• search
  • Live TV
ಚಿತ್ರದುರ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ನಟರಾಜುವಿನ ಕನ್ನಡಾಭಿಮಾನಕ್ಕೆ ಸಾಷ್ಟಾಂಗ ನಮಸ್ಕಾರ

By ಗವಿ ಸ್ವಾಮಿ, ಚಾಮರಾಜನಗರ
|

ನಾವು ಕೆಲವು ಸಾಧಕರನ್ನು ಒಮ್ಮೆಯೂ ನೋಡಿರುವುದಿಲ್ಲ, ಮಾತನಾಡಿಸಿರುವುದಿಲ್ಲ. ಆದರೆ, ಅವರನ್ನು ಹುಚ್ಚು ಅಭಿಮಾನದಿಂದ ಹೊತ್ತು ಮೆರೆಸುತ್ತೇವೆ. ಕೆಲವು ಸಾಧಕರು ನಮ್ಮ ನಡುವೆಯೇ ಇದ್ದರೂ, ಪ್ರತಿನಿತ್ಯ ನಮಗೆ ಎದುರಾದರೂ, ಸುಲಭವಾಗಿ ಕೈಗೆಟುಕಿದರೂ, ಅಂಥವರ ಬಗ್ಗೆ ಅಭಿಮಾನ ಬೆಳೆಸಿಕೊಳ್ಳುವುದಿರಲಿ, ಅವರು ಎದುರಾದರೆ ಒಂದು ಮುಗುಳ್ನಗೆ ಬೀರಲೂ ಚೌಕಾಶಿ ಮಾಡುತ್ತೇವೆ.

ಈ ಪೀಠಿಕೆಯ ಹಿಂದಿನ ಉದ್ದೇಶ ನಿಮಗೆ ನಿಧಾನವಾಗಿ ಅರ್ಥವಾಗಲಿದೆ. ಇದರಲ್ಲಿ ಸ್ವವಿಮರ್ಶೆಯೂ ಅಡಗಿದೆ. ನಮ್ಮ ಗುಂಡ್ಲುಪೇಟೆ ತಾಲೂಕಿನಲ್ಲಿ ವಿಶಿಷ್ಟ ಸಾಧಕರೊಬ್ಬರಿದ್ದಾರೆ. ಹೆಸರು ನಟರಾಜು ಕುಂದೂರು. ವೃತ್ತಿಯಲ್ಲಿ ಕೆಎಸ್ಆರ್ಟಿಸಿ ಕಂಡಕ್ಟರ್. ಮೂಲತಃ ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಕುಂದೂರು ಗ್ರಾಮದವರು.

ನಾಡು-ನುಡಿಯ ಸೇವೆಯ ಸಂಬಂಧ ರಾಜ್ಯಾದ್ಯಂತ ತಲೆ ಎತ್ತಿರುವ ನೂರಾರು ಸಂಘಟನೆಗಳ ನಡುವೆ ತಮ್ಮದೇ ಛಾಪು ಮೂಡಿಸಿರುವ ಏಕವ್ಯಕ್ತಿ ಸಂಘಟನೆ ನಟರಾಜ್ ಕುಂದೂರು. ಇವರ ನುಡಿಸೇವೆಯನ್ನು ಶ್ಲಾಘಿಸಿ ರಾಜ್ಯದ ಪ್ರಮುಖ ದಿನಪತ್ರಿಕೆಗಳಲ್ಲಿ ಹಲವಾರು ಲೇಖನಗಳು ಪ್ರಕಟವಾಗಿವೆ.

ನೀವು ಇದುವರೆಗೂ ವಿಮಾನದಲ್ಲಿ ಪ್ರಯಾಣಿಸದಿದ್ದರೂ ಪರವಾಗಿಲ್ಲ, ಕನ್ನಡ ರಾಜ್ಯೋತ್ಸವ ದಿನದಂದು ಇವರ ಸಾರಥ್ಯದಲ್ಲಿ ಗುಂಡ್ಲುಪೇಟೆಯಿಂದ ಹೊರಡುವ ಕನ್ನಡ ರಥದಲ್ಲಿ ಒಮ್ಮೆಯಾದರೂ ಪ್ರಯಾಣಿಸಲೇಬೇಕು. [ಊರುಗಳ ಹೆಸರು ಬದಲಾವಣೆ]

