Gruha Jyothi scheme: ಕೈಕೊಟ್ಟ ಸರ್ವರ್, ಕೋಟೆನಾಡಿನಲ್ಲಿ ಅರ್ಜಿ ಸಲ್ಲಿಸಲು ಜನರ ಪರದಾಟ
ಚಿತ್ರದುರ್ಗ, ಜೂನ್, 20: ರಾಜ್ಯ ಸರ್ಕಾರ ಜಾರಿಗೆ ತಂದಿರುವ ಗೃಹಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸಲು ಚಾಲನೆ ನೀಡಲಾಗಿದೆ. ಆದರೆ ಈ ಯೋಜನೆಗೆ ಅರ್ಜಿ ಸಲ್ಲಿಸುವ ನಿಗದಿ ಮಾಡಿದ ಕೌಂಟರ್‌ಗಳಲ್ಲಿ ಸರ್ವರ್ ಸಮಸ್ಯೆಯಿಂದ ಸಾರ್ವಜನಿಕರು ಸಂಕಷ್ಟ ಎದುರಿಸುವಂತಾಗಿದೆ.
ಹೌದು.. ಕೋಟೆನಾಡು ಚಿತ್ರದುರ್ಗ ಜಿಲ್ಲೆಯ ಜನತೆ ಸರ್ಕಾರ ಘೋಷಿಸಿರುವ ಉಚಿತ ಯೋಜನೆಯನ್ನು ಸದುಪಯೋಗಪಡಿಸಿಕೊಳ್ಳಲು ತಾ ಮುಂದು ನಾ ಮುಂದು ಎಂದು ಜನರು ಕೈಯಲ್ಲಿ ದಾಖಲೆಗಳನ್ನು ಹಿಡಿದು ಮುನ್ನುಗ್ಗುತ್ತಿದ್ದಾರೆ.

ಚಿತ್ರದುರ್ಗ ನಗರದ ವಿವಿಧೆಡೆ ಸಾರ್ವಜನಿಕರ ಅನುಕೂಲಕ್ಕೆ ಗೃಹ ಜ್ಯೋತಿ ಯೋಜನೆಯಡಿ 200 ಯೂನಿಟ್ ವಿದ್ಯುತ್ ಉಚಿತ ಪಡೆಯಲು ಅರ್ಜಿ ಸಲ್ಲಿಕೆಗೆ ಇಲಾಖೆ ಕೌಂಟರ್‌ಗಳನ್ನು ಪ್ರಾರಂಭಿಸಿದೆ. ಆದರೆ ಇಲ್ಲಿ ಸರಿಯಾಗಿ ಸರ್ವರ್ ವರ್ಕ್ ಆಗದೇ, ಅರ್ಜಿ ಸಲ್ಲಿಸಲು ಸಾಧ್ಯವಾಗದೇ ಜನರು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಕಳೆದ ಮೂರು ದಿನಗಳಿಂದ ಅರ್ಜಿ ಸಲ್ಲಿಕೆ ಕಾರ್ಯ ಪ್ರಾರಂಭವಾಗಿದೆ. ಆದರೆ ಇದುವರೆಗೂ ಒಂದು ಅರ್ಜಿ ಕೂಡ ಸಲ್ಲಿಕೆ ಆಗುತ್ತಿಲ್ಲ ಎನ್ನುವ ಮಾತುಗಳು ಕೇಳಿಬರುತ್ತಿವೆ. ಇದರಿಂದ ಅರ್ಜಿ ಸಲ್ಲಿಕೆಗೆ ಬಂದಿದ್ದ ಜನ ಕೌಂಟರ್ ಸುತ್ತ ಸುಡು ಬಿಸಿಲಲ್ಲೇ ಕುಳಿತುಕೊಳ್ಳಬೇಕಾಗಿತ್ತು. ಅನುಕೂಲ ಮಾಡುತ್ತೇವೆ ಅಂತಾ ನಮ್ಮನ್ನು ಸರ್ಕಾರ ಪರದಾಡುವಂತೆ ಮಾಡುತ್ತಿದೆ ಎಂದು ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿದ್ಯುತ್ ದರ ಏರಿಕೆ, ಭುಗಿಲೆದ್ದ ಆಕ್ರೋಶ
ಹಾಗೆಯೇ ವಿದ್ಯುತ್ ದರ ಏರಿಕೆ ಜನಜೀವನದ ಮೇಲೆ ವ್ಯತಿರಿಕ್ತವಾದ ಪರಿಣಾಮ ಬೀರಿರುವುದು ಒಂದು ಕಡೆಯಾದರೇ, ಮತ್ತೊಂದೆಡೆ ಇದು ವಾಣಿಜ್ಯೋದ್ಯಮಗಳಿಗೆ ಆರ್ಥಿಕ ಸಂಕಷ್ಟ ತಂದೊಡ್ಡಿದೆ. ಈ ಹಿನ್ನೆಲೆ ಹುಬ್ಬಳ್ಳಿಯಲ್ಲಿರುವ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ ಸರ್ಕಾರಕ್ಕೆ ಬಿಸಿ ಮುಟ್ಟಿಸಲು ಮುಂದಾಗಿದೆ.
