ಹಿರಿಯೂರು: ಕೊನೆಗೂ ಗಾಯಿತ್ರಿ ಜಲಾಶಯ ಭರ್ತಿ
Gayatri Dam: ಈಗಾಗಲೇ ಮುಂಗಾರು ಮಳೆ ಆರ್ಭಟದಿಂದ ರಾಜ್ಯದ ಬಹುತೇ ಪ್ರಮುಖ ಜಲಾಶಯಗಳು ಭರ್ತಿಯಾಗಿವೆ. ಹಾಗೆಯೇ ಇದೀಗ ಹಿರಿಯೂರು ತಾಲ್ಲೂಕಿನ ಜವನಗೊಂಡನಹಳ್ಳಿ ಹೋಬಳಿಯ ಗಾಯಿತ್ರಿ ಜಲಾಶಯ ಬಹುತೇಕ ಭರ್ತಿಯಾಗಿದ್ದು, ಜಲಾಶಯ ಕೋಡಿ ಬೀಳಲು ಕೇವಲ 2 ಅಡಿ ನೀರು ಮಾತ್ರ ಬಾಕಿಯಿದೆ. ಹಾಗಾದರೆ ಡ್ಯಾಂ ನೀರಿನ ಮಟ್ಟ ಎಷ್ಟಿದೆ ಎಂದು ಇಲ್ಲಿ ತಿಳಿಯಿರಿ.
ಶಿರಾ ತಾಲೂಕಿನ ಬುಕ್ಕಾಪಟ್ಟಣ ಹೋಬಳಿಯ ಭಾಗದಲ್ಲಿ ಕಳೆದೆರಡು ದಿನಗಳಿಂದ ಮಳೆಯಾಗುತ್ತಿದ್ದು, ಅಲ್ಲಿನ ನೀರು ಗಾಯಿತ್ರಿ ಡ್ಯಾಂಗೆ ಹರಿದು ಬರುತ್ತಿದೆ. ಇದರಿಂದ ಜಲಾಶಯಕ್ಕೆ ಒಳಹರಿವು ಹೆಚ್ಚಿದ್ದು, ಆ ಭಾಗದ ಜನರ ನೀರಿನ ಅಭಾವವನ್ನು ದೂರ ಮಾಡಿದೆ. 145 ಅಡಿಗೆ ಕೋಡಿ ಬೀಳಲಿದ್ದು, ಇದೀಗ 143 ಅಡಿ ನೀರು ಸಂಗ್ರಹವಾಗಿದೆ. ನೀರಿನ ಸಂಗ್ರಹಣಾ ಸಾಮರ್ಥ್ಯ 152 ಅಡಿ ಎತ್ತರವಿದೆ.

ಮುಂಗಾರು ಮಳೆ ಆರ್ಭಟಕ್ಕೆ ರಾಜ್ಯದ ಕರಾವಳಿ, ಮಲೆನಾಡು ಹಾಗೂ ಉತ್ತರ ಕರ್ನಾಟಕದ ಬಹುತೇಕ ಜಲಾಶಯಗಳು ಭರ್ತಿಯಾಗಿದ್ದವು. ಆದರೆ, ತಾಲ್ಲೂಕಿನ ಜವನಗೊಂಡನಹಳ್ಳಿ ಹೋಬಳಿಯ ಗಾಯಿತ್ರಿ ಜಲಾಶಯಕ್ಕೆ ಮಾತ್ರ ಪ್ರಸಕ್ತ ಸಾಲಿನಲ್ಲಿ ಯಾವುದೇ ಒಳಹರಿವು ನೀರು ಬರದೇ ಡ್ಯಾಂ ಬತ್ತಿ ಹೋಗುವ ಹಂತ ತಲುಪಿತ್ತು. ಇದೀಗ ಜಲಾಶಯ ಕೋಡಿ ಬೀಳುವ ಹಂತದಲ್ಲಿದೆ.
ಮೈಸೂರಿನ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಕಾಲದಲ್ಲಿ ಹಿರಿಯೂರು ತಾಲ್ಲೂಕಿನ ಜವನಗೊಂಡನಹಳ್ಳಿ ಹೋಬಳಿಯ ಕರಿಯಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಸುವರ್ಣಮುಖಿ ನದಿಗೆ 1963ರಲ್ಲಿ ಗಾಯತ್ರಿ ಜಲಾಶಯವನ್ನು ಅಡ್ಡಲಾಗಿ ನಿರ್ಮಿಸಲಾಗಿದೆ. ಗಾಯತ್ರಿ ಜಲಾಶಯದ ನೀರಿನ ಸಂಗ್ರಹಣಾ ಸಾಮರ್ಥ್ಯವು 0.975 ಟಿ.ಎಂ.ಸಿ ಗಳಾಗಿದ್ದು, ಇದರಲ್ಲಿ 0.337 ಟಿ.ಎಂ.ಸಿ ಬಳಕೆಗೆ ಲಭ್ಯವಿದೆ ಹಾಗೂ ಬಳಕೆಗೆ ಬರುವ ನೀರಿನ ಪ್ರಮಾಣ 0.638 ಟಿ.ಎಂ.ಸಿ ಇರುತ್ತದೆ.