ರಾಜ್ಯೋತ್ಸವ ದಿನದಂದು ಇವರ ಬಸ್ಸು ಅಕ್ಷರಶಃ ರಥದಂತೆ ಸಿಂಗಾರಗೊಂಡಿರುತ್ತದೆ. ಬಸ್ಸಿನ ಒಳ-ಹೊರಗೂ ಕನ್ನಡ ಬಾವುಟಗಳ ಕಲರವ. ಕಿಟಕಿ ಗಾಜುಗಳ ಮೇಲೆ ಕರ್ನಾಟಕದ ಅಷ್ಟೂ ಜಿಲ್ಲೆಗಳ ಬಗ್ಗೆ ವಿಶೇಷ ಮಾಹಿತಿಯುಳ್ಳ ಪೋಸ್ಟರುಗಳು, ಜ್ಞಾನಪೀಠ, ಪಂಪ ಪುರಸ್ಕೃರು ಸೇರಿದಂತೆ ನಾಡಿನ ವಿವಿಧ ಕ್ಷೇತ್ರಗಳ ಸಾಧಕರ ಕುರಿತ ಚಿತ್ರಸಹಿತ ಮಾಹಿತಿಯುಳ್ಳ ಪೋಸ್ಟರುಗಳು. ಅವೆಲ್ಲವೂ ಎಲ್ಲಿಂದಲೋ ಪ್ರಿಂಟ್ ಹಾಕಿಸಿಕೊಂಡು ತಂದು ಅಂಟಿಸಿದವಲ್ಲ. ಬದಲಿಗೆ, ಅವರು ಹಲವಾರು ಮೂಲಗಳಿಂದ ಮಾಹಿತಿ ಕಲೆಹಾಕಿ ತಮ್ಮದೇ ಸುಂದರ ಕೈಬರಹದಲ್ಲಿ ರೂಪಿಸಿರುವ ಪೋಸ್ಟರ್ಗಳು.

ಹಿಮ್ಮೇಳದಲ್ಲಿ ಮೆಲುದನಿಯಲ್ಲಿ ಮೊಳಗುವ ಕನ್ನಡಗೀತೆಗಳು, ಇಕ್ಕೆಲಗಳಲ್ಲಿ ಮಾಹಿತಿಯ ರಸಗವಳ ಎಲ್ಲವೂ ಸೇರಿ ಬಸ್ಸಿನೊಳಗೆ ಸಂಭ್ರಮದ ವಾತಾವರಣ ಮನೆಮಾಡಿರುತ್ತದೆ. ಪ್ರಯಾಣಿಕರಲ್ಲಿ ನಾಡುನುಡಿಯ ಬಗ್ಗೆ ಮಧುರ ಅನುಭೂತಿಯನ್ನು ಹುಟ್ಟು ಹಾಕುತ್ತದೆ.

ಕನ್ನಡದಲ್ಲಿ ಸ್ನಾತಕೋತ್ತರ ಪದವಿಯನ್ನೂ ಪಡೆದಿರುವ ಶ್ರೀಯುತ ನಟರಾಜುರವರ ಮೆದುಳಿನಲ್ಲಿ ನಾಡುನುಡಿ ಕುರಿತಂತೆ ಅಪಾರ ಜ್ಞಾನ ಸಂಪತ್ತು ಅಡಗಿದೆ. ಚಲಿಸುತ್ತಿರುವ ಬಸ್ಸಿನೊಳಗೆ ಮೈಕು ಹಿಡಿದು ಪಾದರಸದಂತೆ ಓಡಾಡುತ್ತಾ ರಸಪ್ರಶ್ನೆ ಕಾರ್ಯಕ್ರಮ ನಡೆಸುತ್ತಾರೆ. ನೀವು ನಂಬ್ತೀರೋ ಇಲ್ವೋ, ನಾಡುನುಡಿ ಕುರಿತಂತೆ ಸುಮಾರು ಐದು ಸಾವಿರ ಪ್ರಶ್ನೆಗಳನ್ನು ಯಾವುದೇ ಲಿಖಿತ ಆಧಾರವಿಲ್ಲದೇ ಕೇವಲ ಮನನ ಮಾಡಿಕೊಂಡೇ ಕೇಳುತ್ತಾರೆ!

