ಎಲ್ಲಾ ಯೋಜನೆ ಪೂರ್ಣಗೊಳ್ಳಲು 1 ಲಕ್ಷ ಕೋಟಿ ಬೇಕು: ಎಂಬಿ ಪಾಟೀಲ್
Recommended Video

ಚಿತ್ರದುರ್ಗ, ಸೆ. 11: ರಾಜ್ಯದಲ್ಲಿ ಚಾಲ್ತಿಯಲ್ಲಿರುವ ಎಲ್ಲಾ ನೀರಾವರಿ ಯೋಜನೆಗಳನ್ನು ಪೂರ್ಣ ಗೊಳಿಸಲು ಸರ್ಕಾರಕ್ಕೆ ಕನಿಷ್ಠ 1 ಲಕ್ಷ ಕೋಟಿ ರು ಬೇಕಾಗುತ್ತದೆ ಎಂದು ಜಲ ಸಂಪನ್ಮೂಲ ಸಚಿವ ಎಂಬಿ ಪಾಟೀಲ್ ಹೇಳಿದರು.
ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿ ಬಗ್ಗೆ ಮಾತನಾಡಿದ ಎಂಬಿ ಪಾಟೀಲ್, ಈ ವರ್ಷಾಂತ್ಯಕ್ಕೆ ಅಜ್ಜಂಪುರ ಬಳಿ ಕಾಲುವೆ ನಿರ್ಮಾಣ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಕೆಲ ತಾಂತ್ರಿಕ ಸಮಸ್ಯೆಯಿಂದ ಯೋಜನೆ ಕಾಮಗಾರಿಯ ಪ್ರಗತಿ ಕುಂಠಿತವಾಗಿದೆ ಎಂದರು.

ಮುಂದಿನ ಖಾರಿಫ್ ಬೆಳೆ ಋತುವಿಗೆ ಕಾಮಗಾರಿ ಅಂತ್ಯಗೊಳ್ಳಲಿದೆ. ಐದು ವರ್ಷಗಳ ಅವಧಿಗೆ 50,000 ಕೋಟಿ ರು ವೆಚ್ಚದಲ್ಲಿ ನೀರಾವರಿ ಯೋಜನೆಗಳು ಸಿದ್ಧಪಡಿಸಲಾಗಿತ್ತು. ಈ ಪೈಕಿ 42 ಸಾವಿರ ಕೋಟಿ ಖರ್ಚು ಮಾಡಲಾಗಿದೆ. ಮಿಕ್ಕ ಮೊತ್ತವನ್ನು ಬಳಸಿ ಮುಂದಿನ ಮಾರ್ಚ್ ಒಳಗೆ ನೀರಾವರಿ ಕಾಮಗಾರಿಗಳನ್ನು ಪೂರೈಸಲಾಗುವುದು ಎಂದರು.
ಚಿತ್ರದುರ್ಗ ತಾಲೂಕಿನ ಬ್ರಹ್ಮಸಾಗರ, ಯಮ್ಮಿಹಟ್ಟಿ ಕೆರೆಗಳಿಗೆ ಏತ ನೀರಾವರಿ ಮೂಲಕ 14 ಕೋಟಿ ರು ವೆಚ್ಚದಲ್ಲಿ ನೀರು ಒದಗಿಸಲಾಗುವುದು. ಇದೇ ರೀತಿ ಜಿಲ್ಲೆಯ ಎಲ್ಲಾ ಕೆರೆಗಳಿಗೂ ನೀರು ಒದಗಿಸುವ ಯೋಜನೆಗೆ ಸದ್ಯದಲ್ಲೇ ಸಿಎಂ ಸಿದ್ದರಾಮಯ್ಯ ಅವರು ಚಾಲನೆ ನೀಡಲಿದ್ದಾರೆ ಎಂದರು.
ಚಿತ್ರದುರ್ಗದಲ್ಲಿ ಮಳೆ: ಹಿರಿಯೂರಿನ ಜವನಗೊಂಡನಹಳ್ಳಿ ಹೊರತುಪಡಿಸಿದರೆ ಉಳಿದ ಎಲ್ಲೆಡೆ ಕೆರೆಗಳು ತುಂಬಿ ಕೊಂಡಿವೆ. ಈಶ್ವರಗೆರೆ, ಯರಬಳ್ಳಿ, ಕಂದಿಕೆರೆ, ಗೂಡನೂರನಹಳ್ಳಿಯ ಕೆರೆಗಳು ತುಂಬಿವೆ. ಹೊಲಗದ್ದೆಗಳಲ್ಲಿನ ಒಡ್ಡುಗಳು, ಚೆಕ್ ಡ್ಯಾಂಗಳು ತುಂಬಿ ಹರಿದಿವೆ.
ಕಳೆದ ಎರಡು ದಿನಗಳಲ್ಲಿ ಹೊಸದುರ್ಗ, ಚಿಕ್ಕಜಾಜೂರು, ಹೊಳಲ್ಕೆರೆ ಭಾಗಗಳಲ್ಲಿ ಭಾರಿ ಮಳೆ ಬಿದ್ದಿದೆ. ತಾಳ್ಯ ಕರೆ ತುಂಬುತ್ತಿರುವುದು ರೈತರಿಗೆ ಜೀವ ತಂದಿದೆ.












Click it and Unblock the Notifications