ಚಿತ್ರದುರ್ಗದಲ್ಲಿ ಹಿಂದೂ ಮಹಾಗಣಪತಿಯ ಬೃಹತ್ ಶೋಭಾಯಾತ್ರೆ ಆರಂಭ
ಚಿತ್ರದುರ್ಗ, ಅಕ್ಟೋಬರ್ 08: ಕೋಟೆನಾಡು ಚಿತ್ರದುರ್ಗದಲ್ಲಿ ಹಿಂದೂ ಮಹಾಗಣಪತಿಯ ಬೃಹತ್ ವಿಸರ್ಜನಾ ಶೋಭಾಯಾತ್ರೆ ಮೆರವಣಿಗೆ ಬಹಳ ಅದ್ದೂರಿಯಾಗಿ ಆರಂಭಗೊಂಡಿದೆ.
ನಗರದ ಪಂಚಾಕ್ಷರಿ ಕಲ್ಯಾಣ ಮಂಟಪದ ಬಳಿ ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗದಳದ ವತಿಯಿಂದ ಗಣಪತಿಯನ್ನು ಪ್ರತಿಷ್ಠಾಪಿಸಿದ್ದರು. 21 ದಿನಗಳ ವಿವಿಧ ಧಾರ್ಮಿಕ ಪೂಜಾ ಕಾರ್ಯಕ್ರಮಗಳು ನೆರವೇರಿಸಲಾಯಿತು. ಇಂದು ಅಂತಿಮ ದಿನವಾಗಿದ್ದರಿಂದ ಹಿಂದೂ ಮಹಾಗಣಪತಿ ವಿಸರ್ಜನಾ ಬೃಹತ್ ಶೋಭಾಯಾತ್ರೆಗೆ ವಿವಿಧ ಮಠಾಧೀಶರು, ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಅವರು ಚಾಲನೆ ನೀಡಿದರು.

ಭಾನುವಾರ ಬೆಳಗ್ಗೆ 11 ಗಂಟೆಗೆ ವೇದಿಕೆ ಕಾರ್ಯಕ್ರಮ ಮುಗಿದ ನಂತರ ವಿಜ್ಞಾನ ಕಾಲೇಜು ಮುಂಭಾಗದಿಂದ ಶುರುವಾದ ಗಣಪತಿ ವಿಸರ್ಜನಾ ಶೋಭಾಯಾತ್ರೆ ಮೂರು ಕಿಲೋಮೀಟರ್ ಸಾಗಿ, ಚಂದ್ರವಳ್ಳಿ ಕೆರೆಯಲ್ಲಿ ವಿಸರ್ಜನೆ ಗೊಳ್ಳಲಿದೆ. ಈ ಮೆರವಣಿಗೆಗೆ ನಿರೀಕ್ಷೆಗೂ ಮೀರಿ ಜನರು ಬಂದಿದ್ದರು.
ಬಿಸಿಲನ್ನು ಲೆಕ್ಕಿಸದೆ ಜನರು ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದ್ದು ಕಂಡು ಬಂದಿತ್ತು. ಪ್ರತಿಷ್ಠಾಪನ ಸ್ಥಳದಿಂದ ಗಣಪತಿ ಮೆರವಣಿಗೆ ಹೊರಟು ಮದಕರಿನಾಯಕನ ವೃತ್ತ, ಅಂಬೇಡ್ಕರ್ ವೃತ್ತ, ಗಾಂಧಿ ವೃತ್ತ, ಸಂಗೋಳ್ಳಿ ರಾಯಣ್ಣ ವೃತ್ತ ಹಾಗೂ ಕನಕ ವೃತ್ತದದ ಮೂಲಕ ಶೋಭಾಯಾತ್ರೆ ಸಾಗಿತು. ಈ ಮೆರವಣಿಗೆಯಲ್ಲಿ ವಾದ್ಯ ಗೋಷ್ಠಿ, ತಮಟೆ, ಡೋಲು, ಗೊಂಬೆ ಕುಣಿತ, ವೀರಗಾಸೆ ಈಗೆ ವಿವಿಧ ಸಾಂಸ್ಕೃತಿಕ ಕಲಾತಂಡಗಳು ಮೆರುಗು ನೀಡಿದವು.
ಲಕ್ಷ ಲಕ್ಷಾಂತರ ಸಾಗರೋಪಾದಿಯಲ್ಲಿ ಜನರು ಕಿಕ್ಕಿರಿದು ಮೆರವಣಿಗೆಯಲ್ಲಿ ಸೇರಿದ್ದರು. ಪ್ರವಾಸಿ ಮಂದಿರದಿಂದ ಮೆರವಣಿಗೆ ಮುಂದೆ ಬರುತ್ತಿದ್ದಂತೆ ಕಟ್ಟಡಗಳ ಮೇಲಿದ್ದ ಜನರ ಸಂಭ್ರಮ ಮುಗಿಲು ಮುಟ್ಟಿತ್ತು. ಎತ್ತ ತಿರುಗಿದರು ಸಹ ಜನವೋ, ಜನ. ಗಣಪತಿ ಮೆರವಣಿಗೆ ದೇಶದಲ್ಲೇ ಎರಡನೇ ಸ್ಥಾನ ಪಡೆದಿದೆ.