ಸರಿ ಉತ್ತರ ನೀಡಿದ ಪ್ರಯಾಣಿಕರಿಗೆ ಮೊದಲೆಲ್ಲ ಸಿಹಿ ನೀಡುತ್ತಿದ್ದರು. ಈಗ ಪುಸ್ತಕಗಳನ್ನೇ ಕೊಡುತ್ತಿದ್ದಾರೆ. ಇದೊಂಥರಾ ಚಲಿಸುವ 'ಥಟ್ ಅಂತ ಹೇಳಿ' ಕಾರ್ಯಕ್ರಮವಿದ್ದಂತೆ! ಇಂತಿಪ್ಪ ನಟರಾಜುರವನ್ನು ನಾನು ಹನ್ನೊಂದು ವರ್ಷಗಳಿಂದ ಗಮನಿಸುತ್ತಾ ಬಂದಿದ್ದೆನೇ ಹೊರತು ತೀರಾ ಹತ್ತಿರದಲ್ಲಿ ಸುಳಿದಾಡುತ್ತಿದ್ದರೂ ಅಭಿನಂದಿಸುವುದಿರಲಿ ಒಂದು ಮುಗುಳ್ನಗೆಯನ್ನೂ ಬೀರಿರಲಿಲ್ಲ. ಅದು ನಿರ್ಲಕ್ಷ್ಯವೋ, ತಾತ್ಸಾರವೋ, ಹಿಂಜರಿಕೆಯೋ ಅಥವಾ ಎಲ್ಲವೋ, ವಿವರಿಸಲಾಗುತ್ತಿಲ್ಲ. ಕೊರಗಂತೂ ಇದ್ದೇ ಇತ್ತು.

ಗುಂಡ್ಲುಪೇಟೆ ಸಾರಿಗೆ ಘಟಕದ ತಾಂತ್ರಿಕ ವಿಭಾಗದಲ್ಲಿ ಕೆಲಸ ಮಾಡುತ್ತಿರುವ ಮಿತ್ರ ಮಹಾಂತೇಶ ಯರಗಟ್ಟಿಯವರೊಂದಿಗೆ ಇದೇ ವಿಷಯದ ಕುರಿತು ಹದಿನೈದು ದಿನಗಳ ಹಿಂದೆ ಮಾತನಾಡಿದ್ದೆ. ನಿಮ್ಮ ಕೊರಗನ್ನು ದೂರ ಮಾಡಲು ಇದೇ ಸುಸಂದರ್ಭ. ಅವರ ಬಗ್ಗೆ ರಾಜ್ಯೋತ್ಸವದ ಪ್ರಯುಕ್ತ ಲೇಖನ ಬರೆಯಿರಿ ಎಂದು ಸಲಹೆ ನೀಡಿದರು. ಲೇಖನ ಬರೆಯಲು ನನಗೂ ತುಡಿತವಿತ್ತು. ಅದಕ್ಕೂ ಮುಂಚೆ ಅವರನ್ನು ಭೇಟಿ ಮಾಡಿ ಅಭಿನಂದಿಸಿ ಒಂದಿಷ್ಟು ಹೊತ್ತು ಮಾತನಾಡಬೇಕೆಂಬ ಆಸೆಯಿತ್ತು.

ವಾರದ ಹಿಂದೆ ಮಹಾಂತೇಶರೊಂದಿಗೆ ಅವರ ಮನೆಗೆ ಹೋಗಿದ್ದೆ.

"ನಿಮ್ಮ ಬಗ್ಗೆ ಲೇಖನ ಬರೀಬೇಕು ಅಂತಿದೀನಿ, ಆದ್ರೆ ಈಗಾಗಲೇ ಎಲ್ಲಾ ದಿನಪತ್ರಿಕೆಗಳಲ್ಲೂ ನಿಮ್ಮ ಕುರಿತು ಲೇಖನಗಳು ಪ್ರಕಟವಾಗಿಬಿಟ್ಟಿವೆ, ಯಾವ ರೀತಿ ಬರೆಯಬೇಕೆಂಬುದೇ ತೋಚುತ್ತಿಲ್ಲ ಸರ್" ಅಂದೆ. ಮಗುವಿನಂತೆ ಮುಗುಳ್ನಕ್ಕರು.

