ಹಿರಿಯೂರು: 40 ವರ್ಷಗಳ ಬಳಿಕ ಕೋಡಿ ಬಿದ್ದ ಧರ್ಮಪುರ ಕೆರೆ

ಚಿತ್ರದುರ್ಗ, ಅಕ್ಟೋಬರ್‌, 19: 40 ವರ್ಷಗಳ ಬಳಿಕ ಧರ್ಮಪುರ ಕೆರೆ ಕೋಡಿ ಬಿದ್ದಿದ್ದು, ಜನರು ಸಂತೋಷವನ್ನು ವ್ಯಕ್ತಪಡಿಸಿದ್ದಾರೆ. ಕೋಡಿ ಬಿದ್ದ ದೃಶ್ಯ ನೋಡಲು ಜನರು ಕಿಕ್ಕಿರಿದು ಬರುತ್ತಲೇ ಇದ್ದಾರೆ.

1982ರಲ್ಲಿ ಧರ್ಮಪುರ ಕೋಡಿ ಬಿದ್ದಿತ್ತು. 40 ವರ್ಷಗಳ ಬಳಿಕ ಇದೀಗ ಮತ್ತೆ ಕೆರೆ ಕೋಡಿ ಬಿದ್ದಿದ್ದು, ಇಲ್ಲಿನ ರೈತರ ಮುಖದಲ್ಲಿ ಸಂತಸ ತರಿಸಿದಂತಾಗಿದೆ. ಹಿರಿಯೂರು ತಾಲೂಕಿನ ಧರ್ಮಪುರದ ಐತಿಹಾಸಿಕ ಕೆರೆ ಮಂಗಳವಾರ ರಾತ್ರಿ ಕೋಡಿ ಬಿದ್ದಿದೆ. ಕೆಲ ದಿನಗಳ ಹಿಂದೆಯಷ್ಟೇ ತಾಲೂಕಿನ ಬಹುತೇಕ ಕೆರೆಗಳು ಮೈದುಂಬಿ ಹರಿದು ಕೋಡಿ ಬಿದ್ದಿದ್ದವು. ಆದರೆ ಧರ್ಮಪುರ ಕೆರೆಗೆ ಮಾತ್ರ ನೀರು ಹೆಚ್ಚಾಗಿ ಬಂದಿರಲಿಲ್ಲ. ಕಳೆದ ಒಂದು ವಾರದಿಂದ ಮಳೆ ಅಬ್ಬರಿಸಿ ಬೊಬ್ಬಿರೆದ ಕಾರಣ ಕೆರೆಗೆ ಹೆಚ್ಚಾಗಿ ನೀರು ಹರಿದುಬಂದಿದೆ. ಕೆರೆಗೆ ರಭಸವಾಗಿ ನೀರು ಹರಿದು ಬಂದಿದ್ದರಿಂದ ಕೋಡಿ ಬಿದ್ದಿದೆ.

ಚಿತ್ರದುರ್ಗ ಜಿಲ್ಲೆಯ ಎರಡನೇ ಅತಿ ದೊಡ್ಡ ಕೆರೆ ಇದಾಗಿದೆ. ನೊಳಂಬರ ಕಾಲದಲ್ಲಿ ಈ ಕೆರೆಯನ್ನು ನಿರ್ಮಾಣ ಮಾಡಲಾಗಿದೆ ಎಂಬ ಮಾಹಿತಿ ಇದೆ. ಕೆರೆಯ ನಿರೀನ ಸಾಮರ್ಥ್ಯ 0.3 ಟಿಎಂಸಿ ಹೊಂದಿದೆ. ಸುಮಾರು 500-700 ಹೆಕ್ಟೇರ್ ವಿಸ್ತೀರ್ಣದಲ್ಲಿ ಇದೆ ಎನ್ನಲಾಗಿದೆ. ಈ ಕೆರೆ 360 ದಶ ಲಕ್ಷ ಕ್ಯೂಬಿಕ್ ಅಡಿ ನೀರಿನ ಸಂಗ್ರಹ ಸಾಮರ್ಥ್ಯವನ್ನು ಹೊಂದಿದೆ. 1,600 ಮೀಟರ್ ಉದ್ದವಿರುವ ಈ ಕೆರೆ, ಅಕ್ಕಪಕ್ಕದ ಹಳ್ಳಿಗಳ ಸುಮಾರು 900 ಹೆಕ್ಟೇರ್ ಅಚ್ಚುಕಟ್ಟು ಪ್ರದೇಶವನ್ನು ಹೊಂದಿದೆ. ಇದರಿಂದ 30 ಕಿಲೋ ಮೀಟರ್ ದೂರದವರೆಗೂ ನೀರಿನ ಅಂತರ್ಜಲ ವೃದ್ಧಿ ಆಗಲಿದೆ.