ಶೋಭಾಯಾತ್ರೆಯಲ್ಲಿ ಪೊಲೀಸ್ ಬಿಗಿ ಭದ್ರತೆ
ಯುವಕ, ಯುವತಿಯರು, ಮಕ್ಕಳು, ಹಿರಿಯರು ಹೀಗೆ ಎಲ್ಲರೂ ಭವ್ಯ ಮೆರವಣಿಗೆಗೆ ಸಾಕ್ಷಿಯಾದರು. ರಸ್ತೆಯುದ್ದಕ್ಕೂ ಪೊಲೀಸರು ಬಿಗಿ ಬಂದೋಬಸ್ತ್ ಕಲ್ಪಿಸಿದ್ದರು. ಭದ್ರತೆಗಾಗಿ ಜಿಲ್ಲೆಯ ವರಿಷ್ಠಾಧಿಕಾರಿ ಸೇರಿದಂತೆ 4 ಹೆಚ್ಚುವರಿ ಎಸ್ಪಿಗಳು, 16 ಡಿವೈಎಸ್ಪಿ, 40 ಸಿಪಿಐ, 110 ಪಿಎಸೈ ಸೇರಿದಂತೆ 2800 ಪೋಲಿಸ್ ಸಿಬ್ಬಂದಿಗಳನ್ನು ನಿಯೋಜನೆ ಮಾಡಲಾಗಿತ್ತು. ನಗರದದ್ಯಾಂತ 60 ವೀಡಿಯೋ ಕ್ಯಾಮರಾ, ಪ್ರಮುಖ 100 ಸ್ಥಳಗಳಲ್ಲಿ ಸಿಸಿಟಿವಿ, 29 ಭಾಗಗಳಲ್ಲಿ ಕಣ್ಗಾವಲು ವೇದಿಕೆಗಳನ್ನು ನಿರ್ಮಿಸಲಾಗಿತ್ತು.
ಒಟ್ಟಾರೆಯಾಗಿ ಶೋಭಾಯಾತ್ರೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಮೆರವಣಿಗೆಯಲ್ಲಿ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದರು. ಜೊತೆಗೆ ಬಜರಂಗದಳ ಹಾಗೂ ವಿಶ್ವ ಹಿಂದೂ ಪರಿಷತ್ ನೇತೃತ್ವದ ತಂಡ ಸಹ ಎಲ್ಲಿಯೂ ಸಮಸ್ಯೆ ಆಗದಂತೆ ಎಚ್ಚರವಹಿಸಿದ್ದರು. ಇನ್ನು ಒಳ ಬರುವ ಪ್ರಮುಖ ರಸ್ತೆಗಳನ್ನು ತಾತ್ಕಾಲಿಕವಾಗಿ ಬಂಬುಗಳಿಂದ ಬ್ಯಾರಿಕೇಡ್ ಹಾಕಿ ಬಂದ್ ಮಾಡಲಾಗಿತ್ತು. ನಗರದ ವಿವಿಧ ಭಾಗಗಳಲ್ಲಿ ವಾಚಿಂಗ್ ಟವರ್ ನಿರ್ಮಾಣ ಮಾಡಿದ್ದರು.
ಕೇಸರಿ ಮಾಯವಾದ ದುರ್ಗ
ಗಣೇಶನ ಬೃಹತ್ ಶೋಭಾಯಾತ್ರೆಗೆ ಚಿತ್ರದುರ್ಗ ನಗರ ಕೇಸರಿ ಬಣ್ಣದ ಮಾಯಾವಾಗಿತ್ತು. ನಗರದಲ್ಲಿ ಎತ್ತಾ ನೋಡಿ ಕಣ್ಣಾಡಿಸಿದರೂ ಕೇಸರಿ ಬಾವುಟ ಹಾರಾಟ ರಾರಾಜಿಸುತ್ತಿದ್ದವು. ನಗರದ ವೃತ್ತಗಳಿಗೆ ಬಣ್ಣ, ಬಣ್ಣದ ಅಲಂಕಾರ ಮಾಡಿದ್ದು ಎಲ್ಲರ ಗಮನ ಸೆಳೆಯಿತು. ಮದಕರಿನಾಯಕ ವೃತ್ತ, ಗಾಂಧಿ ವೃತ್ತ, ಸಂಗೋಳ್ಳಿ ರಾಯಣ್ಣ, ಕನಕ ಸರ್ಕಲ್ ಸೇರಿದಂತೆ ಮತ್ತಿತರರ ವೃತ್ತಗಳಿಗೆ ಅಲಂಕಾರ ಮಾಡಿದ್ದರು.
ರಾಜ್ಯದಲ್ಲಿಯೇ ಹೆಸರುವಾಸಿಯಾಗಿರುವ ಚಿತ್ರದುರ್ಗದ ಹಿಂದೂ ಮಹಾಗಣಪತಿ ವಿಸರ್ಜನಾ ಶೋಭಾಯಾತ್ರೆಗೆ ದಾವಣಗೆರೆ, ಬಳ್ಳಾರಿ, ತುಮಕೂರು, ಬೆಂಗಳೂರು, ಚಿಕ್ಕಮಗಳೂರು ಸೇರಿದಂತೆ ನಾನಾ ಜಿಲ್ಲೆಗಳು ಹಾಗೂ ಹೊರ ರಾಜ್ಯಗಳಿಂದಲೂ ಭಕ್ತರು ಆಗಮಿಸಿದ್ದರು.












Click it and Unblock the Notifications