"ಬಸ್ಸಿನ ಅಲಂಕಾರ, ರಸಪ್ರಶ್ನೆ ಬಹುಮಾನ ಇವಕ್ಕೆಲ್ಲ ಖರ್ಚು ವೆಚ್ಚ ಹೇಗೆ ತೂಗಿಸ್ತೀರಿ ಸರ್?"

"ಪ್ರತಿತಿಂಗಳ ಸಂಬಳದಲ್ಲಿ ಇದಕ್ಕಾಗಿಯೇ ಒಂದೂವರೆ ಸಾವಿರ ಎತ್ತಿಡ್ತೀನಿ." ಹಬ್ಬಕ್ಕೆ ಹೊಸ ಬಟ್ಟೆ ಕೊಳ್ಳಲೋ, ಕಾಲ್ಗೆಜ್ಜೆ ಖರೀದಿಸಲೋ ಗೋಲಕದಲ್ಲಿ ಕಾಸು ಕೂಡಿ ಹಾಕುವ ಮಗುವನ್ನು ನೆನಪಿಸುತ್ತಿತ್ತು ಅವರ ಮುಗ್ಧ ಉತ್ತರದ ಧಾಟಿ.

"ಕನ್ನಡದ ಬಗ್ಗೆ ಈ ಪರಿಯ ಹುಚ್ಚುಪ್ರೇಮ ಯಾಕೆ ಸರ್.. ಇಷ್ಟೊಂದು ಅಭಿಮಾನ ಬೆಳಿಸಿಕೊಳ್ಳಲು ಕಾರಣವಾದರೂ ಏನು?" ಕುತೂಹಲದಿಂದ ಕೇಳಿದೆ.

"ನನ್ನ ತಾಯಿ ಹನ್ನೊಂದು ವರ್ಷಗಳ ಹಿಂದೆ ನವೆಂಬರ್ ತಿಂಗಳಿನಲ್ಲಿ ಅಪಘಾತದಲ್ಲಿ ತೀರ್ಕೊಂಡ್ರು. ತಂದೆ ಅದೇ ಕೊರಗಿನಲ್ಲಿ ಅದೇ ವರ್ಷ ತೀರ್ಕೊಂಡ್ರು. ತಂದೆಯವ್ರು ತೀರಿಹೋದ ಹದಿನೈದು ದಿನಗಳಿಗೆ ನೌಕರಿ ಸಿಕ್ತು... ಸೇವೆ ಮಾಡಲು ಹೆತ್ತವರೇ ಉಳಿದಿಲ್ಲ, ನಾ ಇನ್ಯಾರಿಗೆ ಸೇವೆ ಮಾಡಲಿ ಸರ್? ಹಾಗಾಗಿ ತಾಯಿ ಭುವನೇಶ್ವರಿಯಲ್ಲೇ ಹೆತ್ತವರನ್ನು ಕಾಣ್ತಿದೀನಿ."

ನನಗೆ ಮಾತೇ ಹೊರಡಲಿಲ್ಲ. ಮನಸ್ಸಿನಲ್ಲೇ ಸಲಾಂ ಹೇಳಿದೆ. ಮಾತಿನ ನಡುವೆ ಅವರ ಆಲ್ಬಮ್ ಒಂದನ್ನು ತಿರುವಿ ಹಾಕುತ್ತಿದ್ದೆ. ನಟರಾಜುರವರು ನಾಡಿನ ವಿವಿಧ ಕ್ಷೇತ್ರಗಳ ಹಲವಾರು ಸಾಧಕರ ಸಾಲಿನಲ್ಲಿ ಕುಳಿತು ಸನ್ಮಾನಿತರಾದ ಫೋಟೋಗಳಿದ್ದವು. ಅವೆಲ್ಲಕ್ಕೂ ಕಳಶಪ್ರಾಯವೆಂಬಂತೆ ವೃಕ್ಷಮಾತೆ ತಿಮ್ಮಕ್ಕನವರ ಸಾಲಿನಲ್ಲಿ ಕುಳಿತ ಫೋಟೋವೊಂದಿತ್ತು. ಅದೊಂದು ಸಾಕೆನಿಸಿತು.