 ಭರ್ತಿಯಾದ ಐತಿಹಾಸಿಕ ಧರ್ಮಪುರ ಕೆರೆ

ಭರ್ತಿಯಾದ ಐತಿಹಾಸಿಕ ಧರ್ಮಪುರ ಕೆರೆ

ಆಂಧ್ರ ಪ್ರದೇಶದ ಮಡಕಶಿರಾ ತಾಲೂಕಿನಲ್ಲಿ ಉತ್ತಮ ಮಳೆ ಆಗಿದ್ದು, ಇಲ್ಲಿನ ನೀರು ಶಿರಾ ತಾಲೂಕಿನ ಲಕ್ಕನಹಳ್ಳಿ ಸಮೀಪದ ದೊಡ್ಡಹಳ್ಳ ಮೈದುಂಬಿ ಹರಿಯುತ್ತಿದೆ. ಈ ಹಿನ್ನೆಲೆ ನೀರು ಸರಾಗವಾಗಿ ಧರ್ಮಪುರ ಕೆರೆಗೆ ಬಂದು ಸೇರುತ್ತದೆ. ಅಲ್ಲದೆ ಇದೆ ತಾಲೂಕಿನ ಕೆಂಕೆರೆ, ಹೇಮಾವತಿ, ಶಿವರಾ, ದೊಡ್ಡಬಾಣಗೆರೆ, ದಾಸರಹಳ್ಳಿ, ಮೋರಬಾಗಿಲು ಸೇರಿದಂತೆ ಬರಗೂರು ಕೆರೆಗಳಿಂದ ಭರ್ತಿ ಆದ ನೀರು ಧರ್ಮಪುರ ಕೆರೆಯನ್ನು ಸೇರುತ್ತಿದೆ.

 ಅರಳೀಕೆರೆ ಗ್ರಾಮದ ಜನರ ಸ್ಥಳಾಂತರ

ಅರಳೀಕೆರೆ ಗ್ರಾಮದ ಜನರ ಸ್ಥಳಾಂತರ

ಐತಿಹಾಸಿಕ ಹಿನ್ನೆಲೆಯುಳ್ಳ ಧರ್ಮಪುರ ಕೆರೆ 1982ರಲ್ಲಿ ಕೋಡಿ ಬಿದ್ದಿತ್ತು. ಆಗ ಸುಮಾರು ಸತತ ಎರಡು ತಿಂಗಳು ಕೆರೆ ಕೋಡಿಯಲ್ಲಿ ನೀರು ಹರಿದಿತ್ತು. ಈ ನಿಟ್ಟಿನಲ್ಲಿ ಕೆರೆ ಕೋಡಿ ಒಡೆಯಬಹುದು ಎನ್ನುವ ಭಯದಿಂದ ಕೆರೆಯ ಕೆಳಭಾಗದ ಅರಳೀಕೆರೆ ಗ್ರಾಮದ ಜನರು ಸ್ಥಳಾಂತರಗೊಂಡಿದ್ದರು. ಇನ್ನು ಕೆರೆ ಕೋಡಿ ಹರಿದುಬಂದ ಹಿನ್ನೆಲೆ ಹಲಗಲದ್ದಿ, ಹೊಸಕೆರೆ, ಪಿಡಿ ಕೋಟೆ ಗ್ರಾಮದ ವಿದ್ಯಾರ್ಥಿಗಳು ಸುಮಾರು 20 ದಿನಗಳ ಕಾಲ ಶಾಲಾ-ಕಾಲೇಜಿಗೆ ತೆರಳಿರಲಿಲ್ಲ ಎಂದು ಗ್ರಾಮದ ಹಿರಿಯ ಮುಖಂಡರು ಹೇಳುತ್ತಿದ್ದಾರೆ.

