಧ್ಯಕ್ಷರಾಗಿದ್ದ ಶಿವಪ್ರಸಾದ್ ಗೌಡ ಇವರು ಆಕಾಂಕ್ಷಿಗಳಾಗಿದ್ದರು. ಆದರೆ ಪಕ್ಷದ ವರಿಷ್ಠರು ಆಕಾಂಕ್ಷಿಗಳ ಜೊತೆ ಸಭೆ ನಡೆಸಿದ ಬಳಿಕ ಅಂತಿಮವಾಗಿ ರವೀಂದ್ರಪ್ಪ ಅವರಿಗೆ ಟಿಕೆಟ್ ಸಿಗುವುದು ಬಹುತೇಕ ನಿಶ್ಚಿತವಾಗಿದೆ. ಶೀಘ್ರದಲ್ಲೇ ಪಕ್ಷದ ವರಿಷ್ಠರು ಹಿರಿಯೂರು ಕ್ಷೇತ್ರಕ್ಕೆ ಟಿಕೆಟ್‌ನ್ನು ಅಧಿಕೃತವಾಗಿ ಘೋಷಣೆ ಮಾಡಲಿದ್ದಾರೆ ಎನ್ನಬಹುದು.
ಸರಳ ಸಜ್ಜನಿಕೆಯ ವ್ಯಕ್ತಿತ್ವ ಹೊಂದಿರುವ ನಿವೃತ್ತ ಮುಖ್ಯ ಇಂಜಿನಿಯರ್ ರವೀಂದ್ರಪ್ಪ ಅವರು ಮಾಜಿ ಸಚಿವ ಎಚ್.ಡಿ. ರೇವಣ್ಣನ ಪರಮ ಆಪ್ತರಾಗಿದ್ದಾರೆ. ಮಾಜಿ ಸಚಿವ ರೇವಣ್ಣನ ಭರವಸೆಯೊಂದಿಗೆ ಕ್ಷೇತ್ರದಲ್ಲಿ ಪ್ರಚಾರ ಕೈಗೊಂಡಿದ್ದರು. ಟಿಕೆಟ್ ಪಡೆಯಲು ಇನ್ನಿಲ್ಲದ ಕಸರತ್ತು ನಡೆಸಬೇಕಾಗಿತ್ತು. ಇದೀಗ ಟಿಕೆಟ್ ಸಿಗುವ ಸಾಧ್ಯತೆ ದಟ್ಟವಾಗಿದೆ.

ಈಗಾಗಲೇ ರವೀಂದ್ರಪ್ಪ ತಾಲೂಕಿನ ಉತ್ತಮ ಒಡನಾಟ ಹೊಂದಿದ್ದು, ಕ್ಷೇತ್ರದ ಮತದಾರರಿಗೆ ಚಿರಪರಿಚಿತರಾಗಿದ್ದಾರೆ. ಕ್ಷೇತ್ರದ ಎಲ್ಲಾ ಹಳ್ಳಿ, ಹಳ್ಳಿಗಳಲ್ಲೂ ರವೀಂದ್ರಪ್ಪ ಅವರ ಪ್ಲೆಕ್ಸ್, ಬ್ಯಾನರ್ ಕಟ್ಟಲಾಗಿದೆ. ಉಳಿದಂತೆ ಒಂದು ಸುತ್ತಿನ ಪ್ರಚಾರ ಕಾರ್ಯ ಮುಗಿಸಿ, ಮದುವೆ, ನಾಮಕರಣ, ದೇವರ ಉತ್ಸವ, ಜಾತ್ರೆ, ಇತರೇ ಸ್ಥಳೀಯ ಕಾರ್ಯಕ್ರಮಗಳಲೂ ಭಾಗವಹಿಸುತ್ತಿದ್ದಾರೆ. ಜೊತೆಗೆ ಸ್ಥಳೀಯ ನಾಯಕರನ್ನು ಭೇಟಿ ಮಾಡಿ ಬೆಂಬಲ ಸೂಚಿಸುವಂತೆಯೂ ಕೋರುತಿದ್ದಾರೆ. ಪಕ್ಷದಿಂದ ಅಧಿಕೃತವಾಗಿ ಟಿಕೆಟ್ ಘೋಷಣೆಯಾಗುತ್ತಿದ್ದಂತೆ ಪ್ರಚಾರ ಕಾರ್ಯ ಆರಂಭಿಸಲಿದ್ದಾರೆ.
