ಟಿಕೆಟ್ ನೀಡದ ಕಾಂಗ್ರೆಸ್ ವಿರುದ್ಧ ರಘು ಆಚಾರ್ ಬಂಡಾಯ: ಜೆಡಿಎಸ್ ಸೇರ್ತಾರಾ ಮಾಜಿ ಎಂಎಲ್‌ಸಿ?
ಚಿತ್ರದುರ್ಗ, ಏಪ್ರಿಲ್ 7: ಕರ್ನಾಟಕ ವಿಧಾನಸಭಾ ಚುನಾವಣೆ ದಿನಾಂಕ ನಿಗದಿಯಾದ ಬೆನ್ನಲ್ಲೇ ಕಾಂಗ್ರೆಸ್ ಎರಡನೇ ಪಟ್ಟಿ ಬಿಡುಗಡೆ ಮಾಡಿದೆ. ಚಿತ್ರದುರ್ಗ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ನಿರೀಕ್ಷೆಯಲ್ಲಿದ್ದ ಮಾಜಿ ಎಂಎಲ್ಸಿ ರಘು ಆಚಾರ್‌ಗೆ ಭಾರೀ ನಿರಾಸೆಯಾಗಿದೆ. ಕಾಂಗ್ರೆಸ್ ಟಿಕೆಟ್ ವಂಚಿತರಾಗಿರುವ ಜೆಡಿಎಸ್ ಪಕ್ಷಕ್ಕೆ ಸೇರಲಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿದೆ.
ಕಾಂಗ್ರೆಸ್ ಪಕ್ಷದ ಎರಡನೇ ಹಂತದ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗಿದ್ದು, ಚಿತ್ರದುರ್ಗ ವಿಧಾನಸಭಾ ಕ್ಷೇತ್ರದಿಂದ ಕೆ.ಸಿ ವೀರೇಂದ್ರ ಪಪ್ಪಿ ಅವರಿಗೆ ಟಿಕೆಟ್ ನೀಡಲಾಗಿದೆ. ಇದರಿಂದ ಕಾಂಗ್ರೆಸ್ ಪಕ್ಷದ ಮೇಲೆ ತೀವ್ರ ಅಸಮಧಾನಗೊಂಡಿರುವ ರಘು ಆಚಾರ್ ಜೆಡಿಎಸ್ ಪಕ್ಷದಿಂದ ಸ್ಪರ್ಧಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ರಘು ಆಚಾರ್ ವಿಧಾನಸಭೆಗೆ ಪ್ರವೇಶ ಮಾಡಬೇಕು ಎಂಬ ದೃಷ್ಟಿಯಿಂದ ಸ್ಥಳೀಯ ಸಂಸ್ಥೆಗಳ ಚುನಾವಣೆ ಟಿಕೆಟ್ ಬಿಟ್ಟು ಕೊಟ್ಟಿದ್ದರು. ಜೊತೆಗೆ ಚಿತ್ರದುರ್ಗ ವಿಧಾನಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ ಟಿಕೆಟ್ ಪಡೆಯಲು ರಘು ಆಚಾರ್ ಪ್ರಬಲ ಪೈಪೋಟಿ ನಡೆಸಿದ್ದರು. ಆದರೆ ಕಾಂಗ್ರೆಸ್ ಪಕ್ಷದ ಎರಡನೇ ಹಂತದ ಅಭ್ಯರ್ಥಿಗಳ ಪಟ್ಟಿ ಗುರುವಾರ ಬಿಡುಗಡೆಯಾಗಿದ್ದು, ನಟ ದೊಡ್ಡಣ್ಣ ಅಳಿಯ ಉದ್ಯಮಿ ಕೆಸಿ ವೀರೇಂದ್ರ ಪಪ್ಪಿ ಅವರಿಗೆ ಟಿಕೆಟ್ ನಿಗದಿಯಾಗಿದೆ.
ಕಾಂಗ್ರೆಸ್ ನಾಯಕರು ನನಗೆ ಟಿಕೆಟ್ ನೀಡದೆ ಮೊಸ ಮಾಡಿದ್ರು : ಮಾಜಿ ಎಂಎಲ್ಸಿ ರಘು ಆಚಾರ್ ಬೇಸರ
ಕಾಂಗ್ರೆಸ್ ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆಯಾಗುತ್ತಿದಂತೆ ಬೇಸರಗೊಂಡ ಮಾಜಿ ಎಂಎಲ್ಸಿ ರಘು ಆಚಾರ್ ಟಿಕೆಟ್ ನೀಡುತ್ತೇವೆ ಎಂದು ಕಾಂಗ್ರೆಸ್‌ನವರು ನನಗೆ ಮೋಸ ಮಾಡಿದರು ಎಂದು ತೀವ್ರ ಅಸಮಧಾನ ಹೊರಹಾಕಿದ್ದಾರೆ.