 ಪಟಾಕಿ ಸಿಡಿಸಿ ಸಂಭ್ರಮಿಸಿದ ಜನ

ಪಟಾಕಿ ಸಿಡಿಸಿ ಸಂಭ್ರಮಿಸಿದ ಜನ

40 ವರ್ಷಗಳ ನಂತರ ಕೆರೆ ಕೋಡಿ ಬಿದ್ದಿದ್ದು, ಕೋಡಿ ನೋಡಲು ಹೋಬಳಿಯ ಜನತೆ ಸಾಗರೋಪಾದಿಯಲ್ಲಿ ಬಂದು ಸೇರುತ್ತಿದ್ದಾರೆ. ಹೋಬಳಿಯ ಸುತ್ತ ಮುತ್ತಲಿನ ಗ್ರಾಮಗಳ ಜನರು ಬೈಕ್, ಕಾರುಗಳ ಮೂಲಕ ಕೆರೆ ಕೋಡಿ ಸಮೀಪಕ್ಕೆ ಜಮಾಯಿಸಿದ್ದರು. ಕೋಡಿ ಬಿದ್ದ ಸಂತೋಷದಲ್ಲಿ ಧರ್ಮಪುರ ಜನರು ದೀಪಾವಳಿ ಮುಂಚೆಯೇ ಪಟಾಕಿ ಸಿಡಿಸುವುದರ ಮೂಲಕ ಸಂಭ್ರಮಿಸಿದ್ದಾರೆ. ಕೋಡಿ ನೀರು ಹೊಗುವ ಜಾಗದಲ್ಲಿ ಜನರು ಸಂಭ್ರಮದಲ್ಲಿ ಮಿಂದೆದ್ದಿದ್ದಾರೆ.

 ಮನೆ-ಮಠಗಳು ಜಲಾವೃತ, ಆತಂಕ

ಮನೆ-ಮಠಗಳು ಜಲಾವೃತ, ಆತಂಕ

ಈಗಾಗಲೇ ಜಿಲ್ಲೆಯಾದ್ಯಂತ ಭಾರಿ ಮಳೆ ಸುರಿದ ಕಾರಣ ಸಣ್ಣಪುಟ್ಟ ಕೆರೆಗಳ ಕೋಡಿ ಬಿದ್ದಿದ್ದು, ಜನರು ಸಂತೋಷವನ್ನು ವ್ಯಕ್ತಪಡಿಸಿದ್ದಾರೆ. ಭಾರಿ ಮಳೆ ಆಗುತ್ತಿರುವುದರಿಂದ ಒಂದೆಡೆ ರೈತರು ಸಂತೋಷವನ್ನು ವ್ಯಕ್ತಪಡಿಸಿದರೆ, ಮತ್ತೊಂದೆಡೆ ಸಾಕಷ್ಟು ಅನಾಹುತಗಳು ಸಂಭವಿಸಿ ಜನರು ಆತಂಕಕ್ಕೆ ಒಳಗಾಗಿದ್ದಾರೆ. ಮಳೆ ನಿಂತರೂ ಜನರಿಗೆ ಸಂಕಷ್ಟಗಳು ತಪ್ಪದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಭಾರಿ ಮಳೆಯಿಂದ ಮನೆಗಳನ್ನು ಕಳೆದುಕೊಂಡ ಅದೆಷ್ಟೋ ಕುಟುಂಬಗಳು ಬೀದಿಪಾಲಾಗಿವೆ. ಸರ್ಕಾರದಿಂದ ಇದುವರೆಗೂ ಯಾವುದೇ ಪರಿಹಾರ ಸಿಕ್ಕಿಲ್ಲ ಅಂತಲೂ ಆಕ್ರೋಶಗಳು ಭುಗಿಲೆದ್ದಿವೆ. ಇನ್ನು ನದಿ ತೀರದ ಪ್ರದೇಶದಲ್ಲಿರುವ ಕುಟುಂಬಗಳ ಪಾಡು ಹೇಳತೀರದಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+