ಪ್ರಸ್ತುತ ಜಲಾಶಯದ ನೀರಿನ ಸಂಗ್ರಹಣೆಯಲ್ಲಿ ಮೂಲ ಬಧ್ಧತೆಯನುಸಾರ ಹಂಚಿಕೆಯಾದ ನೀರಿನ ಪ್ರಮಾಣದ ವಿವರಗಳ ಗಮನಿಸಿದಾಗ, ಅನುಮೋದಿತ ಮಾಸ್ಟರ್ ಪ್ಲಾನ್‌ನಂತೆ ಗಾಯತ್ರಿ ಜಲಾಶಯದ ಅಚ್ಚುಕಟ್ಟು ಪ್ರದೇಶಕ್ಕೆ ಹಂಚಿಕೆಯಾಗಿರುವ ನೀರಿನ ಪ್ರಮಾಣ 0.45 ಟಿಎಂಸಿ ಆಗಿರುತ್ತದೆ. ಗಾಯತ್ರಿ ಜಲಾಶಯದಿಂದ ಜವನಗೊಂಡನಹಳ್ಳಿ ಮತ್ತು 37 ಗ್ರಾಮಗಳಿಗೆ ಕುಡಿಯುವ ನೀರಿಗಾಗಿ 0.028 ಟಿಎಂಸಿ ನೀರನ್ನು ಬಳಸಲು ಅನುಮತಿಸಲಾಗಿರುತ್ತದೆ.
ಗಾಯಿತ್ರಿ ಜಲಾಶಯ ಸುಮಾರು 7,000 ಹೆಕ್ಟೇರ್ ಅಚ್ಚುಕಟ್ಟು ಪ್ರದೇಶಕ್ಕೆ ನೀರುಣಿಸುತ್ತದೆ. ಜಲಾಶಯವು 145 ಅಡಿ ಎತ್ತರ ಹೊಂದಿದೆ. ಇನ್ನು 16 ಕಿಲೋ ಮೀಟರ್ ಉದ್ದದ ಬಲನಾಲೆ ಹಾಗೂ 7 ಕಿ.ಮೀ. ಉದ್ದದ ಎಡನಾಲೆ ಎಂಬ ಎರಡು ನಾಲೆಗಳಿವೆ. ಎರಡು ಕಾಲುವೆಗಳ ಮೂಲಕ 0.67 ಟಿಎಂಸಿ ನೀರನ್ನು ಕೃಷಿಗೆ ಬಳಸಿಕೊಳ್ಳಲಾಗುತ್ತದೆ.
ಜಲಾಶಯದ ಒಟ್ಟು ಉದ್ದ 1021.53 ಮೀಟರ್, ನೀರಿನ ಸಂಗ್ರಹಣಾ ಸಾಮರ್ಥ್ಯ 27.63 ದಶಲಕ್ಷ ಘನ ಮೀಟರ್ ಇದ್ದು, ಇದರಲ್ಲಿ ಉಪಯುಕ್ತ ಸಂಗ್ರಹಣ ಸಾಮರ್ಥ್ಯ 18.08 ದಶಲಕ್ಷ ಘನ ಮೀಟರ್ 0.63 ಟಿಎಂಸಿ ಇರುತ್ತದೆ. ಇದರ ಒಟ್ಟು ಜಲಾವೃತ ಪ್ರದೇಶ 1031.00 ಕಿ.ಮೀ. ಇದ್ದು, ಸದರಿ ಯೋಜನೆಯು ಒಟ್ಟು 2305.00 ಹೆಕ್ಟೇರ್ ಅಚ್ಚುಕಟ್ಟು ಪ್ರದೇಶವನ್ನು ಹೊಂದಿರುತ್ತದೆ.
ಈ ಜಲಾಶಯದ ನೀರು ಹಿರಿಯೂರು ತಾಲ್ಲೂಕಿನ ಜವಗೊಂಡನಹಳ್ಳಿಗೆ ಸೀಮಿತಗೊಳ್ಳದೇ ಪಕ್ಕದ ಶಿರಾ ತಾಲೂಕಿನ ಹುಣಸೆಹಳ್ಳಿ, ಉಜ್ಜನಕುಂಟೆ, ಮೇಳೆ ಕೋಟೆ ಮತ್ತಿತರರ ಗ್ರಾಮದ ರೈತರ ಜಮೀನುಗಳಿಗೆ ಹರಿಯುತ್ತದೆ. ಜಲಾಶಯ ಒಮ್ಮೆ ಭರ್ತಿಯಾದರೆ ಸುತ್ತಮುತ್ತಲಿನ ಪ್ರದೇಶದಲ್ಲಿ ಅಂತರ್ಜಲ ಮಟ್ಟ ಹೆಚ್ಚಳ ಆಗುತ್ತದೆ.