ಚಿತ್ರದುರ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕಾಂಗ್ರೆಸ್ ನಾಯಕರು ಟಿಕೆಟ್ ನೀಡುವಲ್ಲಿ ನನಗೆ ಮೋಸ ಮಾಡಿದ್ದಾರೆ. ನಾನೊಂದು ಸಣ್ಣ ಸಮುದಾಯದ ನಾಯಕ ಎಂದು ಹೀಗೆ ಮಾಡಿದ್ದಾರೆ. ಕಾಂಗ್ರೆಸ್ ನನ್ನನ್ನು ಅರ್ಧ ದಾರಿಗೆ ತಂದು ಕತ್ತು ಕೊಯ್ದಿದಿದೆ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಕಾಂಗ್ರೆಸ್ ವಿರುದ್ಧ ಬಂಡಾಯದ ಬಾವುಟ ಹಾರಿಸಲು ಮುಂದಾಗಿರುವ ರಘು ಆಚಾರ್ ಏಪ್ರಿಲ್ 17ನೇ ತಾರೀಕು ನಾನು ನಾಮಪತ್ರ ಸಲ್ಲಿಸುತ್ತೇನೆ. ಮೇ 13 ರಂದು ಚುನಾವಣೆ ಫಲಿತಾಂಶ ಏನು ಬರತ್ತೆ ನೋಡಿ. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದಿಲ್ಲ. ರಾಜ್ಯಾದ್ಯಂತ ನಾನು ಸಂಚಾರ ಮಾಡುತ್ತೇನೆ. ಪ್ರತೀ ಕ್ಷೇತ್ರದಲ್ಲಿ ಸುತ್ತಿ ಕಾಂಗ್ರೆಸ್‌ಗೆ ಮತ ಹಾಕದಂತೆ ನಮ್ಮ ಸಮುದಾಯದವರಲ್ಲಿ ಮನವಿ ಮಾಡುತ್ತೇನೆ ಎಂದು ಕಾಂಗ್ರೆಸ್ ನಾಯಕರಿಗೆ ರಘು ಆಚಾರ್ ಸವಾಲ್ ಹಾಕಿದ್ದಾರೆ.
ಇನ್ನು ಮಾತು ಮುಂದುವರಿಸಿದ ಅವರು, 197 ಸಮುದಾಯಗಳು ಮತ ಹಾಕೋಕೆ ಬೇಕು. ಟಿಕೆಟ್ ನೀಡೋಕೆ ಬೇಡಾ ಅಂದ್ರೆ ಹೇಗೆ, ನಾನು ಚುನಾವಣೆಯಲ್ಲಿ ಸ್ಪರ್ಧೆ ಮಾಡೋದು ಸತ್ಯ. ನಮ್ಮ ಕ್ಷೇತ್ರದಲ್ಲಿನ ಜನರನ್ನು ಕೇಳಿ ನನ್ನ ಮುಂದಿನ ನಡೆ ತಿಳಿಸುತ್ತೇನೆ ,ಬಂಡಾಯವೋ, ವಿರುದ್ಧವೋ, ಬೇರೆ ಪಕ್ಷಕ್ಕೆ ಹೋಗುತ್ತೇನೋ ನೋಡಬೇಕು. ನಮ್ಮ ವಿಶ್ವಕರ್ಮ ಸಮುದಾಯದ ಸ್ವಾಮೀಜಿ ಈಗಾಗಲೇ ನಿರ್ಧಾರ ಮಾಡಿದ್ದಾರೆ ಎಂದು ರಘು ಆಚಾರ್ ತಿಳಿಸಿದರು.
ಇನ್ನು ಕಾಂಗ್ರೆಸ್ ವಿರುದ್ಧ ಬೇಸರಗೊಂಡಿರುವ ಬಂಡಾಯದ ಬಾವುಟ ಹಾರಿಸಲು ಮುಂದಾಗಿರುವ ರಘು ಆಚಾರ್ ನಿವಾಸಕ್ಕೆ ಚಿತ್ರದುರ್ಗ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವೀರಂದ್ರ ಪಪ್ಪಿ ಭೇಟಿ ನೀಡಿದ್ದಾರೆ. ಪರಸ್ಪರ ಕುಶಲೋಪಚಾರ ನಡೆಸಿದ ವೀರೇಂದ್ರ ಪಪ್ಪಿ ರಘು ಆಚಾರ್ ಬಂಡಾಯ ಶಮನಕ್ಕೆ ಮಾತು ಕತೆ ನಡೆಸಿದ್ದಾರೆ ಎನ್ನಲಾಗಿದೆ. ವೀರೇಂದ್ರ ಪಪ್ಪಿಗೆ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಂಕೆ ತಾಜಪೀರ್ ಸೇರಿ ಅನೇಕ ಕಾಂಗ್ರೆಸ್ ನಾಯಕರು ಸಾಥ್ ನೀಡಿದ್ದಾರೆ.
ಬಂಡಾಯ ಎದ್ದಿರುವ ರಘು ಆಚಾರ್ ಜೊತೆ ಕೈ ನಾಯಕರು ನಡೆಸಿದ ಸಭೆ ವಿಫಲವಾಗಿದೆ. ನಂತರ ಮಾತನಾಡಿದ ರಘು ಆಚಾರ್, ರಾಜಕೀಯವಾಗಿ ಕೆಸಿ. ವೀರೇಂದ್ರ ಪಪ್ಪಿ ಅವರಿಗೆ ಒಳ್ಳೆಯದಾಗಲಿ. ನಾನು ಮತ್ತು ಪಪ್ಪಿ ಸ್ನೇಹಿತರು. ಆದರೆ ರಾಜಕೀಯ ಬೇರೆ ಸ್ನೇಹ ಸಂಬಂಧವೇ ಬೇರೆ. ನನಗೂ ಹಾಗೂ ಕೈ ಅಭ್ಯರ್ಥಿ ವೀರೇಂದ್ರ ಪಪ್ಪಿಗೂ ರಾಜಕೀಯ ಜಿದ್ದಾಜಿದ್ದಿ ಇದೆ ಎಂದು ತಿಳಿಸಿದರು.












Click it and Unblock the Notifications