ಜೆಡಿಎಸ್‌ಗೆ ಸಾಂಪ್ರದಾಯಿಕ ಮತುಗಳು
ಈ ಕ್ಷೇತ್ರ ಜೆಡಿಎಸ್ ಮತ್ತು ಕಾಂಗ್ರೆಸ್ ಭದ್ರಕೋಟೆಯಾಗಿತ್ತು. ಜೆಡಿಎಸ್ ಪಕ್ಷಕ್ಕೆ ತನ್ನದೇ ಆದ ಸಾಂಪ್ರದಾಯಿಕ ಮತಗಳಿವೆ. ಕಳೆದ ಬಾರಿ ಜೆಡಿಎಸ್ ಅಭ್ಯರ್ಥಿ ಸುಮಾರು 42 ಸಾವಿರ ಮತಗಳನ್ನು ಪಡೆದಿದ್ದರು. ಜೆಡಿಎಸ್ ಪಕ್ಷಕ್ಕೆ ಒಕ್ಕಲಿಗರ ಹೆಚ್ಚು ಮತಗಳಿವೆ. ಉಳಿದ ವಿವಿಧ ಸಮುದಾಯಗಳ ಮತಗಳು ಕೂಡ ಜೆಡಿಎಸ್ ಪಕ್ಷದ ಪರವಾಗಿ ಇದಾವೆ. ಇಷ್ಟೆಲ್ಲಾ ಇದ್ದರೂ ಟಿಕೆಟ್ ಮಾತ್ರ ಘೋಷಣೆಯಾಗಿಲ್ಲ. ಧರ್ಮಪುರ ಹೋಬಳಿಯಲ್ಲಿ ಜೆಡಿಎಸ್ ಪಕ್ಷಕ್ಕೆ ಹೆಚ್ಚು ಮತಗಳಿವೆ. ಕಸಬಾ, ಜವನಗೊಂಡನಹಳ್ಳಿ ಹೋಬಳಿಯಲ್ಲೂ ಜೆಡಿಎಸ್ ಪರವಾಗಿ ಮತದಾರರು ಇದ್ದಾರೆ. ಇನ್ನಾದರೂ ತುರ್ತಾಗಿ ಟಿಕೆಟ್ ಘೋಷಿಸಿದರೆ, ಈ ಬಾರಿ ಕ್ಷೇತ್ರದಲ್ಲಿ ತೆನೆ ಹೊತ್ತ ಮಹಿಳೆ ಆಡಳಿತ ನಡೆಸಲು ಅವಕಾಶವಿದೆ ಎನ್ನುವ ಭರವಸೆಯನ್ನು ಜೆಡಿಎಸ್ ಕಾರ್ಯಕರ್ತರು ವ್ಯಕ್ತಪಡಿಸಿದ್ದಾರೆ.
ಇನ್ನು ಕಾಂಗ್ರೆಸ್ ಪಕ್ಷದ ಮಾಜಿ ಸಚಿವ ಡಿ ಸುಧಾಕರ್ ಭರ್ಜರಿ ಪ್ರಚಾರ ಆರಂಭಿಸಿದ್ದು, ಮನೆ ಮನೆಗೆ ತೆರಳಿ ಮತದಾರನಿಗೆ ಬೆಂಬಲಿಸುವಂತೆ ಮನವಿ ಮಾಡುತ್ತಿದ್ದಾರೆ. ಉಳಿದಂತೆ ಬಿಜೆಪಿಯ ಹಾಲಿ ಶಾಸಕಿ ಕೆ ಪೂರ್ಣಿಮಾ ಶ್ರೀನಿವಾಸ್ ಅವರಿಗೆ ಬಿಜೆಪಿ ಟಿಕೆಟ್ ಬಹುತೇಕ ಖಚಿತವಾಗಿದ್ದು ಅವರು ಕೂಡ ಮರು ಆಯ್ಕೆ ಬಯಸಿ ಪ್ರಚಾರ ಆರಂಭಿಸಿದ್ದಾರೆ.
ಒಟ್ಟಾರೆಯಾಗಿ ಹಿರಿಯೂರು ವಿಧಾನಸಭಾ ಕ್ಷೇತ್ರ ತ್ರಿಕೋನ ಸ್ಪರ್ಧೆಯಿಂದ ಏರ್ಪಟ್ಟಿದ್ದು, ಇದರ ಜೊತೆಗೆ ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಹಾಗೂ ಎಎಪಿ ಅಭ್ಯರ್ಥಿಗಳು ಪೈಪೋಟಿ ನೀಡಲಿದ್ದಾರೆ. ಈ ಬಾರಿ ಮತದಾರರು ಸ್ಥಳೀಯ ಅಭ್ಯರ್ಥಿಗೆ ಅವಕಾಶ ನೀಡಲಿದ್ದಾರೆಯೇ ಅಥವಾ ಹೊರಗಿನ ಅಭ್ಯರ್ಥಿಗಳಿಗೆ ಜೈ ಎನ್ನುತ್ತಾರಾ ಕಾದು ನೋಡಬೇಕಿದೆ.












Click it and Unblock the Notifications