"ನೀವು ಧನ್ಯರು ಸಾರ್" ಅಂದೆ. ಮತ್ತೆ ಅದೇ ನಿರ್ಮಲ ಮುಗುಳ್ನಗು.

ವರ್ಷದ ಹಿಂದೆಯಷ್ಟೇ ಶಿಕಾರಿಪುರ ತಾಲೂಕಿನ ಕವಿತಾ ಎಂಬುವವರು ಈ ಕನ್ನಡ ಸೇನಾನಿಯ ಬಾಳ ಸಂಗಾತಿಯಾಗಿದ್ದಾರೆ. ಮದುವೆ ಆಲ್ಬಮನ್ನು ತಿರುವಿ ಹಾಕುತ್ತಿದ್ದಾಗ ನನಗೆ ಇನ್ನೊಂದು ಆಶ್ಚರ್ಯ ಕಾದಿತ್ತು! ಅವರ ಮದುವೆ ಮಂಟಪವೂ ಕನ್ನಡಮಯವಾಗಿತ್ತು! ಕನ್ನಡ ಬಾವುಟಗಳು, ಕರುನಾಡಿನ ಸಾಧಕರ ಭಾವಚಿತ್ರಗಳು, ನೆಲಜಲದ ಹಿರಿಮೆ ಸಾರುವ ಘೋಷವಾಕ್ಯಗಳು ಮದುವೆ ಮಂಟಪವನ್ನು ಅಲಂಕರಿಸಿದ್ದವು. ಅಷ್ಟೇ ಅಲ್ಲ. ಮಾಂಗಲ್ಯ ಧಾರಣೆಯ ಸಂದರ್ಭದಲ್ಲಿ ಹಿಮ್ಮೇಳದಲ್ಲಿ ಮಂತ್ರೋಚ್ಛಾರಣೆ ಬದಲಿಗೆ ನಾಡಗೀತೆ ಮೊಳಗಿತಂತೆ!

"ಅಲ್ಲಾ ಸಾರ್, ಯಾರ್ಯಾರೋ ಅಪಾತ್ರರಿಗೆ ರಾಜ್ಯೋತ್ಸವ ಪ್ರಶಸ್ತಿ ಸಿಕ್ಕಿದೆ, ನಿಮಗೆ ಇನ್ನೂ ಯಾಕೆ ಬಂದಿಲ್ಲ ಅಂತ?" ಬೇಸರದಿಂದಲೇ ಕೇಳಿದೆ. [ಯಾರ್ಯಾರಿಗೆ ರಾಜ್ಯೋತ್ಸವ ಪ್ರಶಸ್ತಿ]

"ನಾನು ಅದ್ರ್ ಬಗ್ಗೆ ಯೋಚಿಸೋದೇ ಇಲ್ಲ ಸರ್. ಇವತ್ತು ರಾಜ್ಯಾದ್ಯಂತ ನನ್ನನ್ನು ಲಕ್ಷಾಂತರ ಜನ ಗುರುತಿಸ್ತಾರೆ, ಪ್ರೀತಿಯಿಂದ ಮಾತಾಡಿಸ್ತಾರೆ, ಅಷ್ಟು ಸಾಕು ನನಗೆ"ಅವರ ಮಾತಿನಲ್ಲಿ ಒಂಚೂರೂ ಬೇಸರವಿರಲಿಲ್ಲ, ನನ್ನ ಪ್ರಶ್ನೆಯೇ ಅಪ್ರಸ್ತುತ ಅನ್ನಿಸಿತು. ಮಾತಿನ ನಡುವೆ ಒಂದು ಪ್ರಸಂಗ ಬಂತು.

ಬೆಂಗಳೂರಿನ ಕಂಡಕ್ಟರ್ ಒಬ್ರು ಇವರಿಗೆ ಕರೆ ಮಾಡಿ, ನೀನು ಬಸ್ಸಿಗೆ ಯಾಯ್ಯಾವ್ ಪೋಸ್ಟರುಗಳನ್ನು ಹಾಕ್ತೀಯಾ, ಹೇಗೆಲ್ಲಾ ಅಲಂಕಾರ ಮಾಡ್ತೀಯಾ ಅನ್ನೋ ಫುಲ್ ಡಿಟೇಲ್ಸ್ ಕೊಡು, ನಾನೂ ಹಾಗೇ ಮಾಡ್ತೀನಿ ಎಂದು ದರ್ಪದಿಂದ ಕೇಳಿದರಂತೆ.