ವಿದ್ಯುತ್ ದರದಲ್ಲಿ ಅಸಹಜ ಏರಿಕೆ ವಿರೋಧಿಸಿ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯು (ಕೆಸಿಸಿಐ) ಇತರೆ ಎಲ್ಲಾ ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆ ಹಾಗೂ ಸಂಘ- ಸಂಸ್ಥೆಗಳ ಜೊತೆಗೂಡಿ ಜೂನ್ 22ರಂದು ರಾಜ್ಯಾದ್ಯಂತ ಒಂದು ದಿನದ ಬಂದ್‍ಗೆ ಕರೆ ನೀಡಿದೆ. ಎಲ್ಲ ಉದ್ಯಮಿಗಳು, ವ್ಯಾಪಾರಸ್ಥರು ಅಂದು ತಮ್ಮ ವಹಿವಾಟು ಬಂದ್ ಮಾಡುವಂತೆಯೂ ತಳಿಸಿದ್ದೇವೆ ಎಂದು ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ ಉದ್ಯಮಿಯಾದ ಪ್ರವೀಣ ಅಗಡಿ ಅವರು ಇತ್ತೀಚೆಗಷ್ಟೇ ಹೇಳಿದ್ದರು.
ಇನ್ನು ವಿದ್ಯುತ್ ದರ ಹೆಚ್ಚಳದಿಂದ ವ್ಯಾಪಾರಸ್ಥರು, ಜನಸಾಮಾನ್ಯರು ಮತ್ತು ಕೈಗಾರಿಕೆಗಳ ಮೇಲೆ ಆಗಿರುವ ದುಷ್ಪರಿಣಾಮ ಕುರಿತು ಸರ್ಕಾರಕ್ಕೆ ತಿಳಿಸುವ ಪ್ರಯತ್ನವನ್ನು 8 ದಿನಗಳಿಂದ ಮಾಡಿದ್ದೇವೆ. ಆದರೆ, ಅಧಿಕಾರಿಗಳು ಮತ್ತು ಸರ್ಕಾರದ ಪ್ರತಿನಿಧಿಗಳಿಂದ ಸರಿಯಾದ ಸ್ಪಂದನೆ ಸಿಕ್ಕಿಲ್ಲ. ಆದ್ದರಿಂದ ಅನಿವಾರ್ಯವಾಗಿ ಬಂದ್‌ಗೆ ಕರೆ ನೀಡಿದ್ದೇವೆ ಎಂದು ಹೇಳಿದರು.
ಅಲ್ಲದೆ ರಾಜ್ಯ ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲೊಂದಾದ ಗೃಹಜ್ಯೋತಿ ಯೋಜನೆಗೆ ಅರ್ಜಿ ಸ್ವೀಕಾರ ಮಾಡುವ ಪ್ರಕ್ರಿಯೆ ಆರಂಭಗೊಂಡಿದೆ. ಮೊನ್ನೆಯಷ್ಟೇ ಈ ಯೋಜನೆಗೆ ತಾಂತ್ರಿಕ ಸಮಸ್ಯೆ ಎದುರಾಗಿತ್ತು. ಇಲಾಖೆಯಿಂದ ಕ್ಯೂ ಆರ್ ಕೋಡ್ ಬಂದ ಮೇಲೆ ಅರ್ಜಿ ಸ್ವೀಕಾರ ಮಾಡಲಾಗುವುದು ಎಂದು ಸಿಬ್ಬಂದಿ ಹೇಳಿದ್ದರಿಂದ ಮೊದಲ ದಿನ ಅರ್ಜಿ ಸ್ವೀಕಾರಕ್ಕೆ ಈ ರೀತಿಯ ತಾಂತ್ರಿಕ ಸಮಸ್ಯೆ ಎದುರಾಗಿದೆ ಎಂದು ತಿಳಿದುಬಂದಿತ್ತು.
ಧಾರವಾಡದ ಕಲಾಭವನದ ಬಳಿ ಇರುವ ಕರ್ನಾಟಕ ಒನ್ ಕೇಂದ್ರ ಹೆಸ್ಕಾಂ ಕಚೇರಿಯಲ್ಲಿ ಸಾರ್ವಜನಿಕರು ಗೃಹಜ್ಯೋತಿಗೆ ಅರ್ಜಿ ಸಲ್ಲಿಸಲು ಆಗಮಿಸಿದ್ದರು. ಈ ವೇಳೆ ಹೆಸ್ಕಾಂ ಸಿಬ್ಬಂದಿ ಸಹಾಯವಾಣಿಯನ್ನೂ ಆರಂಭಿಸಿ ಗಣಕಯಂತ್ರಕ್ಕೆ ಬಲೂನ್ ಕಟ್ಟಿ ಗೃಹಜ್ಯೋತಿ ಯೋಜನೆಗೆ ಚಾಲನೆ ನೀಡಿದ್ದು ಕಂಡುಬಂದಿತ್ತು.












Click it and Unblock the Notifications