ಗಾರೆ ಮತ್ತು ಸಿಮೆಂಟ್ ಬಳಸಿ ಈ ಜಲಾಶಯವನ್ನು ನಿರ್ಮಾಣ ಮಾಡಲಾಗಿದೆ. ಅಂದಿನ ಚಿತ್ರದುರ್ಗ ಜಿಲ್ಲಾ ಬೋರ್ಡ್ ಅಧ್ಯಕ್ಷರಾಗಿದ್ದ ವಕೀಲ ಕೆ.ಕೆಂಚಪ್ಪ ಜಯಚಾಮರಾಜ ಒಡೆಯರ್ ಆಹ್ವಾನಿಸಿ ಜಲಾಶಯಕ್ಕೆ ಅಡಿಗಲ್ಲು ಹಾಕಿಸಿದ್ದರು. ಈ ಡ್ಯಾಂ ಅನ್ನು ಜಯಚಾಮರಾಜ ಒಡೆಯರ್ ಮನೆತನದ ಹೆಣ್ಣುಮಗಳಾದ ಗಾಯತ್ರಿದೇವಿ ನೆನೆಪಿಗಾಗಿ ನಿರ್ಮಾಣ ಮಾಡಿ ಅವರ ಹೆಸರನ್ನೇ ನಾಮಕರಣ ಮಾಡಲಾಗಿದೆ.
ಗಾಯತ್ರಿ ಜಲಾಶಯವು 2017ರ ಅಕ್ಟೋಬರ್ ಹಾಗೂ ನವೆಂಬರ್ ತಿಂಗಳಲ್ಲಿ ಎರಡು ಬಾರಿ ಕೋಡಿ ಬಿದ್ದಿತ್ತು. ತದನಂತರ ಮಳೆ ಇಲ್ಲದ ಕಾರಣ ಜಲಾಶಯಕ್ಕೆ ದೊಡ್ಡ ಪ್ರಮಾಣದಲ್ಲಿ ನೀರು ಹರಿದು ಬರಲು ಸಾಧ್ಯವಾಗಲಿಲ್ಲ. ಡ್ಯಾಂನಲ್ಲಿ ನೀರು ಇಲ್ಲದೆ ದಿನ ಕಳೆದಂತೆ ಜಲಾಶಯ ಬತ್ತಿ ಹೋಗಿತ್ತು. ಜಾನುವಾರುಗಳಿಗೆ ಕುಡಿಯುವ ನೀರಿಗಾಗಿ ಹಾಹಾಕಾರ ಉಂಟಾಗಿತ್ತು. ನಾಲ್ಕು ವರ್ಷಗಳ ನಂತರ 2021 ನವೆಂಬರ್ ತಿಂಗಳಲ್ಲಿ ಭಾರೀ ಪ್ರಮಾಣದಲ್ಲಿ ಅಕಾಲಿಕ ಮಳೆ ಸುರಿದಿದ್ದರಿಂದ ಮೈದುಂಬಿ ಕೊಡಿ ಬಿದ್ದಿತು. ಇದೀಗ 2024ರಲ್ಲಿ ಡ್ಯಾಂ ಕೋಡಿ ಬೀಳಲಿದೆ.
ಇತ್ತ ಹಿರಿಯೂರಿನ ಮತ್ತೊಂದು ಜಲಾಶಯವಿರುವ ವಾಣಿ ವಿಲಾಸ ಸಾಗರ ಡ್ಯಾಂ ಕೂಡ ಬಹುತೇಕ ಭರ್ತಿಯಾಗಿದ್ದು, ಕೋಡಿ ಬೀಳಲು 1.90 ಅಡಿ ಬಾಕಿ ಇದೆ. ಇಂದು ವಾಣಿ ವಿಲಾಸ ಜಲಾಶಯಕ್ಕೆ 624 ಕ್ಯೂಸೆಕ್ ಒಳಹರಿವು ನೀರು ಹರಿದು ಬರುತ್ತಿದ್ದು, ಇದರಿಂದ ಪ್ರಸ್ತುತ ಜಲಾಶಯದ ನೀರಿನ ಮಟ್ಟ 128.10 ಅಡಿ ತಲುಪಿದೆ. ಒಟ್ಟಾರೆಯಾಗಿ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ವಾಣಿ ವಿಲಾಸ ಜಲಾಶಯ ಮತ್ತು ಗಾಯಿತ್ರಿ ಜಲಾಶಯ ಎರಡು ಭರ್ತಿಯಾಗಿದ್ದು, ಕೋಡಿ ಬೀಳಲು ಕ್ಷಣಗಣನೆ ಆರಂಭವಾಗಿದ್ದು, ಕೋಡಿಯನ್ನು ಕಣ್ತುಂಬಿಕೊಳ್ಳಲು ರೈತರು ಕಾತುರದಿಂದ ಕಾಯುತ್ತಿದ್ದಾರೆ.












Click it and Unblock the Notifications