"ಅವನ ದನಿಯಲ್ಲಿ ಕನ್ನಡಾಭಿಮಾನದ ಬದಲಿಗೆ ನನ್ನ ಸಾಧನೆಯ ಬಗ್ಗೆ ಈರ್ಷ್ಯೆಯೇ ತುಂಬಿತ್ತು ಸರ್.. ಕನ್ನಡಾಭಿಮಾನ ಆಡಂಬರದಿಂದ, ತೋರಿಕೆಯಿಂದ ಬರುವಂಥದ್ದಲ್ಲ, ಅಂತರಾಳದಿಂದ ಬರ್ಬೇಕು ಸರ್" ನೋವಿನಿಂದ ಹೇಳಿದರು. ಹೌದೆಂದು ತಲೆಯಾಡಿಸಿದೆ.

ದಪ್ಪ ಸೈಜಿನ ಡೈರಿಯೊಳಗಿದ್ದ ಪ್ರಯಾಣಿಕರ ಫೀಡ್ಬ್ಯಾಕ್ ಗಳ ಮೇಲೆ ಕಣ್ಣಾಡಿಸುತ್ತಾ ಹೋದೆ.

"ಈ ದಿನ ನಾನು ಈ ಬಸ್ಸಿಗೆ ಬಂದಿದ್ದು ನನ್ನ ಭಾಗ್ಯ, ತುಂಬಾ ಹೆಮ್ಮೆಯಾಗ್ತಿದೆ, ನನಗೂ ನಿಮ್ಮ ಕಾರ್ಯದಲ್ಲಿ ಕೈಜೋಡಿಸೋ ಆಸೆಯಿದೆ" -ಗೀತಾ

"ಇಂದು ನನ್ನ ಜೀವನದಲ್ಲಿ ನಿಜವಾದ ದೀಪಾವಳಿ, ಅಂದರೆ ಜ್ಞಾನ ದೀಪ ಹಚ್ಚಿದ ದಿನ. ಇಂದಿನ ಪ್ರಯಾಣದಲ್ಲಿ ಕರ್ನಾಟಕದ ಸಮಗ್ರ ಇತಿಹಾಸವನ್ನು ತಿಳಿದಂತಾಯಿತು. ಬಸ್ಸಿನ ಚಾಲಕ ಮತ್ತು ನಿರ್ವಾಹಕರಿಗೆ ಕೋಟಿಕೋಟಿ ನಮನಗಳು." -ಪ್ರಭುಕುಮಾರ್

"ನೀವು ಕಂಡಕ್ಟರ್ ಮಾತ್ರವಲ್ಲ, ಕನ್ನಡದ ದೀಪ ಬೆಳಗಿಸುತ್ತಿರುವ ಮಾರ್ಗದರ್ಶಕ" -ನಿಮ್ಮ ಅಭಿಮಾನಿ ವೃಷಭೇಂದ್ರ.

ಇವು ಸ್ಯಾಂಪಲ್ಗಳಷ್ಟೇ. ಇನ್ನೂ ಹಲವಾರು ಪ್ರತಿಸ್ಪಂದನೆಗಳಿದ್ದವು. ಕೆಲವರಂತೂ ಪುಟ ತುಂಬಾ ಗುಣಗಾನ ಮಾಡಿದ್ದರು. ಇಷ್ಟು ಸಾಕಲ್ಲವೇ ಒಬ್ಬ ಸಾಧಕನೊಳಗೆ ಧನ್ಯತಾಭಾವ ಮೂಡಲು.

