ಭದ್ರಾ ಮೇಲ್ದಂಡೆ ಯೋಜನೆಯಡಿಯಲ್ಲಿ ಮೊದಲು ಕೆರೆಗಳನ್ನು ತುಂಬಿಸುವ ಕಾರ್ಯಕ್ಕೆ ಆದ್ಯತೆ ನೀಡಿ: ಕೇಂದ್ರ ಸಚಿವ
ಚಿತ್ರದುರ್ಗ, ಆಗಸ್ಟ್, 06: ಭದ್ರಾ ಮೇಲ್ದಂಡೆ ಯೋಜನೆಯಡಿ ಕೆರೆಗಳನ್ನು ತುಂಬಿಸುವ ಕಾಮಗಾರಿಗಳಿಗೆ ಮೊದಲ ಆದ್ಯತೆ ನೀಡಿ, ನಂತರದಲ್ಲಿ ಹನಿ ನೀರಾವರಿ ಯೋಜನೆಯ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುವಂತೆ ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆ ರಾಜ್ಯ ಸಚಿವರು ಹಾಗೂ ಸಂಸದರಾದ ಎ.ನಾರಾಯಣಸ್ವಾಮಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾ ಪಂಚಾಯತ್ ಮಿನಿ ಸಭಾಂಗಣದಲ್ಲಿ ಏರ್ಪಡಿಸಲಾದ ಭದ್ರಾ ಮೇಲ್ದಂಡೆ ಯೋಜನೆಯ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆವಹಿಸಿ ಅವರು ಮಾತನಾಡಿದ್ದು, ಭದ್ರಾ ಮೇಲ್ದಂಡೆ ಯೋಜನೆಯಲ್ಲಿ ವಾಣಿ ವಿಲಾಸ ಸಾಗರ ಜಲಾಶಯಕ್ಕೆ 05 ಟಿ.ಎಂ.ಸಿ ನೀರು ಹರಿಸಲು ತೀರ್ಮಾನ ಆಗಿರುವಂತೆ, ರಾಜ್ಯ ಸಂಪುಟ ಸಭೆಯಲ್ಲಿ ತೀರ್ಮಾನಿಸಿ ಚಿತ್ರದುರ್ಗ, ದಾವಣಗೆರೆ, ಚಿಕ್ಕಮಗಳೂರು ಹಾಗೂ ತುಮಕೂರು ಜಿಲ್ಲೆಗಳ ವ್ಯಾಪ್ತಿಯಲ್ಲಿನ 367 ಕೆರೆಗಳನ್ನು ಆದ್ಯತೆ ಆಧಾರದ ಮೇಳೆ ತುಂಬಿಸುವುದಕ್ಕೆ ಕ್ರಮ ಕೈಗೊಳ್ಳಬೇಕು ಎಂದರು.

ಕೆರೆಗಳು ತುಂಬಿದರೆ ಹೆಚ್ಚಿನ ಜನರಿಗೆ ಅನುಕೂಲ ಆಗುತ್ತದೆ. ಹನಿ ನೀರಾವರಿಗೆ ನಂತರದ ಆದ್ಯತೆ ನೀಡಲಿ. ಹೀಗಾಗಿ 367 ಕೆರೆಗಳಿಗೆ ನೀರು ತುಂಬಿಸಿದ ನಂತರವೇ ಸರ್ಕಾರ ಮಾರ್ಪಾಡು ಮಾಡಿದ ಯೋಜನೆಯಂತೆ ಹನಿ ನೀರಾವರಿಗೆ ತದ ನಂತರದ ಪ್ರಾಶಸ್ತ್ಯ ನೀಡುವಂತೆ ಸಚಿವರು ಒತ್ತಾಯಿಸಿದರು.
ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರದ ಬಜೆಟ್‍ನಲ್ಲಿ ಹನಿ ನೀರಾವರಿಗೆ ಹಾಗೂ ಕೆರೆಗಳನ್ನು ತುಂಬಿಸಲು 5,300 ಕೋಟಿ ರೂಪಾಯಿ ಅನುದಾನ ಒದಗಿಸಲು ಘೋಷಣೆಯಾಗಿದ್ದು. 60:40 ಅನುಪಾತ ಹಂಚಿಕೆಯಲ್ಲಿಯೇ ರಾಜ್ಯ ಸರ್ಕಾರ ಯೋಜನೆಯಲ್ಲಿ ಕೆಲ ಮಾರ್ಪಾಡು ಮಾಡಿ ನೀಡಿದಲ್ಲಿ ತಕ್ಷಣವೇ ಹಣ ಬಿಡುಗಡೆ ಮಾಡಲು ಕೇಂದ್ರ ನೀರಾವರಿ ಸಚಿವರು ಒಪ್ಪಿಗೆ ಸೂಚಿಸಿರುತ್ತಾರೆ. ಶೀಘ್ರ ರಾಷ್ಟ್ರೀಯ ಯೋಜನೆಯಾಗಿ ಘೋಷಣೆಯಾಗುವಂತೆ ಮಾಡಲು ನಿರಂತರವಾಗಿ ಪ್ರಾಮಾಣಿಕ ಯತ್ನ ಕೈಗೊಳ್ಳಲಾಗುತ್ತಿದೆ ಎಂದರು.
ರಾಷ್ಟ್ರೀಯ ಯೋಜನೆಯಾಗಿ ಘೋಷಣೆಯಾಗುವುದು ವಿಳಂಬವಾದಲ್ಲಿ, ಕೇಂದ್ರದ ಅನುದಾನ ಪಡೆಯಲು ಇರುವ ತೊಡಕನ್ನು ನಿವಾರಿಸಲು ಕೇಂದ್ರದ ಪಾಲಿನ ಶೇಕಡಾ 60 ಹಾಗೂ ರಾಜ್ಯದ ಪಾಲಿನ ಶೇಕಡಾ 40ರ ಅನುಪಾತದಡಿ ಖರ್ಚು ಭರಿಸುವ ರೀತಿಯಲ್ಲಿಯೇ ರಾಜ್ಯ ಸರ್ಕಾರ ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆ, ಆಕ್ಸಿಲರಿ ಇರಿಗೇಷನ್ ಬೆನಿಫಿಟೆಡ್ ಪ್ರೋಗ್ರಾಂನಡಿ ಹಣ ಬಿಡುಗಡೆ ಮಾಡಲು ಕೇಂದ್ರ ಸರ್ಕಾರವನ್ನು ಕೋರಲಾಗುತ್ತದೆ.
ರಾಜ್ಯದ ಭಾರಿ ಮತ್ತು ಮಧ್ಯಮ ನೀರಾವರಿ ಸಚಿವರು ಹಾಗೂ ಉಪಮುಖ್ಯಮಂತ್ರಿಗಳಾದ ಡಿ.ಕೆ. ಶಿವಕುಮಾರ್ ಅವರು ಇಲಾಖೆಯ ಪ್ರಧಾನ ಕಾರ್ಯದರ್ಶಿ, ವಿಶ್ವೇಶ್ವರಯ್ಯ ಜಲ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕರು ಒಳಗೊಂಡ ತಾಂತ್ರಿಕ ಅಧಿಕಾರಿಗಳ ಸಭೆ ಮಾಡಿ, ತಕ್ಷಣವೇ ಕೇಂದ್ರ ಸರ್ಕಾರಕ್ಕೆ ಪತ್ರವನ್ನು ಸಲ್ಲಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸಚಿವ ಎ.ನಾರಾಯಣಸ್ವಾಮಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಈ ಕುರಿತು ಉಪಮುಖ್ಯಮಂತ್ರಿಗಳು, ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಸಂಬಂಧಪಟ್ಟ ಶಾಸಕರು, ಅಧಿಕಾರಿಗಳೊಂದಿಗೆ ಪ್ರತ್ಯೇಕವಾಗಿ ಸಭೆ ಕೈಗೊಂಡು, ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದು ಸಚಿವ ಎ.ನಾರಾಯಣಸ್ವಾಮಿ ಅವರು ತಿಳಿಸಿದರು.












Click it and Unblock the Notifications