"ಊಟ ಮಾಡ್ಬಹುದಿತ್ತು, ಮಡದಿ ದೀಪಾವಳಿಗೆ ಊರಿಗೆ ಹೊರ್ಟೋಗಿದ್ದಾರೆ, ಬೇಜಾರ್ ಮಾಡ್ಕೋಬೇಡಿ" ಸಂಕೋಚದಿಂದಲೇ ಹೇಳಿದರು. ಅಯ್ಯೋ ಬಿಡಿ ಸರ್, ನಿಮ್ಮೊಡನೆ ಮಾತಾಡಿದ್ದೇ ಮೃಷ್ಟಾನ್ನ ಸವಿದಂತಾಯ್ತು ಅಂದೆ. ಅವರ ಶ್ರೀಮತಿಯವರ ಅಭಿಪ್ರಾಯ ತಿಳಿಯಲು ಅವರಿಂದಲೇ ನಂಬರ್ ತೆಗೆದುಕೊಂಡು ಕರೆ ಮಾಡಿದೆ. ಪತಿರಾಯನ ಬಗ್ಗೆ ತುಂಬಾ ಹೆಮ್ಮೆಯಿಂದ ಮಾತನಾಡಿದರು. ಸಹಕಾರ ಸಿಕ್ಕಿದರೆ ಇನ್ನೂ ಉನ್ನತ ಸಾಧನೆ ಮಾಡ್ತಾರೆ ಅಂದ್ರು..

ಹೌದು, ನಟರಾಜುರವರಿಗೆ ಕರುನಾಡ ಸಹೃದಯಿಗಳ ಸಹಕಾರ ಬೇಕಾಗಿದೆ. ಅವರು ತುಂಬಾ ಸ್ವಾಭಿಮಾನಿ, ನಮ್ಮಿಂದ ಹಣ ನಿರೀಕ್ಷಿಸುವುದಿಲ್ಲ. ಒಂದೆರಡು ಪುಸ್ತಕಗಳನ್ನು ಖರೀದಿಸಿ ಕೊಟ್ಟರೂ ಸಾಕು.

"ಎಷ್ಟೊಂದು ಅಭಿಮಾನಿಗಳು! ಡೈರಿ ಓದ್ತಿದ್ರೆ ನಿಮ್ ಬಗ್ಗೆ ಹೆಮ್ಮೆಯಾಗ್ತಿದೆ ಸರ್, ಯಾರ್ಯಾರನ್ನೋ ಸೆಲೆಬ್ರಿಟಿ ಮಾಡ್ತೀವಿ, ನಿಮ್ಮಂಥವ್ರು ಸಾರ್ ನಿಜವಾದ ಸೆಲೆಬ್ರಿಟಿಗಳು" ಅಂದೆ.

"ಅಭಿಮಾನಿಗಳು ಅಂದ್ರಲ್ಲ, ಒಂದು ಪ್ರಸಂಗ ಹೇಳ್ತೀನಿ ಕೇಳಿ. ಹೊರನಾಡಿನಿಂದ ಒಬ್ರು ಕಾಲ್ ಮಾಡಿದ್ರು. ಎರಡುಕನಸು ಸಿನೆಮಾದಲ್ಲಿ ಅಣ್ಣಾವ್ರು ಓಡಿಸಿದ ಸ್ಕೂಟರ್ ಹೊರನಾಡಿನಲ್ಲಿದೆಯಂತೆ, ಅದ್ರ ಜೊತೆ ನಮ್ಮ ಕನ್ನಡ ರಥ ನಿಲ್ಸಿ ಫೋಟೋ ತೆಗಿಸ್ಕೋಬೇಕಂತೆ ಅವ್ರು! ಈ ಸಲ ಬನ್ನಿ ಸರ್ ಅಂತ ಒತ್ತಾಯ ಮಾಡಿದ್ರು, ಹೋಗ್ತಿದೀನಿ." ಥೇಟು ಎಳೆಮಗುವಿನ ಮುಗ್ಧತೆಯಿಂದ ಹೇಳಿದರು.

ನಟರಾಜುರೊಂದಿಗೆ ಮಾತುಕತೆ ಮುಗಿಸುವ ಹೊತ್ತಿಗೆ ಅವರ ಕನ್ನಡಾಭಿಮಾನದ ಒಂದು ಸಣ್ಣ ಕಿಡಿ ನನ್ನ ಎದೆಯೊಳಗೂ ಇಳಿದಾಗಿತ್ತು, ಕೊರಳುಬ್ಬಿಬಂದಿತ್ತು.

***

ಇಂದು ಮುಂಜಾನೆ ಎಂಟು ಘಂಟೆಗೆ ಗುಂಡ್ಲುಪೇಟೆಯಿಂದ ಹೊರಡುವ ಕನ್ನಡದ ತೇರು ಮಾಸಾದ್ಯಂತ ಸರತಿಯ ಮೇಲೆ ಮೈಸೂರು ಮಡಿಕೇರಿ ಹೊರನಾಡು ಧರ್ಮಸ್ಥಳ ದಾವಣಗೆರೆ ಹುಬ್ಬಳ್ಳಿ ಮಾರ್ಗಗಳಲ್ಲಿ ಸಂಚರಿಸುತ್ತದೆ. ನಿಮ್ಮೂರುಗಳಲ್ಲಿ ಅಚಾನಕ್ಕಾಗಿ ಕನ್ನಡ ರಥ ಎದುರಾದರೆ ಅದರೊಳಗೊಂದು ಸುತ್ತು ಹಾಕಿ, ಖರ್ಚಾದರೂ ಪರವಾಗಿಲ್ಲ ಒಂದಷ್ಟು ದೂರ ಪ್ರಯಾಣಿಸಿ. ಕನ್ನಡಮಯ ವಾತಾವರಣದಲ್ಲಿ ತನ್ಮಯರಾಗಿ ಸಂಭ್ರಮಿಸಿ. ಇಳಿಯುವಾಗ ಕಂಡಕ್ಟರ್ ಸಾಹೇಬ್ರನ್ನು ಅಭಿನಂದಿಸಲು ಮರೆಯದಿರಿ. ಒಂದು ಮುಗುಳ್ನಗೆಯಾದರೂ ಸಾಕು.

ಕನ್ನಡ ರಥದ ಚಾಲಕರ ಹೆಸರು ಬಸವನಗೌಡ ಪೋಲೀಸ್ ಪಾಟೀಲ .ಮೂಲತಃ ರಾಯಚೂರು..ಸೇವೆಗೆ ಸೇರಿ ಐದು ವರ್ಷಗಳಾಗಿವೆ..ಡ್ರೈವರ್ ಹುದ್ದೆ ಸಿಗುವುದಕ್ಕೂ ಮುಂಚಿನಿಂದಲೂ ನಟರಾಜುರವರ ಅಭಿಮಾನಿ.. ನಟುರಾಜುರವರಿಗೆ ಉತ್ತಮ ಸಹಕಾರ ನೀಡುತ್ತಿದ್ದಾರೆ..

ಈ ಲೇಖನವನ್ನು ಕಳುಹಿಸುವ ಹೊತ್ತಿಗೆ ಇನ್ನೆರಡು ಸುದ್ದಿಗಳು ಕೂಡಿಕೊಂಡವು. ಭೈರಾ ರಾಮಕುಮಾರ್ ಎಂಬುವವರು ನಟರಾಜುರವರ ಕನ್ನಡ ಸೇವೆಯನ್ನು ಮೆಚ್ಚಿ ಮುನ್ನೂರು ಪುಸ್ತಕಗಳನ್ನು ಖರೀದಿಸಿ ತಲುಪಿಸಿದ್ದಾರಂತೆ.. ಇದು ಸಿಹಿಸುದ್ದಿ.. ನಿನ್ನೆ ಸಂಜೆ ತಾನೇ ರಾಜ್ಯೋತ್ಸವ ವಿಜೇತರ ಪಟ್ಟಿ ಟಿವಿ ಪರದೆಯ ಮೇಲೆ ಬಿತ್ತರವಾಗುತ್ತಿತ್ತು. ನಟರಾಜುರವರ ಹೆಸರು ಇರಬಹುದೇನೋ ಎಂದು ಆಸೆಗಣ್ಣಿನಿಂದ ನೋಡಿದೆ, ನಿರಾಸೆಯಾಯ್ತು.

(ನಟರಾಜು ಕುಂದೂರು 99004 78868)

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
First of all, let's salute this bus conductor in Chamarajanagar district, who breaths, loves, spreads Kannada without any pretensions. Nataraju Kunduru sees parents in Bhuvaneshwari, conducts Kannada quiz in bus itself. But, unfortunately Karnataka govt has not rewarded him with Kannada Rajyotsava award.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more